[1] ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿದನು. ಅದು ಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ ಹಾಗೂ ಒಂದುವರೆ ಮೊಳ ಎತ್ತರವೂ ಆಗಿತ್ತು.
[2] ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಮತ್ತು ಒಳಗಡೆಯೂ ಹೊದಿಸಿದನು. ಅದರ ಮೇಲೆ ಸುತ್ತಲು ಚಿನ್ನದ ಕಿರೀಟವನ್ನು ಕಟ್ಟಿಸಿದನು.
[3] ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಅಂದರೆ, ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು.
[4] ಮತ್ತು ಜಾಲೀಮರದ ಕಂಬಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
[5] ಮಂಜೂಷವನ್ನು ಹೊರುವುದಕ್ಕಾಗಿ ಕಂಬಗಳನ್ನು ಮಂಜೂಷದ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಅದನ್ನು ಸಿಕ್ಕಿಸಿದನು.
[6] ಇದಲ್ಲದೆ ಚೊಕ್ಕಬಂಗಾರದಿಂದ ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿತ್ತು.
[7] ಬೆಚಲೇಲನು ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಗಳ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿಸಿದನು.
[8] ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಗಳನ್ನು ಮಾಡಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಿದನು.
[9] ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ, ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಅವುಗಳ ಮುಖಗಳು ಎದುರು ಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.
[10] ಬೆಚಲೇಲನು ಜಾಲೀಮರದಿಂದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
[11] ಅದಕ್ಕೆ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ಚಿನ್ನದ ತೋರಣಗಳನ್ನು ಕಟ್ಟಿದನು.
[12] ಮೇಜಿನ ಸುತ್ತಲು ಅಂಗೈ ಅಗಲದ ಅಡ್ಡಪಟ್ಟಿಗಳನ್ನು ಮಾಡಿ ಅದಕ್ಕೂ ನಾಲ್ಕು ಚಿನ್ನದ ತೋರಣ ಕಟ್ಟಿದನು.
[13] ಮೇಜನ್ನು ಎತ್ತುವ ಕಂಬಗಳನ್ನು ಸೇರಿಸುವುದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಕಾಲುಗಳಲ್ಲಿ ಜೋಡಿಸಿದನು.
[14] ಆ ಬಳೆಗಳು ಅಡ್ಡಪಟ್ಟಿಗೆ ಸೇರಿಕೊಂಡಿದ್ದವು.
[15] ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲೀಮರದಿಂದ ಕಂಬಗಳನ್ನು ಮಾಡಿ, ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
[16] ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜಿಗಳು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.
[17] ಮತ್ತು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು. ಅದರ ಬುಡವನ್ನು ಮತ್ತು ಕಂಬವನ್ನು ನಕಾಸಿಕೆಲಸದಿಂದ ಮಾಡಿದನು. ಆ ದೀಪಸ್ತಂಭವನ್ನು ಅಖಂಡವಾಗಿ ಪುಷ್ಪದಗೊಂಚಲುಗಳು, ಪುಷ್ಪಗಳು, ಮೊಗ್ಗುಗಳು ಅಲಂಕಾರವಾಗಿ ಅದರಿಂದಲೇ ಹೊರಟಂತೆ ಕೆತ್ತಲಾಗಿತ್ತು.
[18] ಕಂಬದ ಒಂದೊಂದು ಪಾರ್ಶ್ವದಲ್ಲಿ ಮೂರು ಮೂರು ಕೊಂಬೆಗಳಂತೆ ಒಟ್ಟು ಆರು ಕೊಂಬೆಗಳು ಇದ್ದವು.
[19] ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಕೃತಿಗಳಿದ್ದವು; ಒಂದೊಂದು ಆಕೃತಿಗೆ ಒಂದೊಂದು ಪುಷ್ಪವೂ, ಒಂದು ಮೊಗ್ಗು ಇದ್ದವು. ಆರು ಕೊಂಬೆಗಳಲ್ಲಿಯೂ ಹಾಗೆಯೇ ಇದ್ದವು.
[20] ದೀಪಸ್ತಂಭದಲ್ಲಿ ಬಾದಾಮಿ ಹೂವುಗಳಂತಿರುವ ಪುಷ್ಪಗಳೂ, ಮೊಗ್ಗುಗಳೂ ಇರುವ ಹೂ ಗೊಂಚಲುಗಳಂತೆ ನಾಲ್ಕು ಪುಷ್ಪಾಕೃತಿಗಳು ಇದ್ದವು.
[21] ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು, ಕೊಂಬೆಗಳ ಕೆಳಗೆ ಕವಲೊಡೆದಿರುವ ಜಾಗಗಳಲ್ಲಿಯೂ ಒಂದೊಂದು ಮೊಗ್ಗು ಹೀಗೆ ಕೊಂಬೆಗಳ ಆರು ಶಾಖೆಗಳಲ್ಲಿಯೂ ಮೊಗ್ಗುಗಳಿದ್ದವು.
[22] ಮೊಗ್ಗುಗಳು, ಶಾಖೆಗಳು ಒಂದೇ ಕಡೆಯಿಂದ ಉದ್ಭವಗೊಂಡಿದ್ದವು. ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕಬಂಗಾರದಿಂದ ಏಕವಾಗಿ ಮಾಡಲಾಗಿತ್ತು.
[23] ಅದರ ಏಳು ಹಣತೆಗಳನ್ನೂ ಅದರ ಕತ್ತರಿಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದ ಮಾಡಲಾಗಿತ್ತು.
[24] ದೀಪಸ್ತಂಭವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಲಾಗಿತ್ತು.
[25] ಅವನು ಜಾಲೀಮರದಿಂದ ಧೂಪವೇದಿಯನ್ನು ಮಾಡಿಸಿದನು. ಅದು ಒಂದು ಮೊಳ ಉದ್ದವಾಗಿಯೂ, ಒಂದು ಮೊಳ ಅಗಲವಾಗಿಯು ಇದ್ದು ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರೊಂದಿಗೆ ಏಕವಾಗಿದ್ದವು.
[26] ಅದರ ಮೇಲ್ಭಾಗಕ್ಕೂ ಹಲಗೆಗಳಿಗೂ ನಾಲ್ಕು ಪಕ್ಕಗಳಲ್ಲಿದ್ದ ಹಲಗೆಗಳಿಗೂ ಮತ್ತು ಕೊಂಬುಗಳಿಗೂ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ತೋರಣ ಕಟ್ಟಿಸಿದನು.
[27] ಅದನ್ನು ಎತ್ತುವ ಕೋಲುಗಳನ್ನು ಸೇರಿಸುವುದಕ್ಕಾಗಿ ತೋರಣದ ಕೆಳಗೆ ವೇದಿಕೆಯ ಎರಡು ಪಾರ್ಶ್ವಗಳ ಮೂಲೆಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಜೋಡಿಸಿದನು.
[28] ಜಾಲೀಮರದಿಂದ ಕೋಲುಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
[29] ಅದಲ್ಲದೆ ಅವನು ದೇವರ ಪವಿತ್ರ ಸೇವೆಗೆ ನೇಮಕವಾದ ಪಟ್ಟಾಭಿಷೇಕತೈಲವನ್ನೂ ಪರಿಮಳದ್ರವ್ಯಗಳಿಂದ ಮಾಡಿದ ಸ್ವಚ್ಛವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಮಾಡುವವರ ವಿಧಾನದ ಪ್ರಕಾರವೇ ತಯಾರಿಸಿದನು.