[1] ಅದಕ್ಕೆ ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲ ಎಂದು ಹೇಳಬಹುದು?” ಎಂದನು.
[2] ಅದಕ್ಕೆ ಯೆಹೋವನು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದನು. ಅವನು, ಇದು “ಇದು ಒಂದು ಕೋಲು” ಅಂದನು.
[3] ಯೆಹೋವನು ಅವನಿಗೆ, “ಅದನ್ನು ನೆಲದ ಮೇಲೆ ಹಾಕು” ಎಂದನು. ಅವನು ನೆಲದಲ್ಲಿ ಹಾಕುತ್ತಲೇ ಅದು ಹಾವಾಯಿತು! ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.
[4] ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿ” ಎಂದು ಹೇಳಿದನು. ಅವನು ಅದನ್ನು ಹಿಡಿದ ಕೂಡಲೇ ಅದು ಕೋಲಾಯಿತು.
[5] ಆಗ ಯೆಹೋವನು ಅವನಿಗೆ, “ಇದರಿಂದ ಅವರು ತಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು, ನಿನಗೆ ಕಾಣಿಸಿಕೊಂಡಿರುವುದು ನಿಜ ಎಂದು ನಂಬುವರು” ಎಂದು ಹೇಳಿದನು.
[6] ಯೆಹೋವನು ತಿರುಗಿ ಅವನಿಗೆ, “ನಿನ್ನ ಕೈಯನ್ನು ಎದೆಯಭಾಗದೊಳಗೆ ಇಟ್ಟುಕೋ” ಎಂದು ಹೇಳಿದನು. ಅವನು ಹಾಗೆ ಇಟ್ಟುಕೊಂಡು ಹೊರಗೆ ತೆಗೆಯಲು ಅವನ ಕೈ ಕುಷ್ಠ ಹತ್ತಿ ಹಿಮದಂತೆ ಬೆಳ್ಳಗಾಗಿತ್ತು.
[7] ಯೆಹೋವನು ಅವನಿಗೆ ನಿನ್ನ ಕೈಯನ್ನು ತಿರುಗಿ ಎದೆಯಭಾಗದೊಳಗೆ “ಸೇರಿಸು” ಎಂದು ಹೇಳಿದನು. ಅವನು ಅದನ್ನು ತಿರುಗಿ ಎದೆಯಭಾಗದೊಳಗೆ ಸೇರಿಸಿ ತೆಗೆದು ನೋಡಿದಾಗ ಅದು ಉಳಿದ ದೇಹದಂತೆ ಆಗಿತ್ತು.
[8] ಆಗ ಯೆಹೋವನು ಅವನಿಗೆ, “ಅವರು ನಿನ್ನನ್ನು ನಂಬದೆ, ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ತಿರಸ್ಕರಿಸಿದರೂ, ಎರಡನೆಯ ಸೂಚಕಕಾರ್ಯವನ್ನು ನಂಬುವರು.
[9] ಆ ಎರಡು ಸೂಚಕಕಾರ್ಯಗಳನ್ನೂ, ಅವರು ನಂಬದೆಯೂ, ನಿನ್ನ ಮಾತನ್ನು ಕೇಳದೆಯೂ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದುಕೊಂಡು ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ಒಣಗಿದ ನೆಲದಲ್ಲಿ ಸುರಿದ ನೀರು ರಕ್ತವಾಗುವುದು” ಎಂದು ಹೇಳಿದನು.
[10] ಆಗ ಮೋಶೆಯು ಯೆಹೋವನಿಗೆ, “ಕರ್ತನೇ, ನಾನು ಮೊದಲಿನಿಂದಲೂ, ನೀನು ನಿನ್ನ ದಾಸನ ಸಂಗಡ ಮಾತನಾಡಿದ ಮೇಲೆಯೂ ನಾನು ವಾಕ್ಚಾತುರ್ಯವಿಲ್ಲದವನು. ನಾನು ತೊದಲುವವನಾಗಿದ್ದು ನನ್ನ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.
[11] ಅದಕ್ಕೆ ಯೆಹೋವನು ಅವನಿಗೆ, “ಮನುಷ್ಯರಿಗೆ ಬಾಯಿಕೊಟ್ಟವನು ಯಾರು? ಒಬ್ಬನನ್ನು ಮೂಕನಾಗಿ, ಕಿವುಡನಾಗಿ, ದೃಷ್ಠಿಯುಳ್ಳವನಾಗಿ ಹಾಗೂ ಕುರುಡನಾಗಿ ಉಂಟುಮಾಡಿದವನಾರು? ಯೆಹೋವನಾದ ನಾನೇ ಅಲ್ಲವೇ?
[12] ಹಾಗಾದರೆ ಈಗಲೇ ನೀನು ಹೊರಡು, ನಾನು ನಿನ್ನಗೆ ಮಾತನಾಡಲು ಬೇಕಾದ ಸಾಮರ್ಥ್ಯವನ್ನು ಕೊಡುತ್ತಾ, ನೀನು ಮಾತನಾಡಬೇಕಾದದ್ದನ್ನು ನಿನಗೆ ಬೋಧಿಸುವೆನು” ಎಂದು ಹೇಳಿದನು.
[13] ಅದಕ್ಕೆ ಮೋಶೆಯು, “ಕರ್ತನೇ, ದಯವಿಟ್ಟು ನೀನು ಬೇರೊಬ್ಬನನ್ನು ಕಳುಹಿಸಬೇಕು” ಎಂದನು.
[14] ಆಗ ಯೆಹೋವನು ಮೋಶೆಯ ಮೇಲೆ ಕೋಪಗೊಂಡು ಅವನಿಗೆ, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲವನೆಂದು ನನಗೆ ತಿಳಿದಿದೆ. ಅವನೇ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿದಾಗ ಅವನು ತನ್ನ ಹೃದಯದಲ್ಲಿ ಸಂತೋಷಿಸುವನು.
[15] ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು.
[16] ಅವನು ನಿನಗೆ ಬದಲಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತಿರುವಿ.
[17] ಇದಲ್ಲದೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಹೋಗಬೇಕು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ” ಅಂದನು.
[18] ಆಗ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂದಿರುಗಿ ಬಂದು ಅವನಿಗೆ, “ನಾನು ಐಗುಪ್ತ ದೇಶದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಜೀವದಿಂದ ಇದ್ದಾರೋ ಇಲ್ಲವೋ ಎಂದು ಹೋಗಿ ನೋಡುವೆನು” ಎಂದನು. ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗು” ಅಂದನು.
[19] ಯೆಹೋವನು ಮಿದ್ಯಾನಿನಲ್ಲಿ ಮೋಶೆಗೆ, ನೀನು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗು. ನಿನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದವರೆಲ್ಲರೂ ಸತ್ತು ಹೋದರು ಎಂದನು.
[20] ಮೋಶೆ ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕತ್ತೆಯ ಮೇಲೆ ಕುಳ್ಳಿರಿಸಿ ಅವರನ್ನು ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಜೊತೆಯಲ್ಲಿ ಅವನು ದೇವದಂಡವನ್ನು ಕೈಯಲ್ಲಿ ತೆಗೆದುಕೊಂಡನು.
[21] ಯೆಹೋವನು ಮೋಶೆಗೆ ಇಂತೆಂದನು, “ನೀನು ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದಾಗ ನಾನು ನಿನ್ನ ಕೈಯಿಂದ ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಫರೋಹನ ಮುಂದೆ ಮಾಡಬೇಕು. ಆದರೂ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಆದ್ದರಿಂದ ಅವನು ಜನರನ್ನು ಹೋಗಲು ಬಿಡುವುದಿಲ್ಲ.
[22] ಆಗ ನೀನು ಫರೋಹನಿಗೆ, ‘ಇಸ್ರಾಯೇಲನು ನನ್ನ ಮಗನು, ನನಗೆ ಚೊಚ್ಚಲಮಗನು.
[23] ಹಾಗೂ ನನ್ನ ಮಗನು ನಿನ್ನ ದೇಶದಿಂದ ಹೊರಟು ನನ್ನನ್ನು ಆರಾಧಿಸುವುದಕ್ಕೆ ಅವನಿಗೆ ಅಪ್ಪಣೆಕೊಡಬೇಕು. ಅದಕ್ಕೆ ನೀನು ಒಪ್ಪದೇ ಹೋದರೆ, ನಾನು ನಿನಗಿರುವ ಚೊಚ್ಚಲಮಗನನ್ನು ಸಾಯಿಸುವೆನೆಂದು ಯೆಹೋವನು ಹೇಳುತ್ತಾನೆ’” ಎಂದು ತಿಳಿಸಬೇಕು.
[24] ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ, ಛತ್ರದಲ್ಲಿದ್ದಾಗ ಯೆಹೋವನು ಅವನೆದುರಿಗೆ ಬಂದು ಅವನ ಪ್ರಾಣವನ್ನು ತೆಗೆಯಬೇಕೆಂದಿದ್ದನು.
[25] ಹೀಗಿರುವಾಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಮೋಶೆಯ ಪಾದಗಳಿಗೆ ಮುಟ್ಟಿಸಿದಳು. ನಂತರ ಅವಳು, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂದಳು.
[26] ಆಗ ಯೆಹೋವನು ಅವನನ್ನು ಉಳಿಸಿದನು. ಆಗ ಅವಳು, “ಸುನ್ನತಿಯ ನಿಮಿತ್ತವೇ ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂಬ ಮಾತನ್ನು ಹೇಳಿದಳು.
[27] ಇದಲ್ಲದೆ ಯೆಹೋವನು ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳುವುದಕ್ಕೆ ಮರುಭೂಮಿಗೆ ಹೊರಟುಹೋಗು” ಎಂದನು. ಅವನು ಹೋಗಿ ದೇವರ ಬೆಟ್ಟದಲ್ಲೇ ಅವನನ್ನು ಎದುರುಗೊಂಡು ಮುದ್ದಿಟ್ಟನು.
[28] ಆಗ ಮೋಶೆಯು ಆರೋನನಿಗೆ, ತನ್ನನ್ನು ಕಳುಹಿಸಿದ ಯೆಹೋವನ ಎಲ್ಲಾ ಮಾತುಗಳನ್ನೂ, ತನಗೆ ಆಜ್ಞಾಪಿಸಿದ ಸೂಚಕಕಾರ್ಯಗಳನ್ನೂ, ತಾನು ಮಾಡಿದವುಗಳನ್ನೆಲ್ಲಾ ಆರೋನನಿಗೆ ತಿಳಿಸಿದನು.
[29] ತರುವಾಯ ಮೋಶೆ ಮತ್ತು ಆರೋನರು ಹೋಗಿ ಇಸ್ರಾಯೇಲ್ಯರ ಹಿರಿಯರನ್ನೆಲ್ಲಾ ಒಟ್ಟಿಗೆ ಸೇರಿಸಿದರು.
[30] ಯೆಹೋವನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ತಿಳಿಸಿ ಜನರ ಕಣ್ಣುಗಳ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು.
[31] ಜನರು ನಂಬಿದರು. ಯೆಹೋವನು ಇಸ್ರಾಯೇಲರನ್ನು ಕಟಾಕ್ಷಿಸಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡನೆಂಬುದನ್ನು, ಇಸ್ರಾಯೇಲರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.