[1] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಬೋಧಿಸಲು ನನಗೆ ನಡೆಸಿದ ಈ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನೂ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದವುಗಳು ಇವೇ.
[2] ನೀವೂ, ನಿಮ್ಮ ಮಕ್ಕಳೂ, ನಿಮ್ಮ ಮೊಮ್ಮಕ್ಕಳೂ ತಮ್ಮ ಜೀವನದ ದಿವಸಗಳಲ್ಲೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಕೈಗೊಳ್ಳುವ ಹಾಗೆಯೂ, ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಾನು ನಿಮಗೆ ಕೊಡುವ ದೇವರ ಎಲ್ಲಾ ತೀರ್ಪುಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಬೇಕು.
[3] ಹೀಗಿರುವುದರಿಂದ ಓ ಇಸ್ರಾಯೇಲರೇ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದ ಪ್ರಕಾರ ಹಾಲೂ ಜೇನೂ ಹರಿಯುವ ದೇಶದಲ್ಲಿ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಬಹಳವಾಗಿ ಹೆಚ್ಚುವ ಹಾಗೆಯೂ ಲಕ್ಷ್ಯವಿಟ್ಟು ಕೇಳಿ ವಿಧೇಯರಾಗಿರಿ.
[4] ಇಸ್ರಾಯೇಲರೇ, ಕೇಳಿರಿ: ದೇವರಾದ ಯೆಹೋವ ನಮ್ಮ ದೇವರು; ಯೆಹೋವ ದೇವರು ಒಬ್ಬರೇ.
[5] ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
[6] ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು.
[7] ಅವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ, ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯವಾಗಿ ಮಾತನಾಡಬೇಕು.
[8] ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು. ಅವುಗಳನ್ನು ನಿಮ್ಮ ಹಣೆಗೂ ಕಟ್ಟಿಕೊಳ್ಳಬೇಕು.
[9] ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು.
[10] ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಸೇರಿಸಿ, ನೀವು ಕಟ್ಟಿದ ದೊಡ್ಡದಾದ ಒಳ್ಳೆಯ ಪಟ್ಟಣಗಳನ್ನೂ,
[11] ನೀವು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ನೀವು ಅಗೆಯದಿರುವ ಬಾವಿಗಳನ್ನೂ, ನೀವು ನೆಡದ ದ್ರಾಕ್ಷಿತೋಟಗಳನ್ನೂ, ಓಲಿವ್ ತೋಟಗಳನ್ನೂ ನಿಮಗೆ ಕೊಡಲಾಗಿ, ನೀವು ತಿಂದು ತೃಪ್ತರಾಗಿರುವಿರಿ.
[12] ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ಯೆಹೋವ ದೇವರನ್ನು ಮರೆಯದ ಹಾಗೆ ನೋಡಿಕೊಳ್ಳಿರಿ.
[13] ನಿಮ್ಮ ದೇವರಾದ ಯೆಹೋವ ದೇವರಿಗೆ ನೀವು ಭಯಪಡಬೇಕು. ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು ಮತ್ತು ಅವರ ಹೆಸರಿನಲ್ಲಿ ಆಣೆಯಿಟ್ಟುಕೊಳ್ಳಬೇಕು.
[14] ನಿಮ್ಮ ಸುತ್ತಲಿರುವ ಜನರ ದೇವರುಗಳಾಗಿರುವ ಬೇರೆ ದೇವರುಗಳನ್ನು ನೀವು ಹಿಂಬಾಲಿಸಬೇಡಿರಿ.
[15] ಏಕೆಂದರೆ ನಿಮ್ಮ ಮಧ್ಯದಲ್ಲಿರುವ ನಿಮ್ಮ ಯೆಹೋವ ದೇವರು ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರು. ನಿಮ್ಮ ದೇವರ ಕೋಪವು ನಿಮ್ಮ ಮೇಲೆ ಉರಿಯಲು, ಅವರು ನಿಮ್ಮನ್ನು ಭೂಮಿಯ ಮೇಲಿನಿಂದ ತೆಗೆದುಹಾಕುವರು.
[16] ನೀವು ಮಸ್ಸದಲ್ಲಿ ಪರೀಕ್ಷಿಸಿದ ಹಾಗೆ ನಿಮ್ಮ ದೇವರಾದ ಯೆಹೋವ ದೇವರನ್ನು ಪರೀಕ್ಷಿಸಬಾರದು.
[17] ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನೂ, ಅವರು ನಿಮಗೆ ನೀಡಿದ ಷರತ್ತುಗಳನ್ನೂ, ಅವರ ತೀರ್ಪುಗಳನ್ನೂ ಎಚ್ಚರಿಕೆಯಿಂದ ಕೈಗೊಳ್ಳಬೇಕು.
[18] ನಿಮಗೆ ಒಳ್ಳೆಯದಾಗುವಂತೆಯೂ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ಒಳ್ಳೆಯ ದೇಶವನ್ನು ನೀವು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವಂತೆಯೂ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೂ, ಒಳ್ಳೆಯದನ್ನೂ ಮಾಡಿರಿ.
[19] ಆಗ ಯೆಹೋವ ದೇವರು ತಾವು ಹೇಳಿದಂತೆ ನಿಮ್ಮ ಎಲ್ಲಾ ಶತ್ರುಗಳನ್ನು ನಿಮ್ಮ ಮುಂದೆಯೇ ಓಡಿಸಿಬಿಡುವರು.
[20] ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, “ನಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಈ ಷರತ್ತುಗಳ, ತೀರ್ಪುಗಳ ಹಾಗು ನಿಯಮಗಳ ಅರ್ಥ ಏನು?” ಎಂದು ನಿಮ್ಮನ್ನು ಕೇಳುವರು.
[21] ಆಗ ನೀವು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಫರೋಹನನಿಗೆ ದಾಸರಾಗಿದ್ದೆವು. ಯೆಹೋವ ದೇವರು ಬಲವಾದ ಕೈಯಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
[22] ಯೆಹೋವ ದೇವರು ನಮ್ಮ ಕಣ್ಣ ಮುಂದೆಯೇ ಈಜಿಪ್ಟಿನ ಮೇಲೆಯೂ, ಫರೋಹನ ಮೇಲೆಯೂ, ಅವನ ಎಲ್ಲಾ ಮನೆಯ ಮೇಲೆಯೂ ಭಯಂಕರವಾದ ದೊಡ್ಡ ಗುರುತುಗಳನ್ನೂ, ಅದ್ಭುತಗಳನ್ನೂ ಕಳುಹಿಸಿದರು.
[23] ಆದರೆ ದೇವರು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶವನ್ನು ನಮಗೆ ಕೊಡುವಂತೆಯೂ ನಾವು ಅದರಲ್ಲಿ ಪ್ರವೇಶ ಮಾಡುವಂತೆಯೂ ನಮ್ಮನ್ನು ಈಜಿಪ್ಟಿನಿಂದ ಬರಮಾಡಿದರು.
[24] ನಮಗೆ ಎಂದೆಂದಿಗೂ ಒಳ್ಳೆಯದಾಗುವಂತೆಯೂ, ಇಂದಿನಂತೆ ನಾವು ಬದುಕುವಂತೆಯೂ, ನಾವು ಈ ನಿಯಮಗಳನ್ನೆಲ್ಲಾ ಕೈಗೊಂಡು ನಮ್ಮ ಯೆಹೋವ ದೇವರಿಗೆ ಭಯಪಡಬೇಕೆಂದು ಅವರು ನಮಗೆ ಆಜ್ಞಾಪಿಸಿದ್ದಾರೆ.
[25] ಅವರು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಗೊಂಡು ನಡೆದರೆ, ಅದು ನಮಗೆ ನೀತಿಯಾಗಿರುವುದು,” ಎಂದು ಹೇಳಬೇಕು.