[1] ನೀವು ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಾತ್ರಿಯಲ್ಲಿ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
[2] ಹೀಗಿರುವುದರಿಂದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಳ್ಳುವ ಸ್ಥಳದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಆಡುಕುರಿಗಳಲ್ಲಾಗಲಿ, ದನಗಳಲ್ಲಿ ಆಗಲಿ ಪಸ್ಕದ ಪಶುವನ್ನಾಗಿ ಅರ್ಪಿಸಬೇಕು.
[3] ಅದರೊಂದಿಗೆ ಹುಳಿರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿಯಿಲ್ಲದ ಶ್ರಮೆಯ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ತ್ವರೆಯಾಗಿ ಈಜಿಪ್ಟ್ ದೇಶದೊಳಗಿಂದ ನೀವು ಹೊರಗೆ ಬಂದದ್ದರಿಂದ ನೀವು ಜೀವಿಸುವ ದಿವಸಗಳಲ್ಲೆಲ್ಲಾ ಇದನ್ನು ಜ್ಞಾಪಕಮಾಡಿಕೊಳ್ಳಬೇಕು.
[4] ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿಮ್ಮ ಮೇರೆಗಳಲ್ಲಿ ಎಲ್ಲಿಯೂ ಕಾಣಬಾರದು. ಮೊದಲನೆಯ ದಿವಸದ ಸಾಯಂಕಾಲದಲ್ಲಿ ನೀವು ಯಜ್ಞವಾಗಿ ಸಮರ್ಪಿಸಿದ ಮಾಂಸದಲ್ಲಿ ಏನೂ ಮರುದಿವಸದವರೆಗೆ ಉಳಿಯಬಾರದು.
[5] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಯಾವ ಊರಲ್ಲಾದರೂ ಪಸ್ಕವನ್ನು ಅರ್ಪಿಸಬಾರದು.
[6] ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಳ್ಳುವ ಸ್ಥಳದಲ್ಲೇ ಸೂರ್ಯನು ಅಸ್ತಮಿಸುವಾಗ ನೀವು ಈಜಿಪ್ಟನ್ನು ಬಿಟ್ಟುಹೋದ ಸಮಯದಲ್ಲಿ ಅರ್ಪಿಸಬೇಕು.
[7] ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು. ಮರುದಿವಸದಲ್ಲಿ ಹಿಂದಿರುಗಿ ನಿಮ್ಮ ಗುಡಾರಗಳಿಗೆ ಹೋಗಬಹುದು.
[8] ಆರು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿವಸದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸಭೆಯಾಗಿ ಕೂಡಿಬರಬೇಕು. ಆ ದಿನದಲ್ಲಿ ಕೆಲಸಮಾಡಬಾರದು.
[9] ಏಳು ವಾರಗಳನ್ನು ನನಗಾಗಿ ಎಣಿಸಿಕೊಳ್ಳಬೇಕು. ಪೈರಿನಲ್ಲಿ ಕುಡುಗೋಲು ಮೊದಲು ಹಾಕಿದಂದಿನಿಂದ ಏಳು ವಾರಗಳನ್ನು ಎಣಿಸಿಕೊಳ್ಳುವುದಕ್ಕೆ ಪ್ರಾರಂಭಿಸಬೇಕು.
[10] ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ಅರ್ಪಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ವಾರಗಳ ಹಬ್ಬವನ್ನು ಆಚರಿಸಬೇಕು
[11] ಮತ್ತು ಅವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು, ನಿಮ್ಮ ಗಂಡು ಹೆಣ್ಣುಮಕ್ಕಳು, ದಾಸದಾಸಿಯರು, ನಿಮ್ಮ ಊರಲ್ಲಿರುವ ಲೇವಿಯರು, ಪರದೇಶದವರು, ತಂದೆತಾಯಿ ಇಲ್ಲದವರು ಹಾಗೂ ವಿಧವೆಯರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.
[12] ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದೆವೆಂಬುದನ್ನು ನೀವು ನೆನಪಿಗೆ ತಂದುಕೊಂಡು ಈ ವಿಧಿಗಳನ್ನು ಆಚರಿಸಬೇಕು.
[13] ನೀವು ಕಣದ ಕೆಲಸವನ್ನೂ ದ್ರಾಕ್ಷಿ ಆಲೆಯ ಕೆಲಸವನ್ನೂ ಪೂರೈಸಿ, ಬೆಳೆಯನ್ನು ಮನೆಗೆ ತಂದಾಗ, ಏಳು ದಿನಗಳವರೆಗೂ ಗುಡಾರಗಳ ಹಬ್ಬವನ್ನು ಆಚರಿಸಬೇಕು.
[14] ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಂದೆತಾಯಿ ಇಲ್ಲದವರೂ ಹಾಗೂ ವಿಧವೆಯರೂ ಸಂಭ್ರಮದಿಂದಿರಬೇಕು.
[15] ನಿಮ್ಮ ದೇವರಾದ ಯೆಹೋವ ದೇವರಿಗೆ ಏಳು ದಿವಸ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಎಲ್ಲಾ ಆದಾಯದಲ್ಲಿಯೂ, ನಿಮ್ಮ ಎಲ್ಲಾ ಕೆಲಸದಲ್ಲಿಯೂ ಆಶೀರ್ವದಿಸುವುದರಿಂದ ನೀವು ಪರಿಪೂರ್ಣ ಸಂತೋಷದಿಂದ ಇರಬೇಕು.
[16] ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಮತ್ತು ಗುಡಾರಗಳ ಹಬ್ಬದಲ್ಲಿಯೂ ವರ್ಷಕ್ಕೆ ಮೂರು ಸಾರಿ ನಿಮ್ಮ ಎಲ್ಲಾ ಪುರುಷರು, ನಿಮ್ಮ ಯೆಹೋವ ದೇವರ ಮುಂದೆ ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಯೆಹೋವ ದೇವರ ಸಮ್ಮುಖಕ್ಕೆ ಬರೀ ಕೈಯಿಂದ ಬರಬಾರದು.
[17] ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ಆಶೀರ್ವಾದದ ಪ್ರಕಾರ ಒಬ್ಬೊಬ್ಬನೂ ಕೊಡಬೇಕು.
[18] ಯೆಹೋವ ದೇವರು ನಿಮ್ಮ ಗೋತ್ರಗಳ ಪ್ರಕಾರ ಕೊಡುವ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ನ್ಯಾಯಾಧಿಪತಿಗಳನ್ನೂ, ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು. ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
[19] ನೀವು ನ್ಯಾಯವನ್ನು ಕೆಡಿಸಬಾರದು. ನೀವು ಮುಖದಾಕ್ಷಿಣ್ಯ ನೋಡಬಾರದು, ಇಲ್ಲವೆ ಲಂಚವನ್ನು ತೆಗೆದುಕೊಳ್ಳಬಾರದು, ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ.
[20] ನೀವು ಬದುಕಿ ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಹಾಗೆ ನ್ಯಾಯವನ್ನು ಅಂದರೆ ಕೇವಲ ನ್ಯಾಯವನ್ನೇ ಅನುಸರಿಸಬೇಕು.
[21] ನಿಮ್ಮ ಯೆಹೋವ ದೇವರಿಗಾಗಿ ಕಟ್ಟುವ ಬಲಿಪೀಠದ ಸಮೀಪದಲ್ಲಿ ಮರದಿಂದ ಮಾಡಿದ ಯಾವುದೇ ಅಶೇರ ಸ್ತಂಭವನ್ನು ನಿಲ್ಲಿಸಬಾರದು.
[22] ಯಾವ ವಿಗ್ರಹವನ್ನೂ ನಿಲ್ಲಿಸಬಾರದು. ಇದನ್ನು ನಿನ್ನ ಯೆಹೋವ ದೇವರು ದ್ವೇಷಿಸುತ್ತಾರೆ.