Skip to content
Opens in a new window
Listen to this chapter • 4:40

[1] ನೀವು ಬದುಕಿ ಅಭಿವೃದ್ಧಿಯಾಗಿ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶಕ್ಕೆ ಹೋಗಿ, ಅದನ್ನು ಸ್ವಾಧೀನ ಮಾಡಿಕೊಳ್ಳುವ ಹಾಗೆ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಲಕ್ಷ್ಯವಿಟ್ಟು ಕೈಗೊಳ್ಳಿರಿ.

[2] ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ತಗ್ಗಿಸಿ, ನೀವು ದೇವರ ಆಜ್ಞೆಗಳನ್ನು ಕಾಪಾಡುವಿರೋ ಇಲ್ಲವೋ ಎಂದು ನಿಮ್ಮ ಹೃದಯವನ್ನು ಪರೀಕ್ಷಿಸುವುದಕ್ಕೆ ನಿಮ್ಮನ್ನು ನಡೆಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಿರಿ.

[3] ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ ಯೆಹೋವ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾನೆಂದು ನಿಮಗೆ ಬೋಧಿಸುವಂತೆ ದೇವರು ನಿಮ್ಮನ್ನು ಹಸಿವೆಯಿಂದ ಬಳಲುವಂತೆ ಮಾಡಿದರು. ನೀವು ತಿಳಿಯದಂಥ ಮತ್ತು ನಿಮ್ಮ ಪಿತೃಗಳು ತಿಳಿಯದಂಥ ಮನ್ನವನ್ನು ನಿಮಗೆ ಉಣ್ಣಲು ಕೊಟ್ಟರು.

[4] ಈ ನಲವತ್ತು ವರ್ಷ ನಿಮ್ಮ ಮೇಲಿರುವ ವಸ್ತ್ರಗಳು ಹಳೆಯದಾಗಲಿಲ್ಲ, ನಿಮ್ಮ ಕಾಲುಗಳು ಬಾತುಹೋಗಲಿಲ್ಲ.

[5] ಇದಲ್ಲದೆ ಒಬ್ಬನು ತನ್ನ ಮಗನನ್ನು ಶಿಸ್ತುಪಡಿಸುವ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಶಿಸ್ತಿನಿಂದ ನಡೆಸುತ್ತಾ ಬಂದರೆಂದು ನಿಮ್ಮ ಹೃದಯದಲ್ಲಿ ತಿಳಿದುಕೊಳ್ಳಿರಿ.

[6] ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಂಡು, ಅವರ ಮಾರ್ಗಗಳಲ್ಲಿ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

[7] ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಒಳ್ಳೆಯ ದೇಶಕ್ಕೆ ಬರಮಾಡುತ್ತಾರೆ. ಅದು ನೀರಿನ ಹಳ್ಳಗಳೂ, ತಗ್ಗುಗಳಲ್ಲಿಯೂ, ಬೆಟ್ಟದಲ್ಲಿಯೂ, ಉಕ್ಕುವ ಬುಗ್ಗೆಗಳೂ ಇರುವ ದೇಶವಾಗಿರುತ್ತದೆ.

[8] ಆ ದೇಶದಲ್ಲಿ ಗೋಧಿಯೂ, ಜವೆಗೋಧಿಯೂ, ದ್ರಾಕ್ಷೆಯೂ, ಅಂಜೂರ ಮರಗಳೂ, ದಾಳಿಂಬೆಗಳೂ ಇರುತ್ತವೆ. ಅದು ಓಲಿವ್ ಎಣ್ಣೆಯೂ, ಜೇನೂ ಉಳ್ಳ ದೇಶವೇ.

[9] ಆ ದೇಶದಲ್ಲಿ ನಿಮಗೆ ಆಹಾರಕ್ಕೆ ಕೊರತೆ ಇರುವುದಿಲ್ಲ. ಅಲ್ಲಿ ಯಾವುದರ ಕೊರತೆ ನಿಮಗೆ ಆಗದು. ಅದರ ಕಲ್ಲುಗಳಲ್ಲಿ ಕಬ್ಬಿಣವನ್ನೂ, ಅದರ ಬೆಟ್ಟಗಳಲ್ಲಿ ತಾಮ್ರದ ಗಣಿಗಳನ್ನೂ ಅಗೆಯಬಹುದು.

[10] ನೀವು ತಿಂದು ತೃಪ್ತಿ ಹೊಂದಿದಾಗ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಒಳ್ಳೆಯ ದೇಶದಲ್ಲಿ ಅವರನ್ನು ಸ್ತುತಿಸಬೇಕು.

[11] ನಾನು ಈ ಹೊತ್ತು ನಿಮಗೆ ಕೊಡುವ ದೇವರ ಆಜ್ಞೆಗಳನ್ನೂ ನಿಯಮಗಳನ್ನೂ ತೀರ್ಪುಗಳನ್ನೂ ಕೈಕೊಳ್ಳದವರೂ, ಯೆಹೋವ ದೇವರನ್ನು ಮರೆಯದವರೂ ಆಗದಂತೆ ನೋಡಿಕೊಳ್ಳಿರಿ.

[12] ನೀವು ತಿಂದು ತೃಪ್ತಿಹೊಂದಿ, ಒಳ್ಳೆಯ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ,

[13] ನಿಮ್ಮ ಪಶು ಕುರಿಗಳು ಹೆಚ್ಚಿದಾಗಲೂ, ಬೆಳ್ಳಿಬಂಗಾರ ನಿಮಗೆ ಹೆಚ್ಚಿದಾಗಲೂ, ನಿಮಗಿರುವ ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ,

[14] ನಿಮ್ಮ ಹೃದಯವು ಗರ್ವಗೊಂಡು, ನಿಮ್ಮನ್ನು ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ ನಿಮ್ಮ ದೇವರಾದ ಯೆಹೋವ ದೇವರನ್ನೇ ಮರೆತುಬಿಡಬೇಡಿರಿ.

[15] ದೇವರು ಅಗ್ನಿಸರ್ಪಗಳೂ, ಚೇಳುಗಳೂ ತುಂಬಿದ ಮತ್ತು ನೀರಿಲ್ಲದ ಆ ಭಯಂಕರವಾದ ವಿಶಾಲ ಮರುಭೂಮಿಯಲ್ಲಿ ನಿಮ್ಮನ್ನು ನಡೆಸಿ, ಗಟ್ಟಿಯಾದ ಬಂಡೆಯೊಳಗಿಂದ ನಿಮಗೆ ನೀರು ಬರಮಾಡಿದರು.

[16] ನಿಮ್ಮನ್ನು ದೀನತ್ವಕೆ ಒಳಪಡಿಸಿ, ಪರೀಕ್ಷಿಸಿದ ನಂತರ, ಕಡೆಯಲ್ಲಿ ನಿಮಗೆ ಒಳ್ಳೆಯದನ್ನು ಮಾಡುವಂತೆ ನಿಮ್ಮ ಪಿತೃಗಳು ಅರಿಯದ ಮನ್ನವನ್ನು ಮರುಭೂಮಿಯಲ್ಲಿ ನಿಮಗೆ ಪೋಷಿಸಿದರು.

[17] ನಿಮ್ಮ ದೇವರಾದ ಯೆಹೋವ ದೇವರನ್ನು ಮರೆತು, “ನಮ್ಮ ಹಸ್ತ ಬಲ ಸಾಮರ್ಥ್ಯವೇ ನಮಗೆ ಈ ಆಸ್ತಿಯನ್ನು ಸಂಪಾದಿಸಿತು,” ಎಂದು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೊಳ್ಳಿರಿ.

[18] ನಿಮ್ಮ ದೇವರಾದ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರೇ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸುವಂತೆ ಇಂದು ನೀವು ಇಷ್ಟು ಆಸ್ತಿಯನ್ನು ಸಂಪಾದಿಸುವ ಸಾಮರ್ಥ್ಯವನ್ನು ನಿಮಗೆ ಕೊಟ್ಟಿದ್ದಾರೆ.

[19] ಒಂದು ವೇಳೆ ನೀವು ನಿಮ್ಮ ಯೆಹೋವ ದೇವರನ್ನು ಮರೆತು, ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ, ನಿಶ್ಚಯವಾಗಿ ನಾಶವಾಗುವಿರೆಂದು ನಿಮಗೆ ವಿರೋಧವಾಗಿ ಈ ಹೊತ್ತು ಸಾಕ್ಷಿ ಹೇಳುತ್ತೇನೆ.

[20] ನೀವು ನಿಮ್ಮ ಯೆಹೋವ ದೇವರ ಮಾತಿಗೆ ವಿಧೇಯರಾಗದ ಕಾರಣ ಅವರು ನಿಮ್ಮ ಮುಂದೆ ನಾಶಮಾಡುವ ಇತರ ಜನಾಂಗಗಳ ಹಾಗೆಯೇ ನೀವೂ ನಾಶವಾಗಿಹೋಗುವಿರಿ.

ಧರ್ಮೋಪದೇಶಕಾಂಡ — Chapters