[1] ಯೆಹೋವನು ಮೋಶೆಯೊಂದಿಗೆ ಮಾತನಾಡಿ,
[2] “ನೀನು ಆರೋನನಿಗೂ ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರಿಗೂ ಹೀಗೆ ಹೇಳಬೇಕು,
[3] ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಇಸ್ರಾಯೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ, ಕುರಿಯನ್ನಾಗಲಿ ಅಥವಾ ಆಡನ್ನಾಗಲಿ ಕೊಯ್ಯುವಾಗ,
[4] ಅದನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ಆತನ ಗುಡಾರದ ಬಾಗಿಲಿಗೆ ತಾರದೆ, ಪಾಳೆಯದ ಒಳಗಾಗಲಿ ಅಥವಾ ಹೊರಗಾಗಲಿ ವಧಿಸಿದರೆ ಅವನನ್ನು ಕೊಲೆಪಾತಕನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.
[5] ಏಕೆಂದರೆ ಯಜ್ಞಪಶುಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಾಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು, ಯೆಹೋವನ ಮುಂದೆ ಸಮಾಧಾನಯಜ್ಞವಾಗಿ ಯೆಹೋವನಿಗೆ ಸಮರ್ಪಿಸಬೇಕು.
[6] ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಿಲಿನ ಮುಂದಿರುವ ಯಜ್ಞವೇದಿಗೆ ಎರಚಿ, ಅವುಗಳ ಕೊಬ್ಬನ್ನು ಹೋಮಮಾಡಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡಬೇಕು.
[7] ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಮತ್ತು ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.’
[8] “ಇದಲ್ಲದೆ ನೀನು ಅವರಿಗೆ ಹೀಗೆ ಆಜ್ಞಾಪಿಸು, ‘ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸಮಾಡುತ್ತಿರುವ ಅನ್ಯದೇಶದವರಲ್ಲಿಯಾಗಲಿ ಯಾರಾದರೂ ಸರ್ವಾಂಗಹೋಮವನ್ನು ಅಥವಾ,
[9] ಬೇರೆ ವಿಧವಾದ ಯಜ್ಞವನ್ನು ಮಾಡುವಾಗ ಅದರ ಪಶುವನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತೆಗೆದುಕೊಂಡು ಬಾರದಿದ್ದರೆ ಅವನು ಕುಲದಿಂದ ಹೊರಗೆ ಹಾಕಬೇಕು.
[10] “‘ಇದಲ್ಲದೆ ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು.
[11] ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂತಹ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರ ಆಗುತ್ತದಷ್ಟೆ.
[12] ಆದುದರಿಂದ ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲರಿಗೆ ಆಜ್ಞಾಪಿಸಿದ್ದೇನೆ.
[13] “‘ಇಸ್ರಾಯೇಲರಲ್ಲಾಗಲಿ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು.
[14] ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರವು. ಆದಕಾರಣ ನಾನು ಇಸ್ರಾಯೇಲರಿಗೆ, ಪ್ರತಿಪ್ರಾಣಿಗೂ ರಕ್ತವೇ ಪ್ರಾಣಾಧಾರವಾದುದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನು ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರವಾಗಬೇಕೆಂದು ಆಜ್ಞಾಪಿಸಿದ್ದೇನೆ.
[15] “‘ತಾನಾಗಿ ಸತ್ತುಬಿದ್ದದ್ದನ್ನಾಗಲಿ ಅಥವಾ ಕಾಡುಮೃಗ ಕೊಂದದ್ದನ್ನು ತಿಂದವನಾಗಲಿ ಸ್ವದೇಶದವನಾದರೂ ಇಲ್ಲವೇ ಅನ್ಯದೇಶದವನಾದರೂ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಆ ಸಾಯಂಕಾಲದ ವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು.
[16] ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆ ಅಥವಾ ಸ್ನಾನ ಮಾಡದೆ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು’” ಎಂದು ಹೇಳಿದನು.