Skip to content
Opens in a new window
Listen to this chapter • 4:43

[1] ಆ ನಂತರ ಲೇವಿಯ ವಂಶದವನಾದ ಒಬ್ಬನು ಲೇವಿ ಕುಲದ ಕನ್ಯೆಯನ್ನು ಮದುವೆ ಮಾಡಿಕೊಂಡನು.

[2] ಆಕೆಯು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದು ಸುಂದರವಾದ ಕೂಸೆಂದು ತಿಳಿದು ಮೂರು ತಿಂಗಳು ಅದನ್ನು ಬಚ್ಚಿಟ್ಟಳು.

[3] ಆಕೆ ಅದನ್ನು ಇನ್ನು ಹೆಚ್ಚುಕಾಲ ಮರೆಮಾಡಲಾಗದೆ, ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು ಜೇಡಿಮಣ್ಣನ್ನೂ ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನಲ್ಲಿ ಇಟ್ಟಳು.

[4] ಕೂಸಿಗೆ ಏನಾಗುವುದೆಂದು ತಿಳಿದುಕೊಳ್ಳುವುದಕ್ಕೆ, ಆ ಕೂಸಿನ ಅಕ್ಕ ಸ್ವಲ್ಪ ದೂರದಲ್ಲಿ ನಿಂತುಕೊಂಡಳು.

[5] ಅಷ್ಟರಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನೈಲ್ ನದಿಯ ಬಳಿಗೆ ಬಂದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ಪೆಟ್ಟಿಗೆಯನ್ನು ಕಂಡು, ದಾಸಿಯೊಬ್ಬಳನ್ನು ಕಳುಹಿಸಿ ಅದನ್ನು ತರಿಸಿದಳು.

[6] ಪೆಟ್ಟಿಗೆಯನ್ನು ತೆರೆದು ನೋಡುವಾಗ, ಆಹಾ! ಅಳುವ ಕೂಸು. ಆಕೆಗೆ ಅದರ ಮೇಲೆ ಕನಿಕರಹುಟ್ಟಿ, “ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದು” ಎಂದುಕೊಂಡಳು.

[7] ಆಗಲೇ ಮಗುವಿನ ಅಕ್ಕ ಬಂದು, “ಫರೋಹನ ಮಗಳಿಗೆ ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವುದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೋ?” ಎಂದು ಕೇಳಿದಳು.

[8] ಫರೋಹನ ಮಗಳು ಆಕೆಗೆ, “ಹೋಗು ಕರೆದುಕೊಂಡು ಬಾ” ಎಂದಳು. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದುತಂದಳು.

[9] ಫರೋಹನ ಮಗಳು ಮಗುವಿನ ತಾಯಿಗೆ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಹಾಲುಕೊಟ್ಟು ಸಾಕಬೇಕು. ನಾನು ನಿನಗೆ ಸಂಬಳವನ್ನು ಕೊಡುವೆನು” ಎಂದು ಹೇಳಿದಳು. ಆ ಸ್ತ್ರೀಯು ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು.

[10] ಆ ಹುಡುಗನು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಬಂದಳು, ಅವನು ಆಕೆಗೆ ಮಗನಾದನು. “ಇವನನ್ನು ನೀರಿನೊಳಗಿನಿಂದ ಎಳೆದುಕೊಂಡಿದ್ದೇನೆ,” ಎಂದು ಹೇಳಿ ಆಕೆಯು ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.

[11] ಮೋಶೆಯು ದೊಡ್ಡವನಾದ ಮೇಲೆ, ಸ್ವಜನರ ಬಳಿಗೆ ಹೋಗಿ ಅವರ ಬಿಟ್ಟೀಕೆಲಸಗಳನ್ನು ನೋಡುತ್ತಿದ್ದನು. ಆಗ ಒಬ್ಬ ಐಗುಪ್ತ್ಯದವನು ತನ್ನ ಸ್ವಂತ ಜನರಾದ ಸಹೋದರರಲ್ಲಿ ಒಬ್ಬನಾದ ಇಬ್ರಿಯನನ್ನು ಹೊಡೆಯುವುದನ್ನು ಕಂಡನು.

[12] ಮೋಶೆ ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು, ಆ ಐಗುಪ್ತ್ಯದವನನ್ನು ಹೊಡೆದು ಕೊಂದುಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಹಾಕಿದನು.

[13] ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಇಬ್ರಿಯರಾದ ಇಬ್ಬರು ಜಗಳವಾಡುತ್ತಿದ್ದರು. ಅನ್ಯಾಯಮಾಡುತ್ತಿದ್ದವನಿಗೆ ಅವನು, “ಏನಯ್ಯಾ, ನೀನು ಯಾಕೆ ಸ್ವಕುಲದವರನ್ನು ಹೊಡೆಯುತ್ತೀ?” ಎಂದು ಕೇಳಿದನು.

[14] ಆ ಮನುಷ್ಯನು ಅವನಿಗೆ, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ, ಇಟ್ಟವರು ಯಾರು? ಆ ಐಗುಪ್ತ್ಯನನ್ನು ಕೊಂದು ಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದಿಯೋ?” ಅಂದನು. ಈ ಮಾತನ್ನು ಕೇಳಿ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ಬಯಲಿಗೆ ಬಂತಲ್ಲಾ” ಅಂದುಕೊಂಡನು.

[15] ನಡೆದ ಸಂಗತಿಯು ಫರೋಹನಿಗೆ ತಿಳಿದುಬಂದಾಗ, ಅವನು ಮೋಶೆಯನ್ನು ಕೊಲ್ಲಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆಯು ಫರೋಹನ ಬಳಿಯಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿದ್ದ ಒಂದು ಬಾವಿಯ ಬಳಿಯಲ್ಲಿ ಕುಳಿತುಕೊಂಡನು.

[16] ಮಿದ್ಯಾನರ ಯಾಜಕನಿಗೆ ಏಳು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಬಂದು ತಮ್ಮ ತಂದೆಯ ಕುರಿ ಮಂದೆಗಳಿಗೆ ನೀರು ಕುಡಿಸುವುದಕ್ಕಾಗಿ, ನೀರನ್ನು ಸೇದಿ ತೊಟ್ಟಿಗಳಲ್ಲಿ ತುಂಬಿಸುತ್ತಿದ್ದರು.

[17] ಕುರುಬರು ಬಂದು ಅವರನ್ನು ಬಾವಿಯ ಬಳಿಯಿಂದ ಓಡಿಸಲು, ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರನ್ನು ಕುಡಿಸಿದನು.

[18] ಆ ನಂತರ ಆ ಹೆಣ್ಣುಮಕ್ಕಳು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿದ್ದಿರಲ್ಲ?” ಎಂದು ಕೇಳಿದನು.

[19] ಅದಕ್ಕೆ ಅವರು, “ಐಗುಪ್ತದವನಾದ ಒಬ್ಬ ಮನುಷ್ಯನು ನಮ್ಮನ್ನು ಕುರುಬರ ಕೈಯಿಂದ ತಪ್ಪಿಸಿದಲ್ಲದೆ, ಅವನು ನಮಗೋಸ್ಕರ ನೀರು ಸೇದಿ ಕುರಿಗಳಿಗೆ ಕುಡಿಸಿದನು” ಅಂದರು.

[20] ಆಗ ಅವನು ತನ್ನ ಮಕ್ಕಳಿಗೆ, “ಅವನು ಎಲ್ಲಿದ್ದಾನೆ? ಏಕೆ ಆ ಮನುಷ್ಯನನ್ನು ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು.

[21] ಮೋಶೆಯು ಆ ಮನುಷ್ಯನೊಂದಿಗೆ ವಾಸಮಾಡಲು ಬಯಸಿದನು. ಅವನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆಮಾಡಿ ಕೊಟ್ಟನು.

[22] ಆಕೆ ಗಂಡು ಮಗುವನ್ನು ಹೆರಲು ಮೋಶೆ ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆಂದು ಹೇಳಿ ಅದಕ್ಕೆ ಗೇರ್ಷೋಮ್ ಎಂದು ಹೆಸರಿಟ್ಟನು.

[23] ಹೀಗೆ ಬಹಳ ದಿನಗಳು ಕಳೆದ ನಂತರ ಐಗುಪ್ತ ದೇಶದ ಅರಸನು ಸತ್ತನು. ಇಸ್ರಾಯೇಲರು ತಾವು ಮಾಡಬೇಕಾದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸಿರು ಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು.

[24] ದೇವರು ಅವರ ನರಳಾಟವನ್ನು ಕೇಳಿ, ತಾನು ಅಬ್ರಹಾಮ, ಇಸಾಕ, ಯಾಕೋಬನ ಸಂಗಡ ಮಾಡಿದ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡನು.

[25] ದೇವರು ಇಸ್ರಾಯೇಲರನ್ನು ನೋಡಿ ಅವರ ವಿಷಯದಲ್ಲಿ ಕನಿಕರಪಟ್ಟನು.

ವಿಮೋಚನಕಾಂಡ — Chapters