[1] ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು.
[2] ಇಸ್ರಾಯೇಲರು ರೇಫೀದೀಮನ್ನು ಬಿಟ್ಟು ಮರುಭೂಮಿಗೆ ಬಂದು ಮರುಭೂಮಿಯಲ್ಲಿ ಡೇರೆ ಹಾಕಿ ಸೀನಾಯಿ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು.
[3] ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಹೋದನು. ಆಗ ಯೆಹೋವನು ಬೆಟ್ಟದ ಮೇಲಿಂದ ಮೋಶೆಯನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿ ಹೇಳಬೇಕು.
[4] ‘ನಾನು ಐಗುಪ್ತ್ಯರಿಗೆ ಮಾಡಿದ್ದನ್ನೂ, ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತುಕೊಂಡು ಈ ಸ್ಥಳಕ್ಕೆ ಬರಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ.
[5] ಆದ್ದರಿಂದ ನೀವು ನನ್ನ ಮಾತುಗಳನ್ನು ಶ್ರದ್ಧೆಯಿಂದ ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿಕೊಂಡರೆ, ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗಿರುವಿರಿ. ಸಮಸ್ತ ಭೂಮಿಯು ನನ್ನದೇ.
[6] ನೀವು ನನಗೆ ಶ್ರೇಷ್ಠ ಯಾಜಕರೂ, ಪರಿಶುದ್ಧ ಜನರೂ ಆಗಿರುವಿರಿ’ ನೀನು ಇಸ್ರಾಯೇಲರಿಗೆ ಹೇಳಬೇಕಾದ ಮಾತುಗಳು ಇವೇ” ಅಂದನು.
[7] ಆಗ ಮೋಶೆ ಬಂದು ಜನರ ಹಿರಿಯರನ್ನು ಒಟ್ಟಾಗಿ ಸೇರಿಸಿದನು. ಯೆಹೋವನು ಆಜ್ಞಾಪಿಸಿದ್ದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು.
[8] ಜನರೆಲ್ಲರೂ ಒಗ್ಗಟ್ಟಾಗಿ, “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ಉತ್ತರಕೊಟ್ಟರು. ಮೋಶೆ ಯೆಹೋವನ ಬಳಿಗೆ ಹಿಂತಿರುಗಿ ಹೋಗಿ ಅವರು ಹೇಳಿದ ಮಾತುಗಳನ್ನು ಆತನಿಗೆ ಹೇಳಿದನು.
[9] ಯೆಹೋವನು ಮೋಶೆಗೆ, “ಇಗೋ, ನಾನು ನಿನ್ನ ಸಂಗಡ ಮಾತನಾಡುವಾಗ, ಜನರು ಕೇಳಿ ಯಾವಾಗಲೂ ನಿನ್ನನ್ನು ನಂಬುವಂತೆ ನಾನು ಮೇಘದೊಳಗಿನಿಂದ ನಿನ್ನ ಬಳಿಗೆ ಬರುತ್ತೇನೆ” ಎಂದು ಹೇಳಿದನು. ಮೋಶೆ ಜನರ ಮಾತುಗಳನ್ನು ಯೆಹೋವನಿಗೆ ತಿಳಿಸಿದನು.
[10] ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರ ಬಳಿಗೆ ಹೋಗಿ, ಈ ದಿನ ಮತ್ತು ನಾಳೆ ಅವರನ್ನು ಶುದ್ಧಗೊಳಿಸು. ನನ್ನ ಬರುವಿಕೆಗಾಗಿ ಅವರನ್ನು ಸಿದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು,
[11] ಮೂರನೆಯ ದಿನದಲ್ಲಿ ಅವರು ಸಿದ್ಧರಾಗಿರಬೇಕು. ಮೂರನೆಯ ದಿನದಲ್ಲಿ ಯೆಹೋವನು ಸಮಸ್ತ ಜನರಿಗೂ ಪ್ರತ್ಯಕ್ಷನಾಗಿ ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವನು.
[12] ಜನರು ಹತ್ತಿರ ಬಾರದಂತೆ ನೀನು ಬೆಟ್ಟದ ಸುತ್ತಲೂ ಗಡಿಯನ್ನು ಮಾಡಿಸಿ ಜನರಿಗೆ, ‘ಎಚ್ಚರಿಕೆಯಾಗಿರಿ, ನೀವು ಈ ಬೆಟ್ಟವನ್ನು ಏರದಂತೆಯೂ ಅದರ ಗಡಿಯನ್ನು ಮುಟ್ಟದಂತೆಯೂ ಜಾಗ್ರತೆಯಿಂದಿರಬೇಕು. ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸತ್ತುಹೋಗುವರು.’
[13] ಅಂಥವನನ್ನು ಯಾರೂ ಮುಟ್ಟಬಾರದು. ಕಲ್ಲೆಸೆದು ಅಥವಾ ಬಾಣವನ್ನು ಎಸೆದು ಖಂಡಿತವಾಗಿ ಅವನನ್ನು ಕೊಲ್ಲಬೇಕು. ಮನುಷ್ಯನಾಗಲಿ, ಪಶುಗಳಾಗಲಿ ಬೆಟ್ಟವನ್ನು ಮುಟ್ಟಿದರೆ ಸಾಯಲೇಬೇಕು. ಕೊಂಬಿನ ಧ್ವನಿ ದೀರ್ಘವಾಗಿ ಕೇಳಿಸಿದಾಗ ಅವರು ಬೆಟ್ಟದ ಸಮೀಪಕ್ಕೆ ಬರಬೇಕು” ಎಂದು ಹೇಳು ಎಂದನು.
[14] ಮೋಶೆ ಬೆಟ್ಟದಿಂದಿಳಿದು ಜನರ ಬಳಿಗೆ ಬಂದು, ಅವರನ್ನು ಶುದ್ಧಗೊಳಿಸಿದನು. ಅವರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧರಾದರು.
[15] ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಸಿದ್ಧವಾಗಿರಿ. ಯಾವ ಪುರುಷನೂ ಸ್ತ್ರೀಸಂಗ ಮಾಡಬಾರದು” ಎಂದು ಹೇಳಿದನು.
[16] ಮೂರನೆಯ ದಿನದಲ್ಲಿ ಸೂರ್ಯೋದಯವಾಗಲು ಆ ಬೆಟ್ಟದ ಮೇಲೆ ಗುಡುಗು, ಮಿಂಚೂ, ಕಾರ್ಮುಗಿಲೂ, ತುತ್ತೂರಿಯ ಮಹಾಧ್ವನಿಯೂ ಉಂಟಾಗಲು ಪಾಳೆಯಲ್ಲಿದ್ದ ಜನರೆಲ್ಲರೂ ನಡುಗಿದರು.
[17] ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಕರೆದುಕೊಂಡು ಬರಲು, ಅವರು ಬೆಟ್ಟದ ಕೆಳಗೆ ನಿಂತುಕೊಂಡರು.
[18] ಯೆಹೋವನು ಬೆಂಕಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಆದುದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದಲ್ಲದೆ ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.
[19] ತುತ್ತೂರಿಯ ಧ್ವನಿ ಹೆಚ್ಚಾಗುತ್ತಾ ಬಂದಾಗ, ಮೋಶೆಯು ದೇವರ ಸಂಗಡ ಮಾತನಾಡಿದನು. ಆಗ ದೇವರು ಎತ್ತರದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.
[20] ಯೆಹೋವನು ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದನು. ಆತನು ಬೆಟ್ಟದ ತುದಿಗೆ ಬಾ ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.
[21] ಆಗ ಯೆಹೋವನು ಮೋಶೆಗೆ, “ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ನೋಡಬೇಕೆಂಬ ಆಶೆಯಿಂದ ಗಡಿಯನ್ನು ದಾಟಿ ಯೆಹೋವನ ಹತ್ತಿರಕ್ಕೆ ಬಂದರೆ ಅವರಲ್ಲಿ ಬಹಳ ಜನರು ನಾಶವಾಗುವರು.
[22] ಯೆಹೋವನ ಸನ್ನಿಧಿಗೆ ಬರುವ ಯಾಜಕರೂ ತಮ್ಮನ್ನು ಶುದ್ಧಿಪಡಿಸಿಕೊಳ್ಳಬೇಕು. ಇಲ್ಲವಾದರೆ ಯೆಹೋವನು ಪಕ್ಕನೆ ಅವರನ್ನೂ ಸಂಹಾರಮಾಡುವನು” ಎಂದು ಹೇಳಿದನು.
[23] ಅದಕ್ಕೆ ಮೋಶೆ ಯೆಹೋವನಿಗೆ, “ಜನರು ಸೀನಾಯಿ ಬೆಟ್ಟವನ್ನೇರುವುದಕ್ಕೆ ಆಗುವುದಿಲ್ಲ. ಯಾಕೆಂದರೆ ‘ಬೆಟ್ಟದ ಸುತ್ತಲೂ ಗಡಿಯನ್ನು ಹಾಕಿ ನಿನಗಾಗಿ ಶುದ್ಧಮಾಡು’” ಎಂದು ಆಜ್ಞಾಪಿಸಿರುವೆಯಲ್ಲಾ ಎಂದನು.
[24] ಯೆಹೋವನು ಮೋಶೆಗೆ, “ನೀನು ಇಳಿದುಹೋಗಿ ಆರೋನನ್ನು ನಿನ್ನ ಸಂಗಡ ಕರೆದುಕೊಂಡು ಮೇಲಕ್ಕೆ ಬಾ. ಆದರೆ ಯಾಜಕರೂ, ಜನರೂ ಆ ಗಡಿಯನ್ನು ದಾಟಿ ಯೆಹೋವನ ಹತ್ತಿರ ಬರಬಾರದು. ದಾಟಿ ಬಂದರೆ ನಾನು ಅವರನ್ನು ಪಕ್ಕನೇ ಸಂಹಾರ ಮಾಡುವೆನು” ಎಂದು ಹೇಳಿದನು.
[25] ಮೋಶೆ ಜನರ ಬಳಿಗೆ ಇಳಿದುಹೋಗಿ ಆ ಮಾತುಗಳನ್ನು ಅವರಿಗೆ ತಿಳಿಸಿದನು.