[1] ಮೋಶೆ ಇಸ್ರಾಯೇಲರ ಸಮೂಹವನ್ನೆಲ್ಲಾ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ.
[2] ಆರು ದಿನಗಳು ನೀವು ಕೆಲಸ ಮಾಡಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾಗಿರುವುದರಿಂದ ಅಂದು ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು;
[3] ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು” ಹೇಳಿದನು.
[4] ಮೋಶೆಯು ಇಸ್ರಾಯೇಲ್ಯರ ಸರ್ವಸಮೂಹಕ್ಕೆ ಹೀಗೆಂದನು: “ಯೆಹೋವನು ಆಜ್ಞಾಪಿಸಿದ್ದೇನೆಂದರೆ,
[5] ನೀವು ನಿಮ್ಮ ನಿಮ್ಮೊಳಗೆ ಯೆಹೋವನಿಗಾಗಿ ಕಾಣಿಕೆಯನ್ನು ತೆಗೆದುಕೊಡಬೇಕು; ಒಳ್ಳೆಯ ಮನಸ್ಸಿರುವವರೆಲ್ಲರೂ ಕಾಣಿಕೆಯನ್ನು ತಂದುಕೊಡಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕೆಂದರೆ; ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳು,
[6] ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಗಳು, ಉಣ್ಣೆಯ ಬಟ್ಟೆಗಳು,
[7] ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, ಕಡಲಪ್ರಾಣಿಯ ತೊಗಲುಗಳು, ಜಾಲೀಮರವು, ದೀಪಕ್ಕೆ ಬೇಕಾದ ಎಣ್ಣೆಯು,
[8] ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು,
[9] ಏಫೋದ್ ಕವಚಕ್ಕೆ ಬೇಕಾಗಿರುವ ರತ್ನಗಳು ಹಾಗು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೇ.
[10] “ನಿಮ್ಮಲ್ಲಿರುವ ಜ್ಞಾನಿಗಳಾದ ಶಿಲ್ಪಿಗಳು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.
[11] ಅವರು ಮಾಡಬೇಕಾದವುಗಳು ಯಾವುವೆಂದರೆ; ದೇವದರ್ಶನದ ಗುಡಾರ, ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು,
[12] ಆಜ್ಞಾಶಾಸನಗಳ ಮಂಜೂಷ, ಅದನ್ನು ಹೊರುವ ಕಂಬಗಳು, ಕೃಪಾಸನ, ಅದನ್ನು ಮರೆಮಾಡುವ ಪರದೆ,
[13] ಮೇಜು, ಅದರ ಕಂಬಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ನೈವೇದ್ಯದ ರೊಟ್ಟಿಗಳು,
[14] ದೀಪಸ್ತಂಭ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ,
[15] ಧೂಪವೇದಿ, ಅದರ ಕಂಬಗಳು, ಅಭಿಷೇಕ ತೈಲ, ಪರಿಮಳಧೂಪದ್ರವ್ಯ, ಗುಡಾರದ ಬಾಗಿಲಿನ ಪರದೆ,
[16] ಯಜ್ಞವೇದಿ, ಅದರ ತಾಮ್ರದ ಜಾಳಿಗೆ, ಕಂಬಗಳು, ಉಪಕರಣಗಳು, ಬೋಗುಣಿ, ಅದರ ಪೀಠ,
[17] ಅಂಗಳದ ತೆರೆಗಳು, ಕಂಬಗಳು, ಗದ್ದಿಗೆಕಲ್ಲುಗಳು, ಅಂಗಳದ ಬಾಗಿಲಿನ ಪರದೆ,
[18] ಗುಡಾರದ ಗೂಟಗಳು, ಅಂಗಳದ ಗೂಟಗಳು, ಇವುಗಳ ಹಗ್ಗಗಳು,
[19] ಪವಿತ್ರಸ್ಥಾನದ ಸೇವೆಗೆ ಬೇಕಾದ ಸುಂದರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು ಇವೇ” ಅಂದನು.
[20] ಇಸ್ರಾಯೇಲರು ಮತ್ತು ಸಮೂಹದವರೆಲ್ಲರೂ ಮೋಶೆಯ ಎದುರಿನಿಂದ ಹೊರಟು ಹೋದರು.
[21] ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.
[22] ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.
[23] ಯಾರಲ್ಲಿ ನೀಲಿ, ನೇರಳೆ ಹಾಗು ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಯು, ಉಣ್ಣೆ ಬಟ್ಟೆಯು, ಹದಮಾಡಿದ ಕೆಂಪುಬಣ್ಣದ ಟಗರಿನ ತೊಗಲುಗಳು ಹಾಗು ಕಡಲಪ್ರಾಣಿಯ ತೊಗಲುಗಳು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.
[24] ಯಾರಲ್ಲಿ ಬೆಳ್ಳಿ ಇಲ್ಲವೇ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಯೆಹೋವನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು.
[25] ನಿಪುಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲನ್ನೂ, ಹತ್ತಿಯ ನೂಲನ್ನೂ ನೇಯ್ದು ಆ ನೂಲನ್ನು ತಂದುಕೊಟ್ಟರು.
[26] ಬುದ್ಧಿವಂತೆಯರಾದ ಬೇರೆ ಸ್ತ್ರೀಯರು ಆಡಿನ ಕೂದಲುಗಳನ್ನು ನೇಯ್ದು ತಂದುಕೊಟ್ಟರು.
[27] ಅಧಿಪತಿಗಳು ಏಫೋದ್ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ಎದೆಪದಕದಲ್ಲಿ ಇಡಬೇಕಾದ ರತ್ನಗಳನ್ನು,
[28] ದೀಪಕ್ಕೆ ಬೇಕಾದ ಎಣ್ಣೆಯನ್ನು ಹಾಗು ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು.
[29] ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.
[30] ಮೋಶೆಯು ಇಸ್ರಾಯೇಲ್ಯರಿಗೆ ಹೀಗೆಂದನು, “ನೋಡಿರಿ, ಯೆಹೋವನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಹೆಸರು ಹಿಡಿದು ಕರೆದಿದ್ದಾನೆ.
[31] ಕಲಾತ್ಮಕವಾದ ವಿನ್ಯಾಸಗಳನ್ನು ಕಲ್ಪಿಸುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,
[32] ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸವನ್ನು ಮಾಡುವುದಕ್ಕೂ,
[33] ಅವನಿಗೆ ದೇವರಾತ್ಮವನ್ನು ಕೊಟ್ಟು ಅವನಿಗೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.
[34] ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೂ ಮತ್ತು ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನಿಗೂ ವರಕೊಟ್ಟಿದ್ದೇನೆ.
[35] ಕಸೂತಿ ಕೆಲಸ ಕಲ್ಪಿಸುವವರು, ನೀಲಿ, ನೇರಳೆ ಕಡುಗೆಂಪು ವರ್ಣದ ದಾರದಿಂದಲೂ, ಹತ್ತಿಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ಮಾಡುವ ಕೆಲಸಗಳನ್ನು ಕಸಿಮಾಡುವುದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.”