Skip to content
Opens in a new window
Listen to this chapter • 7:28

[1] ದೇವರ ಮನುಷ್ಯನಾದ ಮೋಶೆಯು ಮರಣ ಹೊಂದುವದಕ್ಕಿಂತ ಮುಂಚೆ ಇಸ್ರಾಯೇಲರಿಗೆ ಕೊಟ್ಟ ಆಶೀರ್ವಾದ:

[2] “ಯೆಹೋವ ದೇವರು ಸೀನಾಯಿ ಬೆಟ್ಟದಿಂದ ಬಂದು, ಸೇಯೀರಿನಿಂದ ಅವರ ಮೇಲೆ ಉದಯಿಸಿದರು. ಪಾರಾನ್ ಬೆಟ್ಟದಿಂದ ಪ್ರಕಾಶಿಸಿದರು. ದೇವರು ದಕ್ಷಿಣದ ತಮ್ಮ ಪರ್ವತ ಶ್ರೇಣಿಯಿಂದ ಲಕ್ಷಾಂತರ ಪರಿಶುದ್ಧರ ಸಂಗಡ ಬಂದರು.

[3] ನಿಶ್ಚಯವಾಗಿ ನೀವು ಜನರನ್ನು ಪ್ರೀತಿಸುತ್ತೀರಿ. ಪರಿಶುದ್ಧ ಜನರು ನಿಮ್ಮ ಆಶ್ರಯದಲ್ಲಿಯೇ ಇದ್ದಾರೆ. ನಿಮ್ಮ ಪಾದಗಳಿಗೆ ಎಲ್ಲರೂ ಎರಗುವರು. ನಿಮ್ಮಿಂದಲೇ ಬೋಧನೆ ಪಡೆಯುವರು.

[4] ಯಾಕೋಬನ ಸಂತತಿಯವರಾದ ನಮಗೆ, ಮೋಶೆಯು ನಿಯಮವನ್ನು ಸೊತ್ತಾಗಿ ಕೊಟ್ಟಿದ್ದಾನೆ.

[5] ಇಸ್ರಾಯೇಲರ ಮುಖ್ಯಸ್ಥರೂ ಅವರ ಗೋತ್ರಗಳು ಒಟ್ಟಾಗಿ ಸೇರಿಬಂದಾಗ, ದೇವರೇ ಯೆಶುರೂನಿನ ಮೇಲೆ ಅರಸನಾಗಿದ್ದರು.

[6] “ರೂಬೇನನು ಸಾಯದೆ ಬದುಕಲಿ. ಅವನ ಜನರು ಕಡಿಮೆಯಾಗದಿರಲಿ.”

[7] ಯೆಹೂದನ ಬಗ್ಗೆ ಮೋಶೆ ಹೇಳಿದ ಮಾತಿದು: “ಯೆಹೋವ ದೇವರೇ, ಯೆಹೂದನ ಮೊರೆಯನ್ನಾಲಿಸಿ, ಅವರನ್ನು ಅವರ ಬಂಧುಗಳೊಡನೆ ಸೇರಿಸಿರಿ. ಅವನ ಸ್ವಂತ ಕೈಗಳೇ ತನ್ನ ಹಕ್ಕು ಬಾಧ್ಯತೆಗಳನ್ನು ಕಾದಿರಿಸುತ್ತವೆ. ಅವನ ಶತ್ರುಗಳಿಂದ ಅವನನ್ನು ತಪ್ಪಿಸಿರಿ.”

[8] ಲೇವಿ ಕುಲದ ವಿಷಯದಲ್ಲಿ ಹೇಳಿದ್ದೇನೆಂದರೆ: “ನಿಮ್ಮ ನಿರ್ಣಯವನ್ನು ತಿಳಿಸುವ ಊರೀಮ್, ತುಮ್ಮೀಮ್ ಎಂಬ ವಸ್ತುಗಳು ನಿಮ್ಮ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀವು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿರಿ. ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದ ಮಾಡಿದಿರಿ.

[9] ಅವನು ತನ್ನ ತಂದೆತಾಯಿಗಳ ಬಗ್ಗೆ, ‘ಅವರಿಗಾಗಿ ನನಗೆ ಗೌರವವಿಲ್ಲ.’ ಅವನು ತನ್ನ ಸಹೋದರರನ್ನೂ ಗುರುತಿಸಲಿಲ್ಲ ತನ್ನ ಸ್ವಂತ ಮಕ್ಕಳನ್ನೂ ಅರಿಯಲಿಲ್ಲ, ಏಕೆಂದರೆ ಅವನು ನಿಮ್ಮ ವಾಕ್ಯವನ್ನು ಕೈಗೊಂಡು ನಿಮ್ಮ ಒಡಂಬಡಿಕೆಯನ್ನು ಕಾಪಾಡಿದ್ದಾನೆ.

[10] ಅವನು ಯಾಕೋಬನಿಗೆ ನಿಮ್ಮ ಸೂತ್ರಗಳನ್ನೂ, ಇಸ್ರಾಯೇಲರಿಗೆ ನಿಮ್ಮ ನಿಯಮವನ್ನೂ ಬೋಧಿಸುವನು. ನಿಮ್ಮ ಮುಂದೆ ಧೂಪವನ್ನೂ ನಿಮ್ಮ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಸಮರ್ಪಿಸುವನು.

[11] ಯೆಹೋವ ದೇವರೇ, ಅವನ ಎಲ್ಲ ಕೌಶಲ್ಯಗಳನ್ನು ಆಶೀರ್ವದಿಸಿರಿ. ಅವನ ಕೈಕೆಲಸವನ್ನು ಅಂಗೀಕರಿಸಿರಿ. ಅವನಿಗೆ ವಿರೋಧವಾಗಿ ಏಳುವವರ ನಡು ಮುರಿದು ಹೋಗಲಿ. ಅವನನ್ನು ದ್ವೇಷಿಸುವವರು ತಿರುಗಿ ಏಳದ ಹೋಗಲಿ.”

[12] ಮೋಶೆಯು ಬೆನ್ಯಾಮೀನನ ವಿಷಯವಾಗಿ ಹೇಳಿದ್ದೇನೆಂದರೆ: “ಯೆಹೋವ ದೇವರಿಗೆ ಪ್ರಿಯನಾದ ಇವನು ದೇವರ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುವನು. ದೇವರು ಅವನಿಗೆ ದಿನವೆಲ್ಲಾ ಆಸರೆಯಾಗಿರುವರು. ಅವನು ದೇವರ ಭುಜಗಳ ನಡುವೆ ವಿಶ್ರಾಂತಿ ಪಡೆಯುವನು.”

[13] ಯೋಸೇಫನ ವಿಷಯವಾಗಿ ಹೇಳಿದ್ದೇನೆಂದರೆ: “ಅವನ ದೇಶವು ಆಕಾಶದ ಅಮೂಲ್ಯವಾದ ಮಂಜಿನಿಂದಲೂ, ಕೆಳಗೆ ಸಾಗರ ಸೆಲೆಯಿಂದಲೂ ಯೆಹೋವ ದೇವರ ಆಶೀರ್ವಾದ ಹೊಂದಲಿ.

[14] ಸೂರ್ಯನು ತರುವ ಉತ್ಕೃಷ್ಟವಾದವುಗಳಿಂದಲೂ ಚಂದ್ರನು ದಯಪಾಲಿಸುವ ಅಮೂಲ್ಯವಾದವುಗಳಿಂದಲೂ

[15] ಪುರಾತನ ಪರ್ವತಗಳಿಂದ ದೊರೆಯುವ ಅತ್ಯುತ್ತಮ ಕಾಣಿಕೆಗಳಿಂದಲೂ ಶಾಶ್ವತ ಪರ್ವತಗಳಿಂದ ಸಿಗುವ ಒಳಿತುಗಳಿಂದಲೂ,

[16] ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆಯುವ ಫಲಗಳಲ್ಲಿ ಉತ್ಕೃಷ್ಟವಾದುದೆಲ್ಲವೂ ಸುಡುವ ಪೊದೆಯಲ್ಲಿ ವಾಸವಾಗಿದ್ದ ದೇವರ ದಯೆಯೂ ಯೋಸೇಫನ ತಲೆಯ ಮೇಲೆ ನೆಲೆಗೊಳ್ಳಲಿ. ಅವನು ತನ್ನ ಸಹೋದರರಲ್ಲಿ ರಾಜಕುಮಾರನಾಗಿರುವನು. ಕುಲದವರ ಶಿರಸ್ಸಾಗಿರುವ ಅವನ ಮೇಲೆ ಆಶೀರ್ವಾದ ಉಂಟಾಗಲಿ.

[17] ಅವನ ವೈಭವವು ಚೊಚ್ಚಲ ಹೋರಿಯಂತೆ ಇರುವುದು, ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇರುವುದು. ಇವುಗಳಿಂದ ಜನಾಂಗಗಳನ್ನೆಲ್ಲಾ ಇರಿದು ಒಟ್ಟಿಗೆ ಭೂಮಿಯ ಅಂಚಿನವರೆಗೆ ಓಡಿಸುವನು. ಎಫ್ರಾಯೀಮ್ ಕುಲದ ಹತ್ತು ಸಾವಿರ ಜನರೂ ಇಂಥವರೇ. ಮನಸ್ಸೆ ಕುಲದ ಸಹಸ್ರ ಜನರೂ ಇಂಥವರೇ ಆಗಿದ್ದಾರೆ.”

[18] ಮೋಶೆಯು ಜೆಬುಲೂನರ ವಿಷಯವಾಗಿ ಹೇಳಿದ್ದೇನೆಂದರೆ: “ಜೆಬೂಲೂನನೇ, ನಿನ್ನ ಪ್ರಯಾಣದಲ್ಲಿ ಸಂತೋಷಪಡು. ಇಸ್ಸಾಕಾರನೇ, ನಿನ್ನ ಗುಡಾರಗಳಲ್ಲಿ ಸಂತೋಷಪಡು.

[19] ಅವರು ಜನರನ್ನು ಬೆಟ್ಟಕ್ಕೆ ಕರೆಯಿಸಿ, ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು. ಏಕೆಂದರೆ ಅವರು ಸಮುದ್ರದಿಂದ ಐಶ್ವರ್ಯವನ್ನು ಹೊಂದಿ ಮರಳಿನಲ್ಲಿ ಅಡಗಿರುವ ಸಂಪತ್ತನ್ನು ಪಡೆಯುವರು.”

[20] ಮೋಶೆಯು ಗಾದನ ವಿಷಯವಾಗಿ ಹೇಳಿದ್ದೇನೆಂದರೆ: “ಗಾದನ ರಾಜ್ಯವನ್ನು ವಿಸ್ತಾರ ಮಾಡಿದ ದೇವರು ಸ್ತುತಿಹೊಂದಲಿ. ಅವನು ಸಿಂಹದಂತೆ ಜೀವಿಸಿ ತೋಳನ್ನೂ ಶಿರಸ್ಸನ್ನೂ ಮುರಿಯುವನು.

[21] ಅವನು ಉತ್ತಮವಾದ ನಾಡನ್ನು ತನಗಾಗಿ ಆಯ್ದುಕೊಂಡನು. ನಾಯಕರ ಪಾಲು ಅವನಿಗಾಗಿ ದೊರಕಿತು. ಅವನು ಜನರ ಮುಖ್ಯಸ್ಥರ ಸಂಗಡ ಬಂದು, ಇಸ್ರಾಯೇಲರೊಡನೆ ಯೆಹೋವ ದೇವರ ನೀತಿಯನ್ನೂ ದೇವರ ನ್ಯಾಯಗಳನ್ನೂ ಸ್ಥಾಪಿಸಿದನು.”

[22] ಮೋಶೆಯು ದಾನನ ವಿಷಯವಾಗಿ ಹೇಳಿದ್ದೇನೆಂದರೆ: “ದಾನನು ಬಾಷಾನಿನಿಂದ ಹಾರಿಬರುವ, ಪ್ರಾಯದ ಸಿಂಹದಂತಿದ್ದಾನೆ.”

[23] ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ್ದೇನೆಂದರೆ: “ನಫ್ತಾಲಿಯೇ, ಯೆಹೋವ ದೇವರ ಅನುಗ್ರಹದಿಂದ ತೃಪ್ತನಾದವನೇ, ದೇವರ ಆಶೀರ್ವಾದದಿಂದ ತುಂಬಿದವನೇ; ಸಮುದ್ರವೂ ದಕ್ಷಿಣ ಪ್ರದೇಶವೂ ನಿನಗೆ ಸೊತ್ತಾಗಲಿ.”

[24] ಮೋಶೆ ಆಶೇರನ ವಿಷಯವಾಗಿ ಹೇಳಿದ್ದೇನೆಂದರೆ: “ಪುತ್ರರಲ್ಲಿಯೇ ಶ್ರೇಷ್ಠನಾದ ಆಶೇರನು ಭಾಗ್ಯ ಹೊಂದಲಿ. ಅವನ ಸಹೋದರರು ಅವನನ್ನು ಮೆಚ್ಚಿಕೊಳ್ಳಲಿ, ಎಣ್ಣೆಯಲ್ಲಿ ಪಾದಸ್ನಾನ ಮಾಡುವಂತಾಗಲಿ.

[25] ನಿನ್ನ ದ್ವಾರಗಳ ಅಗುಳಿಗಳು ಕಬ್ಬಿಣದ ಮತ್ತು ಕಂಚಿನವುಗಳು ಆಗಿರಲಿ. ನಿನ್ನ ಜೀವಮಾನಕಾಲವೆಲ್ಲಾ ನಿನಗೆ ಬಲವಿರುವುದು.

[26] “ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ದೇವರು ನಿನ್ನ ಸಹಾಯಕ್ಕೆ ಆಕಾಶವನ್ನೇರಿ ಮೇಘಾರೂಢನಾಗಿ ತಮ್ಮ ಘನತೆಯಲ್ಲಿ ಬರುತ್ತಾರೆ.

[27] ನಿತ್ಯ ದೇವರು ನಿನ್ನ ಆಶ್ರಯವು. ದೇವರ ಶಾಶ್ವತ ತೋಳುಗಳು ನಿನಗೆ ಆಶ್ರಯ. ನಿನ್ನ ವೈರಿಗಳನ್ನು ನಿನ್ನ ಮುಂದೆ ಓಡಿಸಿ, ‘ಅವರನ್ನು ಸಂಹರಿಸಿರಿ,’ ಎಂದು ಆಜ್ಞಾಪಿಸುವರು.

[28] ಆದಕಾರಣ ಆಕಾಶದಿಂದ ಮಂಜನ್ನು ಸುರಿಯುವ, ಧಾನ್ಯ, ಹೊಸ ದ್ರಾಕ್ಷಾರಸ ಸಮೃದ್ಧಿಯಾಗಿರುವ ನಾಡಿನಲ್ಲಿ, ಯಾಕೋಬನ ವಂಶದವರು ಸುರಕ್ಷಿತರಾದರು. ಇಸ್ರಾಯೇಲರು ನಿರ್ಭಯವಾಗಿ ವಾಸಿಸುವವರಾದರು.

[29] ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು. ಯೆಹೋವ ದೇವರಿಂದ ರಕ್ಷಣೆಹೊಂದಿದ ಜನಾಂಗವೇ ನಿಮ್ಮಂತೆ ಯಾರಿದ್ದಾರೆ? ದೇವರೇ ನಿಮಗೆ ಗುರಾಣಿ ಹಾಗೂ ಸಹಾಯಕ. ದೇವರು ನಿಮ್ಮ ಮಹಿಮಾ ಖಡ್ಗ. ನಿಮ್ಮ ವೈರಿಗಳು ನಿಮ್ಮ ಮುಂದೆ ಮುದುರಿಕೊಳ್ಳುವರು ಮತ್ತು ಅವರ ಉನ್ನತ ಸ್ಥಳಗಳನ್ನು ನೀವು ತುಳಿದುಬಿಡುವಿರಿ.”

ಧರ್ಮೋಪದೇಶಕಾಂಡ — Chapters