Skip to content
Opens in a new window
Listen to this chapter • 6:47

[1] “ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೆ ನೀವು ಜಾಲೀಮರದಿಂದ ಒಂದು ಧೂಪವೇದಿಯನ್ನು ಮಾಡಿಸಬೇಕು.

[2] ಅದು ಒಂದು ಮೊಳ ಉದ್ದವಾಗಿಯು, ಒಂದು ಮೊಳ ಅಗಲವಾಗಿಯೂ ಇದ್ದು ಚಚ್ಚೌಕವಾಗಿರಬೇಕು. ಅದರ ಎತ್ತರವು ಎರಡು ಮೊಳವಾಗಿರಬೇಕು. ಅದರ ಕೊಂಬುಗಳು ಅದರಿಂದಲೇ ಆಗಿರಬೇಕು.

[3] ಅದರ ಮೇಲ್ಭಾಗಕ್ಕೆ, ನಾಲ್ಕು ಬದಿಗಳಿಗೆ ಹಾಗೂ ಕೊಂಬುಗಳಿಗೆ, ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲೂ ಚಿನ್ನದ ಅರುಗನ್ನು (ಅಂಚು) ಕಟ್ಟಿಸಬೇಕು.

[4] ಅದರ ತೋರಣದ ಕೆಳಗೆ ಯಜ್ಞವೇದಿಯ ಎರಡು ಪಾರ್ಶ್ವಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಮೂಲೆಗಳಲ್ಲಿಯೇ ಹಾಕಿಸಬೇಕು. ಯಜ್ಞವೇದಿಯನ್ನು ಹೊರುವುದಕ್ಕೆ ಕಂಬಗಳನ್ನು ಅವುಗಳಲ್ಲಿ ಸೇರಿಸಬೇಕು.

[5] ಆ ಕಂಬಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು.

[6] ಆಜ್ಞಾಶಾಸನವಿರುವ ಮಂಜೂಷದ ಮುಂದಣ ಪರದೆಗೆ ಎದುರಾಗಿ, ಅಂದರೆ ಆಜ್ಞಾಶಾಸನವಿರುವ ಮಂಜೂಷದ ಮೇಲಿರುವಂಥ ಮತ್ತು ನಾನು ನಿನಗೆ ದರ್ಶನ ಕೊಡುವಂಥ ಕೃಪಾಸನದ ಮುಂದೆ ಅದನ್ನು ಇಡಬೇಕು.

[7] “ಆರೋನನು ಪ್ರತಿನಿತ್ಯ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ

[8] ಸಾಯಂಕಾಲದಲ್ಲಿ ದೀಪಗಳನ್ನು ಹೊತ್ತಿಸುವಾಗಲೂ ಅದರ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು. ಹೀಗೆ ನಿಮ್ಮಿಂದಲೂ ನಿಮ್ಮ ಸಂತತಿಯವರಿಂದಲೂ ಯೆಹೋವನ ಸನ್ನಿಧಿಯಲ್ಲಿ ನಿರಂತರವಾದ ಧೂಪ ಸಮರ್ಪಣೆಯು ನಡೆಯುತ್ತಿರಬೇಕು.

[9] ಆ ಯಜ್ಞವೇದಿಯ ಮೇಲೆ ಬೇರೆ ಯಾವ ಧೂಪವನ್ನೂ ಹಾಕಬಾರದು. ಅದರ ಮೇಲೆ ಇತರೆ ಹೋಮವನ್ನಾಗಲಿ, ಭೋಜನದ್ರವ್ಯವನ್ನಾಗಲಿ ಹಾಗೂ ಪಾನದ್ರವ್ಯವನ್ನಾಗಲಿ ಸಮರ್ಪಿಸಕೂಡದು.

[10] ಆರೋನನು ಅವನ ಸಂತತಿಯವರೂ ವರ್ಷಕ್ಕೆ ಒಂದು ಸಾರಿ ದೋಷಪರಿಹಾರಕ ಯಜ್ಞದ ಪಶುವಿನ ರಕ್ತವನ್ನು ಆ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಅದರ ಕುರಿತಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಯೆಹೋವನಿಗೆ ಅತಿ ಪರಿಶುದ್ಧವಾಗಿದೆ.”

[11] ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

[12] “ನೀನು ಇಸ್ರಾಯೇಲ್ಯರ ಜನಗಣತಿ ಮಾಡಿಸಿ ಅವರನ್ನು ಲೆಕ್ಕಿಸುವಾಗ ಅವರಿಗೆ ಬಾಧೆಯುಂಟಾಗಿ ವ್ಯಾಧಿ ಸಂಭವಿಸದಂತೆ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣಕ್ಕಾಗಿ ವಿಮೋಚನ ಕ್ರಯವನ್ನು ಯೆಹೋವನಿಗೆ ಕೊಡಬೇಕು.

[13] ಲೆಕ್ಕಿತರಾದವರಲ್ಲಿ ಪ್ರತಿಯೊಬ್ಬನೂ ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ಅರ್ಧ ಶೆಕೆಲ್ ಕಾಣಿಕೆಯನ್ನು ಕೊಡಬೇಕು. ಈ ಅರ್ಧ ಶೆಕೆಲ್ ಯೆಹೋವನಿಗೆ ಪವಿತ್ರವಾದ ಕಾಣಿಕೆಯಾಗಿರುತ್ತದೆ.

[14] ಲೆಕ್ಕ ಮಾಡಿದವರಲ್ಲಿ ಇಪ್ಪತ್ತು ವರ್ಷದವರೂ ಹಾಗೂ ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರೂ ಆ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು.

[15] ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿ ಕಾಣಿಕೆಯನ್ನು ಯೆಹೋವನಿಗೆ ಕೊಡುವುದರಲ್ಲಿ ಐಶ್ವರ್ಯವಂತರಾದರೂ ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು. ಬಡವರು ಕಡಿಮೆ ಕೊಡಬಾರದು.

[16] ನೀನು ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ಅದನ್ನು ದೇವದರ್ಶನದ ಗುಡಾರದ ಸೇವೆಗೆ ಉಪಯೋಗಿಸಬೇಕು. ಇಸ್ರಾಯೇಲರ ಪ್ರಾಣಗಳನ್ನು ಉಳಿಸಬೇಕೆಂಬುದಾಗಿ ಆ ಕಾಣಿಕೆಯು ಯೆಹೋವನಾದ ನನ್ನ ಸನ್ನಿಧಿಯಲ್ಲಿ ಜ್ಞಾಪಕವಾಗಿರುವುದು.”

[17] ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

[18] “ಸ್ನಾನಕ್ಕಾಗಿ ಒಂದು ತಾಮ್ರದ ತೊಟ್ಟಿಯನ್ನೂ ಅದಕ್ಕೆ ತಾಮ್ರದ ಪೀಠವನ್ನೂ ಮಾಡಿಸಿ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ಇಟ್ಟು ಅದರಲ್ಲಿ ನೀರು ತುಂಬಿಸಬೇಕು.

[19] ಆರೋನನೂ ಅವನ ಮಕ್ಕಳೂ ಅದರಿಂದ ಕೈಕಾಲುಗಳನ್ನು ತೊಳೆದುಕೊಳ್ಳಬೇಕು.

[20] ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗ ಹಾಗೂ ದೇವರ ಸೇವೆಯನ್ನು ಮಾಡುವವರಾಗಿ ಯೆಹೋವನಿಗೆ ಹೋಮವನ್ನು ಸಮರ್ಪಿಸುವುದಕ್ಕಾಗಿ ಯಜ್ಞವೇದಿಯ ಬಳಿಗೆ ಬರುವಾಗ ಜೀವದಿಂದಿರಲು ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು.

[21] ತೊಳೆದುಕೊಳ್ಳದೆ ಬಂದರೆ ಮರಣ ಶಿಕ್ಷೆಯಾಗುವುದು. ಇದು ಅವನಿಗೂ ಮತ್ತು ಅವನ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು.”

[22] ಇದಲ್ಲದೆ ಯೆಹೋವನು ಮೋಶೆಗೆ ಪುನಃ ಹೇಳಿದ್ದೇನೆಂದರೆ,

[23] “ನೀನು ಸುಗಂಧದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಐನೂರು ಶೆಕೆಲ್ ಅಚ್ಚರಕ್ತಬೋಳ, ಅದರರ್ಧ ಅಂದರೆ ಇನ್ನೂರೈವತ್ತು ಶೆಕೆಲ್ ಶ್ರೇಷ್ಠವಾದ ಲವಂಗ,

[24] ಐನೂರು ಸುಗಂಧವಾದ ಚೆಕ್ಕೆ, ಮತ್ತು ಒಂದು ಹೀನ್ ಒಲೀವ್ ಎಣ್ಣೆ ಇವುಗಳನ್ನೆಲ್ಲಾ ತೆಗೆದುಕೊಂಡು,

[25] ಸುಗಂಧ ದ್ರವ್ಯಕಾರರ ಪದ್ದತಿಯ ಮೇರೆಗೆ ಮಿಶ್ರಮಾಡಿ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡಿಸಬೇಕು. ಇದು ಪರಿಶುದ್ಧವಾದ ಅಭಿಷೇಕ ತೈಲವಾಗಿರುವುದು.

[26] ಆದುದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು,

[27] ದೀಪಸ್ತಂಭ, ದೀಪಸ್ತಂಭದ ಉಪಕರಣಗಳು,

[28] ಧೂಪವೇದಿ, ಯಜ್ಞವೇದಿ, ಯಜ್ಞವೇದಿಯ ಉಪಕರಣಗಳು ಹಾಗು ನೀರಿನ ತೊಟ್ಟಿ ಅದರ ಪೀಠ ಇವುಗಳನ್ನೆಲ್ಲಾ ಅಭಿಷೇಕಿಸಬೇಕು.

[29] ಅವು ಅತಿ ಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧೀಕರಿಸಬೇಕು. ಅವುಗಳನ್ನು ಮುಟ್ಟುವವರೆಲ್ಲರೂ ಪರಿಶುದ್ಧರಾಗಿರಬೇಕು.

[30] ಅದಲ್ಲದೆ ಆರೋನನೂ ಅವನ ಮಕ್ಕಳೂ ನನಗೆ ಯಾಜಕರಾಗುವಂತೆ ಅವರನ್ನು ಅಭಿಷೇಕಿಸಿ ಶುದ್ಧೀಕರಿಸಬೇಕು.”

[31] ನೀನು ಇಸ್ರಾಯೇಲರಿಗೆ ಆಜ್ಞಾಪಿಸತಕ್ಕದ್ದೇನೆಂದರೆ, “ನೀವೂ ನಿಮ್ಮ ಸಂತತಿಯವರೂ ಈ ತೈಲವನ್ನು ನನ್ನ ಸೇವೆಗೆ ನೇಮಕವಾದ ಪರಿಶುದ್ಧ ಅಭಿಷೇಕ ತೈಲವೆಂದು ತಿಳಿದುಕೊಳ್ಳಬೇಕು.

[32] ಜನರು ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನದ ಮೇರೆಗೆ ಬೇರೆ ಕೆಲಸಕ್ಕಾಗಿ ತೈಲವನ್ನು ಮಾಡಲೇಬಾರದು. ಇದು ದೇವರ ವಸ್ತು. ಇದು ಪರಿಶುದ್ಧವಾದದ್ದು ಎಂದು ನೀವು ತಿಳಿದುಕೊಳ್ಳಬೇಕು.

[33] ಇದರಂತೆ ತೈಲವನ್ನು ಮಾಡುವವನಾಗಲಿ ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನಾಗಲಿ ತನ್ನ ಕುಲದಿಂದ ಬಹಿಷ್ಕೃತನಾಗುವನು.”

[34] ಅದಲ್ಲದೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ, “ನೀನು ಹಾಲುಮಡ್ಡಿ, ಗುಗ್ಗುಲ ಹಾಗೂ ಗಂಧದ ಚೆಕ್ಕೆ ಎಂಬ ಪರಿಮಳ ದ್ರವ್ಯಗಳನ್ನು ಸ್ವಚ್ಛವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು,

[35] ಸುಗಂಧ ದ್ರವ್ಯ ತಯಾರಿಸುವವರ ಕೌಶಲ್ಯಕ್ಕೆ ತಕ್ಕಂತೆ ಕಲಿಸಿ ಉಪ್ಪು ಹಾಕಿ ದೇವರ ಸೇವೆಗೆ ಪವಿತ್ರವಾದ ಧೂಪದ್ರವ್ಯವನ್ನು ಮಾಡಿಸಬೇಕು.

[36] ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನದ ಗುಡಾರದೊಳಗೆ ಆಜ್ಞಾಶಾಸನಗಳ ಮಂಜೂಷದ ಎದುರಾಗಿ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇರಿಸಬೇಕು. ಅದು ಅತಿ ಪರಿಶುದ್ಧವಾದದ್ದೆಂದು ನೀವು ಭಾವಿಸಬೇಕು.

[37] ನೀವು ಆ ಧೂಪದ್ರವ್ಯದ ವಿಧಾನದ ಮೇರೆಗೆ ನಿಮ್ಮ ಸ್ವಂತಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಿಕೊಳ್ಳಬಾರದು. ಅದು ಯೆಹೋವನ ಸೇವೆಗೆ ಮಾತ್ರ ಉಪಯೋಗಿಸಬೇಕಾದ ಮೀಸಲಾದ ಪವಿತ್ರ ಪದಾರ್ಥವೆಂದು ಭಾವಿಸಬೇಕು.

[38] ಸುವಾಸನೆಗೋಸ್ಕರ ಅಂಥದನ್ನು ಮಾಡಿಕೊಳ್ಳುವವನು ತನ್ನ ಕುಲದಿಂದ ಬಹಿಷ್ಕಾರಕ್ಕೆ ಗುರಿಯಾಗುವನು.”

ವಿಮೋಚನಕಾಂಡ — Chapters