Skip to content
Opens in a new window
Listen to this chapter • 7:33

[1] ಇಸ್ರಾಯೇಲರ ಸಮೂಹವೆಲ್ಲಾ ಏಲೀಮಿನಿಂದ ಪ್ರಯಾಣ ಮಾಡಿ ಅವರು ಐಗುಪ್ತ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಎಲೀಮಿಗೂ ಸೀನಾಯಿ ಬೆಟ್ಟಕ್ಕೂ ನಡುವೆಯಿರುವ ಸೀನ್ ಎಂಬ ಮರುಭೂಮಿಗೆ ಬಂದರು.

[2] ಆಗ ಇಸ್ರಾಯೇಲರ ಸಮೂಹವೆಲ್ಲಾ ಮರುಭೂಮಿಯಲ್ಲಿ ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟತೊಡಗಿದರು.

[3] ಇಸ್ರಾಯೇಲರು ಮೋಶೆ ಮತ್ತು ಆರೋನರಿಗೆ, “ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ನಮ್ಮನ್ನು ಈ ಮರುಭೂಮಿಗೆ ಕರೆದುಕೊಂಡು ಬಂದಿದ್ದೀರಿ. ನಾವು ಐಗುಪ್ತ ದೇಶದಲ್ಲಿದ್ದಾಗ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಹೊಟ್ಟೆತುಂಬಾ ರೊಟ್ಟಿಯನ್ನು ತಿನ್ನುತ್ತಿದ್ದಾಗ ಯೆಹೋವನ ಕೈಯಿಂದ ಸತ್ತು ಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು” ಎಂದರು.

[4] ಆಗ ಯೆಹೋವನು ಮೋಶೆಗೆ, “ನಾನು ಆಕಾಶದಿಂದ ನಿಮಗಾಗಿ ಆಹಾರವನ್ನು ಸುರಿಸುತ್ತೇನೆ. ಜನರು ಪ್ರತಿದಿನವೂ ಹೊರಗೆ ಹೋಗಿ ಆ ದಿನಕ್ಕೆ ಬೇಕಾಗುವಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ಇದರಿಂದ ಅವರು ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುತ್ತೇನೆ.

[5] ಆರನೆಯ ದಿನದಲ್ಲಿ ಮಾತ್ರ ಅವರು ತಂದದ್ದನ್ನು ಸಿದ್ಧಮಾಡುವಾಗ ಅದು ಪ್ರತಿದಿನದಲ್ಲಿ ಕೂಡಿಸಿಕೊಂಡದ್ದಕ್ಕಿಂತಲೂ ಎರಡರಷ್ಟಾಗಿರುವುದು” ಎಂದು ಹೇಳಿದನು.

[6] ಮೋಶೆ ಮತ್ತು ಆರೋನರು ಇಸ್ರಾಯೇಲರಿಗೆ, “ನಿಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದಾತನು ಯೆಹೋವನೇ ಎಂಬುದು ಇಂದು ಸಾಯಂಕಾಲದಲ್ಲಿ ನಿಮಗೆ ಗೊತ್ತಾಗುವುದು.

[7] ಮುಂಜಾನೆಯಲ್ಲಿ ಯೆಹೋವನ ಮಹಿಮೆಯು ನಿಮಗೆ ಕಾಣಿಸುವುದು, ಏಕೆಂದರೆ ನೀವು ಯೆಹೋವನಿಗೆ ವಿರೋಧವಾಗಿ ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ. ನಮ್ಮ ಮೇಲೆ ನೀವು ಗುಣುಗುಟ್ಟುವುದೇನು? ನಾವು ಎಷ್ಟು ಮಾತ್ರದವರು?” ಎಂದು ಹೇಳಿದರು.

[8] ಆಗ ಮೋಶೆ, “ಯೆಹೋವನು ಸಾಯಂಕಾಲದ ಹೊತ್ತಿನಲ್ಲಿ ನಿಮಗೆ ಮಾಂಸಾಹಾರವನ್ನೂ, ಮುಂಜಾನೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನಿಮ್ಮ ಗುಣುಗುಟ್ಟುವಿಕೆಯು ಯೆಹೋವನಿಗೆ ಕೇಳಿಸಿತು. ನಾನು ಮತ್ತು ಆರೋನನು ಎಷ್ಟರವರು? ನಿಮ್ಮ ಗುಣುಗುಟ್ಟುವಿಕೆ ಯೆಹೋವನ ವಿರುದ್ಧವೇ ಹೊರತು ನಮ್ಮ ವಿರುದ್ಧವಲ್ಲ” ಎಂದನು.

[9] ಮೋಶೆಯು ಆರೋನನಿಗೆ, “ನೀನು ಇಸ್ರಾಯೇಲರ ಸಮೂಹದ ಬಳಿಗೆ ಹೋಗಿ ಅವರಿಗೆ, ‘ಯೆಹೋವನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನೆ. ಆದುದರಿಂದ ನೀವೆಲ್ಲರೂ ಆತನ ಸನ್ನಿಧಿಗೆ ಒಟ್ಟಾಗಿ ಸೇರಿ ಬರಬೇಕೆಂದು ಆಜ್ಞಾಪಿಸು’” ಎಂದು ಹೇಳಿದನು.

[10] ಆರೋನನು ಇಸ್ರಾಯೇಲರ ಸಮೂಹಕ್ಕೆಲ್ಲಾ ಈ ಮಾತುಗಳನ್ನು ತಿಳಿಸುತ್ತಿರುವಾಗ, ಅವರು ಮರುಭೂಮಿಯ ಕಡೆಗೆ ನೋಡಲಾಗಿ, ಮೇಘದಲ್ಲಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.

[11] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[12] “ಇಸ್ರಾಯೇಲರ ಗುಣುಗುಟ್ಟುವಿಕೆಯು ನನಗೆ ಕೇಳಿಸಿತು. ನೀನು ಅವರಿಗೆ, ‘ನೀವು ಸಾಯಂಕಾಲದಲ್ಲಿ ಮಾಂಸವನ್ನೂ, ಮುಂಜಾನೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂಬುದು ನಿಮಗೆ ಗೊತ್ತಾಗುವುದೆಂದು ಹೇಳಬೇಕು’” ಎಂಬುದೇ.

[13] ಸಾಯಂಕಾಲವಾಗುತ್ತಲೇ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ತುಂಬಿಕೊಂಡವು. ಅದಲ್ಲದೆ ಹೊತ್ತಾರೆಯಲ್ಲಿ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.

[14] ಆ ಮಂಜು ಕರಗಿ ಹೋದ ಮೇಲೆ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು.

[15] ಇಸ್ರಾಯೇಲರು ಅದನ್ನು ಕಂಡು ಒಬ್ಬರಿಗೊಬ್ಬರು, “ಇದೇನಿರಬಹುದು?” ಎಂದು ಅಂದುಕೊಂಡರು. ಅದು ಏನೆಂದು ಅವರಿಗೆ ತಿಳಿಯಲಿಲ್ಲ. ಮೋಶೆ ಅವರಿಗೆ, “ಇದು ಯೆಹೋವನು ನಿಮಗಾಗಿ ತಿನ್ನುವುದಕ್ಕೆ ಕೊಟ್ಟಿರುವ ರೊಟ್ಟಿಯಾಗಿದೆ.

[16] ಯೆಹೋವನು ಇದರ ವಿಷಯದಲ್ಲಿ ಆಜ್ಞಾಪಿಸಿದ್ದೇನೆಂದರೆ: ಪ್ರತಿಯೊಬ್ಬನು ತನ್ನ ಕುಟುಂಬದವರ ಸಂಖ್ಯಾನುಸಾರ ತಲೆಗೆ ಮೂರು ಸೇರಿನಂತೆ ತನ್ನ ಡೇರೆಯವರಿಗಾಗಿ ಕೂಡಿಸಿಕೊಳ್ಳಲಿ. ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಾಕಾರ ನೀವು ಕೂಡಿಸಿಕೊಳ್ಳಿರಿ” ಎಂದು ಹೇಳಿದನು.

[17] ಇಸ್ರಾಯೇಲರು ಹಾಗೆಯೇ ಮಾಡಿದರು. ಕೆಲವರು ಹೆಚ್ಚಾಗಿ, ಕೆಲವರು ಕಡಿಮೆಯಾಗಿ ಕೂಡಿಸಿಕೊಂಡರು.

[18] ಅವರು ಅದನ್ನು ಸೇರಿನಿಂದ ಅಳತೆಮಾಡಿದರು. ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ. ಪ್ರತಿಯೊಬ್ಬನೂ ತನ್ನ ಭೋಜನಕ್ಕೆ ಸರಿಯಾಗುವಷ್ಟನ್ನು ಕೂಡಿಸಿಕೊಂಡಿದ್ದನು.

[19] ಅದಲ್ಲದೆ ಮೋಶೆ ಅವರಿಗೆ, “ಇದನ್ನು ಯಾರೂ ಮರು ದಿನದವರೆಗೆ ಇಟ್ಟುಕೊಳ್ಳಬಾರದು” ಎಂದು ಹೇಳಿದನು.

[20] ಆದಾಗ್ಯೂ ಅವರು ಮೋಶೆಯ ಮಾತನ್ನು ಕೇಳದೆ, ಅದರಲ್ಲಿ ಸ್ವಲ್ಪವನ್ನು ಮರು ದಿನದವರೆಗೆ ಇಟ್ಟುಕೊಂಡಾಗ ಅದು ಹುಳ ಬಿದ್ದು ಹೊಲಸುವಾಸನೆ ಹಿಡಿದು ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಕೋಪಗೊಂಡನು.

[21] ಜನರು ಪ್ರತಿದಿನ ಮುಂಜಾನೆಯಲ್ಲಿ ತಮ್ಮ ಭೋಜನಕ್ಕೆ ತಕ್ಕಷ್ಟು ಕೂಡಿಸಿಕೊಂಡರು. ಬಿಸಿಲು ಹೆಚ್ಚಾದಾಗ ಅದು ಕರಗಿಹೋಗುತ್ತಿತ್ತು.

[22] ಆರನೆಯ ದಿನ ಎರಡರಷ್ಟು ಆಹಾರವು, ಅಂದರೆ ಒಬ್ಬೊಬ್ಬನಿಗೆ ಎರಡೆರಡು ಸೇರಿನಂತೆ ಆರಿಸಿ ತುಂಬಿಟ್ಟುಕೊಂಡಿದ್ದರಿಂದ ಸಮೂಹದ ಅಧಿಕಾರಿಗಳೆಲ್ಲರು ಮೋಶೆಯ ಬಳಿಗೆ ಬಂದು ಈ ಸಂಗತಿಯನ್ನು ತಿಳಿಸಿದರು.

[23] ಅದಕ್ಕೆ ಅವನು, “ಇದು ಯೆಹೋವನು ಹೇಳಿದ ಮಾತು, ‘ನಾಳೆ ಯೆಹೋವನಿಗೆ ವಿಶ್ರಾಂತಿಯ ಪರಿಶುದ್ಧ ಸಬ್ಬತ ದಿನವಾಗಿದೆ. ಈ ದಿನವೇ ಸುಡಬೇಕಾದದ್ದನ್ನು ಸುಟ್ಟು, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ನಾಳೆಯವರೆಗೆ ಇಟ್ಟುಕೊಳ್ಳಿರಿ’” ಎಂದನು.

[24] ಮೋಶೆ ಆಜ್ಞಾಪಿಸಿದಂತೆ ಅವರು ಮರು ದಿನದವರೆಗೆ ಅದನ್ನು ಇಟ್ಟುಕೊಂಡರು. ಆದರೆ ಅದು ಕೆಟ್ಟು ಹೋಗಿರಲಿಲ್ಲ, ಹುಳ ಬೀಳಲ್ಲೂ ಇಲ್ಲ.

[25] ಆಗ ಮೋಶೆ ಅವರಿಗೆ, “ಈ ಹೊತ್ತು ಅದನ್ನು ಊಟ ಮಾಡಿರಿ. ಈ ದಿನವು ಯೆಹೋವನ ಸಬ್ಬತ್ ದಿನವಾಗಿರುವುದರಿಂದ ಈ ದಿನ ಅದು ಹೊಲದಲ್ಲಿ ಕಾಣಿಸಿಕೊಳ್ಳುವುದಿಲ್ಲ.

[26] ಆರು ದಿನ ಅದನ್ನು ಕೂಡಿಸಿಡಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವುದರಿಂದ ಅದು ದೊರೆಯುವುದಿಲ್ಲ” ಎಂದು ಹೇಳಿದನು.

[27] ಹಾಗೆಯೇ ಆಯಿತು. ಜನರಲ್ಲಿ ಕೆಲವರು ಏಳನೆಯ ದಿನದಲ್ಲಿ ಅದನ್ನು ಕೂಡಿಸಿಕೊಳ್ಳುವುದಕ್ಕೆ ಹೋದಾಗ ಅವರಿಗೆ ಏನೂ ಸಿಕ್ಕಲಿಲ್ಲ.

[28] ಆಗ ಯೆಹೋವನು ಮೋಶೆಗೆ, “ನೀವು ಎಲ್ಲಿಯವರೆಗೆ ನನ್ನ ಆಜ್ಞೆಗಳನ್ನೂ, ನಾನು ಮಾಡಿರುವ ನಿಯಮಗಳನ್ನೂ ಅನುಸರಿಸದೆ ಅಲಕ್ಷ್ಯ ಮಾಡುವಿರಿ?

[29] ನೋಡಿರಿ, ಯೆಹೋವನು ನಿಮಗೆ ಸಬ್ಬತ್ ದಿನವನ್ನು ಆಚರಿಸಬೇಕೆಂದು ಅಪ್ಪಣೆಕೊಟ್ಟಿರುವುದರಿಂದಲೇ ಆರನೆಯ ದಿನದಲ್ಲಿ ಎರಡು ದಿನದ ಆಹಾರವು ನಿಮಗೆ ದೊರಕುವಂತೆ ಅನುಗ್ರಹಿಸಿದ್ದಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ತಾನಿರುವ ಸ್ಥಳದಲ್ಲಿ ಇರಬೇಕು. ಏಳನೆಯ ದಿನದಲ್ಲಿ ಒಬ್ಬನೂ ತನ್ನ ಸ್ಥಳವನ್ನು ಬಿಟ್ಟು ಹೊರಗೆ ಹೋಗಬಾರದು” ಎಂದು ಹೇಳಿದನು.

[30] ಆದುದರಿಂದ ಏಳನೆಯ ದಿನದಲ್ಲಿ ಜನರು ಕೆಲಸವನ್ನು ಮಾಡದೆ ವಿಶ್ರಮಿಸಿಕೊಂಡರು.

[31] ಇಸ್ರಾಯೇಲರು ಆ ಆಹಾರಕ್ಕೆ “ಮನ್ನ” ಎಂದು ಹೆಸರಿಟ್ಟರು. ಅದು ಬಿಳಿ ಕೊತ್ತುಂಬರಿ ಕಾಳಿನಂತಿದ್ದು ರುಚಿಯಲ್ಲಿ ಜೇನುತುಪ್ಪ ಸವರಿದ ದೋಸೆಯಂತೆ ಇತ್ತು.

[32] ಮೋಶೆಯು ಜನರಿಗೆ, “ಯೆಹೋವನು ಆಜ್ಞಾಪಿಸಿದ್ದು ಇದೇ, ‘ನಾನು ಐಗುಪ್ತ ದೇಶದಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಮರುಭೂಮಿಯಲ್ಲಿ ತಿನ್ನುವುದಕ್ಕೆ ಕೊಟ್ಟ ಆಹಾರವನ್ನು ನಿಮ್ಮ ಸಂತಾನದವರು ನೋಡುವ ಹಾಗೆ ಅವರಿಗಾಗಿ ನೀವು ಒಂದು ಸೇರು ಮನ್ನವನ್ನು ತುಂಬಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು’” ಎಂದು ಹೇಳಿದನು.

[33] ಆದಕಾರಣ ಮೋಶೆಯು ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಒಂದು ಸೇರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕಾಗಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ಇಡಬೇಕು” ಎಂದು ಹೇಳಿದನು.

[34] ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ, ಆರೋನನು ಆಜ್ಞಾಶಾಸನ ಮಂಜೂಷದ ಪಕ್ಕದಲ್ಲಿ ಅದನ್ನು ಇರಿಸಿದನು.

[35] ಇಸ್ರಾಯೇಲರು ತಾವು ವಾಸಮಾಡಲಿರುವ ಪ್ರದೇಶಕ್ಕೆ ಬರುವವರೆಗೆ ಅಂದರೆ ಕಾನಾನ್ ದೇಶವನ್ನು ಬಂದು ಸೇರುವವರೆಗೆ ನಲ್ವತ್ತು ವರ್ಷ ಮನ್ನವನ್ನೇ ಊಟಮಾಡಿದರು.

[36] ಓಮೆರ್ ಎಂಬುದು ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥ ಒಂದು ಅಳತೆಯ ಮಾಪನವಾಗಿದೆ.

ವಿಮೋಚನಕಾಂಡ — Chapters