[1] ಆಕಾಶವೇ, ಕಿವಿಗೊಡು. ನಾನು ಮಾತನಾಡುತ್ತೇನೆ. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.
[2] ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.
[3] ಏಕೆಂದರೆ ಯೆಹೋವ ದೇವರ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
[4] ದೇವರು ಸಂರಕ್ಷಿಸುವ ಬಂಡೆ. ದೇವರ ಕಾರ್ಯವು ಸಂಪೂರ್ಣವಾದದ್ದು. ಅವರ ಮಾರ್ಗಗಳೆಲ್ಲಾ ನ್ಯಾಯವಾಗಿವೆ. ಅವರು ಯಾವ ತಪ್ಪನ್ನೂ ಮಾಡದ ನಂಬಿಗಸ್ತ ದೇವರು, ನೀತಿವಂತರೂ ಯಥಾರ್ಥರೂ ಆದ ದೇವರು.
[5] ಇಸ್ರಾಯೇಲರು ತಮ್ಮನ್ನು ಕೆಡಿಸಿಕೊಂಡರು. ದೇವರ ಮಕ್ಕಳಿಗೆ ತಕ್ಕಂತೆ ನಡೆಯದವರು. ಅವರು ಮೂರ್ಖರಾದ ವಕ್ರ ಸಂತತಿ.
[6] ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?
[7] ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳಿರಿ. ತಲತಲಾಂತರಗಳ ವರುಷಗಳನ್ನು ಗ್ರಹಿಸಿಕೊಳ್ಳಿರಿ. ನಿಮ್ಮ ತಂದೆಯನ್ನು ಕೇಳಿದರೆ, ಅವರು ನಿಮಗೆ ತಿಳಿಸುವರು. ನಿಮ್ಮ ಹಿರಿಯರನ್ನು ಕೇಳಿದರೆ, ಅವರು ನಿಮಗೆ ಹೇಳುವರು.
[8] ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.
[9] ಏಕೆಂದರೆ ಯೆಹೋವ ದೇವರ ಪಾಲು ಅವರ ಜನರೇ ಆಗಿರುತ್ತಾರೆ. ಯಾಕೋಬ್ಯರೇ ದೇವರ ಸೊತ್ತಿನ ಪಾಲು.
[10] ದೇವರು ಬರಿದಾದ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಕಂಡು ನಡೆಸಿದರು. ದೇವರು ಇಸ್ರಾಯೇಲರನ್ನು ರಕ್ಷಿಸಿ, ಉಪದೇಶಿಸಿ, ತಮ್ಮ ಕಣ್ಣುಗುಡ್ಡೆಯಂತೆ ಕಾಪಾಡಿದರು.
[11] ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ, ಅವುಗಳ ಮೇಲೆ ರೆಕ್ಕೆಯನ್ನಾಡಿಸಿ, ತನ್ನ ರೆಕ್ಕೆಗಳನ್ನು ಚಾಚಿ, ಅವುಗಳನ್ನು ತೆಗೆದುಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ,
[12] ಯೆಹೋವ ದೇವರು ಮಾತ್ರವೇ ಇಸ್ರಾಯೇಲರನ್ನು ನಡೆಸಿಕೊಂಡು ಬಂದರು. ಅನ್ಯದೇವರು ಯಾರೂ ಇಸ್ರಾಯೇಲರ ಸಂಗಡ ಇರಲಿಲ್ಲ.
[13] ದೇವರು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ, ಅವರಿಗೆ ವ್ಯವಸಾಯ ವೃದ್ಧಿಯನ್ನುಂಟುಮಾಡಿ, ಬಂಡೆಯಿಂದ ಜೇನೂ, ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದರು.
[14] ಹಸುಗಳ ಕೆನೆಯನ್ನೂ, ಕುರಿಗಳ ಹಾಲನ್ನೂ, ಕುರಿಮರಿಗಳ ಕೊಬ್ಬಿನ ಸಂಗಡ ಬಾಷಾನಿನ ಟಗರುಗಳನ್ನೂ ಹೋತಗಳನ್ನೂ ಉತ್ತಮವಾದ ಗೋಧಿಯನ್ನು ಕೊಟ್ಟರು. ನೀನು ರಕ್ತಗೆಂಪಾದ ದ್ರಾಕ್ಷಾರಸವನ್ನು ಕುಡಿದೆ.
[15] ಯೆಶುರೂನು ಎಂಬ ಇಸ್ರಾಯೇಲರು ಕೊಬ್ಬಿ ಹೋದರು. ಅವರು ಹೊಟ್ಟೆ ತುಂಬ ಚೆನ್ನಾಗಿ ತಿಂದು ದಪ್ಪವಾದರು. ಅವರು ತಮ್ಮನ್ನು ಸೃಷ್ಟಿಮಾಡಿದ ದೇವರನ್ನು ಬಿಟ್ಟು, ತಮ್ಮ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದರು.
[16] ಅನ್ಯದೇವತೆಗಳಿಂದ ದೇವರಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ದೇವರಿಗೆ ಕೋಪವನ್ನು ಎಬ್ಬಿಸಿದರು.
[17] ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಮುಂಚಿತವಾಗಿ ಅರಿಯದ ದೇವರುಗಳಿಗೆ, ಸಮೀಪದಲ್ಲಿ ಹೊಸದಾಗಿ ತೋರಿ ಬಂದ ದೇವರುಗಳಿಗೆ, ಅಂದರೆ, ಅವರ ಪಿತೃಗಳು ಭಜಿಸದವುಗಳಿಗೆ ಬಲಿ ಅರ್ಪಿಸಿದರು.
[18] ನಿಮ್ಮನ್ನು ಹುಟ್ಟಿಸಿದ ರಕ್ಷಣಾಬಂಡೆಯನ್ನು ನೆನಸದೆ, ನಿಮ್ಮನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿರಿ.
[19] ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.
[20] ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.
[21] ದೇವರಲ್ಲದವುಗಳಿಂದ ಅವರು ನನಗೆ ರೋಷ ಹುಟ್ಟಿಸಿದರು. ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪವನ್ನು ಎಬ್ಬಿಸಿದರು. ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
[22] ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು.
[23] “ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿಡುವೆನು. ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
[24] ಅವರು ಹಸಿವೆಯಿಂದ ಬಳಲಿ ಹೋಗುವರು, ಜ್ವಾಲೆಯಿಂದಲೂ ಕಠಿಣ ವ್ಯಾಧಿಯಿಂದಲೂ ಬೀಳುವರು. ಕಾಡುಮೃಗಗಳನ್ನೂ ಧೂಳಿನಲ್ಲಿರುವ ವಿಷಸರ್ಪಗಳನ್ನೂ ಅವರಿಗೆ ವಿರೋಧವಾಗಿ ಕಳುಹಿಸುವೆನು.
[25] ಮನೆಯ ಹೊರಗೆ ಖಡ್ಗವೂ ಒಳಗೆ ಭಯವೂ ಇವರಲ್ಲಿರುವುವು. ಪ್ರಾಯಸ್ಥರೂ ಕನ್ನಿಕೆಯರೂ ನರೆಕೂದಲಿನವರೂ ಹಾಲು ಕುಡಿಯುವ ಕೂಸುಗಳೂ ಖಡ್ಗಗಳಿಗೆ ಸಂಹಾರವಾಗುವರು.
[26] ನಾನು ಅವರನ್ನು ಚದರಿಸಿಬಿಡುವೆನು. ಅವರ ನೆನಪೇ ಮನುಷ್ಯರಲ್ಲಿ ಇರದ ಹಾಗೆ ಮಾಡುತ್ತಿದ್ದೆನು.
[27] ಆದರೆ ಅವರ ವಿರೋಧಿಗಳು ತಪ್ಪಾದ ಭಾವನೆ ಮಾಡಿಕೊಂಡು, ‘ಯೆಹೋವ ದೇವರು ಇವುಗಳನ್ನೆಲ್ಲಾ ಮಾಡಲಿಲ್ಲ, ನಾವೇ ನಮ್ಮ ಕೈಯಿಂದ ಜಯಿಸಿದೆವೆಂದುಕೊಳ್ಳುವರು,’ ಆದ್ದರಿಂದ ನಾನು ಹಿಂತಗೆದುಕೊಂಡೆನು.”
[28] ಏಕೆಂದರೆ ಇಸ್ರಾಯೇಲರು ಆಲೋಚನೆ ಇಲ್ಲದ ಜನಾಂಗವೇ. ಅವರಲ್ಲಿ ವಿವೇಕವಿಲ್ಲ.
[29] ಅವರಿಗೆ ಜ್ಞಾನವಿದ್ದಿದ್ದರೆ ಈ ವಿಷಯಗಳನ್ನೆಲ್ಲಾ ಗ್ರಹಿಸುತ್ತಿದ್ದರು, ತಮ್ಮ ಕಡೆಕಾಲದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.
[30] ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
[31] ಏಕೆಂದರೆ ನಮ್ಮ ರಕ್ಷಣಾಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
[32] ಏಕೆಂದರೆ ಸೊದೋಮಿನ ದ್ರಾಕ್ಷಿಗಿಡದಿಂದಲೂ, ಗೊಮೋರದ ತೋಟದೊಳಗಿಂದಲೂ ಅವರ ದ್ರಾಕ್ಷಿಗಿಡ ಉಂಟಾಯಿತು. ಅವರ ಹಣ್ಣುಗಳು, ವಿಷದ ಹಣ್ಣುಗಳು, ಆ ಹಣ್ಣುಗಳ ಗೊಂಚಲು ಕಹಿಯಾಗಿವೆ.
[33] ಅವರ ದ್ರಾಕ್ಷಾರಸವು ಸರ್ಪಗಳ ವಿಷವೂ, ಹಾವುಗಳ ಕ್ರೂರ ವಿಷವೂ ಆಗಿದೆ.
[34] “ನಾನು ಇದನ್ನು ನನ್ನ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದಲ್ಲವೋ? ಇದನ್ನು ನಾನು ಮುದ್ರಿಸಿದ್ದಲ್ಲವೋ?
[35] ಮುಯ್ಯಿಗೆ ಮುಯ್ಯಿ ತೀರಿಸುವುದೂ, ಪ್ರತಿಫಲ ಕೊಡುವುದೂ ನನ್ನದೇ. ತಕ್ಕ ಕಾಲದಲ್ಲಿ ಅವರ ಕಾಲು ಜಾರುವುದು. ಅವರ ವಿನಾಶದ ದಿವಸ ಸಮೀಪವಾಗಿದೆ. ಅವರಿಗೆ ಸಿದ್ಧವಾದ ದುರ್ಗತಿಯ ಕಾಲ ಬೇಗ ಬರುತ್ತವೆ.”
[36] ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.
[37] ಆಗ ಯೆಹೋವ ದೇವರು ಹೀಗನ್ನುವರು: “ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ,
[38] ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ದೇವರುಗಳು ಎಲ್ಲಿ? ಈಗ ಆ ದೇವರುಗಳು ಎದ್ದು ನಿಮಗೆ ಸಹಾಯ ಮಾಡಲಿ, ನಿಮಗೋಸ್ಕರ ಕಾವಲಾಗಲಿ.
[39] “ನಾನು ಇರುವಾತನೇ ಆಗಿದ್ದೇನೆ! ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ. ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ, ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
[40] ಆಕಾಶದ ಕಡೆ ನನ್ನ ಕೈಯೆತ್ತಿ, ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.
[41] ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.
[42] ಸತ್ತವರ ಮತ್ತು ಸೆರೆಯಾದವರ ರಕ್ತದಿಂದಲೂ, ಶತ್ರುವಿಗೆ ಮಾಡಿದ ಪ್ರತೀಕಾರದಿಂದಲೂ ನನ್ನ ಬಾಣಗಳು ಅಮಲೇರುವುದು. ನನ್ನ ಖಡ್ಗವು ಮಾಂಸವನ್ನು ಭಕ್ಷಿಸುವುದು. ಹೀಗೆ ಶತ್ರುಗಳ ನಾಯಕರ ತಲೆ ಬೀಳುವುದು.”
[43] ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ. ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು. ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.
[44] ಆಗ ಮೋಶೆಯು ನೂನನ ಮಗನಾದ ಹೋಶೇಯನ ಸಂಗಡ ಬಂದು, ಈ ಹಾಡಿನ ಮಾತುಗಳನ್ನೆಲ್ಲಾ ಜನರು ಕೇಳುವ ಹಾಗೆ ಹೇಳಿದನು.
[45] ಮೋಶೆಯು ಈ ಮಾತುಗಳನ್ನೆಲ್ಲಾ ಸಮಸ್ತ ಇಸ್ರಾಯೇಲಿಗೆ ಹೇಳಿ ತೀರಿಸಿದ ತರುವಾಯ ಅವನು ಅವರಿಗೆ,
[46] “ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ನಿಯಮದ ಮಾತುಗಳನ್ನು ಅನುಸರಿಸಬೇಕೆಂದು ನೀವು ನಿಮ್ಮ ಮಕ್ಕಳಿಗೆ ಆಜ್ಞಾಪಿಸಿರಿ.
[47] ಏಕೆಂದರೆ ಇದು ನಿಮಗೆ ಕೇವಲ ವ್ಯರ್ಥವಾದದ್ದಲ್ಲ. ಇದು ನಿಮಗೆ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ,” ಎಂದು ಹೇಳಿದನು.
[48] ಆ ದಿವಸವೇ ಯೆಹೋವ ದೇವರು ಮೋಶೆಗೆ,
[49] “ನೀನು ಈ ಅಬಾರೀಮ್ ಬೆಟ್ಟದ ಮೇಲೆ ಅಂದರೆ, ಮೋವಾಬ್ ದೇಶದಲ್ಲಿ ಯೆರಿಕೋವಿಗೆ ಎದುರಾಗಿ ಇರುವ ನೆಬೋ ಪರ್ವತದ ಮೇಲೆ ಏರಿ ಹೋಗು. ನಾನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವ ಕಾನಾನ್ ದೇಶವನ್ನು ನೋಡು.
[50] ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು, ತನ್ನ ಜನರ ಬಳಿಗೆ ಸೇರಿದ ಹಾಗೆ, ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು, ನಿನ್ನ ಜನರ ಬಳಿಗೆ ಸೇರಬೇಕು.
[51] ನೀವಿಬ್ಬರೂ ಚಿನ್ ಮರುಭೂಮಿಯಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲರ ಮುಂದೆ ನಂಬದೆ, ನನ್ನ ಪವಿತ್ರತೆಯನ್ನು ಇಸ್ರಾಯೇಲರ ನಡುವೆ ಕಾಪಾಡದೆ ನಂಬದೆ ಹೋದಿರಿ.
[52] ಆದುದರಿಂದ, ನೀನು ಆ ದೇಶವನ್ನು ದೂರದಿಂದ ನೋಡುವೆ, ಆದರೆ ನಾನು ಇಸ್ರಾಯೇಲರಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.