[1] ಇಸ್ರಾಯೇಲರೇ, ಕೇಳಿರಿ, ನೀವು ಹೋಗಿ ನಿಮಗಿಂತ ದೊಡ್ಡ, ಬಲಿಷ್ಠ ಜನಾಂಗಗಳನ್ನೂ, ಆಕಾಶದವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಳ್ಳುವುದಕ್ಕೆ ಈ ಹೊತ್ತು ಯೊರ್ದನ್ ನದಿಯನ್ನು ದಾಟಲಿದ್ದೀರಿ.
[2] ಆ ನಾಡಿನ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ. “ಅನಾಕ್ಯರ ಮುಂದೆ ಯಾರು ನಿಲ್ಲುವರು?” ಎಂಬ ಮಾತನ್ನು ಅವರ ಬಗ್ಗೆ ಕೇಳಿದ್ದೀರಿ.
[3] ಹೀಗಿರುವುದರಿಂದ ನೀವು ಈ ಹೊತ್ತು ತಿಳಿದುಕೊಳ್ಳತಕ್ಕದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡುವರು. ದೇವರು ಅವರನ್ನು ನಿಮ್ಮ ಮುಂದೆ ಸೋಲಿಸುವರು. ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನೀವು ಅವರನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಬೇಗ ತೆಗೆದುಹಾಕುವಿರಿ.
[4] ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ತೆಗೆದುಹಾಕಿದಾಗ, “ಯೆಹೋವ ದೇವರು ನಮ್ಮನ್ನು ಈ ದೇಶವನ್ನು ಸ್ವಾಧೀನಪಡಿಸಲು ಕರೆದುಕೊಂಡು ಬಂದಿದ್ದು ನಮ್ಮ ನೀತಿಯ ನಿಮಿತ್ತವೇ,” ಎಂದು ನೀವು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳಬಾರದು. ಆ ಜನಾಂಗಗಳ ಕೆಟ್ಟತನದ ನಿಮಿತ್ತವೇ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.
[5] ನಿಮ್ಮ ನೀತಿಗೋಸ್ಕರವೂ, ನಿಮ್ಮ ಹೃದಯದ ಯಥಾರ್ಥತೆಗೋಸ್ಕರವೂ ನೀವು ಅವರ ದೇಶವನ್ನು ಸ್ವತಂತ್ರಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆ ಜನಾಂಗಗಳ ಕೆಟ್ಟತನಕ್ಕೋಸ್ಕರವೂ, ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.
[6] ಹೀಗಿರುವುದರಿಂದ ನಿಮ್ಮ ನೀತಿಗೋಸ್ಕರ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಈ ಒಳ್ಳೆಯ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೊಡುವುದಿಲ್ಲವೆಂದು ನೀವು ತಿಳಿದುಕೊಳ್ಳಬೇಕು. ಏಕೆಂದರೆ ನೀವು ಹಟಮಾರಿ ಜನಾಂಗವಾಗಿದ್ದೀರಿ.
[7] ನೀವು ಮರುಭೂಮಿಯಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ. ಮರೆಯಬೇಡಿರಿ. ನೀವು ಈಜಿಪ್ಟ್ ದೇಶದಿಂದ ಹೊರಟ ದಿವಸ ಮೊದಲ್ಗೊಂಡು ಈ ಸ್ಥಳಕ್ಕೆ ಬರುವವರೆಗೆ ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುತ್ತಿದ್ದೀರಿ.
[8] ನೀವು ಹೋರೇಬಿನಲ್ಲಿಯೂ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದಾಗ, ಅವರು ನಿಮ್ಮನ್ನು ನಿಮ್ಮ ಮೇಲೆ ಸಿಟ್ಟುಮಾಡಿಕೊಂಡು ನಾಶಮಾಡಬೇಕೆಂದಿದ್ದರು.
[9] ಆ ಕಲ್ಲಿನ ಹಲಗೆಗಳು ಅಂದರೆ, ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ, ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿದ್ದೆನು. ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ.
[10] ಆಗ ಯೆಹೋವ ದೇವರು ನನಗೆ ತಮ್ಮ ಬೆರಳಿನಿಂದ ಬರೆದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು. ಯೆಹೋವ ದೇವರು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿನದಲ್ಲಿ ಹೇಳಿದ ಆಜ್ಞೆಗಳೆಲ್ಲಾ ಆ ಹಲಗೆಗಳಲ್ಲಿದ್ದವು.
[11] ನಲವತ್ತು ದಿವಸ ಹಗಲು ರಾತ್ರಿಗಳಾದ ಮೇಲೆ ಯೆಹೋವ ದೇವರು ನನಗೆ ಒಡಂಬಡಿಕೆಯ ಹಲಗೆಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು.
[12] ಆಗ ಯೆಹೋವ ದೇವರು, “ಎದ್ದು ಇಲ್ಲಿಂದ ಬೇಗ ಇಳಿದು ಹೋಗು. ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡಿದ್ದಾರೆ,” ಎಂದು ನನಗೆ ಹೇಳಿದರು.
[13] ಇದಲ್ಲದೆ ಯೆಹೋವ ದೇವರು ನನಗೆ, “ನಾನು ಈ ಜನರನ್ನು ನೋಡಿದ್ದೇನೆ. ಇಗೋ, ಇದು ಆಜ್ಞೆಗೆ ವಿಧೇಯವಾಗದ ಜನಾಂಗವೇ.
[14] ನನ್ನನ್ನು ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು, ನಿಮ್ಮನ್ನು ಅವರಿಗಿಂತ ಬಲಿಷ್ಠವಾದ ಜನಾಂಗವಾಗಿ ಮಾಡುವೆನು,” ಎಂದು ಹೇಳಿದರು.
[15] ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು. ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು. ಒಡಂಬಡಿಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು.
[16] ನಾನು ನೋಡಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಎರಕ ಹೊಯ್ದ ಕರುವನ್ನು ನಿಮಗೆ ಮಾಡಿಕೊಂಡು, ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗ ಬಿಟ್ಟುಬಿಟ್ಟು ಹೋಗಿದ್ದಿರಿ.
[17] ಆಗ ನಾನು ಆ ಎರಡು ಹಲಗೆಗಳನ್ನು ತೆಗೆದುಕೊಂಡು ನನ್ನ ಕೈಯಿಂದ ಬಿಸಾಡಿ, ನಿಮ್ಮ ಮುಂದೆ ಒಡೆದು ಹಾಕಿದೆನು.
[18] ಆಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಲವತ್ತು ದಿವಸ ಹಗಲುರಾತ್ರಿ ಊಟಮಾಡದೆ, ನೀರು ಕುಡಿಯದೆ, ಯೆಹೋವ ದೇವರ ಮುಂದೆ ಬಿದ್ದಿದ್ದೆನು.
[19] ಏಕೆಂದರೆ ಯೆಹೋವ ದೇವರು ನಿಮ್ಮನ್ನು ನಾಶಮಾಡುವಂತೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು. ಆದರೆ ಆ ಸಾರಿ ಕೂಡ ಯೆಹೋವ ದೇವರು ನನ್ನ ಬೇಡಿಕೆಯನ್ನು ಕೇಳಿದರು.
[20] ಆರೋನನನ್ನು ನಾಶಮಾಡುವಂತೆ ಯೆಹೋವ ದೇವರು ಅವನ ಮೇಲೆಯೂ ಬಹಳ ಕೋಪಗೊಂಡರು. ಆದ್ದರಿಂದ ಆರೋನನಿಗೋಸ್ಕರವೂ ಆ ಸಮಯದಲ್ಲಿ ಪ್ರಾರ್ಥನೆ ಮಾಡಿದೆನು.
[21] ಇದಲ್ಲದೆ ನೀವು ಯಾವದರ ಮೂಲಕ ಪಾಪವನ್ನು ಮಾಡಿದ್ದೀರೋ ಆ ಚಿನ್ನದ ಕರುವನ್ನು ನಾನು ತೆಗೆದುಕೊಂಡು, ಬೆಂಕಿಯಿಂದ ಸುಟ್ಟು, ಒಡೆದು, ಅರೆದು, ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬಿಸಾಡಿದೆನು.
[22] ನೀವು ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಲ್ಲಿಯೂ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದಿರಿ.
[23] ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಕಾದೇಶ್ ಬರ್ನೇಯದಿಂದ ಕಳುಹಿಸಿ, “ನೀವು ಹೋಗಿ ನಾನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ,” ಎಂದು ಹೇಳಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ನಂಬಲಿಲ್ಲ. ಅವರ ಮಾತನ್ನೂ ಕೇಳಲಿಲ್ಲ.
[24] ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದೀರಿ.
[25] ಹೀಗಿರಲಾಗಿ ಯೆಹೋವ ದೇವರು ನಿಮ್ಮನ್ನು ನಾಶಮಾಡುತ್ತೇನೆಂದು ಹೇಳಿದ್ದರಿಂದ, ನಾನು ಮುಂಚೆ ಬಿದ್ದುಕೊಂಡ ಹಾಗೆಯೇ ನಲವತ್ತು ದಿವಸ ಹಗಲುರಾತ್ರಿ ಯೆಹೋವ ದೇವರ ಮುಂದೆ ಬಿದ್ದಿದ್ದೆನು.
[26] ನಾನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, “ಸಾರ್ವಭೌಮ ಯೆಹೋವ ದೇವರೇ, ನೀವು ನಿಮ್ಮ ಮಹಿಮೆಯಿಂದ ವಿಮೋಚಿಸಿ, ಬಲವಾದ ಕೈಯಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ ನಿಮ್ಮ ಜನರನ್ನು ನಾಶಮಾಡಬೇಡಿ.
[27] ನಿಮ್ಮ ದಾಸರಾದ ಅಬ್ರಹಾಮ್, ಇಸಾಕ್, ಯಾಕೋಬರನ್ನು ಜ್ಞಾಪಕಮಾಡಿಕೊಳ್ಳಿರಿ. ಈ ಜನರ ಕಾಠಿಣ್ಯದ ಮೇಲೆಯೂ, ಅವರ ದುಷ್ಟತ್ವದ ಮೇಲೆಯೂ, ಅವರ ಪಾಪದ ಮೇಲೆಯೂ ದೃಷ್ಟಿ ಇಡಬೇಡಿ.
[28] ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ, ಆ ದೇಶದವರು, ‘ಯೆಹೋವ ದೇವರು ಇಸ್ರಾಯೇಲರಿಗೆ ವಾಗ್ದಾನ ಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು.
[29] ಆದರೂ ನೀವು ನಿಮ್ಮ ದೊಡ್ಡ ಶಕ್ತಿಯಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಹೊರಗೆ ಬರಮಾಡಿದ ನಿಮ್ಮ ಜನವೂ ನಿಮ್ಮ ಸೊತ್ತೂ ಇವರೇ,” ಎಂದು ಹೇಳಿದೆನು.