Skip to content
Opens in a new window
Listen to this chapter • 4:22

[1] ದೇವರು ಈ ಎಲ್ಲಾ ಆಜ್ಞಾವಿಧಿಗಳನ್ನು ಅವರಿಗೆ ಕೊಟ್ಟನು:

[2] “ನೀನು ಗುಲಾಮತನದಲ್ಲಿದ್ದ ಐಗುಪ್ತ ದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನು ಎಂಬ ‘ನಾನೇ ನಿನ್ನ ದೇವರು’

[3] ನಾನಲ್ಲದೆ ನಿಮಗೆ ಬೇರೆ ದೇವರುಗಳು ಇರಬಾರದು.

[4] “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಮಾಡಿಕೊಳ್ಳಬಾರದು.

[5] ಅವುಗಳಿಗೆ ಅಡ್ಡ ಬೀಳಬಾರದು, ಪೂಜೆ ಮಾಡಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಬಿಟ್ಟುಕೊಡುವುದಿಲ್ಲ. ಆದುದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ, ಮೂರು ನಾಲ್ಕು ತಲೆಗಳವರೆಗೆ ಬರಮಾಡುವೆನು.

[6] ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುವೆನು.

[7] ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.

[8] “ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವುದಕ್ಕೆ ನೆನಪಿನಲ್ಲಿಟ್ಟುಕೊಳ್ಳಬೇಕು.

[9] ಆರು ದಿನಗಳು ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಿಕೊಳ್ಳಬೇಕು.

[10] ಆದರೆ ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿಯ ಸಬ್ಬತ್ ದಿನವಾಗಿದೆ. ಆ ದಿನದಲ್ಲಿ ನೀನು ಯಾವ ಕೆಲಸವನ್ನು ಮಾಡಬಾರದು. ನಿನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಗಂಡಾಳು, ಹೆಣ್ಣಾಳು, ಪಶುಪ್ರಾಣಿಗಳು ನಿನ್ನ ಊರಿನಲ್ಲಿರುವ ಅನ್ಯದೇಶದವನು ಸಹ ಯಾವ ಕೆಲಸವನ್ನೂ ಮಾಡಬಾರದು.

[11] ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದುದರಿಂದ ಯೆಹೋವನು ಸಬ್ಬತ್ ದಿನವನ್ನು ತನ್ನ ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.

[12] “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ.

[13] “ಕೊಲೆ ಮಾಡಬಾರದು.

[14] “ವ್ಯಭಿಚಾರಮಾಡಬಾರದು.

[15] “ಕದಿಯಬಾರದು.

[16] “ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.

[17] “ಮತ್ತೊಬ್ಬನ ಮನೆಯನ್ನು ನೋಡಿ ಆಶೆಪಡಬಾರದು. ಮತ್ತೊಬ್ಬನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು.”

[18] ಆ ಗುಡುಗು, ಮಿಂಚು, ತುತ್ತೂರಿಯ ಧ್ವನಿ, ಹಾಗೂ ಬೆಟ್ಟದಿಂದ ಹೊರಬರುತ್ತಿದ್ದ ಹೊಗೆಯನ್ನು ಜನರೆಲ್ಲರೂ ನೋಡಿ, ನಡುಗುತ್ತಾ ದೂರದಲ್ಲಿ ನಿಂತುಕೊಂಡರು.

[19] ಅವರು ಮೋಶೆಗೆ, “ನೀನೇ ನಮ್ಮ ಸಂಗಡ ಮಾತನಾಡು, ನಾವು ಕೇಳುತ್ತೇವೆ. ದೇವರು ನಮ್ಮ ಸಂಗಡ ಮಾತನಾಡಿದರೆ ನಾವು ಸತ್ತು ಹೋಗುತ್ತೇವೆ” ಎಂದು ಹೇಳಿದರು.

[20] ಅದಕ್ಕೆ ಮೋಶೆಯು ಜನರಿಗೆ, “ಭಯಪಡಬೇಡಿರಿ, ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ, ನೀವು ಪಾಪ ಮಾಡದಂತೆ ಆತನ ಮೇಲಿನ ಭಯವು ನಿಮಗೆ ಇರಬೇಕೆಂತಲೂ ಇಳಿದು ಬಂದಿದ್ದಾನೆ” ಎಂದನು.

[21] ಜನರು ದೂರದಲ್ಲಿ ನಿಂತಿದ್ದರು. ಮೋಶೆಯು ದೇವರಿರುವ ಆ ಕಾರ್ಗತ್ತಲಿನ ಸಮೀಪಕ್ಕೆ ಹೋದನು.

[22] ಯೆಹೋವನು ಮೋಶೆಗೆ ಹೀಗೆಂದನು, “ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ; ‘ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.

[23] ನೀವು ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ.

[24] ನೀವು ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡಬೇಕು. ನೀವು ಅದರ ಮೇಲೆ ನಿಮ್ಮ ಸರ್ವಾಂಗಹೋಮ, ಸಮಾಧಾನಯಜ್ಞ, ಕುರಿದನಗಳನ್ನು ಸಮರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.

[25] ನೀವು ನನಗಾಗಿ ಕಲ್ಲಿನಿಂದ ಯಜ್ಞವೇದಿಯನ್ನು ಕಟ್ಟುವುದಾದರೆ, ಅದನ್ನು ಕೆತ್ತಿರುವ ಕಲ್ಲುಗಳಿಂದ ಕಟ್ಟಬಾರದು. ಏಕೆಂದರೆ ಉಳಿ, ಮುಂತಾದುದನ್ನು ಅದರ ಮೇಲೆ ಉಪಯೋಗಿಸಿದರೆ ಅದು ಅಪವಿತ್ರವಾಗುವುದು.

[26] ಅದಲ್ಲದೆ ನನ್ನ ಯಜ್ಞವೇದಿಯನ್ನು ನಿಮ್ಮ ನಗ್ನತೆಯು ಕಾಣುವ ಹಾಗೆ ಮೆಟ್ಟಲುಗಳನ್ನು ಬಳಸಿ ಅದನ್ನು ಹತ್ತಬಾರದು’” ಎಂದು ಆಜ್ಞಾಪಿಸಿದನು.

ವಿಮೋಚನಕಾಂಡ — Chapters