Skip to content
Opens in a new window
Listen to this chapter • 3:24

[1] ಯೆಹೋವನು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಹಾಗೂ ಇಸ್ರಾಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಯೆಹೋವನ ಬಳಿಗೆ ಬಂದು ದೂರದಲ್ಲಿ ನಿಂತು ಅಡ್ಡಬಿದ್ದು ಆರಾಧಿಸಬೇಕು.

[2] ಮೋಶೆ ಒಬ್ಬನೇ ಯೆಹೋವನ ಸಮೀಪಕ್ಕೆ ಬರಬೇಕೇ ಹೊರತು ಬೇರೆ ಯಾರು ಸಮೀಪಕ್ಕೆ ಬರಬಾರದು. ಮಿಕ್ಕ ಜನರು ಬೆಟ್ಟವನ್ನು ಹತ್ತಲೇಬಾರದು” ಎಂದು ಹೇಳಿದನು.

[3] ಮೋಶೆ ಜನರ ಬಳಿಗೆ ಬಂದು ಯೆಹೋವನ ಎಲ್ಲಾ ಮಾತುಗಳನ್ನೂ ಮತ್ತು ಅಜ್ಞಾವಿಧಿಗಳನ್ನೂ ವಿವರಿಸಲು ಜನರೆಲ್ಲರೂ, “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು” ಎಂದು ಒಕ್ಕೊರಳಿನಿಂದ ಉತ್ತರಕೊಟ್ಟರು.

[4] ಮೋಶೆಯು ಯೆಹೋವನ ಆಜ್ಞೆಗಳನ್ನೆಲ್ಲಾ ಬರೆದಿಟ್ಟನು. ಬೆಳಿಗ್ಗೆ ಎದ್ದು ಆ ಬೆಟ್ಟದ ತಪ್ಪಲಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲರ ಹನ್ನೆರಡು ಕುಲಗಳಿಗೆ ಸರಿಯಾಗಿ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆಮಾಡಿಸಿದನು.

[5] ಇಸ್ರಾಯೇಲರ ಯೌವನಸ್ಥರಿಗೆ ನೀವು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಮಾಡಿ ಸಮಾಧಾನ ಯಜ್ಞಕ್ಕಾಗಿ ಹೋರಿಗಳನ್ನು ಸಮರ್ಪಿಸಬೇಕೆಂದು ಅಪ್ಪಣೆಕೊಟ್ಟು ಕಳುಹಿಸಿದನು.

[6] ಅನಂತರ ಮೋಶೆ ಆ ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬಟ್ಟಲುಗಳಲ್ಲಿ ತುಂಬಿ ಅರ್ಧವನ್ನು ಯಜ್ಞವೇದಿಯ ಮೇಲೆ ಪ್ರೋಕ್ಷಿಸಿದನು.

[7] ತರುವಾಯ ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಕೇಳಿ, “ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗುವೆವು” ಅಂದರು.

[8] ಆಗ ಮೋಶೆಯು ಆ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಇಗೋ ಈ ಗ್ರಂಥದಲ್ಲಿ ಹೇಳಿರುವ ಎಲ್ಲಾ ಆಜ್ಞೆಗಳ ಪ್ರಕಾರ ಯೆಹೋವನು ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯ ರಕ್ತವು ಇದೇ” ಅಂದನು.

[9] ಮೋಶೆ, ಆರೋನ್, ನಾದಾಬ್, ಅಬೀಹೂ ಹಾಗೂ ಇಸ್ರಾಯೇಲರ ಹಿರಿಯರಲ್ಲಿ ಎಪ್ಪತ್ತು ಜನರು ಬೆಟ್ಟವನ್ನು ಹತ್ತಿದರು.

[10] ಅವರಿಗೆ ಇಸ್ರಾಯೇಲರ ದೇವರ ದರ್ಶನವಾಯಿತು. ಅವರು ದೇವರನ್ನು ನೋಡಿದರು. ಆಕಾಶಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟು ಆತನ ಪಾದಪೀಠವಾಗಿತ್ತು.

[11] ಆತನು ಇಸ್ರಾಯೇಲರ ಮುಖಂಡರಿಗೆ ಯಾವ ಕೇಡನ್ನೂ ಮಾಡಲಿಲ್ಲ. ಅವರು ದೇವರನ್ನು ನೋಡಿ ಅನ್ನಪಾನಗಳನ್ನು ತೆಗೆದುಕೊಂಡರು.

[12] ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಹತ್ತಿರದಲ್ಲೇ ಇರು. ನೀನು ಆ ಧರ್ಮಶಾಸ್ತ್ರವನ್ನೂ ಮತ್ತು ಆಜ್ಞೆಗಳನ್ನೂ ಜನರಿಗೆ ಬೋಧಿಸುವಂತೆ ನಾನು ಅವುಗಳನ್ನು ಬರೆದಿರುವ ಶಿಲಾಶಾಸನಗಳನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

[13] ಮೋಶೆಯು ತನ್ನ ಶಿಷ್ಯನಾದ ಯೆಹೋಶುವನೊಂದಿಗೆ ಎದ್ದು ದೇವರ ಬೆಟ್ಟದ ಮೇಲಕ್ಕೆ ಹೋದನು.

[14] ಇದಕ್ಕೆ ಮೊದಲು ಅವನು ಹಿರಿಯರಿಗೆ, “ನಾವು ತಿರುಗಿ ನಿಮ್ಮ ಬಳಿಗೆ ಬರುವ ತನಕ ನೀವು ಇಲ್ಲೇ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಲ್ಲಿರುವರು. ಯಾರಿಗಾದರೂ ವ್ಯಾಜ್ಯವಿದ್ದ ಪಕ್ಷಕ್ಕೆ ಅವರ ಹತ್ತಿರಕ್ಕೆ ಹೋಗಲಿ” ಎಂದು ಹೇಳಿದನು.

[15] ಮೋಶೆಯು ಬೆಟ್ಟವನ್ನು ಹತ್ತಿದನು ಮತ್ತು ಮೇಘವು ಬೆಟ್ಟವನ್ನು ಆವರಿಸಿಕೊಂಡಿತು.

[16] ಯೆಹೋವನ ತೇಜಸ್ಸು ಸೀನಾಯಿಬೆಟ್ಟದ ಮೇಲೆ ನೆಲೆಗೊಂಡಿತ್ತು ಮತ್ತು ಆ ಮೇಘವು ಆರು ದಿನಗಳ ವರೆಗೂ ಬೆಟ್ಟವನ್ನು ಆವರಿಸಿಕೊಂಡಿತ್ತು. ಏಳನೆಯ ದಿನದಲ್ಲಿ ಯೆಹೋವನು ಮೇಘದೊಳಗಿನಿಂದ ಮೋಶೆಯನ್ನು ಕೂಗಿ ಕರೆದನು.

[17] ಯೆಹೋವನ ತೇಜಸ್ಸು ಬೆಟ್ಟದ ತುದಿಯಲ್ಲಿ ದಹಿಸುವ ಬೆಂಕಿಯಂತೆ ಇಸ್ರಾಯೇಲರಿಗೆ ಕಾಣಿಸಿತು.

[18] ಮೋಶೆಯು ಆ ಮೇಘದೊಳಗೆ ಪ್ರವೇಶಿಸಿ ಬೆಟ್ಟವನ್ನೇರಿದನು. ಅವನು ಆ ಬೆಟ್ಟದಲ್ಲಿ ನಲ್ವತ್ತು ದಿನ ಹಗಲಿರುಳು ಆ ಬೆಟ್ಟದಲ್ಲಿಯೇ ಇದ್ದನು.

ವಿಮೋಚನಕಾಂಡ — Chapters