[1] ಒಬ್ಬನು ಎತ್ತನ್ನಾಗಲಿ, ಕುರಿಯನ್ನಾಗಲಿ ಕದ್ದುಕೊಂಡು ಕೊಯ್ದರೆ ಇಲ್ಲವೆ ಮಾರಿದರೆ ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನು ಒಂದು ಕುರಿಗೆ ಬದಲಾಗಿ ನಾಲ್ಕು ಕುರಿಗಳನ್ನು ಕೊಡಬೇಕು.
[2] ಒಬ್ಬ ಕಳ್ಳನು ಕಳ್ಳತನ ಮಾಡುತ್ತಿರುವಾಗಲೇ ಕೈಗೆ ಸಿಕ್ಕಿದಾಗ ಅವನನ್ನು ಕೊಂದರೆ ಅದನ್ನು ನರಹತ್ಯೆಯೆಂದು ಎಣಿಸಕೂಡದು.
[3] ಸೂರ್ಯೋದಯವಾದ ನಂತರ ಒಬ್ಬನು ಕಳ್ಳತನಮಾಡಿ ಸಿಕ್ಕಿಬಿದ್ದಾಗ, ಅವನನ್ನು ಹೊಡೆದು ಕೊಂದರೆ ಅದನ್ನು ನರಹತ್ಯೆಯೆಂದು ಎಣಿಸಬೇಕು. ಅವನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಹಿಂತಿರುಗಿಸಬೇಕು. ಅವನಲ್ಲಿ ಕೊಡಲು ಏನೂ ಇಲ್ಲದ ಪಕ್ಷಕ್ಕೆ ಅವನು ಆ ಕಳ್ಳತನ ಮಾಡಿದ್ದರಿಂದ ಗುಲಾಮನಾಗಿ ಮಾರಲ್ಪಡಬೇಕು.
[4] ಕಳ್ಳತನ ಮಾಡಿದ ಎತ್ತಾಗಲಿ, ಕತ್ತೆಯಾಗಲಿ, ಆಡು, ಕುರಿಯಾದರೂ ಜೀವದಿಂದಲೇ ಕದ್ದವನ ಬಳಿಯಲ್ಲಿ ಸಿಕ್ಕಿದರೆ ಅವನು ಎರಡರಷ್ಟು ಈಡು ಕೊಡಬೇಕು.
[5] ಒಬ್ಬನು ತನ್ನ ಹೊಲದಲ್ಲಾಗಲಿ, ದ್ರಾಕ್ಷಿತೋಟದಲ್ಲಾಗಲಿ ತನ್ನ ದನಗಳನ್ನು ಮೇಯಿಸಿ, ಮತ್ತೊಬ್ಬನ ಹೊಲದಲ್ಲಾಗಲಿ, ದ್ರಾಕ್ಷಿತೋಟದಲ್ಲಾಗಲಿ ಮೇಯುವಂತೆ ಮಾಡಿದರೆ, ತನ್ನ ಹೊಲದ ಅಥವಾ ದ್ರಾಕ್ಷಿತೋಟದ ಉತ್ತಮ ಭಾಗವನ್ನು ಅವನಿಗೆ ಈಡು ಕೊಡಬೇಕು.
[6] ಒಬ್ಬನು ಹೊತ್ತಿಸಿದ ಬೆಂಕಿ ಆಕಸ್ಮಾತ್ತಾಗಿ ಮುಳ್ಳಿನ ಗಿಡಗಳಿಗೆ ಬೆಂಕಿ ಹತ್ತಿಕೊಂಡು ಮತ್ತೊಬ್ಬನ ದವಸದ ರಾಶಿಗಳಾಗಲಿ, ಬೆಳೆಯಾಗಲಿ, ಹೊಲವಾಗಲಿ ಸುಟ್ಟು ಹೋದರೆ ಬೆಂಕಿ ಹೊತ್ತಿಸಿದವನು ಅದಕ್ಕೆ ಈಡುಕೊಡಬೇಕು.
[7] ಒಬ್ಬನು ಹಣವನ್ನಾಗಲಿ, ಒಡವೆಗಳನ್ನಾಗಲಿ ಕಾಪಾಡುವುದಕ್ಕೆ ಮತ್ತೊಬ್ಬನಿಗೆ ಒಪ್ಪಿಸಿದಾಗ ಅದು ಆ ಮನುಷ್ಯನ ಮನೆಯಲ್ಲಿ ಕಳ್ಳತನವಾಗಿ, ಕಳ್ಳನು ಸಿಕ್ಕಿಕೊಂಡರೆ ಎರಡರಷ್ಟು ದಂಡವನ್ನು ಕೊಡಬೇಕು.
[8] ಕಳ್ಳನು ಸಿಕ್ಕದೇ ಹೋದರೆ ಆ ಮನೆಯ ಯಜಮಾನನು ತಾನೇ ಆ ಒಡವೆಗಳನ್ನು ಕದ್ದನೋ ಇಲ್ಲವೋ ಎಂಬುದನ್ನು ದೃಢಪಡಿಸುವುದಕ್ಕಾಗಿ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
[9] ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದರ ವಿಷಯದಲ್ಲಿಯೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆಗಳ ವಿಷಯವಾದರೂ, ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ, ಇಬ್ಬರು ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾನೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
[10] ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾಗಲಿ, ಎತ್ತನ್ನಾಗಲಿ, ಕುರಿಯನ್ನಾಗಲಿ ಬೇರೆ ಯಾವ ಪಶುವನ್ನಾಗಲಿ ಕಾಪಾಡುವುದಕ್ಕೆ ಕೊಟ್ಟಿದ್ದು, ಅದು ಸತ್ತರೆ ಇಲ್ಲವೆ ಗಾಯಗೊಂಡರೆ ಇಲ್ಲವೆ ಯಾರೂ ತಿಳಿಯದಂತೆ ಕಳ್ಳತನವಾದರೆ,
[11] ಆ ಮನುಷ್ಯನು ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲ ಎಂಬುದನ್ನು ದೃಢಪಡಿಸುವುದಕ್ಕಾಗಿ ಯೆಹೋವನ ಮೇಲೆ ಪ್ರಮಾಣಮಾಡಬೇಕು. ಆಗ ಪಶುವಿನ ಒಡೆಯನು ಆ ಪ್ರಮಾಣವಾಕ್ಯವನ್ನು ನಂಬಬೇಕು. ಪ್ರಮಾಣಮಾಡಿದವನು ಅದಕ್ಕೆ ಈಡುಕೊಡಬೇಕಾದ ಅಗತ್ಯವಿರುವುದಿಲ್ಲ.
[12] ಆದರೆ ಆ ಪಶುವು ಅವನ ಬಳಿಯಿಂದ ಕಳವಾದರೆ ಆ ವ್ಯಕ್ತಿ ಅದರ ಯಜಮಾನನಿಗೆ ಪ್ರತಿಯಾಗಿ ಈಡುಕೊಡಬೇಕು.
[13] ಕಾಡುಮೃಗವು ಆ ಪಶುವನ್ನು ಕೊಂದಿದ್ದರೆ, ಅದರ ಹೆಣವನ್ನು ಗುರುತಿಗಾಗಿ ತೋರಿಸಲಿ. ಕಾಡುಮೃಗ ಕೊಂದಿದ್ದಕ್ಕೆ ಈಡು ಕೊಡಬೇಕಾದ ಅಗತ್ಯವಿಲ್ಲ.
[14] ಒಬ್ಬನು ಮತ್ತೊಬ್ಬನಿಂದ ಪಶುವನ್ನು ಸ್ವಲ್ಪ ಕಾಲಕ್ಕೆ ಬಾಡಿಗೆಗೆ ತೆಗೆದುಕೊಂಡಿರಲಾಗಿ ಆ ಪಶುವಿನ ಒಡೆಯನು ಅದರ ಹತ್ತಿರವಿಲ್ಲದ ಸಮಯದಲ್ಲಿ ಅದು ಗಾಯಗೊಂಡರೆ ಇಲ್ಲವೆ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.
[15] ಯಜಮಾನನು ಅದರ ಹತ್ತಿರದಲ್ಲೇ ಇದಿದ್ದರೆ, ಅವನಿಗೆ ಈಡುಕೊಡಬೇಕಾದ ಅಗತ್ಯವಿಲ್ಲ. ಅದನ್ನು ಬಾಡಿಗೆಗೆ ತೆಗೆದುಕೊಂಡಿದ್ದರೆ ಅದಕ್ಕೆ ಉಂಟಾದ ನಷ್ಟವು ಬಾಡಿಗೆಯ ಲೆಕ್ಕಕ್ಕೆ ಎಣಿಕೆಯಾಗಬೇಕು.
[16] ನಿಶ್ಚಿತಾರ್ಥವಾಗದ ಹೆಣ್ಣನ್ನು ಒಬ್ಬನು ಮರುಳುಗೊಳಿಸಿ ಸಂಗಮಿಸಿದರೆ ಅವಳಿಗೋಸ್ಕರ ತಕ್ಕ ತೆರವನ್ನು ಕೊಟ್ಟು ಅವಳನ್ನು ಮದುವೆಮಾಡಿಕೊಳ್ಳಬೇಕು.
[17] ಅವಳ ತಂದೆ ಅವಳನ್ನು ಅವನಿಗೆ ಕೊಡುವುದಕ್ಕೆ ಒಪ್ಪದೇ ಹೋದರೆ ಆ ಮನುಷ್ಯನು ತಕ್ಕ ಹಣವನ್ನು ದಂಡವಾಗಿ ಕೊಡಬೇಕು.
[18] ಮಾಟಗಾರ್ತಿಯನ್ನು ಜೀವದಿಂದ ಉಳಿಸಬಾರದು.
[19] ಪಶುಸಂಗ ಮಾಡಿದವನಿಗೆ ಮರಣಶಿಕ್ಷೆಯಾಗಬೇಕು.
[20] ಯೆಹೋವನೊಬ್ಬನಿಗೇ ಹೊರತಾಗಿ ಬೇರೊಬ್ಬ ದೇವರಿಗೆ ಯಜ್ಞ ಅರ್ಪಿಸುವವನು ಸಂಪೂರ್ಣವಾಗಿ ನಾಶವಾಗಬೇಕು.
[21] ಪರದೇಶದವನಿಗೆ ಅನ್ಯಾಯ ಮಾಡಬಾರದು ಉಪದ್ರವ ಕೊಡಬಾರದು ನೀವು ಐಗುಪ್ತ ದೇಶದಲ್ಲಿ ಪರದೇಶಿಗಳಾಗಿದ್ದೀರಲ್ಲವೇ?
[22] ವಿಧವೆಯರನ್ನಾಗಲಿ, ದಿಕ್ಕಿಲ್ಲದ ಮಕ್ಕಳನ್ನಾಗಲಿ, ತೊಂದರೆಪಡಿಸಬಾರದು.
[23] ನೀವು ಇಂಥವರನ್ನು ತೊಂದರೆಪಡಿಸಿದರೆ ಅವರು ನನಗೆ ಮೊರೆಯಿಡುವರು ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ.
[24] ನಾನು ಕೋಪಗೊಂಡು ನಿಮ್ಮ ಶತ್ರುಗಳನ್ನು ಕತ್ತಿಯಿಂದ ಸಂಹಾರಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಯರಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
[25] ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಹಣ ಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.
[26] ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡಬೇಕು.
[27] ಏಕೆಂದರೆ ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಬೇರೆ ಯಾವುದನ್ನು ಹೊದ್ದುಕೊಂಡು ಮಲಗಬೇಕು? ಅವನು ನನಗೆ ಮೊರೆಯಿಟ್ಟರೆ ನಾನು ಕಿವಿಗೊಟ್ಟು ಕೇಳುವೆನು. ಏಕೆಂದರೆ ನಾನು ದಯಾಪರನು.
[28] ದೇವರನ್ನು ದೂಷಿಸಬಾರದು. ನಿನ್ನ ಜನರ ಅಧಿಕಾರಿಗಳನ್ನು ನೀನು ಶಪಿಸಬಾರದು.
[29] ನಿಮ್ಮ ಕಣದಿಂದ ಹಾಗೂ ದ್ರಾಕ್ಷಾಲತೆಯಿಂದ ನನಗೆ ಸಲ್ಲಿಸತಕ್ಕದ್ದನ್ನು ಸಮರ್ಪಿಸುವುದಕ್ಕೆ ತಡಮಾಡಬಾರದು. ನಿಮ್ಮ ಚೊಚ್ಚಲು ಗಂಡು ಮಕ್ಕಳನ್ನು ನನಗೆ ಸಮರ್ಪಿಸಬೇಕು.
[30] ಅದರಂತೆಯೇ ನಿಮ್ಮ ಕುರಿ, ದನಗಳ ಚೊಚ್ಚಲು ಮರಿಗಳನ್ನು ನನಗೆ ಸಮರ್ಪಿಸಬೇಕು. ಏಳು ದಿನಗಳ ಕಾಲ ಆ ಮರಿ ತನ್ನ ತಾಯಿಯೊಂದಿಗಿರಲಿ. ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.
[31] ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದುದರಿಂದ ಕಾಡುಮೃಗ ಕೊಂದದ್ದನ್ನು ನೀವು ತಿನ್ನಬಾರದು, ಅದನ್ನು ನಾಯಿಗಳಿಗೆ ಬಿಡಬೇಕು.