Skip to content
Opens in a new window
Listen to this chapter • 5:29

[1] ಆಗ ಯೆಹೋವನು ಮೋಶೆಗೆ,

[2] “ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ದೇವದರ್ಶನದ ಗುಡಾರವನ್ನು ತೆರೆಯಬೇಕು.

[3] ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ಪರದೆಯಿಂದ ಮರೆಮಾಡಬೇಕು.

[4] ಆ ಮೇಲೆ ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು; ದೀಪಸ್ತಂಭವನ್ನು ಒಳಗೆ ತಂದು ಅದರ ಹಣತೆಗಳನ್ನು ಸರಿಯಾಗಿ ಇಡಬೇಕು.

[5] ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಯನ್ನು ಇಟ್ಟು ಗುಡಾರದ ಬಾಗಿಲಿನ ಪರದೆಯನ್ನು ಕಟ್ಟಬೇಕು.

[6] ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇರಿಸಬೇಕು.

[7] ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ದೊಡ್ಡ ತೊಟ್ಟಿಯೊಂದನ್ನು ಇಟ್ಟು ಅದರಲ್ಲಿ ನೀರನ್ನು ತುಂಬಿಸಬೇಕು.

[8] ಅಂಗಳದ ಸುತ್ತಲಿನ ಆವರಣವನ್ನು ತೆರೆದು, ಅಂಗಳದ ಬಾಗಿಲಿಗೆ ಪರದೆಯನ್ನು ತೂಗಿಬಿಡಬೇಕು.

[9] “ನೀನು ಅಭಿಷೇಕತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿರುವುದೆಲ್ಲವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಅಭಿಷೇಕಿಸಿ ನನಗಾಗಿ ಪ್ರತಿಷ್ಠಿಸಬೇಕು; ಅಂದಿನಿಂದ ಅದು ಪರಿಶುದ್ಧವಾಗಿರುವುದು.

[10] ಯಜ್ಞವೇದಿಯನ್ನೂ ಅದರ ಉಪಕರಣಗಳನ್ನೂ ಅಭಿಷೇಕಿಸಿ ಸರ್ವಾಂಗಹೋಮ ಯಜ್ಞವೇದಿಯನ್ನು ಪ್ರತಿಷ್ಠಿಸಬೇಕು; ಆ ಯಜ್ಞವೇದಿ ಅತ್ಯಂತ ಪರಿಶುದ್ಧವಾಗಿರಬೇಕು.

[11] ನೀನು ತಾಮ್ರದ ಬೋಗುಣಿಯನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು.

[12] “ಅದಲ್ಲದೆ ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿ

[13] ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಪವಿತ್ರವಾದ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು.

[14] ಆ ನಂತರ ನೀನು ಅವನ ಮಕ್ಕಳನ್ನು ಬರಮಾಡಿ

[15] ಅವರಿಗೆ ಅಂಗಿಗಳನ್ನು ತೊಡಿಸಿ ಅವರು ನನಗೋಸ್ಕರ ಯಾಜಕರಾಗುವುದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನೂ ಅಭಿಷೇಕಿಸಬೇಕು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು” ಎಂದು ಹೇಳಿದನು.

[16] ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.

[17] ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ಮೋಶೆ ಗುಡಾರವನ್ನು ತೆರೆದನು.

[18] ಮೋಶೆಯು ಗುಡಾರವನ್ನು ತೆರೆದು ಅದಕ್ಕೆ ಮೆಟ್ಟುವಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು.

[19] ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿ ಅದನ್ನು ಮರೆಮಾಡಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಅದನ್ನೆಲ್ಲಾ ಮಾಡಿದನು.

[20] ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಹಾಕಿ ಕೃಪಾಸನವನ್ನು ಇರಿಸಿದನು.

[21] ಮೋಶೆಯು ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ಪರದೆಯನ್ನು ಇರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು.

[22] ಮೋಶೆ ದೇವದರ್ಶನದ ಗುಡಾರದೊಳಗೆ ಉತ್ತರ ಭಾಗದಲ್ಲಿ ತೆರೆಯ ಹೊರಗಡೆ ಮೇಜನ್ನು ಇರಿಸಿದನು.

[23] ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆ ಮೇಜಿನ ಮೇಲೆ ರೊಟ್ಟಿಗಳನ್ನು ಕ್ರಮವಾಗಿ ಯೆಹೋವನ ಸನ್ನಿಧಿಯಲ್ಲಿ ಇರಿಸಿದನು.

[24] ಅವನು ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇರಿಸಿದನು.

[25] ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆ, ಅದರ ಹಣತೆಗಳನ್ನು ಯೆಹೋವನ ಸನ್ನಿಧಿಯಲ್ಲಿ ಕ್ರಮವಾಗಿ ಇರಿಸಿದನು.

[26] ಮತ್ತು ಅವನು ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ತೆರೆಯ ಎದುರಿಗೆ ಇರಿಸಿದನು.

[27] ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಅದರ ಮೇಲೆ ಪರಿಮಳ ದ್ರವ್ಯಗಳ ಧೂಪವನ್ನು ಹಾಕಿದನು.

[28] ಅವನು ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿದನು.

[29] ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇಟ್ಟು ಅದರ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯಸಮರ್ಪಣೆಯನ್ನೂ ಮಾಡಿದನು.

[30] ಯೆಹೋವನು ಆಜ್ಞಾಪಿಸಿದಂತೆ ಮೋಶೆ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ನೀರಿನ ತೊಟ್ಟಿಯನ್ನು ಇರಿಸಿ ತೊಳೆದುಕೊಳ್ಳುವುದಕ್ಕಾಗಿ ಅದರಲ್ಲಿ ನೀರು ತುಂಬಿಸಿದನು.

[31] ಮೋಶೆಯು, ಆರೋನನು ಮತ್ತು ಅವನ ಮಕ್ಕಳೂ ಅದರಲ್ಲಿ ಕೈಕಾಲು ತೊಳೆದುಕೊಂಡರು.

[32] ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ, ಯಜ್ಞವೇದಿಯ ಹತ್ತಿರ ಬರುವಾಗಲೂ ಯೆಹೋವನು ಆಜ್ಞಾಪಿಸಿದಂತೆ ಕೈಕಾಲುಗಳನ್ನು ತೊಳೆದುಕೊಳ್ಳುತ್ತಿದ್ದರು.

[33] ಮೋಶೆಯು ಗುಡಾರಕ್ಕೂ ಯಜ್ಞವೇದಿಗೂ ಸುತ್ತಲು ಅಂಗಳದ ಆವರಣವನ್ನು ತೆರೆದು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿದನು. ಈ ಪ್ರಕಾರ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು.

[34] ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿಕೊಂಡಿತು.

[35] ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಗೊಂಡಿದ್ದು ಯೆಹೋವನ ತೇಜಸ್ಸು ಪರಿಶುದ್ಧ ನಿವಾಸದ ತುಂಬಾ ಅವರಿಸಿ ಯೆಹೋವನ ಮಹಿಮೆಯು ಗುಡಾರದೊಳಗೆ ತುಂಬಿಕೊಂಡ್ದಿದರಿಂದಲೂ ಮೋಶೆಯು ಗುಡಾರದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

[36] ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಾಯೇಲರು ಮುಂದೆ ಪ್ರಯಾಣ ಮಾಡುತ್ತಿದ್ದರು.

[37] ಆ ಮೇಘವು ಮೇಲಕ್ಕೆ ಹೋಗದೇ ಇದ್ದು ಅದು ಹೊರಡುವ ತನಕ ಅವರು ಪ್ರಯಾಣ ಮಾಡದೆ ಇರುತ್ತಿದ್ದರು.

[38] ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣುಗಳ ಮುಂದೆ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಗುಡಾರದ ಮೇಲೆಯೂ ಇರುತ್ತಿತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಇರುತ್ತಿತ್ತು.

ವಿಮೋಚನಕಾಂಡ — Chapters