Skip to content
Opens in a new window
Listen to this chapter • 10:48

[1] ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[2] “ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು.

[3] ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು.

[4] ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ.

[5] ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು.

[6] ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು.

[7] ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.

[8] ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು.

[9] ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು.

[10] ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

[11] ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು.

[12] ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ನ್ಯಾಯತೀರಿಸುವೆನು. ನಾನೇ ಯೆಹೋವನು.

[13] ಆದರೆ ನೀವು ಇರುವ ಎಲ್ಲಾ ಮನೆಗಳ ಬಾಗಿಲಿಗೆ ಹಚ್ಚಿರುವ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ ನಿಮಗೆ ಯಾವ ನಷ್ಟವನ್ನೂ ಮಾಡದೇ ಮುಂದಕ್ಕೆ ದಾಟಿಹೋಗುವೆನು. ನಾನು ಐಗುಪ್ತ್ಯದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವುದಿಲ್ಲ.

[14] ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು.

[15] “‘ಏಳು ದಿನಗಳವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಬಿಡಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿಯನ್ನು ತಿನ್ನುವವನು ಇಸ್ರಾಯೇಲಿನೊಳಗಿಂದ ತೆಗೆದುಹಾಕಲ್ಪಡಬೇಕು.

[16] ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆ ಸೇರಬೇಕು. ಈ ಎರಡು ದಿನಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾತ್ರ ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನು ಮಾಡಬಾರದು.

[17] ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಈ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ್ದರಿಂದ ನೀವೂ, ನಿಮ್ಮ ಸಂತತಿಯವರೂ ಈ ದಿನವನ್ನು ಆಚರಣೆಗೆ ತರಬೇಕು. ಇದು ಶಾಶ್ವತವಾದ ನಿಯಮವಾಗಿದೆ.

[18] ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು.

[19] ಆ ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಬಾರದು. ಹುಳಿ ಬೆರಸಿದ್ದನ್ನು ಯಾರು ತಿನ್ನುವರೋ ಅವನು ಪರದೇಶದವನಾಗಲಿ, ಸ್ವದೇಶದವನಾಗಲಿ ಇಸ್ರಾಯೇಲ ಸಮೂಹದೊಳಗಿಂದ ತೆಗೆದುಹಾಕಲ್ಪಡಬೇಕು.

[20] ನೀವು ನಿಮ್ಮ ಮನೆಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕೇ ಹೊರತು, ಹುಳಿಕಲಸಿದ ಯಾವುದನ್ನೂ ತಿನ್ನಕೂಡದು’” ಎಂದು ಆಜ್ಞಾಪಿಸಿದನು.

[21] ಆಗ ಮೋಶೆಯು ಇಸ್ರಾಯೇಲರ ಹಿರಿಯರೆಲ್ಲರನ್ನೂ ಕರೆಯಿಸಿ ಅವರಿಗೆ, “ನೀವು, ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಮಂದೆಯಿಂದ ಮರಿಗಳನ್ನು ಆರಿಸಿಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ.

[22] ಹಿಸ್ಸೋಪ್ ಗಿಡದ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿಲಿನ ಮೇಲಿನ ಅಡ್ಡಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವುಪಟ್ಟಿಗಳಿಗೂ ಹಚ್ಚಬೇಕು. ತರುವಾಯ ನಿಮ್ಮಲ್ಲಿ ಒಬ್ಬರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೊರಗೆ ಹೋಗಬಾರದು.

[23] ಯೆಹೋವನು ಐಗುಪ್ತ್ಯರನ್ನು ಹತಮಾಡುವುದಕ್ಕೆ ದೇಶದ ನಡುವೆ ಹಾದುಹೋಗುವನು. ಆಗ ನಿಮ್ಮ ನಿಮ್ಮ ಮನೆಬಾಗಿಲಿನ ಮೇಲಣ ಪಟ್ಟಿಯಲ್ಲಿಯೂ, ಎರಡು ನಿಲುವು ಪಟ್ಟಿಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗುವನು. ನಿಮ್ಮ ಪ್ರಾಣ ತೆಗೆಯುವುದಕ್ಕೆ ಸಂಹಾರಕನು ನಿಮ್ಮ ಮನೆಗಳಲ್ಲಿ ಬರುವುದೇ ಇಲ್ಲ.

[24] ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು.

[25] ಯೆಹೋವನು ತನ್ನ ಮಾತಿನ ಮೇರೆಗೆ ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ಕೈಕೊಳ್ಳಬೇಕು.

[26] ಮುಂದೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ಆಚರಣೆ ಏನು?’ ಎಂದು ನಿಮ್ಮನ್ನು ಕೇಳುವಾಗ,

[27] ನೀವು ಅವರಿಗೆ, ‘ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿದ್ದ ಇಸ್ರಾಯೇಲರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮ ಮನೆಯವರನ್ನು ಉಳಿಸಿದ್ದರಿಂದ ನಾವು ಯೆಹೋವನ ಪಸ್ಕವೆಂಬ ಈ ಆಚರಣೆಯನ್ನು ನಡೆಸಲೇಬೇಕು ಎಂದು ಹೇಳಬೇಕು’” ಎಂದನು. ಆಗ ಜನರು ತಲೆಬಾಗಿ ಯೆಹೋವನಿಗೆ ನಮಸ್ಕರಿಸಿದರು.

[28] ಇಸ್ರಾಯೇಲರು ಅಲ್ಲಿಂದ ಹೊರಟು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು.

[29] ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು.

[30] ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು.

[31] ಫರೋಹನು ಆ ರಾತ್ರಿಯಲ್ಲೇ ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಎದ್ದು ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ. ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸುವುದಕ್ಕೆ ನೀವು ಮತ್ತು ಇಸ್ರಾಯೇಲರು ಹೊರಟುಹೋಗಿರಿ.

[32] ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು.

[33] ಐಗುಪ್ತರು, “ನಾವೆಲ್ಲರು ಸಾಯುತ್ತೇವೆ” ಎಂದುಕೊಂಡು ಇಸ್ರಾಯೇಲರನ್ನು ತಮ್ಮ ದೇಶದಿಂದ ಬೇಗನೇ ಕಳುಹಿಸಿಬಿಡುವುದಕ್ಕೆ ಅಪೇಕ್ಷೆಪಟ್ಟು ಅವರನ್ನು ಬಲವಂತಮಾಡಿದರು.

[34] ಆದುದರಿಂದ ಜನರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮೊದಲೇ ನಾದುವ ಪಾತ್ರೆಗಳ ಸಂಗಡ ಕಣಕದ ಮುದ್ದೆಯನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೆಗಲಿನ ಮೇಲೆ ಹಾಕಿಕೊಂಡು ಹೊರಟುಹೋದರು.

[35] ಇಸ್ರಾಯೇಲರು ಮೋಶೆಯ ಮಾತಿನ ಮೇರೆಗೆ ಐಗುಪ್ತ್ಯರಿಂದ ಬೆಳ್ಳಿ ಬಂಗಾರದ ಒಡವೆಗಳನ್ನು, ಬಟ್ಟೆಗಳನ್ನು ಕೇಳಿ ಪಡೆದುಕೊಂಡರು.

[36] ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದೆಲ್ಲವನ್ನು ಐಗುಪ್ತರು ಕೊಟ್ಟರು. ಹೀಗೆ ಇಸ್ರಾಯೇಲರು ಐಗುಪ್ತ್ಯರ ಸೊತ್ತನ್ನು ಸುಲಿದುಕೊಂಡರು.

[37] ಇಸ್ರಾಯೇಲರು ರಾಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಹೆಂಗಸರು ಮಕ್ಕಳು ಅಲ್ಲದೆ ಗಂಡಸರು ಮಾತ್ರ ಸುಮಾರು ಆರುಲಕ್ಷ ಮಂದಿ ಇದ್ದರು.

[38] ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟುಬಂದಿದ್ದರು. ಕುರಿದನಗಳ ಹಿಂಡೂ ಪಶುಗಳೂ ಅವರ ಸಂಗಡ ಹೊರಟುಹೋದವು.

[39] ಅವರು ಐಗುಪ್ತ ದೇಶದಿಂದ ತಂದ ನಾದಿದ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಕೊಂಡರು. ಅವರು ಐಗುಪ್ತ ದೇಶದಿಂದ ಹೊರಡಿಸಲ್ಪಟ್ಟು ಸ್ವಲ್ಪವಾದರೂ ಸಮಯ ಸಿಕ್ಕದೆ ಹೋದದರಿಂದ ಕಣಕದಲ್ಲಿ ಹುಳಿಯನ್ನು ಕಲಸಿರಲಿಲ್ಲ ಮತ್ತು ಬೇರೆ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.

[40] ಇಸ್ರಾಯೇಲರು ಐಗುಪ್ತ ದೇಶದಲ್ಲಿ ಸುಮಾರು ನಾನೂರಮೂವತ್ತು ವರ್ಷ ವಾಸವಾಗಿದ್ದರು.

[41] ನಾನೂರಮೂವತ್ತು ವರ್ಷಗಳು ಕಳೆದನಂತರ ಅದೇ ದಿನದಲ್ಲಿಯೇ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತ ದೇಶವನ್ನು ಬಿಟ್ಟು ಹೊರಟುಹೋದವು.

[42] ಯೆಹೋವನು ಆ ರಾತ್ರಿಯಲ್ಲಿಯೇ ಅವರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡಿದ್ದರಿಂದ ಅವರು ಈ ರಾತ್ರಿಯಲ್ಲಿ ಆತನ ಘನಕ್ಕಾಗಿ ಜಾಗರಣೆಯನ್ನು ಮಾಡಿದರು. ಇಸ್ರಾಯೇಲರೆಲ್ಲರೂ ತಲತಲಾಂತರಕ್ಕೂ ಯೆಹೋವನಿಗೆ ಜಾಗರಣೆಯನ್ನು ಆಚರಿಸಬೇಕಾದ ರಾತ್ರಿಯು ಇದೇ ಆಗಿದೆ.

[43] ಯೆಹೋವನು ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ, “ಪಸ್ಕವನ್ನು ಆಚರಿಸಬೇಕಾದ ಕ್ರಮ ಹೇಗೆಂದರೆ, ಅನ್ಯನೊಬ್ಬನೂ ಅದರಲ್ಲಿ ಭೋಜನ ಮಾಡಬಾರದು.

[44] ಆದರೆ ನೀವು ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ನಂತರ ಅದನ್ನು ತಿನ್ನಬಹುದು.

[45] ಪರದೇಶದವರೂ, ಕೂಲಿಯವರೂ ಅದನ್ನು ತಿನ್ನಬಾರದು.

[46] ಅವರವರ ಮನೆಯಲ್ಲಿಯೇ ಅದನ್ನು ಊಟಮಾಡಬೇಕು. ಅದರಲ್ಲಿ ಸ್ವಲ್ಪ ಮಾಂಸವನ್ನಾದರೂ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಬಾರದು.

[47] ಇಸ್ರಾಯೇಲರ ಸಮೂಹದವರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು.

[48] ನಿಮ್ಮ ಬಳಿಯಲ್ಲಿ ವಾಸವಾಗಿರುವ ಪರದೇಶದವನು ಯೆಹೋವನಿಗೆ ಈ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅವನೂ, ಅವನಿಗೆ ಸೇರಿರುವ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು. ತರುವಾಯ ಅವನು ಈ ಹಬ್ಬವನ್ನು ಆಚರಿಸುವುದಕ್ಕೆ ಸಮೀಪ ಬರಲಿ. ಅಂಥವನು ಸ್ವದೇಶದವನಂತೆಯೇ ಇರುವನು. ಆದರೆ ಸುನ್ನತಿಮಾಡಿಸಿಕೊಳ್ಳದವನು ಆ ಭೋಜನವನ್ನು ತಿನ್ನಬಾರದು.

[49] ಸ್ವದೇಶದವನಿಗೂ, ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಎಂದನು.

[50] ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರೆಲ್ಲರೂ ಮಾಡಿದರು.

[51] ಅದೇ ದಿನದಲ್ಲಿ ಯೆಹೋವನು ಇಸ್ರಾಯೇಲರನ್ನು ಅವರವರ ಸೈನ್ಯಗಳ ಪ್ರಕಾರವಾಗಿ ಐಗುಪ್ತ ದೇಶದಿಂದ ಹೊರಗೆ ತಂದನು.

ವಿಮೋಚನಕಾಂಡ — Chapters