[1] ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು:
[2] ರೂಬೇನ್, ಸಿಮೆಯೋನ್, ಲೇವಿ, ಯೆಹೂದ,
[3] ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್,
[4] ದಾನ್, ಗಾದ್, ನಫ್ತಾಲಿ ಮತ್ತು ಆಶೇರ್.
[5] ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು.
[6] ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು.
[7] ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು.
[8] ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು.
[9] ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ.
[10] ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ
[11] ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು.
[12] ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು.
[13] ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು.
[14] ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು.
[15] ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು.
[16] ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು.
[17] ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು.
[18] ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು.
[19] ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು.
[20] ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು.
[21] ಸೂಲಗಿತ್ತಿಯರು ದೇವರಿಗೆ ಭಯಪಟ್ಟಿದ್ದರಿಂದ, ಆತನು ಅವರಿಗೆ ವಂಶಾಭಿವೃದ್ಧಿಯನ್ನು ಅನುಗ್ರಹಿಸಿದನು. ಇಸ್ರಾಯೇಲರು ಹೆಚ್ಚಿ ಬಲಗೊಂಡರು.
[22] ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.