Skip to content
Opens in a new window
Listen to this chapter • 5:18

[1] ಒಬ್ಬನು ತಾನು ಮದುವೆಮಾಡಿಕೊಂಡ ಮಹಿಳೆಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಅಸಂತೃಪ್ತನಾದರೆ, ವಿವಾಹ ವಿಚ್ಛೇದನ ಪತ್ರವನ್ನು ಬರೆದು, ಅವಳ ಕೈಯಲ್ಲಿ ಕೊಟ್ಟು, ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಟ್ಟಾಗ,

[2] ಅವಳು ಅವನ ಮನೆಯನ್ನು ಬಿಟ್ಟುಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗಬಹುದು.

[3] ಆ ಮತ್ತೊಬ್ಬ ಗಂಡನು ಅವಳನ್ನು ಹಗೆಮಾಡಿ, ವಿವಾಹ ವಿಚ್ಛೇದನ ಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು, ತನ್ನ ಮನೆಯಿಂದ ಕಳುಹಿಸಿಬಿಟ್ಟರೆ, ಇಲ್ಲವೆ ಆ ಎರಡನೆಯ ಗಂಡನು ಸತ್ತರೆ,

[4] ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಹೆಂಡತಿಯಾಗಿ ಸ್ವೀಕರಿಸಬಾರದು. ಅದು ಯೆಹೋವ ದೇವರ ಮುಂದೆ ಅಸಹ್ಯವೇ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ದೋಷವುಂಟಾಗಲು ಅವಕಾಶ ಕೊಡಬಾರದು.

[5] ಒಬ್ಬನು ಹೊಸದಾಗಿ ಮದುವೆಯಾಗಿದ್ದರೆ, ಅವನನ್ನು ಯುದ್ಧಕ್ಕೆ ಕಳುಹಿಸಬಾರದು ಅಥವಾ ಜವಾಬ್ದಾರಿಯ ಯಾವುದೊಂದೂ ಕೆಲಸವನ್ನು ಅವನಿಂದ ಮಾಡಿಸಬಾರದು. ಅವನು ಒಂದು ವರ್ಷ ಸ್ವತಂತ್ರನಾಗಿ ತನ್ನ ಮನೆಯಲ್ಲಿದ್ದು, ತಾನು ಮದುವೆಯಾದ ಹೆಂಡತಿಯೊಡನೆ ಸುಖವಾಗಿರಲಿ.

[6] ಬೀಸುವ ಕಲ್ಲಿನಲ್ಲಿ ಅಡಿಗಲ್ಲನ್ನಾದರೂ, ಮೇಲಿನ ಕಲ್ಲನ್ನಾದರೂ ಒತ್ತೆಯಾಗಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದರೆ, ಅದು ವ್ಯಕ್ತಿಯ ಜೀವನೋಪಾಯವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಿರುವುದು.

[7] ಒಬ್ಬನು ತನ್ನ ಸಹೋದರರಾದ ಇಸ್ರಾಯೇಲರಲ್ಲಿ ಒಬ್ಬನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ನಡುವೆಯಿಂದ ತೆಗೆದುಹಾಕಬೇಕು.

[8] ಕುಷ್ಠರೋಗಿಗಳ ವಿಷಯದಲ್ಲಿ ಲೇವಿಯರಾದ ಯಾಜಕರು ನಿಮಗೆ ಬೋಧಿಸುವುದನ್ನೆಲ್ಲಾ ನೀವು ಜಾಗ್ರತೆಯಿಂದ ಕಾಪಾಡಿ ಕೈಗೊಳ್ಳುವ ಹಾಗೆ ನೋಡಿಕೊಳ್ಳಿ. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನು ನೀವು ಕಾಪಾಡಿ ಕೈಗೊಳ್ಳಬೇಕು.

[9] ನೀವು ಈಜಿಪ್ಟಿನಿಂದ ಹೊರಗೆ ಬಂದಾಗ, ಮಾರ್ಗದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ಮಿರ್ಯಾಮಗಳಿಗೆ ಮಾಡಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ.

[10] ನಿನ್ನ ನೆರೆಯವನಿಗೆ ನೀವು ಯಾವುದೇ ರೀತಿಯ ಸಾಲಕೊಟ್ಟರೆ, ಅವನ ಒತ್ತೆಯನ್ನು ಕೇಳಲು ಅವನ ಮನೆಯಲ್ಲಿ ಪ್ರವೇಶಿಸಬಾರದು.

[11] ನೀನು ಹೊರಗೆ ನಿಂತಿರಬೇಕು. ಸಾಲ ಕೊಟ್ಟವನೇ ಒತ್ತೆಯನ್ನು ನಿನಗೆ ಹೊರಗೆ ತರಬೇಕು.

[12] ಅವನು ಬಡವನಾದರೆ, ಅವನ ಒತ್ತೆಯನ್ನು ಇಟ್ಟುಕೊಂಡು ರಾತ್ರಿ ಮಲಗಬೇಡ.

[13] ನಿನ್ನ ನೆರೆಯವನು ಅದರಲ್ಲಿ ಮಲಗಲು ಸಾಯಂಕಾಲದ ಹೊತ್ತಿಗೆ ಅವನು ಹೊದ್ದುಕೊಳ್ಳುವ ವಸ್ತ್ರವನ್ನು ಹಿಂತಿರುಗಿಸು. ಆಗ ಅವನು ನಿನ್ನನ್ನು ಆಶೀರ್ವದಿಸುವನು. ನೀನು ಮಾಡಿದ್ದು ನಿನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ನೀತಿಯ ಕಾರ್ಯವೆಂದು ಪರಿಗಣಿಸಲಾಗುವುದು.

[14] ನಿನ್ನ ನಾಡಿನ ಸಹೋದರನಾಗಲಿ, ಪರದೇಶಿಯವನಾಗಲಿ, ಬಡ ಮತ್ತು ನಿರ್ಗತಿಕನಾಗಿರುವ ಕೂಲಿಯವನನ್ನು ಬಾಧಿಸಬಾರದು.

[15] ಅವನ ದಿನದ ಕೂಲಿಯನ್ನು ಆ ದಿನದಲ್ಲೇ ಸೂರ್ಯನು ಮುಳುಗುವುದರೊಳಗೆ ಅವನಿಗೆ ಕೊಡಬೇಕು. ಏಕೆಂದರೆ ಅವನು ಬಡವನಾಗಿದ್ದರಿಂದ ಅದನ್ನೇ ಎದುರು ನೋಡುತ್ತಿರುತ್ತಾನೆ. ನೀವು ಕೊಡದಿದ್ದರೆ, ಅವನು ನಿನಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆಯಿಡುವನು. ಆಗ ನಿನ್ನ ಮೇಲೆ ಪಾಪದ ಹೊರೆ ಬಿದ್ದೀತು.

[16] ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು.

[17] ಪರನಿಗೂ, ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸಬೇಡ. ವಿಧವೆಯಿಂದ ಉಡುವ ವಸ್ತ್ರವನ್ನು ಒತ್ತೆಯಾಗಿ ತೆಗೆದುಕೊಳ್ಳಬೇಡ.

[18] ನೀನು ಈಜಿಪ್ಟಿನಲ್ಲಿ ದಾಸನಾಗಿದ್ದೆ ಎಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದ್ದರಿಂದ ಈ ಕಾರ್ಯಗಳನ್ನೆಲ್ಲಾ ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.

[19] ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ, ಹೊಲದಲ್ಲಿ ಸಿವುಡನ್ನು ಮರೆತುಬಿಟ್ಟರೆ, ಅದನ್ನು ತೆಗೆದುಕೊಳ್ಳುವುದಕ್ಕೆ ತಿರುಗಿಕೊಳ್ಳಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ. ನೀವು ಹೀಗೆ ನಡೆದುಕೊಂಡರೆ, ನಿನ್ನ ದೇವರಾದ ಯೆಹೋವ ದೇವರು ನಿನ್ನ ಎಲ್ಲಾ ದುಡಿಮೆಯಲ್ಲಿ ನಿನ್ನನ್ನು ಆಶೀರ್ವದಿಸುವರು.

[20] ಓಲಿವ್ ಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವದಕ್ಕೆ ಹೋಗಬಾರದು, ಮಿಕ್ಕಿದ್ದನ್ನು ಪರದೇಶದವನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.

[21] ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು. ಪರದೇಶಿ, ತಂದೆತಾಯಿ ಇಲ್ಲದ ವ್ಯಕ್ತಿ, ವಿಧವೆ ಇಂಥವರಿಗಾಗಿ ಅದನ್ನು ಬಿಟ್ಟುಬಿಡು.

[22] ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿ ವಾಸವಾಗಿದ್ದಿರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ.

ಧರ್ಮೋಪದೇಶಕಾಂಡ — Chapters