[1] ಮೋಶೆ ಮತ್ತು ಇಸ್ರಾಯೇಲಿನ ಹಿರಿಯರು ಜನರಿಗೆ, “ನಾವು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು.
[2] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಯೊರ್ದನನ್ನು ದಾಟಿ ಪ್ರವೇಶಿಸುವಾಗ, ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಿ,
[3] ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಪ್ರಕಾರ ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ಹಾಲೂ ಜೇನೂ ಹರಿಯುವಂಥ ದೇಶವನ್ನು ನೀವು ಪ್ರವೇಶಿಸುವಂತೆ ಯೊರ್ದನ್ ನದಿಯನ್ನು ದಾಟುವಾಗ, ಅವುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಆ ಕಲ್ಲಿನ ಮೇಲೆ ಬರೆಯಬೇಕು.
[4] ನೀವು ಯೊರ್ದನನ್ನು ದಾಟಿದ ಮೇಲೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು.
[5] ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಬೇಕು. ಕಬ್ಬಿಣದ ಉಪಕರಣವನ್ನು ನೀವು ಕಲ್ಲುಗಳ ಮೇಲೆ ಉಪಯೋಗಿಸಬಾರದು.
[6] ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠವನ್ನು ಹುಟ್ಟುಕಲ್ಲುಗಳಿಂದಲೇ ಕಟ್ಟಬೇಕು. ನೀವು ಅದರ ಮೇಲೆ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಬೇಕು.
[7] ಅಲ್ಲಿ ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಸಮರ್ಪಿಸಿ, ಸಹಭೋಜನ ಮಾಡಿ, ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು.
[8] ನೀವು ಆ ಕಲ್ಲುಗಳ ಮೇಲೆ ಈ ನಿಯಮದ ವಾಕ್ಯಗಳನ್ನೆಲ್ಲಾ ಬಹುಸ್ಪಷ್ಟವಾಗಿ ಬರೆಸಬೇಕು,” ಎಂದು ಆಜ್ಞಾಪಿಸಿದರು.
[9] ಆಗ ಮೋಶೆಯೂ ಯಾಜಕರಾದ ಲೇವಿಯರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ, “ಇಸ್ರಾಯೇಲರೇ, ಶಾಂತರಾಗಿದ್ದು ಕೇಳಿರಿ. ನೀವು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಜನಾಂಗವಾಗಿದ್ದೀರಿ.
[10] ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಆಜ್ಞೆಗಳನ್ನೂ ತೀರ್ಪುಗಳನ್ನೂ ಅನುಸರಿಸಬೇಕು,” ಎಂದು ಹೇಳಿದನು.
[11] ಇದಲ್ಲದೆ ಮೋಶೆ ಅದೇ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ:
[12] “ನೀವು ಯೊರ್ದನನ್ನು ದಾಟಿದ ಮೇಲೆ ಜನರನ್ನು ಆಶೀರ್ವದಿಸುವುದಕ್ಕೆ ಗೆರಿಜೀಮ್ ಬೆಟ್ಟದಲ್ಲಿ ನಿಲ್ಲತಕ್ಕವರು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ, ಬೆನ್ಯಾಮೀನ್ ಮುಂತಾದವರು;
[13] ಶಪಿಸುವುದಕ್ಕೆ ಏಬಾಲ್ ಬೆಟ್ಟದಲ್ಲಿ ನಿಲ್ಲತಕ್ಕವರು ಯಾರೆಂದರೆ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ,” ಎಂದು ಆಜ್ಞಾಪಿಸಿ ಹೇಳಿದನು.
[14] ಲೇವಿಯರು ಇಸ್ರಾಯೇಲ್ ಜನರೆಲ್ಲರಿಗೆ ಗಟ್ಟಿಯಾದ ಧ್ವನಿಯಿಂದ,
[15] “ಯೆಹೋವ ದೇವರಿಗೆ ಅಸಹ್ಯವಾಗಿರುವ ವಿಗ್ರಹವನ್ನಾಗಲಿ, ಎರಕ ಹೊಯ್ದದ್ದನ್ನಾಗಲಿ ಮಾಡಿಕೊಂಡು, ಶಿಲ್ಪಿಯ ಕೈಯಿಂದ ಮಾಡಿಸಿ, ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[16] ಅವರು, “ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[17] ಅವರು, “ತನ್ನ ನೆರೆಯವನ ಗಡಿ ಮೇರೆಯನ್ನು ಸರಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[18] ಅವರು, “ಕಣ್ಣು ಕಾಣದವನನ್ನು ದಾರಿತಪ್ಪಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[19] ಅವರು, “ಪರವಾಸಿಗೂ, ದಿಕ್ಕಿಲ್ಲದವನಿಗೂ, ವಿಧವೆಗೂ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[20] ಅವರು, “ಮಲತಾಯಿಯ ಸಂಗಡ ಅನೈತಿಕವಾಗಿ ನಡೆದು ತನ್ನ ತಂದೆಯ ಹಾಸಿಗೆಯನ್ನು ಅವಮಾನಪಡಿಸಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[21] ಅವರು, “ಪಶುಸಂಗಮ ಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[22] ಅವರು, “ತನ್ನ ತಂದೆಯ ಮಗಳ ಸಂಗಡವಾಗಲಿ, ತಾಯಿಯ ಮಗಳ ಸಂಗಡವಾಗಲಿ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[23] ಅವರು, “ತನ್ನ ಅತ್ತೆಯ ಸಂಗಡ ಅನೈತಿಕವಾಗಿ ನಡೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[24] ಅವರು, “ತನ್ನ ನೆರೆಯವನನ್ನು ರಹಸ್ಯವಾಗಿ ಕೊಲೆಮಾಡಿದವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[25] ಅವರು, “ನಿರಪರಾಧಿಯನ್ನು ಕೊಲ್ಲಲು ಲಂಚ ತೆಗೆದುಕೊಂಡವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.
[26] ಅವರು, “ದೇವರ ನಿಯಮದ ಈ ಮಾತುಗಳನ್ನು ಸನ್ಮಾನಿಸಿ ಕೈಗೊಳ್ಳದೆ ಇರುವವನು ಶಾಪಗ್ರಸ್ತನು,” ಎಂದು ಹೇಳಿದಾಗ, ಎಲ್ಲಾ ಜನರು, “ಆಮೆನ್,” ಎಂದು ಹೇಳಬೇಕು.