Skip to content
Opens in a new window
Listen to this chapter • 9:13

[1] ಅವರು ನನಗೆ ಯಾಜಕರಾಗುವಂತೆ ಅವರನ್ನು ಪ್ರತಿಷ್ಠಿಸುವುದಕ್ಕೆ ನೀನು ಮಾಡಬೇಕಾಗಿರುವ ಕಾರ್ಯಗಳೆನೆಂದರೆ; ಒಂದು ಹೋರಿ ಮತ್ತು ಕರುವನ್ನು ಯಾವ ದೋಷವಿಲ್ಲದ ಎರಡು ಟಗರುಗಳನ್ನೂ ತೆಗೆದುಕೊಳ್ಳಬೇಕು.

[2] ಮತ್ತು ಹುಳಿಯಿಲ್ಲದ ರೊಟ್ಟಿಗಳನ್ನು, ಎಣ್ಣೆ ಮಿಶ್ರಿತವಾದ ಹುಳಿಯಿಲ್ಲದ ಹೋಳಿಗೆಗಳನ್ನು, ಎಣ್ಣೆ ಸವರಿದ ಹುಳಿಯಿಲ್ಲದ ಕಡಬುಗಳನ್ನೂ,

[3] ಗೋದಿಯ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಬೇಕು. ಆ ನಂತರ ಆ ಪುಟ್ಟಿಯನ್ನು, ಹೋರಿಯನ್ನು ಮತ್ತು ಎರಡು ಟಗರುಗಳೊಂದಿಗೆ ತರಬೇಕು.

[4] ಆಗ ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿಗೆ ಕರೆದುಕೊಂಡು ಬಂದು ನೀರಿನಲ್ಲಿ ಸ್ನಾನಮಾಡಿಸಬೇಕು.

[5] ಆ ವಸ್ತ್ರಗಳನ್ನು ತೆಗೆದುಕೊಂಡು ಒಳ ಅಂಗಿಯನ್ನು ಏಫೋದ್ ಕವಚದ ಸಂಗಡ ತೊಟ್ಟುಕೊಳ್ಳತಕ್ಕ ನಿಲುವಂಗಿಯನ್ನೂ, ಏಫೋದ್ ಕವಚವನ್ನು ಎದೆಯ ಪದಕವನ್ನೂ ಆರೋನನಿಗೆ ತೊಡಿಸಿ ಏಫೋದ್ ಕವಚದ ಕಸೂತಿ ಹಾಕಿದ ನಡುಕಟ್ಟನ್ನು ಕಟ್ಟಿಸಿ,

[6] ಅವನ ತಲೆಗೆ ಮುಂಡಾಸವನ್ನು ಹಾಕಿಸಿ, ಮುಂಡಾಸದ ಮೇಲೆ ಪವಿತ್ರ ಪಟ್ಟವನ್ನು ಕಟ್ಟಿಸಿ,

[7] ಅಭಿಷೇಕತೈಲವನ್ನು ಅವನ ಮೇಲೆ ಸುರಿದು ಅವನನ್ನು ಅಭಿಷೇಕಿಸಬೇಕು.

[8] ತರುವಾಯ ಅವನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ಮೇಲಂಗಿಗಳನ್ನು ತೊಡಿಸಿ

[9] ಆರೋನನಿಗೂ ಅವನ ಮಕ್ಕಳಿಗೂ ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಇಡಬೇಕು. ಅಂದಿನಿಂದ ಯಾಜಕತ್ವವು ಅವರಿಗೆ ಶಾಶ್ವತವಾದ ಹಕ್ಕಾಗಿರುವುದು. ಹೀಗೆ ಆರೋನನೂ ಅವನ ಮಕ್ಕಳೂ ಯಾಜಕ ಸೇವೆಗೆ ಪ್ರತಿಷ್ಠಿತರಾಗಿರುವರು.

[10] ತರುವಾಯ ನೀನು ಆ ಹೋರಿಯನ್ನು ದೇವದರ್ಶನದ ಗುಡಾರದ ಎದುರಿಗೆ ತಂದು, ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು.

[11] ಆ ನಂತರ ನೀನು ಅದನ್ನು ಯೆಹೋವನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಲ್ಲೇ ವಧಿಸಬೇಕು.

[12] ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡಕ್ಕೆ ಹೊಯ್ಯಬೇಕು.

[13] ಅದರ ಪಿತ್ತಕೋಶದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರಕೋಶಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಬೇಕು.

[14] ಹೋರಿಯ ಮಾಂಸವನ್ನು, ಚರ್ಮವನ್ನು ಮತ್ತು ಕಲ್ಮಷವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟುಬಿಡಬೇಕು. ಏಕೆಂದರೆ ಇದು ದೋಷಪರಿಹಾರಕ ಯಜ್ಞ.

[15] ತರುವಾಯ ನೀನು ಆ ಟಗರುಗಳಲ್ಲಿ ಒಂದನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

[16] ನೀನು ಅದನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಯ ನಾಲ್ಕು ಕಡೆಗಳಿಗೆ ಚಿಮುಕಿಸಬೇಕು.

[17] ಆ ನಂತರ ನೀನು ಆ ಟಗರನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಕರಳುಗಳನ್ನೂ, ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನೂ, ತಲೆಯನ್ನೂ ಒಟ್ಟಿಗೆ ಇಡಬೇಕು.

[18] ಅದನ್ನೆಲ್ಲಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು. ಇದು ಯೆಹೋವನಿಗೆ ಸುಗಂಧಹೋಮವಾಗಿದೆ.

[19] ಆ ಮೇಲೆ ನೀನು ಎರಡನೆಯ ಟಗರನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

[20] ನಂತರ ಅದನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ಆರೋನನ ಮತ್ತು ಅವನ ಮಕ್ಕಳ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ, ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲು ಚಿಮುಕಿಸಬೇಕು.

[21] ಅದಲ್ಲದೆ ನೀನು ಯಜ್ಞವೇದಿಯ ಮೇಲಿರುವ ರಕ್ತದಲ್ಲಿಯೂ, ಅಭಿಷೇಕ ತೈಲದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿಮುಕಿಸಬೇಕು. ಹೀಗೆ ಅವನೂ ಮತ್ತು ಅವನ ಮಕ್ಕಳೂ ಅವರ ವಸ್ತ್ರಗಳ ಸಹಿತವಾಗಿ ಪರಿಶುದ್ಧರಾಗುವರು.

[22] ಪ್ರತಿಷ್ಠೆಗಾಗಿ ಸಮರ್ಪಿಸಲ್ಪಟ್ಟ ಟಗರಾಗಿರುವುದರಿಂದ ಅದರ ಕೊಬ್ಬನ್ನೆಲ್ಲಾ ಅಂದರೆ ಬಾಲದ ಕೊಬ್ಬನ್ನು, ವಪೆಯನ್ನು, ಪಿತ್ತಕೋಶದ ಮೇಲಿರುವ ಕೊಬ್ಬನ್ನು, ಎರಡು ಮೂತ್ರಕೋಶಗಳನ್ನು ಅವುಗಳ ಮೇಲಿರುವ ಕೊಬ್ಬನ್ನು ಹಾಗೂ ಬಲತೊಡೆಯನ್ನು,

[23] ಮತ್ತು ಯೆಹೋವನಿಗೆದುರಾಗಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆ ಮಿಶ್ರವಾದ ಒಂದು ಹೋಳಿಗೆಯನ್ನು ಮತ್ತು ಒಂದು ಕಡುಬನ್ನು ತೆಗೆದುಕೊಂಡು,

[24] ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಮಕ್ಕಳ ಕೈಗೆ ಕೊಟ್ಟು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ಅರ್ಪಿಸಬೇಕು.

[25] ಆಮೇಲೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ಯೆಹೋವನಿಗಾಗಿ ಸುಡಬೇಕು. ಅದು ಯೆಹೋವನಿಗೆ ಸುಗಂಧ ಹೋಮವಾಗಿದೆ.

[26] ಮತ್ತು ಆರೋನನ ಪಟ್ಟಾಭೀಷೇಕಕ್ಕಾಗಿ ಪ್ರತಿಷ್ಠಿಸಿದ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಅದನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಬೇಕು. ಅದು ನಿನಗೇ ಸಲ್ಲತಕ್ಕ ಪಾಲಾಗಿರುತ್ತದೆ.

[27] ಆರೋನನನ್ನೂ ಅವನ ಮಕ್ಕಳನ್ನೂ ಪ್ರತಿಷ್ಠೆ ಮಾಡುವಾಗ ಸಮರ್ಪಿಸಿದ ಟಗರಿನ ಮಾಂಸದಲ್ಲಿ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನೂ ಯಾಜಕರ ಭಾಗಕ್ಕೆ ಪ್ರತ್ಯೇಕಿಸಿದ ತೊಡೆಯನ್ನೂ ದೇವರದೆಂದು ಭಾವಿಸಬೇಕು.

[28] ಶಾಶ್ವತ ನಿಯಮವಾಗಿ ಇಸ್ರಾಯೇಲರು ಅವುಗಳನ್ನು ಆರೋನನಿಗೂ ಅವನ ವಂಶಸ್ಥರಿಗೂ ಕೊಡತಕ್ಕದ್ದು. ಅವು ಯಾಜಕರ ಭಾಗಕ್ಕಾಗಿ ಪ್ರತ್ಯೇಕಿಸಲ್ಪಟ್ಟಿವೆ. ಇಸ್ರಾಯೇಲರು ಸಮಾಧಾನ ಯಜ್ಞಕ್ಕಾಗಿ ಪಶುಗಳನ್ನು ವಧಿಸಿ ಯೆಹೋವನಿಗೆ ನೈವೇದ್ಯ ಮಾಡುವಾಗೆಲ್ಲಾ ಆ ಭಾಗಗಳನ್ನು ಯಾಜಕರಿಗಾಗಿ ಪ್ರತ್ಯೇಕಿಸಬೇಕು.

[29] ಆರೋನನ ಪವಿತ್ರವಾದ ಯಾಜಕದೀಕ್ಷಾವಸ್ತ್ರಗಳು ಅವನ ತರುವಾಯ ಅವನ ವಂಶಸ್ಥರಿಗೂ ಉಪಯೋಗವಾಗಬೇಕು. ಅವರು ಅದರಲ್ಲಿಯೇ ನನಗಾಗಿ ಅಭಿಷೇಕಿಸಿ ಪ್ರತಿಷ್ಠಿಸಬೇಕು.

[30] ಅವನ ಮಕ್ಕಳಲ್ಲಿ ಅವನಿಗೆ ಬದಲಾಗಿ ಮಹಾಯಾಜಕನಾಗುವವನು ಪವಿತ್ರಸ್ಥಾನದಲ್ಲಿ ದೇವರ ಸೇವೆಯನ್ನು ನಡೆಸುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಂದಿನಿಂದ ಏಳು ದಿನಗಳವರೆಗೆ ಆ ವಸ್ತ್ರಗಳನ್ನು ಧರಿಸಿಕೊಂಡಿರಬೇಕು.

[31] ಆರೋನನು ಪ್ರತಿಷ್ಠೆಗಾಗಿ ಸಮರ್ಪಿಸಿದ ಟಗರಿನ ಮಾಂಸವನ್ನು ದೇವದರ್ಶನದ ಗುಡಾರದ ಅಂಗಳದಲ್ಲಿ ಬೇಯಿಸಬೇಕು.

[32] ಆರೋನನೂ ಅವನ ಮಕ್ಕಳೂ ಆ ಟಗರಿನ ಮಾಂಸವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ದೇವದರ್ಶನ ಗುಡಾರದ ಬಾಗಿಲೊಳಗೆ ಊಟಮಾಡಬೇಕು.

[33] ಅವರನ್ನು ಯಾಜಕ ಸೇವೆಗೆ ನೇಮಿಸುವುದಕ್ಕೂ ದೇವರ ಪವಿತ್ರ ಸೇವೆಗೆ ಪ್ರತಿಷ್ಠಿಸುವುದಕ್ಕೂ ಯಾವ ಪದಾರ್ಥಗಳು ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಟ್ಟವೋ ಅವುಗಳನ್ನು ಅವರು ತಿನ್ನಬೇಕೇ ಹೊರತು ಇತರರು ತಿನ್ನಬಾರದು ಏಕೆಂದರೆ ಅವು ಪರಿಶುದ್ಧವಾದವುಗಳಾಗಿ ಮೀಸಲಾದುದು.

[34] ಪ್ರತಿಷ್ಠೆಗೆ ಸಂಬಂಧಪಟ್ಟ ಮಾಂಸದಲ್ಲಾಗಲಿ, ರೊಟ್ಟಿಯಲ್ಲಾಗಲಿ ಏನಾದರೂ ಮರುದಿನದ ಉದಯದ ವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು. ಅದು ಪವಿತ್ರವಾದುದರಿಂದ ಯಾರೂ ಅದನ್ನು ತಿನ್ನಬಾರದು.

[35] ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿನಗಳ ಕಾಲ ಹೀಗೆ ಅವರನ್ನು ಪ್ರತ್ಯೇಕಿಸಿ ಪ್ರತಿಷ್ಠಿಸಬೇಕು. ಆರೋನನನ್ನೂ ಅವನ ಮಕ್ಕಳನ್ನೂ ಸೇವೆಗೆ ಪ್ರತಿಷ್ಠಿಸಬೇಕು.

[36] ಪ್ರತಿದಿನವೂ ದೋಷಪರಿಹಾರಕ್ಕಾಗಿ ಒಂದು ಹೋರಿಯನ್ನು ಯಜ್ಞಮಾಡಬೇಕು. ಅದಲ್ಲದೆ ಯಜ್ಞವೇದಿಯನ್ನು ಶುದ್ಧಮಾಡುವುದಕ್ಕಾಗಿ ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ, ಅದನ್ನು ದೇವರ ಸೇವೆಗಾಗಿ ಪ್ರತಿಷ್ಠಿಸುವುದಕ್ಕಾಗಿ ಅಭಿಷೇಕಿಸಬೇಕು.

[37] ಹೀಗೆ ಏಳು ದಿನಗಳವರೆಗೂ ಯಜ್ಞವೇದಿಯ ನಿಮಿತ್ತವಾಗಿ ದೋಷಪರಿಹಾರಕ ಆಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಬೇಕು. ಯಜ್ಞವೇದಿಯು ಅತಿ ಪರಿಶುದ್ಧವಾಗಿರಬೇಕು. ಯಜ್ಞವೇದಿಯನ್ನು ಮುಟ್ಟುವವರೆಲ್ಲರೂ ಪರಿಶುದ್ಧರಾಗಿರಬೇಕು.

[38] ಯಜ್ಞವೇದಿಯ ಮೇಲೆ ನಿತ್ಯವೂ ಸಮರ್ಪಿಸಬೇಕಾದವುಗಳು, ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನವೂ ಹೋಮಮಾಡಬೇಕು.

[39] ಅವುಗಳಲ್ಲಿ ಒಂದನ್ನು ಉದಯಕಾಲದಲ್ಲಿ ಮತ್ತೊಂದನ್ನು ಸಾಯಂಕಾಲದಲ್ಲಿ ಸಮರ್ಪಿಸಬೇಕು.

[40] ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋದಿಹಿಟ್ಟನ್ನೂ ಬೆರಸಿ ಧಾನ್ಯಸಮರ್ಪಣೆಗಾಗಿ ಆ ಮೊದಲನೆಯ ಕುರಿಯ ಸಂಗಡ ಅರ್ಪಿಸಬೇಕು. ಪಾನದ್ರವ್ಯಾರ್ಪಣೆಗಾಗಿ ಒಂದು ಪಾವು ದ್ರಾಕ್ಷಾರಸವನ್ನು ಅದರೊಂದಿಗೆ ಅರ್ಪಿಸಬೇಕು.

[41] ಸಾಯಂಕಾಲದಲ್ಲಿ ಎರಡನೆಯ ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಭೋಜನ ನೈವೇದ್ಯವನ್ನೂ, ಪಾನದ್ರವ್ಯವನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಬೇಕು. ಅದು ಯೆಹೋವನಿಗೆ ಸುವಾಸನೆಯ ಹೋಮವಾಗಿರುವುದು.

[42] ಈ ಸರ್ವಾಂಗಹೋಮವನ್ನು ನೀವೂ ನಿಮ್ಮ ಸಂತತಿಯವರು ಪ್ರತಿನಿತ್ಯ ಯೆಹೋವನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನ ಎದುರಿನಲ್ಲಿ ಮಾಡಬೇಕು. ಆ ಗುಡಾರದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುವೆನು.

[43] ಅಲ್ಲಿಯೇ ನಾನು ಇಸ್ರಾಯೇಲರಿಗೆ ದರ್ಶನವನ್ನು ಕೊಡುವೆನು. ಅಲ್ಲಿ ಕಾಣಿಸುವ ನನ್ನ ತೇಜಸ್ಸಿನಿಂದ ಆ ಸ್ಥಳವು ಪರಿಶುದ್ಧವಾಗಿರುವುದು.

[44] ನಾನು ದೇವದರ್ಶನದ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಗೊಳಿಸುವೆನು. ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ನನಗೆ ಯಾಜಕ ಸೇವೆ ಮಾಡುವಂತೆ ಶುದ್ಧೀಕರಿಸುವೆನು.

[45] ನಾನು ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿದ್ದು ಅವರಿಗೆ ದೇವರಾಗಿರುವೆನು.

[46] ಅವರ ಮಧ್ಯದಲ್ಲಿ ವಾಸಮಾಡುವುದಕ್ಕಾಗಿಯೇ ಅವರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡಿದ ನಾನೇ ಅವರ ದೇವರಾದ ಯೆಹೋವನು ಎಂದು ಅವರು ತಿಳಿದುಕೊಳ್ಳುವರು. ಅವರ ದೇವರಾದ ಯೆಹೋವನು ನಾನೇ.

ವಿಮೋಚನಕಾಂಡ — Chapters