[1] ಯೆಹೋವನು ಮೋಶೆಯ ಸಂಗಡ ಮಾತನಾಡಿ,
[2] “ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಪ್ರತಿಷ್ಠಿಸಬೇಕು. ಮನುಷ್ಯರಲ್ಲಾಗಲೀ, ಪಶುಗಳಲ್ಲಾಗಲೀ ಹುಟ್ಟುವ ಪ್ರಥಮ ಗರ್ಭಫಲವು ನನ್ನದಾಗಿದೆ” ಎಂದು ಹೇಳಿದನು.
[3] ಮೋಶೆಯು ಇಸ್ರಾಯೇಲರಿಗೆ, “ನೀವು ದಾಸತ್ವದಲ್ಲಿದ್ದ ಐಗುಪ್ತ ದೇಶದೊಳಗಿಂದ ಬಿಡುಗಡೆಯಾದ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಆ ಸ್ಥಳದಿಂದ ಬಿಡಿಸಿದ್ದಾನೆ. ಈ ದಿನದಲ್ಲಿ ನೀವು ಹುಳಿಬೆರೆಸಿದ್ದನ್ನು ತಿನ್ನಬಾರದು.
[4] ಚೈತ್ರ ಮಾಸದ ಈ ದಿನದಲ್ಲೇ ನೀವು ಹೊರಗೆ ಬಂದಿರುವಿರಿ.
[5] ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿ ಹೇಳಿದಂತೆ, ನಿಮ್ಮನ್ನು ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ಕರೆದು ತಂದು ಅದನ್ನು ನಿಮಗೆ ಕೊಟ್ಟಾಗ ನೀವು ಈ ತಿಂಗಳಲ್ಲಿ ಈ ಆಚರಣೆಯನ್ನು ನಡೆಸಬೇಕು.
[6] ಏಳು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು, ಏಳನೆಯ ದಿನದಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಆಚರಿಸಬೇಕು.
[7] ಆ ಏಳು ದಿನವೂ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮಾತ್ರವಲ್ಲದೆ, ನಿಮ್ಮಲ್ಲಿ ಹುಳಿಹಿಟ್ಟು ಕಾಣಿಸಬಾರದು. ಇಲ್ಲವೆ ಹುಳಿಹಿಟ್ಟು ನಿಮ್ಮ ಗಡಿಯಲ್ಲೇ ಕಾಣಬಾರದು.
[8] ಆ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ನಮ್ಮ ಜನರು ಐಗುಪ್ತ ದೇಶದಿಂದ ಹೊರಟು ಬಂದಾಗ ಯೆಹೋವನು ನಮಗೋಸ್ಕರ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ಈ ಆಚರಣೆಯನ್ನು ಆಚರಿಸುತ್ತೇವೆ.
[9] ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ್ದರಿಂದ ಆತನ ನಿಯಮವನ್ನು ಕುರಿತು ನೀವು ಹೇಳಬೇಕು. ಈ ಆಚರಣೆಯು ನಿಮ್ಮ ಕೈಗಳ ಮೇಲೆ ಗುರುತಾಗಿಯೂ, ಹಣೆಗೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರಬೇಕು.
[10] ಹೀಗಿರುವುದರಿಂದ ಪ್ರತಿವರ್ಷವು ನಿಯಮಿತವಾದ ಕಾಲದಲ್ಲಿ ನೀವು ಈ ಆಚರಣೆಯನ್ನು ಮಾಡಬೇಕು.
[11] “ಯೆಹೋವನು ನಿಮಗೂ ನಿಮ್ಮ ಪೂರ್ವಿಕರಿಗೂ ಪ್ರಮಾಣಮಾಡಿದ ಪ್ರಕಾರ ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಆ ದೇಶವನ್ನು ನಿಮಗೆ ಕೊಟ್ಟ ನಂತರ,
[12] ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮ ಗರ್ಭಫಲವು ಗಂಡಾದ ಪಕ್ಷಕ್ಕೆ ಅದು ಯೆಹೋವನ ಭಾಗವೆಂದು ತಿಳಿದುಕೊಂಡು ಅದನ್ನು ಆತನಿಗೆ ಸಮರ್ಪಿಸಬೇಕು.
[13] ಮೊದಲು ಹುಟ್ಟಿದ ಕತ್ತೆಯ ಚೊಚ್ಚಲಮರಿಗೆ ಬದಲಾಗಿ ಕುರಿಮರಿಯನ್ನು ಬಿಡಿಸಿಕೊಳ್ಳಬಹುದು. ಹಾಗೆ ಬಿಡಿಸದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲ ಗಂಡು ಮಕ್ಕಳನ್ನು ಯೆಹೋವನಿಗಾಗಿ ಬಿಡಿಸಿಕೊಳ್ಳಲೇ ಬೇಕು.
[14] ಮುಂದೆ ನಿಮ್ಮ ಮಕ್ಕಳು, ‘ಇದರ ಅರ್ಥ ಏನು?’ ಎಂದು ನಿಮ್ಮನ್ನು ವಿಚಾರಿಸುವಾಗ ನೀವು ಅವರಿಗೆ, ‘ನಾವು ದಾಸತ್ವದಲ್ಲಿದ್ದ ಐಗುಪ್ತ ದೇಶದಿಂದ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡಿಸಿದನು.
[15] ಫರೋಹನು ಹಠಹಿಡಿದು ನಮ್ಮನ್ನು ಹೋಗಗೊಡಿಸದೇ ಇದ್ದಾಗ ಯೆಹೋವನು ಐಗುಪ್ತ ದೇಶದಲ್ಲಿ ಮನುಷ್ಯರ ಚೊಚ್ಚಲಮಕ್ಕಳನ್ನು, ಪಶುಗಳ ಚೊಚ್ಚಲು ಮರಿಗಳನ್ನು ಅಂತೂ ಆ ದೇಶದಲ್ಲಿ ಚೊಚ್ಚಲಾಗಿದ್ದ ಎಲ್ಲವನ್ನು ಸಂಹಾರ ಮಾಡಿದನು. ಆದಕಾರಣ ಗಂಡಾಗಿ ಹುಟ್ಟುವ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಯೆಹೋವನಿಗೆ ಸಮರ್ಪಿಸುವುದುಂಟು. ಮನುಷ್ಯರಿಂದಾದ ಪ್ರಥಮ ಗರ್ಭಫಲವನ್ನಾದರೋ ಅದನ್ನು ಬದಲುಕೊಟ್ಟು ಬಿಡಿಸುತ್ತೇವೆ’” ಎಂದು ಹೇಳಬೇಕು.
[16] ಯೆಹೋವನು ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ ಸಂಗತಿಯನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವುದರ ಗುರುತಾಗಿ ಅದನ್ನು ನಿಮ್ಮ ಕೈಗಳ ಮೇಲೆಯೂ, ಹಣೆಯ ಮೇಲೆ ಜ್ಞಾಪಕಪಟ್ಟಿಯಂತೆಯೂ ಇರಬೇಕು.
[17] ಫರೋಹನು ಇಸ್ರಾಯೇಲರಿಗೆ ಹೋಗುವುದಕ್ಕೆ ಅಪ್ಪಣೆ ಕೊಟ್ಟಾಗ, ಫಿಲಿಷ್ಟಿಯರ ದೇಶದ ಮಾರ್ಗವು ಸಮೀಪವಾಗಿದ್ದರೂ ದೇವರು ಆ ದಾರಿಯಲ್ಲಿ ಅವರನ್ನು ಹೋಗಗೊಡಿಸಲಿಲ್ಲ. ಏಕೆಂದರೆ, “ದೇವರು, ಜನರು ಯುದ್ಧವನ್ನು ನೋಡಿ ಗಾಬರಿಯಾಗಿ ಮನಸ್ಸನ್ನು ಬದಲಾಯಿಸಿಕೊಂಡು ಐಗುಪ್ತಕ್ಕೆ ಹಿಂದಿರುಗಿ ಹೋದಾರೂ” ಎಂದು ಹೇಳಿದನು.
[18] ಹೀಗಿರುವುದರಿಂದ ಯೆಹೋವನು ಜನರನ್ನು ಕೆಂಪುಸಮುದ್ರದ ಸಮೀಪದಲ್ಲಿರುವ ಮರುಭೂಮಿಯನ್ನು ಬಳಸಿಕೊಂಡು ಹೋಗುವಂತೆ ಮಾಡಿದನು. ಆದರೂ ಇಸ್ರಾಯೇಲರು ಯುದ್ಧಸನ್ನದ್ದರಾಗಿ ಐಗುಪ್ತ ದೇಶದೊಳಗಿಂದ ಹೊರಟುಬಂದರು.
[19] ಇದಲ್ಲದೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸಿ ತನ್ನ ವಾಗ್ದಾನವನ್ನು ನೆರವೇರಿಸುವವನಾಗಿರುವುದರಿಂದ ನೀವು ಹೋಗುವಾಗ ನನ್ನ ದೇಹದ ಅಸ್ತಿಮೂಳೆಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕು” ಎಂದು ಖಂಡಿತವಾದ ಪ್ರಮಾಣವನ್ನು ಮಾಡಿಸಿದ್ದರಿಂದ ಮೋಶೆಯು ಅವನ ಮೂಳೆಗಳನ್ನು ತನ್ನ ಸಂಗಡ ತೆಗೆದುಕೊಂಡು ಹೋದನು.
[20] ಅವರು ಸುಕ್ಕೋತಿನಿಂದ ಪ್ರಯಾಣ ಮಾಡಿ ಮರಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಪಾಳೆಯಮಾಡಿ ಇಳಿದುಕೊಂಡರು.
[21] ಯೆಹೋವನು ಹಗಲು ಹೊತ್ತಿನಲ್ಲಿ ದಾರಿತೋರಿಸುವುದಕ್ಕೆ ಮೇಘಸ್ತಂಭದಲ್ಲಿಯೂ, ರಾತ್ರಿವೇಳೆಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭದಲ್ಲಿಯೂ ಇದ್ದು ಅವನ್ನು ನಡೆಸುತಿದ್ದನು. ಈ ರೀತಿಯಲ್ಲಿ ಅವರು ಹಗಲಿರುಳು ಪ್ರಯಾಣಮಾಡಿದರು.
[22] ಹಗಲಿನಲ್ಲಿ ಮೇಘಸ್ತಂಭವಾಗಿ, ರಾತ್ರಿಯಲ್ಲಿ ಅಗ್ನಿಸ್ತಂಭವಾಗಿ ಜನರನ್ನು ಬಿಟ್ಟು ಹೋಗದೆ ಅಲ್ಲಿಯೇ ಇರುತ್ತಿದ್ದನು.