[1] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದ ಜನಾಂಗಗಳನ್ನು ದೇವರು ತೆಗೆದುಹಾಕಿದ ತರುವಾಯ, ನೀವು ದೇಶವನ್ನು ಸ್ವಾಧೀನಮಾಡಿಕೊಂಡು ಅದರ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಿರಿ.
[2] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ನಿಮ್ಮ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿಮಗಾಗಿ ಪ್ರತ್ಯೇಕಿಸಬೇಕು.
[3] ಕೈತಪ್ಪಿ ಕೊಲೆ ಮಾಡುವವರೆಲ್ಲರೂ ಅಲ್ಲಿಗೆ ಓಡಿಹೋಗುವುದಕ್ಕೆ ಅನುಕೂಲವಾಗುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದ ಮೇರೆಯನ್ನು ಮೂರು ಭಾಗಮಾಡಿ, ಅವುಗಳ ಮಾರ್ಗವನ್ನು ಸಿದ್ಧಮಾಡಿಕೊಳ್ಳಬೇಕು.
[4] ಬದುಕಿ ಉಳಿಯಲು ಅಲ್ಲಿ ಓಡಿಹೋಗತಕ್ಕ ಕೊಲೆಪಾತಕನ ವಿವರವೇನೆಂದರೆ, ತಿಳಿಯದೆ ಇಲ್ಲವೆ ಪೂರ್ವ ಕಲ್ಪಿತ ಹಗೆ ಮಾಡದೆ, ತನ್ನ ನೆರೆಯವನನ್ನು ಹೊಡೆದವನೇ.
[5] ಉದಾಹರಣೆಗೆ: ಒಬ್ಬ ವ್ಯಕ್ತಿ ಕಟ್ಟಿಗೆಯನ್ನು ಕಡಿಯಲು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋದನೆಂದು ಇಟ್ಟುಕೊಳ್ಳೋಣ. ಅಲ್ಲಿ ಒಂದು ಮರವನ್ನು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿ ಕಾವಿನಿಂದ ಜಾರಿ, ಆ ಮತ್ತೊಬ್ಬನಿಗೆ ತಗಲಿ ಅವನು ಸತ್ತರೆ, ಹೊಡೆದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು.
[6] ಸತ್ತವನಲ್ಲಿ ಅವನಿಗೆ ಮೊದಲಿನಿಂದಲೂ ದ್ವೇಷವಿರಲಿಲ್ಲ. ಆದ್ದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯೆ ಮಾಡಿದವನಿಗೆ ಮುಯ್ಯಿ ತೀರಿಸುವ ಹಂಗುಳ್ಳ ಸಮೀಪ ಬಂಧು ಕೋಪದಿಂದ ಉರಿಯುತ್ತಾ, ಅವನನ್ನು ಹಿಂದಟ್ಟಬಹುದು. ಮಾರ್ಗದ ಮಧ್ಯದಲ್ಲೇ ಅವನನ್ನು ಹಿಡಿದು ಕೊಂದು ಹಾಕಬಹುದು.
[7] ಈ ಕಾರಣದಿಂದಲೇ ನೀವು ಆ ಮೂರು ಆಶ್ರಯಪಟ್ಟಣಗಳನ್ನು ಗೊತ್ತು ಮಾಡಬೇಕೆಂದು ಆಜ್ಞಾಪಿಸಿದ್ದೇನೆ.
[8] ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮ ಮೇರೆಯನ್ನು ವಿಸ್ತಾರಮಾಡಿ, ನಿಮ್ಮ ಪಿತೃಗಳಿಗೆ ಕೊಡುವುದಾಗಿ ಹೇಳಿದ ದೇಶವನ್ನೆಲ್ಲಾ ನಿಮಗೆ ಕೊಡುವರು.
[9] ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಕಾಪಾಡಿ ಕೈಗೊಳ್ಳಬೇಕು. ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ಯಾವಾಗಲೂ ನಡೆದರೆ ನೀವು ಈ ಮೂರು ಪಟ್ಟಣಗಳ ಜೊತೆಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು.
[10] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗಬಾರದು, ಅಂಥವನಿಗೆ ಮರಣಶಿಕ್ಷೆಯಾದರೆ ಆ ರಕ್ತಾಪರಾಧ ನಿಮ್ಮದಾಗಿಯೇ ಇರುವುದು.
[11] ಆದರೆ ಒಬ್ಬನು ತನ್ನ ನೆರೆಯವನನ್ನು ದ್ವೇಷಿಸಿ ಹೊಂಚು ಹಾಕಿ, ಅವನಿಗೆ ವಿರೋಧವಾಗಿ ಎದ್ದು, ಅವನನ್ನು ಸಾಯುವವರೆಗೂ ಹೊಡೆದು ಕೊಂದುಹಾಕಿ ಈ ಪಟ್ಟಣಗಳಿಗೆ ಓಡಿಹೋದರೆ,
[12] ಆ ಪಟ್ಟಣದ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ, ಅವನಿಗೆ ಮರಣದಂಡನೆಯಾಗುವಂತೆ ಸೇಡು ತೀರಿಸಿಕೊಳ್ಳುವವನ ಕೈಗೆ ಅವನನ್ನು ಒಪ್ಪಿಸಬೇಕು.
[13] ನೀವು ಅವನ ಮೇಲೆ ದಯೆ ತೋರಬಾರದು. ನಿಮಗೆ ಒಳ್ಳೆಯದಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲರಲ್ಲಿ ಉಳಿಯದಂತೆ ತೆಗೆದುಹಾಕಬೇಕು.
[14] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ದೇಶದೊಳಗೆ ನೀವು ಹೊಂದುವ ಸೊತ್ತಿನಲ್ಲಿ ಹಿರಿಯರು ಇಟ್ಟಂಥ ನಿಮ್ಮ ನೆರೆಯವನ ಮೇರೆಯನ್ನು ಸರಿಸಬಾರದು.
[15] ಯಾವ ಅಕ್ರಮದ ನಿಮಿತ್ತವೂ, ಅಥವಾ ಪಾಪದ ನಿಮಿತ್ತವೂ ಒಬ್ಬ ಮನುಷ್ಯನಿಗೆ ವಿರೋಧವಾಗಿ ಒಬ್ಬ ಸಾಕ್ಷಿ ನಿಂತುಕೊಳ್ಳಬಾರದು. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ವಿಷಯವು ಸ್ಥಿರವಾಗುವುದು.
[16] ಸುಳ್ಳುಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವುದಕ್ಕೆ ಎದ್ದರೆ,
[17] ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಯೆಹೋವ ದೇವರ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ಹಾಗು ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು.
[18] ನ್ಯಾಯಾಧಿಪತಿಗಳು ಕೂಲಂಕಷವಾಗಿ ವಿಚಾರಣೆ ಮಾಡಬೇಕು. ಆಗ ಇಗೋ, ಆ ಸಾಕ್ಷಿಯು ಸುಳ್ಳುಸಾಕ್ಷಿಯಾಗಿದ್ದರೆ, ಅಂದರೆ ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ,
[19] ಅವನು ತನ್ನ ಸಹೋದರನಿಗೆ ಮಾಡುವುದಕ್ಕೆ ಯೋಚಿಸಿದ ಪ್ರಕಾರವೇ ಅವನಿಗೆ ಶಿಕ್ಷೆ ಕೊಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.
[20] ಆಗ ಉಳಿದವರು ಕೇಳಿ ಭಯಪಟ್ಟು, ಆ ದುಷ್ಟಕೃತ್ಯವನ್ನು ಇನ್ನು ಮುಂದೆ ನಿಮ್ಮ ಮಧ್ಯದಲ್ಲಿ ಮಾಡದಿರುವರು.
[21] ನೀವು ಅಂಥವರಿಗೆ ಕರುಣೆ ತೋರಿಸಬಾರದು, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಂದ ತೆಗೆದುಬಿಡಬೇಕು.