[1] ಬೀಜ ಹೊಡಿಸಿಕೊಂಡವರು ಅಥವಾ ಜನನ ಇಂದ್ರಿಯ ಕತ್ತರಿಸಿಕೊಂಡವರು ಯೆಹೋವ ದೇವರ ಸಭೆಗೆ ಸೇರಬಾರದು.
[2] ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲಾಂತರದವರೆಗೂ ಯೆಹೋವ ದೇವರ ಸಭೆಗೆ ಸೇರಬಾರದು.
[3] ಅಮ್ಮೋನಿಯರು ಇಲ್ಲವೆ ಮೋವಾಬ್ಯರು ಯೆಹೋವ ದೇವರ ಸಭೆಗೆ ಸೇರಬಾರದು; ಹತ್ತನೆಯ ತಲಾಂತರವರೆಗೆ ಅವರು ಯೆಹೋವ ದೇವರ ಸಭೆಯಲ್ಲಿ ಸೇರಬಾರದು.
[4] ಏಕೆಂದರೆ ನೀವು ಈಜಿಪ್ಟನ್ನು ಬಿಟ್ಟು ಬರುವಾಗ, ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವುದಕ್ಕೆ ಎದುರುಗೊಳ್ಳಲಿಲ್ಲ. ನಿಮ್ಮನ್ನು ಶಪಿಸುವುದಕ್ಕೆ ಮೆಸೊಪೊತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ಬಿಳಾಮನಿಗೆ ಕೂಲಿ ಕೊಟ್ಟು ನಿಮಗೆ ವಿರೋಧವಾಗಿ ಕರೆಸಿದರು.
[5] ಆದರೂ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸಲಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ಅವನಿಂದ ಶಾಪವನ್ನು ನುಡಿಸದೆ, ಆಶೀರ್ವಾದವನ್ನೇ ಹೇಳಿಸಿದರು.
[6] ನೀವು ಇರುವವರೆಗೆ ಎಂದಿಗೂ ಅವರ ಏಳಿಗೆಯನ್ನು, ಕ್ಷೇಮವನ್ನು ಬಯಸಬಾರದು.
[7] ಎದೋಮ್ಯನನ್ನು ಅಸಹ್ಯಿಸಬೇಡಿರಿ, ಏಕೆಂದರೆ ಅವನು ನಿಮ್ಮ ಸಹೋದರನು; ಈಜಿಪ್ಟಿನವನನ್ನು ಅಸಹ್ಯಿಸಬೇಡಿರಿ, ಏಕೆಂದರೆ ಅವನ ದೇಶದಲ್ಲಿ ನೀವು ಪರವಾಸಿಯಾಗಿದ್ದಿರಿ.
[8] ಅವರಿಗೆ ಹುಟ್ಟುವ ಮಕ್ಕಳಲ್ಲಿ ಮೂರನೆಯ ತಲಾಂತರದವರು ಯೆಹೋವ ದೇವರ ಸಭೆಯಲ್ಲಿ ಸೇರಬಹುದು.
[9] ನೀವು ಶತ್ರುಗಳಿಗೆ ವಿರೋಧವಾಗಿ ಸೈನ್ಯವಾಗಿ ಹೊರಟರೆ, ಪಾಳೆಯದಲ್ಲಿ ಯಾವ ಅಶುದ್ಧ ಕಾರ್ಯಗಳು ಇಲ್ಲದಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.
[10] ರಾತ್ರಿಯಲ್ಲಿ ವೀರ್ಯ ವಿಸರ್ಜನೆಯ ದೆಸೆಯಿಂದ ಯಾವನಾದರು ಅಶುದ್ಧನಾದವನು ನಿಮ್ಮಲ್ಲಿದ್ದರೆ, ಅವನು ಪಾಳೆಯದ ಒಳಗೆ ಇರದೆ ಹೊರಗೆ ಇರಬೇಕು.
[11] ಸಂಜೆ ಆಗುತ್ತಿರುವಾಗ ಅವನು ಸ್ನಾನಮಾಡಿ, ಸೂರ್ಯನು ಮುಳುಗಿದಾಗ ಪಾಳೆಯದ ಒಳಗೆ ತಿರುಗಿಬರಬಹುದು.
[12] ಇದಲ್ಲದೆ ನೀವು ಮಲವಿಸರ್ಜನೆಗೆ ಹೋಗಲು ಪಾಳೆಯದ ಹೊರಗೆ ಸ್ಥಳವಿರಬೇಕು.
[13] ನಿಮ್ಮ ಆಯುಧಗಳ ಜೊತೆಯಲ್ಲಿ ಕಬ್ಬಿಣದ ಸಲಕೆ ಇರಬೇಕು. ನೀವು ಮಲವಿಸರ್ಜನೆ ಮಾಡಿದಾಗ, ಆ ಸಲಕೆಯಿಂದ ಅಗೆದು ಮುಚ್ಚಿಬಿಡಬೇಕು.
[14] ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಕ್ಷಿಸುವುದಕ್ಕೂ, ನಿಮ್ಮ ಶತ್ರುಗಳನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವುದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾರೆ. ಅವರು ನಿಮ್ಮಲ್ಲಿ ಅಶುದ್ಧವಾದ ಕಾರ್ಯವನ್ನು ನೋಡಿ, ನಿಮ್ಮನ್ನು ಬಿಟ್ಟು ತಿರುಗಿಹೋಗದಂತೆ ನಿಮ್ಮ ಪಾಳೆಯವು ನಿರ್ಮಲವಾಗಿರಬೇಕು.
[15] ತನ್ನ ಯಜಮಾನನನ್ನು ಬಿಟ್ಟು, ನಿನ್ನ ಬಳಿಗೆ ತಪ್ಪಿಸಿಕೊಂಡು ಬಂದ ದಾಸನನ್ನು ಹಿಡಿದು ಯಜಮಾನನಿಗೆ ಒಪ್ಪಿಸಬಾರದು.
[16] ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಒಳ್ಳೆಯದೆಂದು ತೋಚುತ್ತದೆಯೋ, ಅಲ್ಲಿಯೇ ವಾಸವಾಗಲಿ. ಅವನನ್ನು ನೀವು ಕುಗ್ಗಿಸಬಾರದು.
[17] ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ಗುಡಿ ವೇಶ್ಯೆಯಾಗಬಾರದು. ಇಸ್ರಾಯೇಲರಲ್ಲಿ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು.
[18] ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯು ಸೂಳೆಗಾರಿಕೆಯಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ದೇವ ಮಂದಿರದೊಳಗೆ ತರಬಾರದು. ಏಕೆಂದರೆ ಅವೆರಡನ್ನು ನಿನ್ನ ದೇವರಾದ ಯೆಹೋವ ದೇವರು ದ್ವೇಷಿಸುತ್ತಾರೆ.
[19] ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವನ್ನಾಗಲಿ, ಬೇರೆ ಯಾವುದನ್ನಾಗಲಿ ಬಡ್ಡಿಗೆ ಕೊಡಬಾರದು.
[20] ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸಹೋದರನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ನಾಡಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೆಲಸಗಳನ್ನು ಆಶೀರ್ವದಿಸುತ್ತಾರೆ.
[21] ನೀನು ನಿನ್ನ ದೇವರಾದ ಯೆಹೋವ ದೇವರಿಗೆ ಹರಕೆಮಾಡಿದ ಮೇಲೆ ಅದನ್ನು ಸಲ್ಲಿಸುವುದಕ್ಕೆ ತಡಮಾಡಬೇಡ. ಏಕೆಂದರೆ ನಿನ್ನ ದೇವರಾದ ಯೆಹೋವ ದೇವರು ಅದನ್ನು ನಿಶ್ಚಯವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವರು. ತೀರಿಸದೆ ಹೋಗುವದು ಪಾಪ.
[22] ಆದರೆ ನೀನು ಹರಕೆ ಮಾಡದಿದ್ದರೆ, ನೀನು ದೋಷಿಯಾಗುವುದಿಲ್ಲ.
[23] ನಿನ್ನ ತುಟಿಗಳಿಂದ ಹೊರಟಿದ್ದನ್ನು ಮಾಡುವುದಕ್ಕೆ ತಪ್ಪಬೇಡ. ನಿನ್ನ ದೇವರಾದ ಯೆಹೋವ ದೇವರಿಗೆ ನಿನ್ನ ಬಾಯಿಯಿಂದಲೇ ನೀನು ಹರಕೆ ಮಾಡಿದಿಯಲ್ಲವೇ.
[24] ನಿನ್ನ ನೆರೆಯವನ ದ್ರಾಕ್ಷಿ ತೋಟಕ್ಕೆ ಬಂದರೆ, ನಿನ್ನ ಮನಸ್ಸು ತೃಪ್ತಿಯಾಗುವವರೆಗೆ ಹಣ್ಣುಗಳನ್ನು ತಿನ್ನಬಹುದು. ಆದರೆ ನಿನ್ನ ಚೀಲದಲ್ಲಿ ಹಾಕಿಕೊಳ್ಳಬಾರದು.
[25] ನಿನ್ನ ನೆರೆಯವನ ಪೈರಿನ ಬಳಿಗೆ ಹಾದುಹೋಗುವಾಗ, ಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲು ಹಾಕಿ ಕೊಯ್ಯಬಾರದು.