[1] ಯಾವುದೇ ಊನತೆ ಅಥವಾ ಅವಲಕ್ಷಣವುಳ್ಳ ಹೋರಿಯನ್ನಾಗಲಿ, ಕುರಿಯನ್ನಾಗಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು. ಏಕೆಂದರೆ ಅದು ನಿಮ್ಮ ದೇವರಾದ ಯೆಹೋವ ದೇವರಿಗೆ ಅಸಹ್ಯವೇ.
[2] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಯಾವುದೇ ಊರಿನಲ್ಲಿ, ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಯೆಹೋವ ದೇವರ ಒಡಂಬಡಿಕೆಯನ್ನು ಮೀರಿ ಅವರ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ನಡೆಸಲು ಸಾಧ್ಯ.
[3] ಅಂದರೆ, ಸೂರ್ಯನನ್ನಾಗಲಿ, ಚಂದ್ರನನ್ನಾಗಲಿ, ಆಕಾಶದ ನಕ್ಷತ್ರಗಳನ್ನಾಗಲಿ, ಬೇರೆ ದೇವರುಗಳನ್ನಾಗಲಿ, ನನ್ನ ಆಜ್ಞೆಗೆ ವಿರೋಧವಾಗಿ ಅವುಗಳನ್ನು ಆರಾಧಿಸಿದರೆ,
[4] ಆ ಸಂಗತಿಯನ್ನು ನೀವು ಕೇಳಿದಾಗ ಅದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಆಗ ಇಸ್ರಾಯೇಲರಲ್ಲಿ ಯಾರಿಂದಾದರೂ ಆ ಅಸಹ್ಯಕರವಾದ ಕಾರ್ಯವು ನಡೆದದ್ದು ಸತ್ಯವೆಂದು ತಿಳಿದುಬಂದರೆ,
[5] ಆಗ ನೀವು ಆ ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಊರ ಹೊರಗೆ ತಂದು, ಅವರು ಸಾಯುವಂತೆ ಅವರ ಮೇಲೆ ಕಲ್ಲೆಸೆಯಬೇಕು.
[6] ಒಬ್ಬನ ಸಾಕ್ಷಿಯ ಮಾತಿನಿಂದ ಮಾತ್ರ ಯಾರಿಗೂ ಮರಣಶಿಕ್ಷೆಯಾಗಬಾರದು. ಮರಣಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಸಾಕ್ಷಿಗಳು ಇಲ್ಲವೆ ಮೂವರು ಸಾಕ್ಷಿಗಳು ಬೇಕು.
[7] ಅವನನ್ನು ಕೊಲ್ಲುವ ಮೊದಲು ಸಾಕ್ಷಿಗಳಾದ ಎಲ್ಲಾ ಜನರು ತಮ್ಮ ಕೈಗಳನ್ನು ಅವನ ಮೇಲೆ ಇಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
[8] ನಿಮ್ಮ ಊರುಗಳಲ್ಲಿ ಉಂಟಾದ ವಿವಾದಗಳ ವಿಷಯವಾಗಿ ಅಂದರೆ, ಕೊಲೆಯ ವ್ಯಾಜ್ಯವಾಗಲಿ, ವಾದಿ ಪ್ರತಿವಾದ ವ್ಯಾಜ್ಯವಾಗಲಿ, ಹೊಡೆದಾಟದ ವ್ಯಾಜ್ಯವಾಗಲಿ, ನಿಮಗೆ ನ್ಯಾಯತೀರಿಸುವುದು ಕಷ್ಟವಾದರೆ, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.
[9] ನೀವು ಯಾಜಕರಾದ ಲೇವಿಯರ ಬಳಿಗೂ, ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು. ಅವರು ನಿಮಗೆ ಆ ತೀರ್ಪನ್ನು ತಿಳಿಸುವರು.
[10] ಅವರು ನಿಮಗೆ ಯೆಹೋವ ದೇವರು ಆಯ್ದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀವು ಮಾಡಿ, ಅವರು ನಿಮಗೆ ಬೋಧಿಸುವುದನ್ನೇ ನೀವು ಕೈಗೊಂಡು ನಡೆಯಬೇಕು.
[11] ಅವರು ನಿಮಗೆ ಬೋಧಿಸುವ ತೀರ್ಪಿನ ಪ್ರಕಾರವೂ, ಅವರು ನಿಮಗೆ ಹೇಳುವ ನ್ಯಾಯದ ಪ್ರಕಾರವೂ ನೀವು ಮಾಡಬೇಕು. ಅವರು ನಿಮಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ತಿರುಗಬಾರದು.
[12] ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸೇವೆ ಮಾಡುವುದಕ್ಕೆ ನಿಂತ ಯಾಜಕನ ಮಾತನ್ನಾದರೂ, ನ್ಯಾಯಾಧಿಪತಿಯ ಮಾತನ್ನಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವುದಾದರೆ, ಆ ಮನುಷ್ಯನು ಸಾಯಲೇಬೇಕು. ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
[13] ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಹಾಗೆ ಮಾಡಲಾರರು.
[14] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದು, ಅದನ್ನು ಸ್ವಾಧೀನಪಡಿಸಿಕೊಂಡು, ಅದರಲ್ಲಿ ವಾಸವಾಗಿರುವಾಗ, “ನಮ್ಮ ಸುತ್ತಲಿರುವ ಎಲ್ಲಾ ಜನಾಂಗಗಳ ಹಾಗೆ ನಮಗೆ ಅರಸನನ್ನು ಇಟ್ಟುಕೊಳ್ಳುತ್ತೇವೆ,” ಎಂದು ಹೇಳಿಕೊಳ್ಳಬಹುದು.
[15] ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವವನನ್ನು ನಿಮಗೆ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಇಸ್ರಾಯೇಲ್ ಸಹೋದರರಲ್ಲಿಂದ ಒಬ್ಬನನ್ನು ನಿಮ್ಮ ಅರಸನನ್ನಾಗಿ ನೇಮಿಸಿಕೊಳ್ಳಬೇಕು. ನಿಮ್ಮ ಸಹೋದರನಲ್ಲದ ಅನ್ಯದೇಶದವನನ್ನು ನಿಮ್ಮ ಮೇಲೆ ನೇಮಿಸಿಕೊಳ್ಳಬಾರದು.
[16] ಅರಸನು ತನಗಾಗಿ ಕುದುರೆಗಳನ್ನು ಹೆಚ್ಚಿಸಿಕೊಳ್ಳಬಾರದು. ಕುದುರೆಗಳನ್ನು ಹೆಚ್ಚಿಸಿಕೊಳ್ಳುವ ಹಾಗೆ ಜನರನ್ನು ಈಜಿಪ್ಟ್ ದೇಶಕ್ಕೆ ಕಳುಹಿಸಬಾರದು. “ಆ ಮಾರ್ಗವಾಗಿ ನೀವು ಇನ್ನು ತಿರುಗಿ ಹೋಗಬಾರದು,” ಎಂದು ಯೆಹೋವ ದೇವರು ನಿಮಗೆ ಹೇಳಿದ್ದಾರೆ.
[17] ಅರಸನು ದಾರಿತಪ್ಪಿ ಹೋಗದಂತೆ ತನಗೆ ಹೆಚ್ಚು ಜನ ಹೆಂಡತಿಯರನ್ನು ಮದುವೆ ಮಾಡಿಕೊಳ್ಳಬಾರದು. ಅವನು ತನಗಾಗಿ ಹೆಚ್ಚು ಬೆಳ್ಳಿಬಂಗಾರವನ್ನು ಕೂಡಿಸಿಟ್ಟುಕೊಳ್ಳಬಾರದು.
[18] ಅರಸನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆ ಮಾಡುವ ಲೇವಿಯರ ವಶದಲ್ಲಿ ಇರುವ ಈ ದೇವರ ನಿಯಮ ಗ್ರಂಥದ ಒಂದು ಪ್ರತಿಯನ್ನು ತನಗಾಗಿ ಪುಸ್ತಕ ರೂಪವಾಗಿ ಬರೆಯಿಸಿಕೊಳ್ಳಬೇಕು.
[19] ಅವನು ಗರ್ವದಿಂದ ತನ್ನ ಸ್ವದೇಶದವರನ್ನು ಹೀಯಾಳಿಸಬಾರದು. ಯೆಹೋವ ದೇವರ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳಬಾರದು. ದೇವರಾದ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವನಾಗಿರಬೇಕು. ಈ ದೇವರ ನಿಯಮದ ಎಲ್ಲಾ ವಾಕ್ಯಗಳನ್ನು, ತೀರ್ಪುಗಳನ್ನು ಅನುಸರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಈ ಕಾರಣ ಈ ಗ್ರಂಥ ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನವೆಲ್ಲಾ ಇದನ್ನು ಓದಿಕೊಳ್ಳುತ್ತಾ ಇರಬೇಕು.
[20] ಹೀಗೆ ಮಾಡಿದರೆ, ಅವನೂ, ಅವನ ಸಂತತಿಯವರೂ ದೀರ್ಘಕಾಲ ಇಸ್ರಾಯೇಲರ ಮೇಲೆ ರಾಜ್ಯಾಧಿಕಾರ ನಡೆಸುವರು.