[1] ಯೆಹೋವ ದೇವರು ಹೋರೇಬಿನಲ್ಲಿ ಇಸ್ರಾಯೇಲರ ಸಂಗಡ ಮಾಡಿದ ಒಡಂಬಡಿಕೆ ಅಲ್ಲದೆ ಅವರು ಮೋವಾಬ್ ದೇಶದಲ್ಲಿ ಇಸ್ರಾಯೇಲರೊಡನೆ ಮಾಡಬೇಕೆಂದು ಮೋಶೆಗೆ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ:
[2] ಮೋಶೆಯು ಎಲ್ಲಾ ಇಸ್ರಾಯೇಲರನ್ನು ಕರೆದು ಅವರಿಗೆ ಹೀಗೆ ಹೇಳಿದನು: ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ನಿಮ್ಮ ಕಣ್ಣು ಮುಂದೆಯೇ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
[3] ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ನಿಮ್ಮ ಕಣ್ಣಾರೆ ನೋಡಿದ್ದೀರಿ.
[4] ಆದರೂ ಯೆಹೋವ ದೇವರು ಇಂದಿನವರೆಗೂ ತಿಳಿದುಕೊಳ್ಳುವ ಹೃದಯವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ನಿಮಗೆ ಕೊಡಲಿಲ್ಲವಲ್ಲ!
[5] “ನಾನು ನಲವತ್ತು ವರ್ಷ ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿದೆನು. ನಿಮ್ಮ ಮೇಲಿರುವ ವಸ್ತ್ರಗಳು ಹರಿಯಲಿಲ್ಲ. ನಿಮ್ಮ ಪಾದಗಳಲ್ಲಿದ್ದ ಕೆರವಾಗಲಿ ಸವೆದುಹೋಗಲಿಲ್ಲ.
[6] ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಲೇ ಇಲ್ಲ. ಯೆಹೋವ ದೇವರೇ ನಿಮ್ಮ ದೇವರು ಎಂಬುದು ನಿಮಗೆ ತಿಳಿಯಬೇಕೆಂಬ ಉದ್ದೇಶದಿಂದ ಹೀಗಾಯಿತು.”
[7] ನೀವು ಈ ಸ್ಥಳಕ್ಕೆ ಬಂದಾಗ, ಹೆಷ್ಬೋನಿನ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಹೊರಟರು. ನಾವು ಅವರನ್ನು ಸೋಲಿಸಿ,
[8] ಅವರ ದೇಶವನ್ನು ತೆಗೆದುಕೊಂಡು ರೂಬೇನ್ಯರಿಗೂ ಗಾದನವರಿಗೂ ಮನಸ್ಸೆಯ ಅರ್ಧ ಗೋತ್ರಕ್ಕೂ ಸೊತ್ತಾಗಿ ಕೊಟ್ಟೆವು.
[9] ಹೀಗಿರುವುದರಿಂದ ನೀವು ಮಾಡುವ ಎಲ್ಲದರಲ್ಲಿಯೂ ಸಫಲವಾಗುವಂತೆ ಈ ಒಡಂಬಡಿಕೆಯ ಮಾತುಗಳನ್ನು ಕೇಳಿ ನಡೆಯಬೇಕು.
[10] ನೀವೆಲ್ಲರು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ಗೋತ್ರಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಜನರೆಲ್ಲರೂ
[11] ನಿಮ್ಮ ಮಕ್ಕಳೂ ಹೆಂಡತಿಯರೂ ನಿಮ್ಮ ಪಾಳೆಯದಲ್ಲಿರುವ ಪರದೇಶಿಯರೂ ನಿಮಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವವರೂ ಸಹ
[12] ನಿಮ್ಮ ದೇವರಾದ ಯೆಹೋವ ದೇವರು ಈ ಹೊತ್ತು ನಿಮ್ಮ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯನ್ನು ಸೇರುವುದಕ್ಕೆ ಅವರು ಆಣೆಯಿಟ್ಟು ಮುದ್ರಿಸಿದ್ದಾರೆ.
[13] ಆ ಒಡಂಬಡಿಕೆ ಯಾವುದೆಂದರೆ, ದೇವರು ನಿಮಗೆ ಹೇಳಿದಂತೆಯೂ, ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಪ್ರಮಾಣ ಮಾಡಿದಂತೆಯೂ, ಈ ಹೊತ್ತು ನಿಮ್ಮನ್ನು ತಮ್ಮ ಜನರನ್ನಾಗಿ ಸ್ಥಾಪಿಸಿ, ನಿಮಗೆ ದೇವರಾಗಬೇಕೆಂಬುದೇ.
[14] ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆಯನ್ನೂ, ಈ ಆಣೆಯನ್ನೂ ಮಾಡುವುದಲ್ಲದೆ
[15] ಈ ಹೊತ್ತು ಇಲ್ಲಿ ನಮ್ಮೊಡನೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತವರ ಸಂಗಡ, ಈ ಹೊತ್ತು ಇಲ್ಲಿ ನಮ್ಮೊಡನೆ ಇಲ್ಲದವರ ಸಂಗಡ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
[16] ಏಕೆಂದರೆ ನಾವು ಈಜಿಪ್ಟ್ ದೇಶದಲ್ಲಿ ಹೇಗೆ ವಾಸವಾಗಿದ್ದೆವೆಂದೂ, ನೀವು ದಾಟಿಬಂದ ಜನಾಂಗಗಳನ್ನು ನಾವು ಹೇಗೆ ದಾಟಿ ಬಂದೆವೆಂದೂ ನಿಮಗೆ ತಿಳಿದಿದೆ.
[17] ಅವರ ಬಳಿಯಲ್ಲಿರುವ ಮರ, ಕಲ್ಲು, ಬೆಳ್ಳಿ, ಬಂಗಾರಗಳ ಅಸಹ್ಯವಾದ ಬೊಂಬೆಗಳನ್ನೂ ನೀವು ನೋಡಿದ್ದೀರಲ್ಲವೇ?
[18] ಈ ಹೊತ್ತು ನಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆ ಮಾಡುವುದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ಈ ಘೋರ ವಿಷವನ್ನೂ, ಬೆಳೆಸುವ ಬೇರೂ ನಿಮ್ಮಲ್ಲಿ ಇರಬಾರದು.
[19] ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರೂ ತನ್ನೊಳಗೆ, “ನಾನು ಹಟ ಹಿಡಿದು, ಅವಿಧೇಯನಾದರೂ ನನಗೆ ಕ್ಷೇಮವೇ,” ಎಂದು ಹೇಳಿಕೊಂಡು ತನ್ನ ಹೃದಯದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವವನು ಇರಬಾರದು. ಅಂಥವನು ನೀರಾವರಿ ನಾಡಿಗೂ ಒಣ ನಾಡಿಗೂ ನಾಶನವನ್ನು ತರುವನು.
[20] ಅಂಥವನನ್ನು ಯೆಹೋವ ದೇವರು ಉಳಿಸುವುದಿಲ್ಲ, ಆಗಲೇ ಯೆಹೋವ ದೇವರ ಕೋಪವೂ, ರೋಷವೂ ಆ ಮನುಷ್ಯನನ್ನು ಸುಡುವುದು. ಈ ಗ್ರಂಥದಲ್ಲಿ ಬರೆದಿರುವ ಶಾಪವೆಲ್ಲಾ ಅವನ ಮೇಲೆ ಬರುವುದು. ಯೆಹೋವ ದೇವರು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವರು.
[21] ಈ ನಿಯಮದ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಯೆಹೋವ ದೇವರು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವರು.
[22] ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ, ದೂರದೇಶದಿಂದ ಬರುವ ಅನ್ಯನೂ, ಆ ದೇಶದ ವಿಪತ್ತುಗಳನ್ನೂ, ಯೆಹೋವ ದೇವರು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡುವರು.
[23] ಯೆಹೋವ ದೇವರು ತಮ್ಮ ದೈವಿಕ ಕೋಪದಲ್ಲಿ ಕೆಡವಿ ಹಾಕಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಂತೆ ಆ ದೇಶವೆಲ್ಲಾ ಗಂಧಕವೂ, ಉಪ್ಪೂ ಉರಿಯುತ್ತಾ, ವ್ಯವಸಾಯವಾದರೂ ಹುಲ್ಲಾದರೂ ಬೆಳೆಯದೆ ಇರುವುದು.
[24] ಆಗ ಎಲ್ಲಾ ದೇಶದವರೂ, “ಯೆಹೋವ ದೇವರು ಈ ದೇಶಕ್ಕೆ ಏಕೆ ಹೀಗೆ ಮಾಡಿದ್ದಾರೆ? ಈ ದೊಡ್ಡ ಕೋಪಾಗ್ನಿಗೆ ಕಾರಣವೇನು?” ಎಂದು ಕೇಳುವರು.
[25] ಆಗ ಜನರು, “ಇಸ್ರಾಯೇಲರು ತಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಉಲ್ಲಂಘಿಸಿದ್ದಾರೆ.
[26] ಅವರು ತಮಗೆ ನೇಮಕವಾಗದಿದ್ದ ಹಾಗು ಗೊತ್ತಿಲ್ಲದಿದ್ದ ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದ್ದಾರೆ.
[27] ಆದ್ದರಿಂದ ಯೆಹೋವ ದೇವರು ಇಸ್ರಾಯೇಲ್ ದೇಶದ ಮೇಲೆ ಕೋಪಗೊಂಡು ಈ ಗ್ರಂಥದಲ್ಲಿ ಬರೆದಿರುವ ಶಾಪಗಳನ್ನು ಅವರ ಮೇಲೆ ಬರಮಾಡಿದ್ದಾರೆ.
[28] ಯೆಹೋವ ದೇವರು ಅವರನ್ನು ತೀವ್ರಕೋಪದಲ್ಲಿಯೂ, ಮಹಾ ಆಸಕ್ತಿಯಲ್ಲಿಯೂ ದೇಶದಿಂದ ಕಿತ್ತುಹಾಕಿ, ಇಂದು ಇರುವ ಪ್ರಕಾರ ಅವರನ್ನು ಬೇರೆ ದೇಶಕ್ಕೆ ಕಳುಹಿಸಿದ್ದಾರೆ.”
[29] ರಹಸ್ಯಗಳು ನಮ್ಮ ದೇವರಾದ ಯೆಹೋವ ದೇವರಿಗೆ ಸೇರಿದ್ದು, ಆದರೆ ಪ್ರಕಟವಾದ ಈ ನಿಯಮದ ಮಾತುಗಳನ್ನೆಲ್ಲಾ ನಾವು ಕೈಕೊಳ್ಳುವ ಹಾಗೆ ನಮಗೂ, ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.