[1] “ಈಗ ನೀನು ಅವರ ಮುಂದೆ ಇಡಬೇಕಾದ ನ್ಯಾಯವಿಧಿಗಳು ಯಾವುದೆಂದರೆ;
[2] “‘ನಿಮ್ಮಲ್ಲಿ ಯಾರಾದರೂ ಇಬ್ರಿಯನೊಬ್ಬನನ್ನು ದಾಸತ್ವಕ್ಕಾಗಿ ಕೊಂಡುಕೊಂಡರೆ, ಆ ಇಬ್ರಿಯನು ಆರು ವರ್ಷ ದಾಸನಾಗಿದ್ದು ಏಳನೆಯ ವರ್ಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಹೋಗಬೇಕು.
[3] ಪುರುಷನು ಒಂಟಿಯಾಗಿ ಬಂದಿದ್ದರೆ ಒಂಟಿಯಾಗಿಯೇ ಹೊರಟುಹೋಗಬೇಕು. ಮದುವೆಯಾಗಿ ಬಂದಿದ್ದರೆ ಅವನ ಹೆಂಡತಿಯೂ ಅವನ ಜೊತೆ ಹೋಗಬೇಕು.
[4] ಅವನ ಯಜಮಾನನು ಅವನಿಗೆ ಮದುವೆಮಾಡಿಸಿದ ಪಕ್ಷದಲ್ಲಿ ಆ ಹೆಂಡತಿಯಲ್ಲಿ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ದಾಸನು ಒಂಟಿಗನಾಗಿಯೇ ಹೊರಟುಹೋಗಬೇಕು.’”
[5] ಆದರೆ ದಾಸನು, “ನಾನು ನನ್ನ ಯಜಮಾನನ್ನೂ, ನನ್ನ ಹೆಂಡತಿ ಮಕ್ಕಳನ್ನು ಪ್ರೀತಿಸುತ್ತೇನೆ. ಆದುದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ನನಗೆ ಮನಸಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರೆ,
[6] ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರೆದುಕೊಂಡು ಬಂದು ಬಾಗಿಲಿನ ಹತ್ತಿರ ಅಥವಾ ಬಾಗಿಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಿ ಗುರುತು ಮಾಡಬೇಕು. ಆಗ ಅವನು ಶಾಶ್ವತವಾಗಿ ಅವನಿಗೆ ದಾಸನಾಗಿರುವನು.
[7] ಯಾರಾದರೂ ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಬಿಡುಗಡೆಯಾಗಿ ಹೋಗುವ ಪ್ರಕಾರ ಅವಳು ಬಿಡುಗಡೆಯಾಗಿ ಹೋಗಬಾರದು.
[8] ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಮೆಚ್ಚಿಕೆಯಾಗದೆ ಹೋದರೆ ಅವಳನ್ನು ಬಿಡಿಸಿ ಕೊಲ್ಲುವುದಕ್ಕೆ ಅವನು ಅನುಮತಿ ನೀಡಬೇಕು. ಅವನು ಕೊಟ್ಟ ಮಾತಿಗೆ ತಪ್ಪಿದವನಾದ್ದರಿಂದ ಅನ್ಯಜನರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
[9] ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿಕೊಂಡರೆ ಮಗಳಂತೆ ಆಕೆಯನ್ನು ನೋಡಿಕೊಳ್ಳಬೇಕು.
[10] ಯಜಮಾನನು ಇನ್ನೊಬ್ಬಳನ್ನು ಮದುವೆಯಾದರೆ ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕುಗಳನ್ನು ಕಡಿಮೆಮಾಡಬಾರದು.
[11] ಈ ಮೂರರಲ್ಲಿ ಯಾವುದನ್ನೂ ನಡೆಸದೆ ಹೋದರೆ ಅವಳು ಏನೂ ಕೊಡದೆ ಬಿಡುಗಡೆಯಾಗಿ ಹೋಗಬಹುದು.
[12] ಮನುಷ್ಯನನ್ನು ಹೊಡೆದು ಕೊಂದವನು ಖಂಡಿತವಾಗಿ ಸಾಯಬೇಕು.
[13] ಆದರೆ ಕೊಲ್ಲಬೇಕೆಂಬ ಯೋಚನೆಯಿಲ್ಲದೆ ದೇವರ ಸಂಕಲ್ಪದಿಂದ ಆ ಕೊಲೆ ನಡೆದಿದೆಯಾದರೆ, ಆ ಕೊಲೆಮಾಡಿದವನು ಓಡಿಹೋಗುವಂತೆ ಅವನಿಗೆ ನಾನು ಒಂದು ಸ್ಥಳವನ್ನು ನೇಮಿಸುವೆನು.
[14] ಆದರೆ ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶದಿಂದಲೇ ಅವನನ್ನು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞವೇದಿಯ ಬಳಿಯಿಂದ ಕರೆದುಕೊಂಡು ಹೋಗಿ ಕೊಂದುಹಾಕಬೇಕು.
[15] ಯಾರಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆದರೆ ಖಂಡಿತವಾಗಿ ಅವನು ಸಾಯಲೇಬೇಕು.
[16] ಯಾರಾದರೂ ಒಬ್ಬ ಮನುಷ್ಯನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ ಅಥವಾ ಅವನು ಬಂಧಿಸಲ್ಪಟ್ಟಾಗ, ಅಪಹರಿಸಲ್ಪಟ್ಟವನು ಅವನೊಂದಿಗಿದ್ದರೆ ಅವನಿಗೆ ಮರಣಶಿಕ್ಷೆಯಾಗಬೇಕು.
[17] ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನಿಗೆ ಮರಣಶಿಕ್ಷೆಯಾಗಬೇಕು.
[18] ಇಬ್ಬರು ಜಗಳವಾಡುತ್ತಿರುವಲ್ಲಿ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಠಿಯಿಂದಾಗಲೀ ಹೊಡೆದಿದ್ದರಿಂದ ಗಾಯಪಟ್ಟವನು ಸಾಯದೆ ಕೆಲವು ಕಾಲ ಹಾಸಿಗೆ ಹಿಡಿದು,
[19] ತರುವಾಯ ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ ಅವನನ್ನು ಹೊಡೆದವನಿಗೆ ಶಿಕ್ಷೆಯನ್ನು ವಿಧಿಸಬಾರದು. ಆದರೆ ಪೆಟ್ಟುತಿಂದ ಮನುಷ್ಯನು ಗುಣಹೊಂದುವವರೆಗೂ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು.
[20] ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಸಾಯುವಂತೆ ಹೊಡೆದರೆ, ಅವನಿಗೆ ತಕ್ಕ ಶಿಕ್ಷೆಯಾಗಬೇಕು.
[21] ಆ ದಾಸನು ಆಗಲೇ ಸಾಯದೆ ಒಂದೆರಡು ದಿನ ಬದುಕಿದ್ದರೆ, ಯಜಮಾನನಿಗೆ ಶಿಕ್ಷೆಯನ್ನು ವಿಧಿಸಕೂಡದು. ಏಕೆಂದರೆ ಆ ದಾಸನು ಅವನ ಸೊತ್ತಾಗಿದ್ದಾನೆ.
[22] ಗಂಡಸರು ಜಗಳವಾಡುವಾಗ ಗರ್ಭಿಣಿಯಾದ ಹೆಂಗಸಿಗೆ ಏಟು ತಗಲಿದ್ದರಿಂದ ಅವಳಿಗೆ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು.
[23] ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಬೇಕು.
[24] ಕಣ್ಣಿಗೆ ಕಣ್ಣನ್ನು, ಹಲ್ಲಿಗೆ ಹಲ್ಲನ್ನು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು,
[25] ಬರೆಗೆ ಬರೆಯನ್ನು, ಗಾಯಕ್ಕೆ ಗಾಯವನ್ನು, ಏಟಿಗೆ ಏಟನ್ನು ಪ್ರತಿಯಾಗಿ ಕೊಡಬೇಕು.
[26] ಯಾವನಾದರೂ ತನ್ನ ದಾಸನ ಅಥವಾ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೆ ಈಡಾಗಿ (ಬದಲಾಗಿ) ಅವರನ್ನು ಅವನು ಬಿಡುಗಡೆಮಾಡಿ ಕಳುಹಿಸಬೇಕು.
[27] ಒಬ್ಬನು ದಾಸನ ಅಥವಾ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೆ ಈಡಾಗಿ ಅವರನ್ನು ಬಿಡುಗಡೆಮಾಡಿ ಕಳುಹಿಸಬೇಕು.
[28] ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ, ತಿವಿದು ಕೊಂದರೆ ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆದರೆ ಆ ಎತ್ತಿನ ಯಜಮಾನನು ನಿರಪರಾಧಿಯಾಗಿರಬೇಕು.
[29] ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೇ ಹೋದದ್ದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದು ಹಾಕಿದರೆ ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಅಲ್ಲದೆ ಅದರ ಯಜಮಾನನೂ ಮರಣದಂಡನೆಗೆ ಗುರಿಯಾಗುವನು.
[30] ಆದರೆ ಯಜಮಾನನಿಗೆ ಹಣವನ್ನು ನೇಮಿಸಿದರೆ ಅವನು ತನಗೆ ನೇಮಕವಾದ ಹಣವನ್ನು ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಿ.
[31] ಆ ಎತ್ತು ಮಗನನ್ನಾಗಲಿ ಅಥವಾ ಮಗಳನ್ನಾಗಲಿ ತಿವಿದರೆ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.
[32] ದಾಸನನ್ನಾದರೂ ಅಥವಾ ದಾಸಿಯನ್ನಾದರೂ ಎತ್ತು ತಿವಿದರೆ ದಾಸನ ಅಥವಾ ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ಕೊಡಬೇಕು, ಮತ್ತು ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
[33] ಒಬ್ಬನು ಗುಂಡಿಯನ್ನು ಅಗೆದರೆ ಇಲ್ಲವೆ ಅಗೆದು ಅದನ್ನು ಮುಚ್ಚದೇ ಇದ್ದು ಅದರಲ್ಲಿ ಎತ್ತಾಗಲಿ, ಕತ್ತೆಯಾಗಲಿ ಆ ಗುಂಡಿಯಲ್ಲಿ ಬಿದ್ದು ಸತ್ತರೆ,
[34] ಆ ಗುಂಡಿಯನ್ನು ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡು ಕೊಡಬೇಕು. ಎತ್ತಿನ ಯಜಮಾನನಿಗೆ ತೃಪ್ತಿಯಾಗುವಷ್ಟು ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.
[35] ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನೂ ಇಬ್ಬರೂ ಸಮವಾಗಿ ಹಂಚಿಕೊಳ್ಳಬೇಕು.
[36] ಆದರೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ಅದರ ಯಜಮಾನನಿಗೆ ತಿಳಿದಿದ್ದರೂ ಅದನ್ನು ಕಟ್ಟಿಹಾಕದೇ ಹೋದದ್ದರಿಂದ ಅವನು ಎತ್ತಿಗೆ ಪ್ರತಿಯಾಗಿ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.