Skip to content
Opens in a new window
Listen to this chapter • 2:56

[1] ಯೆಹೋವನು ಮೋಶೆಗೆ ಹೀಗೆಂದನು,

[2] “ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯನ ಮಗನೂ ಆಗಿರುವ ಬೆಚಲೇಲನೆಂಬುವನನ್ನು ಹೆಸರು ಹಿಡಿದು ಕರೆದಿದ್ದೇನೆ.

[3] ಕಲಾತ್ಮಕವಾದ ವಿನ್ಯಾಸಗಳನ್ನು ಮಾಡುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,

[4] ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸಗಳನ್ನು ಮಾಡುವುದಕ್ಕೂ,

[5] ಅವನಿಗೆ ದೇವರಾತ್ಮವನ್ನು ದಯಪಾಲಿಸಿ, ಅದಕ್ಕೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪ ಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.

[6] ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲೀಯಾಬನನ್ನೂ ನೇಮಿಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಜ್ಞಾನಿಗಳಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.

[7] ದೇವದರ್ಶನದ ಗುಡಾರ, ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷ ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,

[8] ಮೇಜು ಅದರ ಉಪಕರಣಗಳು, ಚೊಕ್ಕ ಬಂಗಾರದ ದೀಪಸ್ತಂಭ ಅದರ ಉಪಕರಣಗಳು,

[9] ಧೂಪವೇದಿ, ಯಜ್ಞವೇದಿ ಅದರ ಉಪಕರಣಗಳು, ನೀರಿನ ತೊಟ್ಟಿ ಅದರ ಪೀಠ,

[10] ಅಲಂಕಾರವಾದ ದೀಕ್ಷಾವಸ್ತ್ರಗಳು ಅಂದರೆ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು,

[11] ಅಭಿಷೇಕತೈಲ ಮತ್ತು ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು.”

[12] ಯೆಹೋವನು ಮತ್ತೆ ಮೋಶೆಗೆ ಹೀಗೆಂದನು,

[13] “ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ: ನಾನು ನೇಮಿಸಿದ ಪವಿತ್ರ ಸಬ್ಬತ್ ದಿನಗಳನ್ನು ನೀವು ತಪ್ಪದೇ ಆಚರಿಸಬೇಕು. ನಿಮ್ಮನ್ನು ಶುದ್ಧಿಪಡಿಸುವ ಯೆಹೋವನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರ ಮಧ್ಯ ಇರುವ ಗುರುತು.

[14] ಆದಕಾರಣ ನೀವು ಸಬ್ಬತ್ ದಿನವನ್ನು ಪರಿಶುದ್ಧವಾದ ದಿನವೆಂದು ಎಣಿಸಿ ಆಚರಿಸಬೇಕು. ಅದನ್ನು ಅಶುದ್ಧಪಡಿಸುವ ಪ್ರತಿಯೊಬ್ಬನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ಯಾವನಾದರೂ ಕೆಲಸವನ್ನು ಮಾಡಿದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.

[15] ಆರು ದಿನಗಳು ಕೆಲಸ ಮಾಡಬೇಕು. ಏಳನೆಯ ದಿನ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ. ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು.

[16] ಆದುದರಿಂದ ಇಸ್ರಾಯೇಲರು ಸಬ್ಬತ್ ದಿನವನ್ನು ಆಚರಿಸಬೇಕು. ಈ ಆಚರಣೆಯು ಅವರಿಗೂ, ಅವರ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ.

[17] ಇದು ನನಗೂ ಇಸ್ರಾಯೇಲರಿಗೂ ನಡುವೆಯಿರುವ ಸದಾಕಾಲದ ಗುರುತು. ಏಕೆಂದರೆ ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೇ ವಿಶ್ರಮಿಸಿಕೊಂಡನಲ್ಲವೇ?”

[18] ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತನಾಡುವುದನ್ನು ಮುಗಿಸಿದ ಮೇಲೆ ಅವನಿಗೆ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟನು. ಅವು ದೇವರ ಕೈಯಿಂದ ಬರೆಯಲ್ಪಟ್ಟ ಶಿಲಾಶಾಸನಗಳಾಗಿವೆ.

ವಿಮೋಚನಕಾಂಡ — Chapters