Skip to content
Opens in a new window
Listen to this chapter • 2:51

[1] ಆಗ ಮೋಶೆ ಮೋವಾಬಿನ ಬಯಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿಹೋದನು. ಅಲ್ಲಿ ಯೆಹೋವ ದೇವರು ಅವನಿಗೆ ದೇಶವನ್ನೆಲ್ಲಾ ದಾನಿನವರೆಗಿರುವ ಗಿಲ್ಯಾದನ್ನೂ

[2] ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯೀಮ್, ಮನಸ್ಸೆಯ ದೇಶವನ್ನೂ, ಸಮುದ್ರದ ಕಟ್ಟಕಡೆಯವರೆಗಿರುವ ಸಮಸ್ತ ಯೆಹೂದ ದೇಶವನ್ನೂ,

[3] ನೆಗೆವನ್ನೂ ಖರ್ಜೂರಗಳ ಪಟ್ಟಣವಾದ ಯೆರಿಕೋ ಕಣಿವೆಯ ಬಯಲನ್ನೂ, ಚೋಗರ್ ಊರಿನ ತನಕ ತೋರಿಸಿದರು.

[4] ಅನಂತರ ಯೆಹೋವ ದೇವರು ಅವನಿಗೆ, “ಅಬ್ರಹಾಮನಿಗೂ ಅವನ ಸಂತತಿಗೂ ಕೊಡುತ್ತೇನೆಂದು ನಾನು ಇಸಾಕನಿಗೂ, ಯಾಕೋಬನಿಗೂ ಪ್ರಮಾಣ ಮಾಡಿದ ದೇಶವು ಇದೇ. ಇದನ್ನು ನಿನಗೆ ತೋರಿಸಿದೆನು. ಆದರೆ ನೀನು ಅಲ್ಲಿಗೆ ಸೇರುವುದಿಲ್ಲ,” ಎಂದು ಹೇಳಿದರು.

[5] ಯೆಹೋವ ದೇವರ ಮಾತಿನ ಹಾಗೆ ಅವರ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಮರಣಹೊಂದಿದನು.

[6] ದೇವರು ಅವನನ್ನು ಮೋವಾಬಿನ ದೇಶದ ಬೇತ್ ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೂಣಿಟ್ಟರು. ಆದರೆ ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ಗೊತ್ತಿಲ್ಲ.

[7] ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ. ಅವನ ಬಲ ಕುಂದಿಹೋಗಿರಲಿಲ್ಲ.

[8] ಇಸ್ರಾಯೇಲರು ಮೋವಾಬಿನ ಬಯಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ದುಃಖಿಸಿದರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಸಂತಾಪದ ದಿವಸಗಳು ಮುಗಿದವು.

[9] ಇದಲ್ಲದೆ ನೂನನ ಮಗ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದವನಾಗಿದ್ದನು. ಏಕೆಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರು ಯೆಹೋಶುವನ ಮಾತು ಕೇಳಿದರು.

[10] ಯೆಹೋವ ದೇವರ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದ ಮೋಶೆಯಂಥ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ.

[11] ಈಜಿಪ್ಟಿನಲ್ಲಿ ಫರೋಹನ ಮುಂದೆಯೂ, ಅವನ ಎಲ್ಲಾ ಅಧಿಕಾರಿಗಳ ಮುಂದೆಯೂ, ಜನರ ಮುಂದೆಯೂ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ಮಾಡುವುದಕ್ಕೆ ಯೆಹೋವ ದೇವರು ಮೋಶೆಯನ್ನು ಕಳುಹಿಸಿದ್ದರು.

[12] ಇಸ್ರಾಯೇಲರ ಮುಂದೆ ಮೋಶೆಯು ನಡೆಸಿದ ವಿಶೇಷವಾದ ಕಾರ್ಯಗಳನ್ನು ಮತ್ತು ಭುಜಪರಾಕ್ರಮವನ್ನು ಯಾರೂ ಎಂದೂ ತೋರಿಸಿರಲಿಲ್ಲ ಅಥವಾ ಮಾಡಿರಲ್ಲ.

ಧರ್ಮೋಪದೇಶಕಾಂಡ — Chapters