[1] ಸ್ವದೇಶದವನ ಎತ್ತಾಗಲಿ, ಕುರಿಯಾಗಲಿ ದಾರಿತಪ್ಪಿ ಹೋಗಿರುವುದನ್ನು ನೀವು ಕಂಡರೆ, ಕಾಣದವರಂತೆ ಅದನ್ನು ಬಿಟ್ಟುಹೋಗಬಾರದು. ಅವನ ಬಳಿಗೆ ಅಟ್ಟಿಕೊಂಡು ಹೋಗಿ ಕೊಡಲೇಬೇಕು.
[2] ಅವನು ನಿಮಗೆ ದೂರ ಆಗಿದ್ದರೆ, ಇಲ್ಲವೆ ಅವನು ಯಾರು ಎಂದು ನಿಮಗೆ ತಿಳಿಯದೆ ಹೋದರೆ, ಆ ಪ್ರಾಣಿಯನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ, ನೀವು ಅದನ್ನು ಅವನಿಗೆ ಮರಳಿ ಕೊಡಬೇಕು.
[3] ಅವನ ಕತ್ತೆಯಾಗಲಿ, ಅವನ ವಸ್ತ್ರವಾಗಲಿ, ನಿನ್ನ ಸಹೋದರನು ಕಳೆದುಕೊಂಡ ಯಾವ ವಸ್ತುಗಳೇ ಆಗಲಿ ನೀನು ಕಂಡುಕೊಂಡರೆ, ಹಾಗೆಯೇ ಮಾಡಬೇಕು. ನೀನು ಕಾಣದವರಂತೆ ಇರಬಾರದು.
[4] ನಿನ್ನ ಸಹೋದರನ ಕತ್ತೆಯಾಗಲಿ, ಎತ್ತಾಗಲಿ, ಮಾರ್ಗದಲ್ಲಿ ಬಿದ್ದಿರುವುದನ್ನು ನೋಡಿದರೆ ಅಲಕ್ಷ್ಯ ಮಾಡಬೇಡ. ಅದನ್ನು ಎಬ್ಬಿಸಲು ಅವನಿಗೆ ಸಹಾಯಮಾಡಬೇಕು.
[5] ಸ್ತ್ರೀಯು ಪುರುಷನ ವಸ್ತ್ರ ಉಟ್ಟುಕೊಳ್ಳಬಾರದು, ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು. ಏಕೆಂದರೆ ಹೀಗೆ ಮಾಡುವವರೆಲ್ಲ ಯೆಹೋವ ದೇವರಿಗೆ ಅಸಹ್ಯ.
[6] ನೀನು ದಾರಿಯಲ್ಲಿ ಯಾವುದಾದರೊಂದು ಗಿಡದಲ್ಲಾಗಲಿ, ನೆಲದ ಮೇಲಾಗಲಿ, ನಿನಗೆ ಮರಿಗಳುಳ್ಳ ಇಲ್ಲವೆ ಮೊಟ್ಟೆಗಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ, ಮರಿಗಳ ಮೇಲೆಯಾಗಲಿ, ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತುಕೊಂಡಿದ್ದರೆ, ಮರಿಗಳ ಸಂಗಡ ತಾಯಿಯನ್ನು ತೆಗೆದುಕೊಳ್ಳಬಾರದು.
[7] ನಿನಗೆ ಒಳ್ಳೆಯದಾಗುವ ಹಾಗೆಯೂ ಬಹುಕಾಲ ಬಾಳುವ ಹಾಗೆಯೂ ಹೇಗಾದರೂ ತಾಯಿಯನ್ನು ಕಳುಹಿಸಿಬಿಟ್ಟು, ಮರಿಗಳನ್ನು ತೆಗೆದುಕೊಳ್ಳಬಹುದು.
[8] ನೀನು ಹೊಸ ಮನೆಯನ್ನು ಕಟ್ಟಿದಾಗ, ಯಾರೂ ಅದರ ಮೇಲಿನಿಂದ ಬಿದ್ದು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಕೈಗೋಡೆಯನ್ನು ಕಟ್ಟಬೇಕು.
[9] ನಿನ್ನ ದ್ರಾಕ್ಷಿತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜವೂ, ಬಿತ್ತಿದ ಬೀಜದ ಪೈರೂ, ದ್ರಾಕ್ಷಿತೋಟದ ಹುಟ್ಟುವಳಿಯೂ ಅಶುದ್ಧವಾಗುವುದು.
[10] ಎತ್ತನ್ನೂ, ಕತ್ತೆಯನ್ನೂ ಜೊತೆ ಮಾಡಿ, ನೇಗಿಲಿಗೆ ಕಟ್ಟಬಾರದು.
[11] ನಾರು ಮತ್ತು ಉಣ್ಣೆ ಎರಡೂ ಕೂಡಿರುವ ಬಟ್ಟೆಯನ್ನೂ ಧರಿಸಬಾರದು.
[12] ನೀನು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು.
[13] ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ,
[14] ಅವಳ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ, “ನಾನು ಇವಳನ್ನು ಮದುವೆ ಮಾಡಿಕೊಂಡೆ, ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು,” ಎಂದು ಹೇಳಿ ಅವಳ ಮೇಲೆ ಆಪಾದನೆ ತರಬಹುದು.
[15] ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು, ಎಂಬುದಕ್ಕೆ ಆಧಾರವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
[16] ಆಮೇಲೆ ಹುಡುಗಿಯ ತಂದೆಯು ಹಿರಿಯರಿಗೆ ಹೇಳತಕ್ಕದ್ದೇನೆಂದರೆ, “ನನ್ನ ಮಗಳನ್ನು ಈ ಮನುಷ್ಯನಿಗೆ ಹೆಂಡತಿಯಾಗಿ ಕೊಟ್ಟಿದ್ದೇನೆ, ಅವನು ಅವಳನ್ನು ದ್ವೇಷಿಸಿ,
[17] ಅವನು, ‘ನಿನ್ನ ಮಗಳು ಕನ್ನಿಕೆಯಲ್ಲವೆಂದು ಕಂಡೆನೆಂಬುದಾಗಿ, ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟಿದ್ದಾನೆ.’ ಆದರೂ ನನ್ನ ಮಗಳ ಕನ್ಯಾಲಕ್ಷಣಕ್ಕೆ ಇದೇ ಪ್ರಮಾಣ,” ಎಂದು ಹೇಳಿ, ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
[18] ಆಗ ಪಟ್ಟಣದ ಹಿರಿಯರು ಆ ಮನುಷ್ಯನನ್ನು ತೆಗೆದುಕೊಂಡು ಬಂದು ಅವನನ್ನು ಶಿಕ್ಷಿಸಬೇಕು.
[19] ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ನಿಕೆಯ ಹೆಸರನ್ನು ಕೆಡಿಸಿದ್ದರಿಂದ, ಅವನಿಗೆ ನೂರು ಬೆಳ್ಳಿ ಶೆಕೆಲ್‌ಗಳ ದಂಡವನ್ನು ವಿಧಿಸಿ, ಅದನ್ನು ಆ ಹುಡುಗಿಯ ತಂದೆಗೆ ಕೊಡಬೇಕು. ಇದಲ್ಲದೆ ಅವಳು ಅವನಿಗೆ ಹೆಂಡತಿಯಾಗಬೇಕು, ಅವನು ಬದುಕಿರುವವರೆಗೆ ಅವಳನ್ನು ಪರಿತ್ಯಾಗಮಾಡಬಾರದು.
[20] ಆದರೆ ಆ ಮಾತು ಸತ್ಯವಾಗಿದ್ದರೆ, ಆ ಹುಡುಗಿಯಲ್ಲಿ ಕನ್ಯಾಲಕ್ಷಣ ಕಾಣದೆ ಇದ್ದರೆ,
[21] ಆ ಹುಡುಗಿಯನ್ನು ಅವಳ ತಂದೆಯ ಮನೆ ಬಾಗಿಲಿಗೆ ತರಬೇಕು. ಅವಳ ಪಟ್ಟಣದ ಮನುಷ್ಯರು ಅವಳನ್ನು ಸಾಯುವ ಹಾಗೆ ಕಲ್ಲೆಸೆಯಬೇಕು. ಏಕೆಂದರೆ ಅವಳು ತಂದೆಯ ಮನೆಯಲ್ಲಿರುವಾಗಲೇ ಅಕ್ರಮವಾಗಿ ನಡೆದು, ಇಸ್ರಾಯೇಲಿನಲ್ಲಿ ಸೂಳೆತನ ಮಾಡಿದ್ದಾಳೆ. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
[22] ಒಬ್ಬ ಮನುಷ್ಯನು ಪರನ ಹೆಂಡತಿಯೊಡನೆ ಮಲಗಿಕೊಂಡವನಾಗಿ ಸಿಕ್ಕಿಬಿದ್ದರೆ, ಆ ಸ್ತ್ರೀಯ ಸಂಗಡ ಮಲಗಿಕೊಂಡ ಮನುಷ್ಯನೂ ಆ ಸ್ತ್ರೀಯೂ ಇಬ್ಬರೂ ಸಾಯಬೇಕು. ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
[23] ಕನ್ನಿಕೆಯಾದ ಒಬ್ಬ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯ ಮಾಡಿರಲಾಗಿ, ಮತ್ತೊಬ್ಬ ಮನುಷ್ಯನು ಆ ಪಟ್ಟಣದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ,
[24] ಅವರಿಬ್ಬರನ್ನೂ ಆ ಪಟ್ಟಣದ ಬಾಗಿಲಿನ ಹೊರಗೆ ತಂದು, ಅವರು ಸಾಯುವ ಹಾಗೆ ಕಲ್ಲೆಸೆಯಬೇಕು. ಆ ಹುಡುಗಿಯು ಪಟ್ಟಣದಲ್ಲಿ ಇದ್ದರೂ, ಕೂಗದೆ ಇದ್ದದ್ದರಿಂದಲೂ, ಆ ಮನುಷ್ಯನು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.
[25] ಆದರೆ ಆ ಮನುಷ್ಯನು ನಿಶ್ಚಯಮಾಡಿದ ಹುಡುಗಿಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ, ಅವಳ ಸಂಗಡ ಮಲಗಿದರೆ, ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬಾರದು.
[26] ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
[27] ಏಕೆಂದರೆ ಅವನು ಹೊಲದಲ್ಲಿ ಅವಳನ್ನು ಕಂಡನು, ನಿಶ್ಚಯಮಾಡಿದ ಆ ಹುಡುಗಿ ಕೂಗಿದಳು. ಆದರೆ ರಕ್ಷಿಸುವವನು ಅವಳಿಗೆ ಯಾರೂ ಇರಲಿಲ್ಲ.
[28] ಒಬ್ಬ ಮನುಷ್ಯನು ನಿಶ್ಚಯ ಮಾಡದಿರುವ ಕನ್ಯೆಯನ್ನು ಕಂಡು, ಅವಳನ್ನು ಹಿಡಿದು, ಅವಳ ಸಂಗಡ ಮಲಗಿ ಸಿಕ್ಕಿಬಿದ್ದರೆ,
[29] ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿ ಶೆಕೆಲ್‌ಗಳನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು, ಏಕೆಂದರೆ ಅವನು ಅವಳನ್ನು ಕೆಡಿಸಿದ್ದರಿಂದ, ಬದುಕುವ ದಿವಸಗಳೆಲ್ಲಾ ಅವಳನ್ನು ಪರಿತ್ಯಾಗಮಾಡಬಾರದು.
[30] ಯಾರೂ ತನ್ನ ತಂದೆಯ ಹೆಂಡತಿಯನ್ನು ಮದುವೆ ಮಾಡಿಕೊಳ್ಳಬಾರದು. ತನ್ನ ತಂದೆಯ ಹಾಸಿಗೆಯನ್ನು ಅಗೌರವಿಸಬಾರದು.