Skip to content
Opens in a new window
Listen to this chapter • 8:30

[1] ಆಗ ಯೆಹೋವ ದೇವರು ನನಗೆ ಆಜ್ಞಾಪಿಸಿದ ಪ್ರಕಾರ ಮರುಭೂಮಿಗೆ ಹೊರಟು ಕೆಂಪುಸಮುದ್ರದ ಮಾರ್ಗದಲ್ಲಿ ಅನೇಕ ದಿನಗಳು ಸೇಯೀರ್ ಬೆಟ್ಟದ ಮಲೆನಾಡನ್ನು ಸುತ್ತುತ್ತಿದ್ದೆವು.

[2] ಆಮೇಲೆ ಯೆಹೋವ ದೇವರು ನನಗೆ,

[3] “ನೀವು ಈ ಬೆಟ್ಟವನ್ನು ಸುತ್ತಿದ್ದು ಸಾಕು. ಉತ್ತರಕ್ಕೆ ತಿರುಗಿಕೊಳ್ಳಿರಿ.

[4] ನೀವು ಜನರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ನೀವು ಸೇಯೀರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಪುತ್ರರ ಗಡಿಯನ್ನು ದಾಟಬೇಕು. ಅವರು ನಿಮಗೆ ಭಯಪಡುವರು. ಆದ್ದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.

[5] ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದವಿಡುವಷ್ಟು ಸ್ಥಳವನ್ನಾದರೂ ಕೊಡುವುದಿಲ್ಲ. ಏಕೆಂದರೆ ಸೇಯೀರ್ ಬೆಟ್ಟವನ್ನು ನಾನು ಏಸಾವನಿಗೆ ಸ್ವದೇಶವಾಗಿ ಕೊಟ್ಟಿದ್ದೇನೆ.

[6] ನೀವು ಅಲ್ಲಿ ಉಣ್ಣುವ ಆಹಾರವನ್ನು ಮತ್ತು ಕುಡಿಯುವ ನೀರನ್ನು ಸಹ ಹಣಕೊಟ್ಟು ಕೊಂಡುಕೊಳ್ಳಬೇಕು.’ ”

[7] ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೈಕೆಲಸದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದಾರೆ. ನೀವು ಈ ದೊಡ್ಡ ಮರುಭೂಮಿಯಲ್ಲಿ ಸಂಚಾರ ಮಾಡಿದ್ದನ್ನು ದೇವರು ಗಮನಿಸಿದ್ದಾರೆ. ಈ ನಲವತ್ತು ವರ್ಷ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದರು. ನಿಮಗೆ ಏನೂ ಕಡಿಮೆ ಆಗಲಿಲ್ಲ.

[8] ಈ ಪ್ರಕಾರ ನಾವು ಸೇಯೀರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಓರೆಯಾಗಿ ತಿರುಗಿಕೊಂಡು ಅರಾಬಾದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ, ಮೋವಾಬಿನ ಮರುಭೂಮಿಯ ಮಾರ್ಗವಾಗಿ ಹಾದು ಹೋದೆವು.

[9] ಆಗ ಯೆಹೋವ ದೇವರು ನನಗೆ, “ಮೋವಾಬ್ಯರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ಏಕೆಂದರೆ ನಾನು ಅವರ ದೇಶದಲ್ಲಿ ನಿನಗೆ ಸೊತ್ತನ್ನು ಕೊಡುವುದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಆರ್ ಎಂಬ ಪ್ರದೇಶವನ್ನು ಕೊಟ್ಟೆನಲ್ಲವೇ?” ಎಂದರು.

[10] ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು.

[11] ಅವರು ಅನಾಕ್ಯರ ಹಾಗೆ ರೆಫಾಯರಿಗೆ ಸೇರಿದವರೆಂದು ಹೇಳುವದುಂಟು. ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.

[12] ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲರು ತಮಗೆ ಯೆಹೋವ ದೇವರು ಕೊಟ್ಟ ನಾಡನ್ನು ಹೇಗೆ ಸ್ವಾಧೀನ ಮಾಡಿಕೊಂಡರೋ, ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ, ಅವರ ನಾಡಿನಲ್ಲಿ ವಾಸಮಾಡಿದರು.

[13] “ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ,” ಎಂದು ಯೆಹೋವ ದೇವರು ಹೇಳಿದ ಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.

[14] ನಾವು ಕಾದೇಶ್ ಬರ್ನೇಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳವನ್ನು ದಾಟಿದವರೆಗೆ ಗತಿಸಿದ ಕಾಲವು ಮೂವತ್ತೆಂಟು ವರ್ಷ. ಯೆಹೋವ ದೇವರು ಅವರಿಗೆ ಪ್ರಮಾಣ ಮಾಡಿದ ಪ್ರಕಾರ ಅಷ್ಟರಲ್ಲಿ ಆ ಸಂತತಿಯ ಸೈನಿಕರೆಲ್ಲರು ಸತ್ತುಹೋಗಿದ್ದರು.

[15] ಪಾಳೆಯದಿಂದ ಅವರನ್ನು ಸಂಪೂರ್ಣವಾಗಿ ಹೊರಹಾಕುವವರೆಗೂ ಯೆಹೋವ ದೇವರ ಹಸ್ತವು ಅವರ ಮೇಲಿತ್ತು.

[16] ಉಳಿದ ಯುದ್ಧ ಮಾಡುವವರು ಜನರೊಳಗಿಂದ ಸತ್ತು ಹೋದ ಮೇಲೆ,

[17] ಯೆಹೋವ ದೇವರು ನನ್ನೊಂದಿಗೆ ಮಾತನಾಡಿ ನನಗೆ,

[18] “ಇಂದು ನೀನು ಮೋವಾಬಿನ ಮೇರೆಯಾದ ಆರ್ ಎಂಬ ಸ್ಥಳವನ್ನು ದಾಟಬೇಕು.

[19] ಅಮ್ಮೋನ್ಯರ ಹತ್ತಿರಕ್ಕೆ ನೀವು ಬಂದಾಗ, ಅವರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸೊತ್ತಾಗಿ ಕೊಟ್ಟಿರುವದರಿಂದ ನಿಮಗೆ ಅದರಲ್ಲಿ ಯಾವ ಭಾಗವನ್ನೂ ಕೊಡುವುದಿಲ್ಲ” ಎಂದರು.

[20] ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ಸಹ ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.

[21] ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು. ಆದರೆ ಯೆಹೋವ ದೇವರು ಅವರನ್ನು ಅಮ್ಮೋನಿಯರ ಮುಂದೆ ತೆಗೆದುಹಾಕಿದ್ದರು. ಹೀಗೆ ಅಮ್ಮೋನಿಯರು ಅವರನ್ನು ಹೊರಡಿಸಿ, ಅವರ ಬದಲಾಗಿ ವಾಸಿಸಿದರು.

[22] ಯೆಹೋವ ದೇವರು ಸೇಯೀರಿನಲ್ಲಿ ವಾಸವಾಗಿರುವ ಏಸಾವನ ಮಕ್ಕಳಿಗೆ ಮಾಡಿದ ಹಾಗೆ ಆಯಿತು. ದೇವರು ಅವರ ಮುಂದೆ ಹೋರಿಯರನ್ನು ತೆಗೆದುಹಾಕಿದರು. ಹೀಗೆ ಅವರು ಹೋರಿಯರನ್ನು ಹೊರಡಿಸಿ, ಇವರ ಬದಲಾಗಿ ಇಂದಿನವರೆಗೂ ವಾಸಿಸುತ್ತಿದ್ದಾರೆ.

[23] ಹಾಗೆ ಗಾಜಾ ಪಟ್ಟಣದವರೆಗೂ ವಾಸವಾಗಿದ್ದ ಅವ್ವೀಯರನ್ನು ಕಫ್ತೋರಿಂದ ಬಂದ ಕಫ್ತೋರ್ಯರು ನಾಶಮಾಡಿ, ಅವರ ಬದಲಾಗಿ ವಾಸಿಸಿದರು.

[24] “ಈಗ ಏಳಿರಿ, ಹೊರಡಿರಿ, ಅರ್ನೋನ್ ಹಳ್ಳವನ್ನು ದಾಟಿರಿ, ಇಗೋ, ಹೆಷ್ಬೋನಿನ ಅರಸ ಅಮೋರಿಯನಾದ ಸೀಹೋನನನ್ನೂ, ಅವನ ದೇಶವನ್ನೂ ನಿಮ್ಮ ಕೈಯಲ್ಲಿ ಕೊಟ್ಟಿದ್ದೇನೆ. ಅವನ ಸಂಗಡ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆರಂಭಮಾಡಿರಿ.

[25] ಇದೇ ದಿವಸ ಆಕಾಶದ ಕೆಳಗಿರುವ ಜನಾಂಗಗಳ ಮೇಲೆ ನಿಮ್ಮ ಹೆದರಿಕೆಯೂ ಮತ್ತು ಭಯವೂ ಉಂಟಾಗುವಂತೆ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿ ನಡುಗಿ ಅಂಜುವರು,” ಎಂದರು.

[26] ಆಗ ನಾನು ಕೆದೇಮೋತೆಂಬ ಮರುಭೂಮಿಯಿಂದ ಹೆಷ್ಬೋನಿನ ಅರಸನಾದ ಸೀಹೋನನಿಗೆ ಸಮಾಧಾನದ ಸುದ್ದಿಯನ್ನು ತಿಳಿಸುವಂತೆ ದೂತರನ್ನು ಕಳುಹಿಸಿ,

[27] “ನಾವು ನಿನ್ನ ನಾಡನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಕ್ಕೂ ಬಲಕ್ಕೂ ತಿರುಗದೆ ರಾಜ ಮಾರ್ಗದಿಂದಲೇ ಹೋಗುವೆವು.

[28] ನಾವು ಊಣ್ಣುವುದಕ್ಕೆ ಆಹಾರವನ್ನೂ ಕುಡಿಯಲು ನೀರನ್ನು ಹಣಕೊಟ್ಟು ನಿಮ್ಮಿಂದ ಕೊಂಡುಕೊಳ್ಳುತ್ತೇವೆ. ಕಾಲ್ನಡಿಗೆಯಿಂದ ನಿಮ್ಮ ನಾಡನ್ನು ಹಾದು ಹೋಗುತ್ತೇವಷ್ಟೆ.

[29] ನಾವು ಯೊರ್ದನಿನ ಆಚೆಗೆ ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶಕ್ಕೆ ಹೋಗುವವರಿದ್ದೇವೆ. ಸೇಯೀರಿನಲ್ಲಿ ವಾಸಮಾಡುವ ಏಸಾವನ ಮಕ್ಕಳೂ ಆರ್ ಪ್ರದೇಶದಲ್ಲಿ ವಾಸಮಾಡುವ ಮೋವಾಬ್ಯರೂ ನಮಗೆ ದಾರಿಕೊಟ್ಟಂತೆ ನೀವೂ ನಮಗೆ ಕೊಡಬೇಕು,” ಎಂದೆನು.

[30] ಆದರೆ ಹೆಷ್ಬೋನಿನ ಅರಸನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಸಮ್ಮತಿಸಲಿಲ್ಲ. ಏಕೆಂದರೆ ಅವನನ್ನು ನಿಮ್ಮ ಕೈಯಲ್ಲಿ ಒಪ್ಪಿಸುವ ಹಾಗೆ ನಿಮ್ಮ ದೇವರಾದ ಯೆಹೋವ ದೇವರು ಅವನ ಬುದ್ಧಿಯನ್ನು ಮಂಕುಮಾಡಿ, ಹೃದಯವನ್ನು ಕಠಿಣಪಡಿಸಿದರು. ಈಗಾಗಲೇ ಅದು ನೆರವೇರಿದೆ.

[31] ಇದಲ್ಲದೆ ಯೆಹೋವ ದೇವರು ನನಗೆ, “ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸುವುದಕ್ಕೆ ಆರಂಭಮಾಡಿದ್ದೇನೆ, ಅವನ ದೇಶವನ್ನು ಸೊತ್ತಾಗಿ ಹೊಂದುವಂತೆ ವಶಪಡಿಸಿಕೊಳ್ಳುವುದಕ್ಕೆ ಆರಂಭಮಾಡು,” ಎಂದು ಹೇಳಿದರು.

[32] ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ನಮ್ಮೊಡನೆ ಯುದ್ಧಮಾಡುವುದಕ್ಕೆ ಯಹಚಗೆ ಹೊರಟುಬಂದನು.

[33] ನಮ್ಮ ದೇವರಾದ ಯೆಹೋವ ದೇವರು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿದ್ದರಿಂದ, ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಸೋಲಿಸಿದೆವು.

[34] ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತೆಗೆದುಕೊಂಡು, ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು. ಒಬ್ಬರನ್ನೂ ಉಳಿಸಲಿಲ್ಲ.

[35] ಪಶುಗಳನ್ನು ಮಾತ್ರ ನಮಗೆ ತೆಗೆದುಕೊಂಡು, ಪಟ್ಟಣಗಳನ್ನು ಸೂರೆಮಾಡಿದೆವು.

[36] ಅರ್ನೋನಿನ ತೀರದಲ್ಲಿರುವ ಅರೋಯೇರ್ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ. ನಮ್ಮ ದೇವರಾದ ಯೆಹೋವ ದೇವರು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದರು.

[37] ಅಮ್ಮೋನಿಯರ ದೇಶದ ಯಬ್ಬೋಕ್ ನದಿಯ ಬಳಿಯಲ್ಲಿರುವ ಸ್ಥಳವನ್ನೂ ಪರ್ವತ ಪಟ್ಟಣವನ್ನೂ ನಮ್ಮ ದೇವರಾದ ಯೆಹೋವ ದೇವರು ನಮಗೆ ಬೇಡವೆಂದ ಕಾರಣ, ಆ ಸ್ಥಳಗಳನ್ನು ನೀವು ಅತಿಕ್ರಮಿಸಲಿಲ್ಲ.

ಧರ್ಮೋಪದೇಶಕಾಂಡ — Chapters