Skip to content
Opens in a new window
Listen to this chapter • 4:50

[1] ನೀವು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟಾಗ ಅವರ ಕುದುರೆಗಳನ್ನೂ ರಥಗಳನ್ನೂ ನಿಮಗಿಂತ ಹೆಚ್ಚಾಗಿರುವ ಜನರನ್ನೂ ನೋಡಿದರೆ ಭಯಪಡಬೇಡಿರಿ. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ.

[2] ನೀವು ಯುದ್ಧಕ್ಕೆ ಸಮೀಪ ಬಂದಾಗ, ಯಾಜಕನು ಹತ್ತಿರ ಬಂದು, ಯೋಧರ ಸಂಗಡ ಮಾತನಾಡಿ ಅವರಿಗೆ,

[3] “ಇಸ್ರಾಯೇಲರೇ ಕೇಳಿರಿ, ನೀವು ಈ ಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸಮೀಪ ಬಂದಿದ್ದೀರಿ. ನಿಮ್ಮ ಹೃದಯಗಳು ಕುಗ್ಗಬಾರದು. ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂ ಬೇಡಿರಿ.

[4] ಏಕೆಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ, ನಿಮ್ಮನ್ನು ರಕ್ಷಿಸುವುದಕ್ಕೆ ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಸಂಗಡ ಬರುತ್ತಾರೆ,” ಎಂದು ಹೇಳಬೇಕು.

[5] ಮತ್ತು ಅಧಿಕಾರಿಗಳು ಅವರಿಗೆ ಹೀಗೆ ಹೇಳಬೇಕು, “ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿ, ಗೃಹ ಪ್ರತಿಷ್ಠೆ ಇನ್ನು ಮಾಡದಿದ್ದರೆ, ಅವನು ತನ್ನ ಮನೆಗೆ ಹೋಗಲಿ. ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಮನೆಯನ್ನು ಸೇರಿಕೊಂಡಾನು.

[6] ದ್ರಾಕ್ಷಿತೋಟವನ್ನು ನೆಟ್ಟು ಅದರ ಫಲವನ್ನು ತಿನ್ನದೇ ಇರುವ ಮನುಷ್ಯನು, ತನ್ನ ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಫಲ ತಿಂದಾನು.

[7] ಯಾವನಾದರೂ ಮದುವೆ ಮಾಡಿಕೊಂಡಿದ್ದು, ತನ್ನ ಹೆಂಡತಿಯೊಂದಿಗೆ ಸಂಸಾರ ಮಾಡಿರದಿದ್ದರೆ, ಅಂಥವನು ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ, ಬೇರೊಬ್ಬನು ಆಕೆಯನ್ನು ಸೇರಿಸಿಕೊಂಡಾನು.”

[8] ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.

[9] ಅಧಿಕಾರಿಗಳು ಯೋಧರ ಸಂಗಡ ಮಾತನಾಡಿ ಮುಗಿಸಿದಾಗ, ಅವರು ಅದರ ಮೇಲೆ ಸೇನಾಧಿಪತಿಗಳನ್ನು ನೇಮಿಸಬೇಕು.

[10] ನೀವು ಯುದ್ಧಮಾಡುವುದಕ್ಕಾಗಿ ಒಂದು ಪಟ್ಟಣದ ಹತ್ತಿರ ಬಂದಾಗ, ಮೊದಲು ಅದನ್ನು ಸಮಾಧಾನಕ್ಕಾಗಿ ಕರೆಯಬೇಕು.

[11] ಆ ಪಟ್ಟಣವು ನಿಮಗೆ ಸಮಾಧಾನದ ಉತ್ತರಕೊಟ್ಟು ಬಾಗಿಲನ್ನು ತೆರೆದರೆ, ಅದರಲ್ಲಿರುವ ಜನರೆಲ್ಲರೂ ನಿಮಗೆ ಕಪ್ಪಕೊಟ್ಟು, ನಿಮಗಾಗಿ ಕೆಲಸ ಮಾಡಬೇಕು.

[12] ಅವರು ನಿಮ್ಮ ಮಾತಿಗೆ ಸಮ್ಮತಿಸದೆ ನಿಮ್ಮ ಸಂಗಡ ಯುದ್ಧಮಾಡಿದರೆ, ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.

[13] ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಕೊಟ್ಟಾಗ, ಅದರ ಗಂಡಸರೆಲ್ಲರನ್ನು ಸಂಹಾರಮಾಡಬೇಕು.

[14] ಆದರೆ ಸ್ತ್ರೀಯರನ್ನೂ ಚಿಕ್ಕವರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲಾ ಆಸ್ತಿಯನ್ನೂ ನಿಮಗಾಗಿ ತಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವಂಥ ನಿಮ್ಮ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.

[15] ಹೀಗೆ ಈ ದೇಶದ ಜನಾಂಗಗಳಿಗೆ ಸೇರದೆ ನಿಮಗೆ ದೂರವಾಗಿರುವ ಜನಾಂಗಗಳ ಪಟ್ಟಣಗಳಿಗೆಲ್ಲಾ ಹಾಗೆಯೇ ಮಾಡಬೇಕು.

[16] ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಈ ಜನರ ಪಟ್ಟಣಗಳಲ್ಲಿ ಉಸಿರಾಡುವ ಯಾವುದನ್ನಾದರೂ ಉಳಿಸಬಾರದು.

[17] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದಂತೆ ಹಿತ್ತಿಯರನ್ನೂ, ಅಮೋರಿಯರನ್ನೂ, ಕಾನಾನ್ಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಪೂರ್ಣವಾಗಿ ದಂಡಿಸಬೇಕು.

[18] ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಆರಾಧಿಸುವಾಗ ಮಾಡಿದ ಎಲ್ಲಾ ಅಸಹ್ಯಕರವಾದ ಆಚಾರಗಳನ್ನು ನಿಮಗೆ ಕಲಿಸಿಕೊಡಬಹುದು ಮತ್ತು ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ದ್ರೋಹಿಗಳಾಗಬಹುದು.

[19] ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು ಅದಕ್ಕೆ ಬಹು ದಿವಸ ಮುತ್ತಿಗೆ ಹಾಕಬೇಕಾಗಬಹುದು. ಆಗ ಅದಕ್ಕೆ ಸೇರಿದ ಮರಗಳನ್ನು ಹಾಳುಮಾಡಬಾರದು. ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಶತ್ರುಗಳೇನು? ಅವುಗಳೊಡನೆ ಯುದ್ಧ ಮಾಡಬಹುದೇ?

[20] ತಿನ್ನತಕ್ಕ ಹಣ್ಣು ಕೊಡುವುದಿಲ್ಲ ಎಂದು ನೀವು ತಿಳಿದ ಮರಗಳನ್ನು ಮಾತ್ರ ಕಡಿದು ಹಾಕಬಹುದು. ಅವುಗಳಿಂದ ಯುದ್ಧ ಯಂತ್ರಗಳನ್ನು ಮಾಡಿಕೊಂಡು ನಿಮಗೆ ವಿರುದ್ಧವಾಗಿರುವ ಆ ಪಟ್ಟಣ ಬೀಳುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.

ಧರ್ಮೋಪದೇಶಕಾಂಡ — Chapters