Skip to content
Opens in a new window
Listen to this chapter • 3:04

[1] “‘ಯಾವನಾದರೂ ಸಮಾಧಾನಯಜ್ಞವನ್ನು ಮಾಡಬೇಕಾದರೆ ಅವನು ಸಮರ್ಪಿಸುವ ಪಶುವು ದನವಾಗಿದ್ದ ಪಕ್ಷಕ್ಕೆ ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಯೆಹೋವನ ದೃಷ್ಟಿಯಲ್ಲಿ ಪೂರ್ಣಾಂಗವಾಗಿಯೇ ಇರಬೇಕು.

[2] ಅವನು ಅದನ್ನು ಯೆಹೋವನ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈಯನ್ನಿಟ್ಟು ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು.

[3] ಆ ಯಜ್ಞಪಶುವಿನ ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಎಲ್ಲಾ ಕೊಬ್ಬನ್ನು,

[4] ಎರಡು ಮೂತ್ರಪಿಂಡಗಳ ಮೇಲೆ, ಸೊಂಟದಲ್ಲಿರುವ ಕೊಬ್ಬನ್ನು, ಕಳಿಜದ ಹತ್ತಿರ ಮೂತ್ರಪಿಂಡದ ತನಕ ಇರುವ ಕೊಬ್ಬನ್ನು ತೆಗೆದು ಅವುಗಳನ್ನು ಯೆಹೋವನಿಗೆ ಹೋಮಮಾಡಬೇಕು.

[5] ಆರೋನನ ವಂಶದವರಾದ ಯಾಜಕರು ಅದನ್ನು ಯಜ್ಞವೇದಿಯಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮ ದ್ರವ್ಯದೊಡನೆ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮ ಆಗಿರುವುದು.

[6] “‘ಸಮಾಧಾನಯಜ್ಞಕ್ಕಾಗಿ ಯೆಹೋವನಿಗೆ ಸಮರ್ಪಿಸುವಂಥದು ಕುರಿ ಅಥವಾ ಆಡು ಆಗಿರುವ ಪಕ್ಷದಲ್ಲಿ, ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಪೂರ್ಣಾಂಗವಾಗಿರಬೇಕು.

[7] ಅದು ಕುರಿಯಾಗಿದ್ದರೆ ತಂದವನು ಅದನ್ನು ಯೆಹೋವನ ಸನ್ನಿಧಿಗೆ ತೆಗೆದುಕೊಂಡು ಬರಬೇಕು.

[8] ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟು ದೇವದರ್ಶನದ ಗುಡಾರದ ಎದುರಾಗಿ ಅದನ್ನು ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು.

[9] ಆ ಸಮಾಧಾನಯಜ್ಞದ ಪಶುವಿನ ಕೊಬ್ಬನ್ನು ಯೆಹೋವನಿಗೋಸ್ಕರ ಹೋಮವಾಗಿ ಸಮರ್ಪಿಸಬೇಕು. ಹೇಗೆಂದರೆ, ಬಾಲದ ಕೊಬ್ಬನ್ನೆಲ್ಲಾ ಬೆನ್ನೆಲುಬಿನ ಬಳಿಯಿಂದ ತೆಗೆದುಬಿಟ್ಟು ಅದನ್ನು, ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಎಲ್ಲಾ ಕೊಬ್ಬನ್ನು,

[10] ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನು ಮತ್ತು ಕಳಿಜದ ಮೇಲೆ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆಯಬೇಕು.

[11] ಯಾಜಕನು ಯಜ್ಞವೇದಿಯ ಮೇಲೆ ಅವುಗಳನ್ನು ಹೋಮಮಾಡಬೇಕು. ಅದು ಯೆಹೋವನಿಗೆ ಅಗ್ನಿಯ ಮೂಲಕವಾಗಿ ಅರ್ಪಿಸಿದ ಆಹಾರವಾಗುವುದು.

[12] “‘ಸಮರ್ಪಿಸುವಂಥದ್ದು ಆಡು ಆಗಿದ್ದರೆ ಅರ್ಪಿಸುವವನು ಅದನ್ನು ಯೆಹೋವನ ಸನ್ನಿಧಿಗೆ ತೆಗೆದುಕೊಂಡು ಬರಬೇಕು.

[13] ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟು, ದೇವದರ್ಶನ ಗುಡಾರದ ಎದುರಾಗಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು.

[14] ಅದರ ಅಂಗಾಂಶದ ಕೊಬ್ಬನ್ನು ಮತ್ತು ಕರುಳುಗಳ ಮೇಲಣ ಎಲ್ಲಾ ಕೊಬ್ಬನ್ನು,

[15] ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನು ಮತ್ತು ಕಳಿಜದ ಹತ್ತಿರ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ಯೆಹೋವನಿಗೋಸ್ಕರ ಅಗ್ನಿಯ ಮೂಲಕ ಸಮರ್ಪಿಸಬೇಕು.

[16] ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮದ ರೂಪವಾಗಿ ಅರ್ಪಿಸಿದ ಆಹಾರವಾಗಿರುವುದು. ಯಜ್ಞಪಶುಗಳ ಕೊಬ್ಬೆಲ್ಲವೂ ಯೆಹೋವನದು.

[17] ಕೊಬ್ಬನ್ನಾಗಲಿ ಅಥವಾ ರಕ್ತವನ್ನಾಗಲಿ ತಿನ್ನಬಾರದೆಂಬುದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲಾ ಸ್ಥಳಗಳಲ್ಲಿಯೂ ಶಾಶ್ವತವಾದ ನಿಯಮವಾಗಿದೆ’” ಅಂದನು.

ಯಾಜಕಕಾಂಡ — Chapters