Skip to content
Opens in a new window
Listen to this chapter • 5:23

[1] ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

[2] “ಇಸ್ರಾಯೇಲರು ನನಗಾಗಿ ಕಾಣಿಕೆಯನ್ನು ತರಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ತೆಗೆದುಕೊಳ್ಳಬೇಕು.

[3] ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು ಯಾವುವೆಂದರೆ, ಚಿನ್ನ, ಬೆಳ್ಳಿ, ಹಾಗೂ ತಾಮ್ರ ಎಂಬ ಲೋಹಗಳು,

[4] ನೀಲಿ, ನೇರಳೆ, ರಕ್ತಗೆಂಪು ವರ್ಣಗಳುಳ್ಳ ದಾರಗಳೂ, ನಾರುಬಟ್ಟೆಗಳೂ, ಆಡು ಕೂದಲಿನ ಉಣ್ಣೆಯ ಬಟ್ಟೆಗಳೂ,

[5] ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, ಕಡಲಪ್ರಾಣಿಯ ತೊಗಲುಗಳೂ, ಜಾಲೀಮರವೂ,

[6] ದೀಪಕ್ಕೆ ಬೇಕಾದ ಎಣ್ಣೆಯೂ, ಅಭಿಷೇಕ ತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳೂ,

[7] ಮಹಾಯಾಜಕನ ಕವಚಕ್ಕೆ ಹಾಗೂ ಎದೆಗೆ ಧರಿಸುವ ಪದಕದ ಮೇಲೆ ಇರಿಸಲು ಬೇಕಾಗಿರುವ ಗೋಮೇಧಕರತ್ನಗಳು ಹಾಗೂ ಇತರ ರತ್ನಗಳೂ ಇವೇ.

[8] “ನಾನು ಅವರ ಮಧ್ಯದಲ್ಲಿ ವಾಸಮಾಡುವುದಕ್ಕೆ ನನಗೆ ಒಂದು ಗುಡಾರವನ್ನು ಕಟ್ಟಿಸಬೇಕು.

[9] ನಾನು ನಿನಗೆ ತೋರಿಸುವ ಮಾದರಿಯಲ್ಲಿಯೇ ಗುಡಾರವನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ಮಾಡಿಸಬೇಕು.

[10] “ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವು ಹಾಗೂ ಒಂದುವರೆ ಮೊಳ ಎತ್ತರವು ಆಗಿರಬೇಕು.

[11] ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಹಾಗೂ ಒಳಗಡೆಯೂ ಹೊದಿಸಬೇಕು. ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು.

[12] ನಾಲ್ಕು ಬಂಗಾರದ ಬಳೆಗಳನ್ನು ಅದರ ನಾಲ್ಕು ಮೂಲೆಗಳಲ್ಲಿರುವ ಒಂದೊಂದು ಕಾಲಿಗೂ ಎರಡೆರಡು ಬಳೆಗಳನ್ನು ಹಾಕಬೇಕು.

[13] ಆ ಮಂಜೂಷವನ್ನು ಹೊರುವುದಕ್ಕಾಗಿ ನೀನು ಜಾಲೀಮರದ ಕಂಬಗಳನ್ನು ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ,

[14] ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.

[15] ಆ ಕಂಬಗಳನ್ನು ಮಂಜೂಷದ ಬಳೆಗಳಿಂದ ತೆಗೆಯದೇ ಅವುಗಳಲ್ಲಿಯೇ ಬಿಟ್ಟಿರಬೇಕು.

[16] ಆ ಮಂಜೂಷದಲ್ಲಿ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು.

[17] ಚೊಕ್ಕ ಬಂಗಾರದ ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿರಬೇಕು.

[18] ಕೃಪಾಸನದ ಎರಡು ಕೊನೆಗಳಲ್ಲಿ ಎರಡು ಬಂಗಾರದ ಕೆರೂಬಿಗಳನ್ನು ಕೆತ್ತನೆ ಕೆಲಸದಿಂದ ಮಾಡಿಸಬೇಕು.

[19] ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಬೇಕು.

[20] ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಮತ್ತು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿರುವಂತೆಯೂ ಇರಿಸಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುವಂತಿರಬೇಕು.

[21] ಆ ಕೃಪಾಸನವನ್ನು ಮಂಜೂಷದ ಮೇಲಿರಿಸಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇರಿಸಬೇಕು

[22] ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತನಾಡಿ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲಾ ಸಂಗತಿಗಳನ್ನು ತಿಳಿಸುವೆನು.

[23] “ನೀನು ಜಾಲೀಮರದಿಂದ ಒಂದು ಮೇಜನ್ನು ಮಾಡಿಸಬೇಕು. ಅದು ಎರಡು ಮೊಳ ಉದ್ದವಾಗಿಯೂ, ಒಂದು ಮೊಳ ಅಗಲವಾಗಿಯೂ, ಒಂದುವರೆ ಮೊಳ ಎತ್ತರವಾಗಿಯೂ ಇರಬೇಕು.

[24] ಅದಕ್ಕೆ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿ, ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು.

[25] ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡ ಪಟ್ಟಿಯನ್ನು ಮಾಡಿಸಿ ಅದಕ್ಕೂ ಚಿನ್ನದ ತೋರಣ ಕಟ್ಟಿಸಬೇಕು.

[26] ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಹಾಕಬೇಕು.

[27] ಆ ಬಳೆಗಳು ಅಡ್ಡಪಟ್ಟಿಗೆಗೆ ಅಂಟಿಕೊಂಡಿರಬೇಕು. ಮೇಜನ್ನು ಎತ್ತುವುದಕ್ಕಾಗಿ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು.

[28] ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. ಅವುಗಳಿಂದಲೇ ಮೇಜನ್ನು ಎತ್ತಬೇಕು.

[29] ಮೇಜಿನ ಮೇಲಿಡಬೇಕಾದ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳನ್ನು ಚೊಕ್ಕ ಬಂಗಾರದಿಂದಲೇ ಮಾಡಿಸಬೇಕು.

[30] ನೈವೇದ್ಯದ ರೊಟ್ಟಿಗಳು ಪ್ರತಿದಿನ ಆ ಮೇಜಿನ ಮೇಲೆ ನನ್ನ ಸಮ್ಮುಖದಲ್ಲಿಯೇ ಇಟ್ಟಿರಬೇಕು.

[31] “ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿಸಬೇಕು. ಅದರ ಕೆಳಭಾಗವನ್ನು ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳು, ಅರಳಿದ ಪುಷ್ಪಗಳು ಮೊಗ್ಗುಗಳು ಅಲಂಕಾರವಾಗಿ ಕೆತ್ತಿರಬೇಕು.

[32] ಕಂಬದ ಒಂದೊಂದು ಪಾರ್ಶ್ವದಲ್ಲಿಯೂ ಮೂರು ಮೂರು ಕೊಂಬೆಗಳಂತೆ ಹಾಗೆ ಆರು ಕೊಂಬೆಗಳೂ ಇರಬೇಕು.

[33] ಪ್ರತಿಯೊಂದು ಕೊಂಬೆಗಳಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಹೂವುಗಳೂ ಮೊಗ್ಗುಗಳೂ ಇರಬೇಕು. ದೀಪಸ್ತಂಭದಿಂದ ಬರುವ ಆರು ಕೊಂಬೆಗಳನ್ನು ಹಾಗೆಯೇ ಮಾಡಿಸಬೇಕು.

[34] ದೀಪಸ್ತಂಭದ ಕಂಬದಲ್ಲಿ ಪುಷ್ಪಗುಚ್ಛಗಳೂ, ಪುಷ್ಪಗಳೂ, ಮೊಗ್ಗುಗಳು ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳೂ ಇರಬೇಕು.

[35] ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು ಇರಬೇಕು.

[36] ಪುಷ್ಪಪಾತ್ರೆಗಳೂ, ಕೊಂಬುಗಳೂ ಸಹಿತವಾದ ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕ ಬಂಗಾರದಿಂದ ನಕಾಸಿ ಕೆಲಸದಿಂದ ಮಾಡಿಸಬೇಕು.

[37] ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಆ ಹಣತೆಗಳ ಬೆಳಕು ಎದುರಿನಿಂದ ಬೀಳುವಂತೆ ಅವುಗಳನ್ನು ಹಚ್ಚಿರಬೇಕು.

[38] ದೀಪದ ಕುಡಿತೆಗೆಯುವ ಕತ್ತರಿಗಳೂ, ಕತ್ತರಿಸಿದ ಕುಡಿಗಳನ್ನು ಹಾಕುವ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದಲೇ ಮಾಡಿಸಬೇಕು.

[39] ದೀಪಸ್ತಂಭವೂ ಅದರ ಎಲ್ಲಾ ಉಪಕರಣಗಳೂ ಒಂದು ತಲಾಂತು ಚೊಕ್ಕ ಬಂಗಾರವಾಗಿರಬೇಕು.

[40] ನೋಡು, ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯಲ್ಲಿಯೇ ಎಲ್ಲವನ್ನು ಎಚ್ಚರಿಕೆಯಿಂದ ಮಾಡಿಸಬೇಕು.”

ವಿಮೋಚನಕಾಂಡ — Chapters