[1] ಹೀಗಿರುವುದರಿಂದ ನಿಮ್ಮ ಯೆಹೋವ ದೇವರನ್ನು ಪ್ರೀತಿಸಿ, ಅವರ ಅಪೇಕ್ಷೆ, ಅವರ ತೀರ್ಪು, ಅವರ ನಿಯಮ ಹಾಗು ಅವರ ಆಜ್ಞೆಗಳನ್ನು ಯಾವಾಗಲೂ ಕೈಗೊಳ್ಳಬೇಕು.
[2] ನಿಮಗೆ ಈ ಹೊತ್ತು ತಿಳಿಯಬೇಕಾದದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರ ಶಿಕ್ಷಣವನ್ನು ಅನುಭವಿಸಿದ್ದು ನಿಮ್ಮ ಮಕ್ಕಳಲ್ಲ: ದೇವರ ಮಹತ್ವವನ್ನೂ, ಅವರ ಬಲವಾದ ಕೈಯನ್ನೂ, ಅವರು ಚಾಚಿದ ಭುಜವನ್ನೂ;
[3] ಅಂದರೆ, ದೇವರು ಈಜಿಪ್ಟ್ ಮಧ್ಯದಲ್ಲಿ ಈಜಿಪ್ಟಿನ ಅರಸನಾದ ಫರೋಹನಿಗೆ ಮತ್ತು ಅವನ ಎಲ್ಲಾ ದೇಶಕ್ಕೆ ಮಾಡಿದ ಅವರ ಸೂಚಕಕಾರ್ಯಗಳನ್ನೂ ನೀವೇ ಅನುಭವಿಸಿ ನೋಡಿದ್ದೀರಿ;
[4] ದೇವರು ಈಜಿಪ್ಟಿನ ಸೈನ್ಯಕ್ಕೆ, ಅವರ ಕುದುರೆಗಳಿಗೆ ಮತ್ತು ರಥಗಳಿಗೆ ಮಾಡಿದ್ದನ್ನು ಅಂದರೆ, ಅವರು ನಿಮ್ಮನ್ನು ಹಿಂದಟ್ಟುವಾಗ ಕೆಂಪುಸಮುದ್ರದ ನೀರನ್ನು ಅವರ ಮೇಲೆ ಬರಮಾಡಿ, ಸಂಪೂರ್ಣವಾಗಿ ಅವರನ್ನು ನಾಶಮಾಡಿದ್ದನ್ನು ಸಹ ನೀವು ನೋಡಿದ್ದೀರಿ;
[5] ನೀವು ಈ ಸ್ಥಳಕ್ಕೆ ಸೇರುವ ತನಕ ಯೆಹೋವ ದೇವರು ಮರುಭೂಮಿಯಲ್ಲಿ ನಿಮಗೆ ಮಾಡಿದ ಉಪಕಾರಗಳನ್ನೂ;
[6] ರೂಬೇನನ ಮಗ ಎಲೀಯಾಬನ ಪುತ್ರರಾಗಿರುವ ದಾತಾನ್, ಅಬೀರಾಮರು ದಂಗೆಯೆದ್ದಾಗ, ಭೂಮಿಯು ಬಾಯಿತೆರೆದು ಅವರ ಮನೆಗಳನ್ನೂ, ಅವರಿಗಿದ್ದ ಎಲ್ಲಾ ಆಸ್ತಿಯನ್ನೂ, ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲಾ ಪಶುಪ್ರಾಣಿಗಳನ್ನೂ, ಸಮಸ್ತ ಇಸ್ರಾಯೇಲರ ಮಧ್ಯದಲ್ಲಿ ಹೇಗೆ ನುಂಗುವಂತೆ ದೇವರು ಮಾಡಿದರೆಂಬುದನ್ನೂ ಜ್ಞಾಪಕಮಾಡಿಕೊಳ್ಳಿರಿ.
[7] ಯೆಹೋವ ದೇವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ನಿಮ್ಮ ಕಣ್ಣುಗಳು ನೋಡಿದವು.
[8] ಹೀಗಿರುವುದರಿಂದ ಈಗ ನಾನು ನಿಮಗೆ ಬೋಧಿಸುವ ಈ ಆಜ್ಞೆಯನ್ನೆಲ್ಲಾ ಕೈಗೊಳ್ಳಬೇಕು. ಆಗ ನೀವು ಬಲವುಳ್ಳವರಾಗಿ, ಈ ನದಿದಾಟಿ ಆಚೆಯಿರುವ ದೇಶವನ್ನು ಪ್ರವೇಶಿಸಿ, ಅದನ್ನು ಸ್ವಾಧೀನಮಾಡಿಕೊಳ್ಳುವಿರಿ.
[9] ಯೆಹೋವ ದೇವರು ನಿಮ್ಮ ಪಿತೃಗಳಿಗೂ, ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಾಗಿರುವ ಆ ಹಾಲೂ ಜೇನೂ ಹರಿಯುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ.
[10] ಏಕೆಂದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು, ನೀವು ಹೊರಟ ಈಜಿಪ್ಟ್ ದೇಶದ ಹಾಗಲ್ಲ. ಅಲ್ಲಿ ನೀವು ಬೀಜವನ್ನು ಬಿತ್ತಿ, ಪಲ್ಯಗಳ ತೋಟವನ್ನು ಸಾಗುವಳಿ ಮಾಡುವ ರೀತಿಯಲ್ಲಿ ಏತವನ್ನು ತುಳಿದು, ನೀರು ಕಟ್ಟುತ್ತಿದ್ದಿರಿ.
[11] ಆದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು ಬೆಟ್ಟಗಳೂ, ತಗ್ಗುಗಳೂ ಉಳ್ಳ ದೇಶವೇ; ಆಕಾಶದ ಮಳೆಯಿಂದ ಅದಕ್ಕೆ ನೀರು ದೊರೆಯುವುದು.
[12] ಅದು ನಿಮ್ಮ ದೇವರಾದ ಯೆಹೋವ ದೇವರು ಪರಾಮರಿಸುವ ದೇಶವೇ; ವರ್ಷದ ಆರಂಭದಿಂದ ವರ್ಷದ ಅಂತ್ಯದವರೆಗೂ ಯಾವಾಗಲೂ ನಿಮ್ಮ ದೇವರಾದ ಯೆಹೋವ ದೇವರ ಕಣ್ಣು ಅದರ ಮೇಲಿರುವುದು.
[13] ಹಾಗಾದರೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ನನ್ನ ಆಜ್ಞೆಗಳನ್ನು ನೀವು ಲಕ್ಯಕೊಟ್ಟು ಕೇಳಿ, ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ ಅವರಿಗೆ ಸೇವೆ ಮಾಡಿದರೆ,
[14] ನೀವು ನಿಮ್ಮ ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೂಡಿಸುವಂತೆ ದೇವರು ನಿಮ್ಮ ಭೂಮಿಗೆ ಅದರ ತಕ್ಕ ಕಾಲದಲ್ಲಿ ಮಳೆಯನ್ನೂ, ಮುಂಗಾರು ಹಿಂಗಾರುಗಳನ್ನೂ ಕೊಡುವರು.
[15] ನಿಮ್ಮ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ನಿಮ್ಮ ಹೊಲದಲ್ಲಿ ಕೊಡುವರು. ನೀವು ಆಹಾರದಿಂದ ತೃಪ್ತರಾಗುವಿರಿ.
[16] ನಿಮ್ಮ ಹೃದಯವು ಮರಳುಗೊಂಡು ನೀವು ದಾರಿತಪ್ಪಿ ಬೇರೆ ದೇವರುಗಳನ್ನು ಆರಾಧಿಸಿ ಅಡ್ಡಬೀಳದಂತೆ ಎಚ್ಚರವಾಗಿರಿ.
[17] ಇಲ್ಲದಿದ್ದರೆ, ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯಲು ಅವರು ಮಳೆಯಾಗದಂತೆ ಮಾಡುವರು. ಭೂಮಿಯು ತನ್ನ ಬೆಳೆಯನ್ನು ಕೊಡದಂತೆ ಆಕಾಶವನ್ನು ಮುಚ್ಚಿಬಿಡುವರು. ಯೆಹೋವ ದೇವರು ನಿಮಗೆ ಕೊಡುವ ಆ ಒಳ್ಳೆಯ ದೇಶದಲ್ಲಿ ನೀವು ಬೇಗ ನಾಶವಾಗಿಹೋಗುವಿರಿ, ಎಚ್ಚರಿಕೆ.
[18] ಈ ನನ್ನ ವಾಕ್ಯಗಳನ್ನು ನಿಮ್ಮ ಹೃದಯದಲ್ಲಿಯೂ, ಪ್ರಾಣಗಳಲ್ಲಿಯೂ ಇಟ್ಟುಕೊಳ್ಳಿರಿ. ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಿರಿ, ಅವು ನಿಮ್ಮ ಹಣೆಗೆ ಕಟ್ಟಿರಲಿ.
[19] ನೀವು ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ, ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು.
[20] ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು.
[21] ಹೀಗೆ ಮಾಡಿದರೆ ನಿಮ್ಮ ದಿನಗಳೂ, ನಿಮ್ಮ ಮಕ್ಕಳ ದಿನಗಳೂ ಭೂಮಿಯಲ್ಲಿ ಆಕಾಶದ ದಿನಗಳು ನೆಲೆಯಾಗಿರುವ ಪ್ರಕಾರ, ಯೆಹೋವ ದೇವರು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ನೆಲೆಯಾಗಿರುವಿರಿ.
[22] ನಾನು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಎಚ್ಚರಿಕೆಯಿಂದ ಕಾಪಾಡಿ, ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದು, ಅವರನ್ನು ಅಂಟಿಕೊಂಡರೆ,
[23] ಯೆಹೋವ ದೇವರು ಆ ಜನಾಂಗಗಳನ್ನೆಲ್ಲಾ ನಿಮ್ಮ ಮುಂದೆ ಹೊರಡಿಸುವರು. ನೀವು ನಿಮಗಿಂತ ಬಲವುಳ್ಳ ದೊಡ್ಡ ಜನಾಂಗಗಳನ್ನು ಸ್ವಾಧೀನಮಾಡಿಕೊಳ್ಳುವಿರಿ.
[24] ನೀವು ಹೆಜ್ಜೆ ಇಡುವ ಸ್ಥಳವೆಲ್ಲಾ ನಿಮ್ಮದಾಗುವುದು. ಮರುಭೂಮಿಯಿಂದ ಲೆಬನೋನಿನವರೆಗೂ, ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದ ಅಂತ್ಯದವರೆಗೂ ನಿಮ್ಮ ಮೇರೆಯಾಗಿರುವುದು.
[25] ಯಾರೂ ನಿಮ್ಮ ಮುಂದೆ ನಿಲ್ಲಲಾರರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನಿಮ್ಮ ಹೆದರಿಕೆಯನ್ನೂ, ದಿಗಿಲನ್ನೂ, ನೀವು ಸಂಚಾರ ಮಾಡುವ ಸಮಸ್ತ ದೇಶದ ಮೇಲೆ ಇಡುವರು.
[26] ನಾನು ಈ ಹೊತ್ತು ಆಶೀರ್ವಾದವನ್ನೂ, ಶಾಪವನ್ನೂ ನಿಮ್ಮ ಮುಂದೆ ಇಡುತ್ತೇನೆ.
[27] ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವಂಥ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ನೀವು ವಿಧೇಯರಾದರೆ, ಆಶೀರ್ವಾದವನ್ನು ಪಡೆದುಕೊಳ್ಳುವಿರಿ.
[28] ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳಿಗೆ ವಿಧೇಯರಾಗದೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾರ್ಗಕ್ಕೆ ಓರೆಯಾದರೆ, ನೀವು ತಿಳಿಯದ ಬೇರೆ ದೇವರುಗಳನ್ನು ಹಿಂಬಾಲಿಸಿದರೆ, ನಿಮಗೆ ಶಾಪವು ತಗಲುವುದು.
[29] ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರವೇಶಿಸುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಸೇರಿಸಿದಾಗ, ನೀವು ಗೆರಿಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು.
[30] ಇವು ಯೊರ್ದನ್ ನದಿಯ ಆಚೆ ಸೂರ್ಯನು ಅಸ್ತಮಿಸುವ ದಿಕ್ಕಿನಲ್ಲಿ ಅರಾಬಾ ಪ್ರದೇಶದಲ್ಲಿ ಗಿಲ್ಗಾಲಿಗೆ ಎದುರಾಗಿರುವ ಬಯಲಿನೊಳಗೆ ಮೋರೆ ಎಂಬ ಮಹಾವೃಕ್ಷದ ಸಮೀಪ ವಾಸಮಾಡುವ ಕಾನಾನ್ಯರ ದೇಶದಲ್ಲಿ ಇರುತ್ತವೆ.
[31] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟಿ ಹೋಗಬೇಕು. ಆಗ ಅದನ್ನು ನೀವು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ,
[32] ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಎಲ್ಲಾ ಆಜ್ಞಾವಿಧಿಗಳನ್ನು ಕಾಪಾಡಿ ನಡೆದುಕೊಳ್ಳಬೇಕು.