[1] ಆ ಕಾಲದಲ್ಲಿ ಯೆಹೋವ ದೇವರು ನನಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ನೀನು ಕೆತ್ತಿಕೊಂಡು, ಬೆಟ್ಟವನ್ನೇರಿ ನನ್ನ ಬಳಿಗೆ ಬಾ. ಒಂದು ಮರದ ಮಂಜೂಷವನ್ನು ಮಾಡಿಕೊಳ್ಳಬೇಕು.
[2] ಆಗ ನೀನು ಒಡೆದ ಆ ಮೊದಲಿನ ಹಲಗೆಗಳ ಮೇಲಿದ್ದ ಮಾತುಗಳನ್ನು ಈ ಹಲಗೆಗಳ ಮೇಲೆ ಬರೆಯುವೆನು. ಆಮೇಲೆ ನೀನು ಅವುಗಳನ್ನು ಮಂಜೂಷದಲ್ಲಿ ಇಡಬೇಕು,” ಎಂದು ಹೇಳಿದರು.
[3] ಈ ಪ್ರಕಾರ ನಾನು ಜಾಲಿ ಮರದ ಮಂಜೂಷವನ್ನು ಮಾಡಿ, ಕಲ್ಲಿನ ಎರಡು ಹಲಗೆಗಳನ್ನು ಮುಂಚಿನವುಗಳಂತೆ ಕೆತ್ತಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟವನ್ನೇರಿದೆನು.
[4] ಆ ಹಲಗೆಗಳ ಮೇಲೆ ಯೆಹೋವ ದೇವರು ಮುಂಚೆ ಬರೆದಿದ್ದ ಪ್ರಕಾರ ಬರೆದರು. ಅವರು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿವಸದಲ್ಲಿ ಹೇಳಿದ ಆ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟರು.
[5] ತರುವಾಯ ನಾನು ಬೆಟ್ಟದಿಂದ ಇಳಿದುಬಂದು, ಆ ಹಲಗೆಗಳನ್ನು ಯೆಹೋವ ದೇವರು ನನಗೆ ಆಜ್ಞಾಪಿಸಿದ ಹಾಗೆ ನಾನು ಮಾಡಿದ ಮಂಜೂಷದಲ್ಲಿ ಇಟ್ಟೆನು. ಅವು ಅಲ್ಲಿಯೇ ಇರುತ್ತವೆ.
[6] ಇಸ್ರಾಯೇಲರು ಯಾಕಾನನ ಮಕ್ಕಳ ಬಾವಿಗಳ ಬಳಿಯಿಂದ ಬೇರೋತದಿಂದ ಮೋಸೇರಕ್ಕೆ ಹೊರಟಾಗ, ಆರೋನನು ಅಲ್ಲಿ ಮರಣಹೊಂದಿದನು. ಅಲ್ಲೇ ಅವನನ್ನು ಹೂಳಿಟ್ಟೆವು. ಅವನ ಮಗ ಎಲಿಯಾಜರನು ಅವನ ಬದಲಿಗೆ ಯಾಜಕನಾದನು.
[7] ಅಲ್ಲಿಂದ ಅವರು ಗುದ್ಗೋದಕ್ಕೂ, ಗುದ್ಗೋದದಿಂದ ನೀರಿನ ಪ್ರವಾಹಗಳುಳ್ಳ ದೇಶವಾದ ಯೊಟ್ಬಾತಕ್ಕೂ ಪ್ರಯಾಣಮಾಡಿದರು.
[8] ಆ ಕಾಲದಲ್ಲಿ ಯೆಹೋವ ದೇವರು ಲೇವಿ ಗೋತ್ರವನ್ನು ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ಯೆಹೋವ ದೇವರ ಮುಂದೆ ನಿಂತುಕೊಂಡು ಅವರಿಗೆ ಸೇವೆಮಾಡಿ, ಅವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದರು. ಅವರು ಈ ದಿನದವರೆಗೂ ಆ ಕೆಲಸವನ್ನು ನಡೆಸುತ್ತಿದ್ದಾರೆ.
[9] ಆದ್ದರಿಂದ ಲೇವಿಯರಿಗೆ ಅವರ ಸಹೋದರರ ಸಂಗಡ ಸ್ವಂತವಾದ ಭೂಸ್ವಾಸ್ತ್ಯವು ದೊರೆಯಲಿಲ್ಲ. ನಿಮ್ಮ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದಂತೆ ಯೆಹೋವ ದೇವರೇ ಅವರ ಸೊತ್ತು.
[10] ಇದಲ್ಲದೆ ನಾನು ಮೊದಲಿನಂತೆ ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿ ನಿಂತೆನು. ಯೆಹೋವ ದೇವರು ಆ ಕಾಲದಲ್ಲಿ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
[11] ಯೆಹೋವ ದೇವರು ನನಗೆ, “ಜನರ ಮುಂದೆ ಹೋಗು, ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ದೇಶವನ್ನು ಇವರು ಸೇರಿ ಸ್ವಾಧೀನಮಾಡಿಕೊಳ್ಳಲಿ,” ಎಂದು ಆಜ್ಞಾಪಿಸಿದರು.
[12] ಈಗ ಇಸ್ರಾಯೇಲರೇ, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದುಕೊಂಡು, ಅವರನ್ನು ಪ್ರೀತಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ.
[13] ನಾನು ಈ ಹೊತ್ತು ನಿಮ್ಮ ಮೇಲಿಗಾಗಿ ನಿಮಗೆ ಆಜ್ಞಾಪಿಸುವ ಯೆಹೋವ ದೇವರ ಆಜ್ಞೆಗಳನ್ನೂ ಅವರ ನಿಮಯಗಳನ್ನೂ ಕಾಪಾಡುವುದೇ ಹೊರತು, ಮತ್ತೇನೂ ನಮ್ಮ ದೇವರಾಗಿರುವ ಯೆಹೋವ ದೇವರು ನಿಮ್ಮಿಂದ ಕೇಳುತ್ತಾರೆ?
[14] ಆಕಾಶವೂ ಉನ್ನತಾಕಾಶವೂ ಭೂಮಿಯೂ ಅದರಲ್ಲಿರುವಂಥಾದ್ದೆಲ್ಲವೂ ನಿಮ್ಮ ದೇವರಾಗಿರುವ ಯೆಹೋವ ದೇವರವುಗಳೇ.
[15] ನಿಮ್ಮ ಪಿತೃಗಳ ಮೇಲೆ ಯೆಹೋವ ದೇವರು ತಾವೇ ಮನಸ್ಸಿಟ್ಟು, ಅವರನ್ನು ಪ್ರೀತಿಸಿ, ಅವರ ಸಂತಾನವಾಗಿರುವ ನಿಮ್ಮನ್ನು ಈ ಹೊತ್ತು ಇರುವ ಪ್ರಕಾರ ಎಲ್ಲಾ ಜನರೊಳಗಿಂದ ಆರಿಸಿಕೊಂಡರು.
[16] ಹೀಗಿರುವುದರಿಂದ ನಿಮ್ಮ ಹೃದಯದ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಹಟಮಾರಿಗಳಾಗಿರಬೇಡಿರಿ.
[17] ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ದೇವರುಗಳ ದೇವರು, ಕರ್ತರ ಕರ್ತರು, ದೇವಾಧಿದೇವರು, ಪರಾಕ್ರಮಿಯೂ, ಭಯಭಕ್ತಿಗೆ ಪಾತ್ರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವುದಿಲ್ಲ. ಲಂಚ ತೆಗೆದುಕೊಳ್ಳುವುದಿಲ್ಲ.
[18] ಅವರು ತಂದೆ ಇಲ್ಲದವರಿಗೂ, ವಿಧವೆಯರಿಗೂ ನ್ಯಾಯ ದೊರಕಿಸುತ್ತಾರೆ. ಪರದೇಶಿಯರನ್ನು ಪ್ರೀತಿಸಿ ಅನ್ನ, ವಸ್ತ್ರ ಕೊಡುತ್ತಾರೆ.
[19] ಹೀಗಿರುವುದರಿಂದ ನೀವು ಪರದೇಶಿಯರನ್ನು ಪ್ರೀತಿಸಿರಿ. ಏಕೆಂದರೆ ನೀವು ಈಜಿಪ್ಟಿನಲ್ಲಿ ಪರದೇಶಿಗಳಾಗಿದ್ದೀರಿ.
[20] ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡಬೇಕು. ಅವರ ಸೇವೆಮಾಡಿ ಅವರಿಗೆ ಅಂಟಿಕೊಂಡು, ಅವರ ಹೆಸರಿನಲ್ಲಿ ಪ್ರಮಾಣಮಾಡಬೇಕು.
[21] ನೀವು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿಮಗೆ ಮಾಡಿದ ಅವರೇ ನಿಮ್ಮ ಸ್ತೋತ್ರವು. ಅವರೇ ನಿಮ್ಮ ದೇವರು.
[22] ಎಪ್ಪತ್ತು ಮಂದಿಯಾಗಿ ನಿಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡಿದ್ದಾರೆ.