Skip to content
Opens in a new window
Listen to this chapter • 7:30

[1] ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದೇವಮಂದಿರದ ಸೇವೆಗೆ ಅಲಂಕಾರವಾದ ವಸ್ತ್ರಗಳನ್ನೂ ಮತ್ತು ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನೂ ಮಾಡಿದರು.

[2] ಮಹಾಯಾಜಕನ ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲೂ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಮಾಡಿದರು.

[3] ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದೊಡನೆಯೂ ಹತ್ತಿಯ ಬಟ್ಟೆಯೊಡನೆಯೂ ಕಸೂತಿ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸವನ್ನು ಮಾಡುವುದಕ್ಕಾಗಿ ಬಂಗಾರವನ್ನು ಬಡಿದು ಹಗುರವಾದ ತಗಡುಗಳನ್ನು ಮಾಡಿ ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು.

[4] ಏಫೋದ್ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳನ್ನು ಮಾಡಿದರು; ಅದರ ಎರಡು ಅಂಚುಗಳು ಜೋಡಿಸಲ್ಪಟ್ಟಿದ್ದವು.

[5] ಕವಚದ ಮೇಲಿರುವ ಕಸೂತಿ ನಡುಕಟ್ಟು ಕವಚಕ್ಕೆ ಏಕವಾಗಿದ್ದು ಅದರಂತೆಯೇ ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲು, ಚಿನ್ನದ ದಾರಗಳಿಂದಲು ಹಾಗೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಮಾಡಲ್ಪಟ್ಟಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.

[6] ಮುದ್ರಾಕ್ಷವನ್ನು ಕೆತ್ತುವ ರೀತಿಯಲ್ಲಿ ಗೋಮೇಧಕರತ್ನಗಳಲ್ಲಿ ಇಸ್ರಾಯೇಲನ ಹನ್ನೆರಡು ಮಕ್ಕಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಹಚ್ಚಿದರು.

[7] ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ರತ್ನಗಳನ್ನು ಇಸ್ರಾಯೇಲರ ಜ್ಞಾಪಕಾರ್ಥವಾಗಿ ಅವುಗಳನ್ನು ಏಫೋದ್ ಕವಚದ ಹೆಗಲಿನ ಮೇಲಿರುವ ಪಟ್ಟಿಗಳಲ್ಲಿ ಬಿಗಿಸಿದನು.

[8] ಏಫೋದ್ ಕವಚದಂತೆಯೇ ಕಸೂತಿಯಿಂದಲೂ ಕೆಲಸದಿಂದ ಚಿನ್ನದ ದಾರಗಳಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ನಯವಾದ ನಾರಿನ ಬಟ್ಟೆಯಲ್ಲಿ ಎದೆಯಪದಕವನ್ನು ಮಾಡಿದನು.

[9] ಅದು ಚಚ್ಚೌಕವಾಗಿತ್ತು. ಆ ಎದೆಯಪದಕವು ಎರಡು ಪದರುಗಳ್ಳುಳದ್ದಾಗಿತ್ತು; ಅದು ಒಂದು ಗೇಣು ಉದ್ದವೂ ಒಂದು ಗೇಣು ಅಗಲವೂ ಆಗಿತ್ತು.

[10] ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಇರಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು.

[11] ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲಮಣಿ ಮತ್ತು ವಜ್ರಗಳು.

[12] ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು.

[13] ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಮತ್ತು ವೈಡೂರ್ಯಗಳು ಇದ್ದವು. ಈ ರತ್ನಗಳನ್ನು ಕುಂದಣಗಳಲ್ಲಿ ಇರಿಸಿದರು.

[14] ಇಸ್ರಾಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾಕ್ಷಗಳಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತ್ತು.

[15] ಎದೆಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕಬಂಗಾರದ ಸರಪಣಿಗಳನ್ನು ನೇಯ್ಗೆಯ ಕೆಲಸದಿಂದ ಮಾಡಿದರು.

[16] ಎರಡು ಚಿನ್ನದ ಬಳೆಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿ ಆ ಉಂಗುರಗಳನ್ನು ಎದೆಪದಕದ ಎರಡು ಮೂಲೆಗಳಿಗೆ ಜೋಡಿಸಿದರು.

[17] ಹೆಣಿಗೇಕೆಲಸದ ಆ ಎರಡು ಚಿನ್ನದ ಸರಪಣಿಗಳನ್ನು ಪದಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಜೋಡಿಸಿದರು.

[18] ಹೆಣಿಗೇಕೆಲಸದ ಆ ಸರಪಣಿಗಳ ಅಂಚುಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಬಳೆಗಳ ಮುಂಭಾಗಕ್ಕೆ ಜೋಡಿಸಿದರು.

[19] ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಟ್ಟರು.

[20] ಅವರು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಏಫೋದ್ ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.

[21] ಎದೆಯಪದಕವು ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದರು.

[22] ಬೆಚಲೇಲನು ಏಫೋದ್ ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದಲೇ ನೇಕಾರನ ಕೆಲಸದಿಂದ ಮಾಡಿದನು.

[23] ತಲೆತೂರಿಸುವುದಕ್ಕೆ ಅದರಲ್ಲಿ ಕೊರಳು ಪಟ್ಟಿಯನ್ನು ಮಾಡಿ ಅದು ಹರಿಯದಂತೆ ಅದರ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿದನು.

[24] ನಿಲುವಂಗಿಯ ಅಂಚಿನ ಸುತ್ತಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನು ಮಾಡಿದರು.

[25] ಮತ್ತು ಚೊಕ್ಕ ಬಂಗಾರದಿಂದ ಗೆಜ್ಜೆಗಳನ್ನು ಮಾಡಿ ನಿಲುವಂಗಿಯ ಅಂಚಿನಲ್ಲಿ ದಾಳಿಂಬೆ ಚೆಂಡುಗಳ ನಡುವೆ ಇಟ್ಟರು.

[26] ಚಿನ್ನದ ಗೆಜ್ಜೆಯೂ ದಾಳಿಂಬೆಯಂತಿರುವ ಚೆಂಡೂ ಒಂದಾದ ಮೇಲೆ ಒಂದು ದೇವರ ಸೇವೆಗಾಗಿ ಇರುವ ಆ ನಿಲುವಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದನು.

[27] ಅವರು ಆರೋನನಿಗೂ ಅವನ ಮಕ್ಕಳಿಗೂ ನಯವಾದ ನಾರಿನಿಂದ ನೇಕಾರರ ಕೆಲಸದ ರೀತಿಯಲ್ಲಿ ಮೇಲಂಗಿಗಳನ್ನೂ,

[28] ನಯವಾದ ನಾರಿನಿಂದ ಮಹಾಯಾಜಕನ ಮುಂಡಾಸವನ್ನು, ಯಾಜಕರ ಅಲಂಕಾರವಾದ ಮುಂಡಾಸಗಳನ್ನು ಹಾಗೂ ಚಡ್ಡಿಗಳನ್ನು,

[29] ಮತ್ತು ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದ ರೀತಿಯಲ್ಲಿ ನಡುಕಟ್ಟನ್ನೂ ಮಾಡಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.

[30] ಅವರು ಚೊಕ್ಕ ಬಂಗಾರದಿಂದ ಪರಿಶುದ್ಧ ಕಿರೀಟಕ್ಕೆ ಬಾಸಿಂಗವನ್ನು ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ, ಯೆಹೋವನಿಗೆ ಮೀಸಲು ಎಂಬ ಲಿಪಿಯನ್ನು ಬರೆದರು.

[31] ಅದನ್ನು ಮುಂಡಾಸಕ್ಕೆ ಜೋಡಿಸುವುದಕ್ಕಾಗಿ ನೀಲಿ ದಾರವನ್ನು ಅದಕ್ಕೆ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.

[32] ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಅದನ್ನು ಮಾಡಿದರು.

[33] ಆಗ ಅವರು ಆ ದೇವದರ್ಶನ ಗುಡಾರವನ್ನು ಮೋಶೆಯ ಬಳಿಗೆ ತೆಗೆದುಕೊಂಡು ಬಂದರು. ಗುಡಾರವನ್ನು, ಅದಕ್ಕೆ ಸಂಬಂಧಪಟ್ಟ ಉಪಕರಣಗಳೆಲ್ಲವನ್ನೂ ಅಂದರೆ ಅದರ ಕೊಂಡಿಗಳನ್ನು, ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು,

[34] ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು, ಕಡಲಪ್ರಾಣಿಯ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು ಹಾಗೂ ಗರ್ಭಗುಡಿಯನ್ನು ಮರೆಮಾಡುವ ಪರದೆಯನ್ನು,

[35] ಆಜ್ಞಾಶಾಸನಗಳ ಮಂಜೂಷವನ್ನು, ಅದರ ಕೋಲುಗಳನ್ನು, ಕೃಪಾಸನವನ್ನು,

[36] ಮೇಜನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,

[37] ಚೊಕ್ಕ ಬಂಗಾರದ ದೀಪಸ್ತಂಭವನ್ನು, ಅದರ ಮೇಲಿಡಬೇಕಾದ ಹಣತೆಗಳನ್ನು, ಅದರ ಉಪಕರಣಗಳನ್ನು, ದೀಪಕ್ಕೆ ಬೇಕಾದ ಎಣ್ಣೆಯನ್ನು,

[38] ಚಿನ್ನದ ಧೂಪವೇದಿಯನ್ನು, ಅಭಿಷೇಕತೈಲವನ್ನು, ಸುವಾಸನೆಯುಳ್ಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,

[39] ತಾಮ್ರದ ಯಜ್ಞವೇದಿಯನ್ನು, ಅದರ ತಾಮ್ರದ ಜಾಲರಿಯನ್ನು, ಅದರ ಕೋಲುಗಳನ್ನು, ಉಪಕರಣಗಳನ್ನು,

[40] ತೊಟ್ಟಿಯನ್ನು, ಅದರ ಪೀಠವನ್ನು, ಅಂಗಳದ ತೆರೆಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಯನ್ನು, ಅದರ ಹಗ್ಗಗಳನ್ನು, ಗೂಟಗಳನ್ನು, ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನು,

[41] ದೇವಮಂದಿರದೊಳಗೆ ನಡೆಯುವ ದೇವರಕಾರ್ಯಗಳಿಗೆ ಅಲಂಕಾರ ವಸ್ತ್ರ ಅಂದರೆ ಆರೋನನಿಗೆ ಬೇಕಾದ ಪವಿತ್ರ ವಸ್ತ್ರಗಳನ್ನು ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳನ್ನು ತಂದರು.

[42] ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ಇಸ್ರಾಯೇಲರು ಆ ಕೆಲಸಗಳನ್ನೆಲ್ಲಾ ಮಾಡಿದ್ದರು.

[43] ಅವರು ಮಾಡಿದ್ದ ಕೆಲಸವನ್ನು ಮೋಶೆಯು ಪರೀಕ್ಷಿಸಿ ನೋಡಲಾಗಿ ಯೆಹೋವನ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿದ್ದರಿಂದ ಮೋಶೆಯು ಅವರನ್ನು ಆಶೀರ್ವದಿಸಿದನು.

ವಿಮೋಚನಕಾಂಡ — Chapters