[1] ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ಹತನಾದ ಒಬ್ಬ ವ್ಯಕ್ತಿಯ ಶವವು ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡಾಗ ಮತ್ತು ಅವನನ್ನು ಯಾರು ಹೊಡೆದರೆಂದು ತಿಳಿಯದೆ ಹೋದರೆ,
[2] ನಿಮ್ಮ ಹಿರಿಯರೂ ನ್ಯಾಯಾಧಿಪತಿಗಳೂ ಹೊರಗೆ ಹೋಗಿ, ಆ ಹತನಾದವನ ಸುತ್ತಲಿರುವ ಪಟ್ಟಣಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳಲು ಅಳತೆಮಾಡಬೇಕು.
[3] ಹತನಾದವನಿಗೆ ಸಮೀಪವಾದ ಊರು ಯಾವುದೋ, ಆ ಊರಿನ ಹಿರಿಯರು ಇನ್ನೂ ಕೆಲಸ ಮಾಡದಂಥ, ನೊಗ ಎಳೆಯದಂಥ, ಒಂದು ಕಡಸನ್ನು ತೆಗೆದುಕೊಳ್ಳಬೇಕು.
[4] ಆಮೇಲೆ ಆ ಊರಿನ ಹಿರಿಯರು ಆ ಕಡಸನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜ ಹಾಕದಂಥ ಸ್ಥಳಕ್ಕೆ ತೆಗೆದುಕೊಂಡುಹೋಗಿ, ಅಲ್ಲಿ ಹಳ್ಳದಲ್ಲಿ ಕಡಸನ್ನು ವಧಿಸಬೇಕು.
[5] ಲೇವಿಯ ಪುತ್ರರಾದ ಯಾಜಕರು ಹತ್ತಿರ ಇರಬೇಕು. ಏಕೆಂದರೆ ಅವರನ್ನೇ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಸೇವೆ ಮಾಡುವುದಕ್ಕೂ ಯೆಹೋವ ದೇವರ ಹೆಸರಿನಲ್ಲಿ ಆಶೀರ್ವಾದ ಕೊಡುವುದಕ್ಕೂ ಎಲ್ಲಾ ವಿವಾದ ಹೊಡೆದಾಟಗಳ ವಿಷಯದಲ್ಲಿ ತೀರ್ಮಾನಿಸುವುದಕ್ಕೂ ಆಯ್ದುಕೊಂಡಿದ್ದಾರೆ.
[6] ಆಮೇಲೆ ಹತನಾದವನ ಶವಕ್ಕೆ ಸಮೀಪವಾಗಿರುವ ಆ ಊರಿನ ಹಿರಿಯರೆಲ್ಲರೂ ತಗ್ಗಿನಲ್ಲಿ ವಧಿಸಿದ ಕಡಸಿನ ಮೇಲೆ ಕೈಗಳನ್ನು ತೊಳೆದುಕೊಳ್ಳಬೇಕು.
[7] ಅನಂತರ, “ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ. ನಮ್ಮ ಕಣ್ಣುಗಳು ನಡೆದದ್ದನ್ನು ನೋಡಲಿಲ್ಲ.
[8] ಯೆಹೋವ ದೇವರೇ, ನೀವು ವಿಮೋಚಿಸಿದ ನಿಮ್ಮ ಜನರಾದ ಇಸ್ರಾಯೇಲರಿಗೆ ಕರುಣೆ ಹೊದಿಸಿರಿ. ನಿಮ್ಮ ಜನರಾದ ಇಸ್ರಾಯೇಲರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡಿರಿ,” ಎಂದು ಹೇಳಬೇಕು. ಆ ರಕ್ತಾಪರಾಧವು ಅವರಿಗೆ ಮುಚ್ಚಲಾಗುವುದು.
[9] ಈ ಪ್ರಕಾರ ನೀವು ಯೆಹೋವ ದೇವರ ಮುಂದೆ ಸರಿಯಾದದ್ದನ್ನು ಮಾಡಿದರೆ, ರಕ್ತಾಪರಾಧವನ್ನು ನಿಮ್ಮಲ್ಲಿಂದ ತೆಗೆದುಹಾಕುವಿರಿ.
[10] ನೀವು ಶತ್ರುಗಳ ವಿರುದ್ಧ ಯುದ್ಧಮಾಡಿ, ನಿಮ್ಮ ದೇವರಾದ ಯೆಹೋವ ದೇವರಿಂದ, ನೀವು ಅವರನ್ನು ಸೋಲಿಸಿದರೆ,
[11] ಸೆರೆ ಹಿಡಿದವರಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ನಿಮ್ಮಲ್ಲಿ ಯಾರಾದರೂ ಕಂಡು ಇಷ್ಟಪಟ್ಟರೆ, ಅವಳನ್ನು ಮದುವೆ ಮಾಡಿಕೊಳ್ಳಬಹುದು.
[12] ಅವಳು ತಲೆ ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು,
[13] ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು, ಅವನ ಮನೆಯಲ್ಲಿ ಒಂದು ತಿಂಗಳವರೆಗೆ ತನ್ನ ತಾಯಿ ತಂದೆಯರನ್ನು ಸ್ಮರಿಸಿ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.
[14] ತರುವಾಯ ಅವಳು ಅವನಿಗೆ ಇಷ್ಟವಾಗದೆ ಹೋದರೆ, ಅವನು ಅವಳನ್ನು ಅವಳು ಬಯಸಿದ ಸ್ಥಳಕ್ಕೆ ಕಳುಹಿಸಿಬಿಡಬೇಕು. ಅವಳನ್ನು ಅವಮಾನಪಡಿಸಿದ್ದರಿಂದ ದಾಸತ್ವಕ್ಕೆ ಮಾರಲೂಬಾರದು, ದಾಸಿಯಂತೆ ನಡೆಸಲೂಬಾರದು.
[15] ಒಬ್ಬ ಮನುಷ್ಯನಿಗೆ ಇಬ್ಬರು ಹೆಂಡತಿಯರಿದ್ದು, ಒಬ್ಬಳನ್ನು ಪ್ರೀತಿಸುತ್ತಲೂ, ಮತ್ತೊಬ್ಬಳನ್ನು ದ್ವೇಷಿಸುತ್ತಲೂ ಇದ್ದರೆ, ಅವರಿಬ್ಬರೂ ಅವನಿಗೆ ಮಕ್ಕಳನ್ನು ಹೆತ್ತಿರುವಲ್ಲಿ, ಚೊಚ್ಚಲು ಮಗನು ತಿರಸ್ಕಾರ ಹೊಂದುತ್ತಿರುವ ಹೆಂಡತಿಯಲ್ಲಿಯೇ ಹುಟ್ಟಿದ್ದರೆ,
[16] ಅವನು ತನ್ನ ಪುತ್ರರಿಗೆ ತನ್ನ ಆಸ್ತಿಯನ್ನು ಹಂಚಿ ಕೊಡುವಾಗ, ತಾನು ಪ್ರೀತಿಮಾಡದ ಹೆಂಡತಿಯ ಚೊಚ್ಚಲ ಮಗನಿಗೆ ಬದಲಾಗಿ ಅವನು ಪ್ರೀತಿಸುವವಳ ಮಗನನ್ನು ಹಿರಿಯನೆಂದು ಮಾಡಕೂಡದು.
[17] ಅವನು ಪ್ರೀತಿಮಾಡದವಳ ಮಗನಿಗೆ ತನ್ನ ಬಳಿಯಲ್ಲಿರುವ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು, ಅವನೇ ಜೇಷ್ಠ ಪುತ್ರನೆಂದು ಒಪ್ಪಿಕೊಳ್ಳಬೇಕು. ಏಕೆಂದರೆ ಅವನೇ ಅವನ ಪ್ರಥಮ ಫಲ. ಅವನಿಗೆ ಜೇಷ್ಠ ಪುತ್ರನ ಹಕ್ಕು ಉಂಟು.
[18] ಒಬ್ಬ ಮನುಷ್ಯನಿಗೆ ಮೊಂಡನೂ, ತಿರುಗಿ ಬೀಳುವವನೂ ಆದ ಮಗನಿದ್ದರೆ, ಅವನು ತಂದೆತಾಯಿಯ ಮಾತನ್ನೂ ಕೇಳದೆ, ಅವರು ಅವನನ್ನು ಶಿಸ್ತುಪಡಿಸಲು ಹೇಳುವ ಮಾತನ್ನೂ ಕೇಳದೆ ಹೋದರೆ,
[19] ಅವನ ತಂದೆತಾಯಿಗಳು ಅವನನ್ನು ಹಿಡಿದು, ಪಟ್ಟಣದ ಹಿರಿಯರ ಬಳಿಗೂ ಅವನ ಊರಿನ ಬಾಗಿಲಿನ ಬಳಿಗೂ ತಂದು,
[20] ಪಟ್ಟಣದ ಹಿರಿಯರಿಗೆ, “ಈ ನಮ್ಮ ಮಗನು ಮೊಂಡನೂ, ತಿರುಗಿ ಬೀಳುವವನೂ, ನಮ್ಮ ಮಾತು ಕೇಳದವನೂ, ಹೊಟ್ಟೆ ಬಾಕನೂ, ಕುಡುಕನೂ ಆಗಿದ್ದಾನೆ,” ಎಂದು ಹೇಳಬೇಕು.
[21] ಆಗ ಅವನ ಪಟ್ಟಣದ ಜನರೆಲ್ಲರೂ ಅವನು ಸಾಯುವಂತೆ ಅವನ ಮೇಲೆ ಕಲ್ಲೆಸೆಯಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. ಇಸ್ರಾಯೇಲರಲ್ಲಿ ಇದನ್ನು ಕೇಳಿ ಭಯಪಡುವರು.
[22] ಒಬ್ಬನು ಮರಣದಂಡನೆಗೆ ಯೋಗ್ಯವಾದ ಅಪರಾಧ ಮಾಡಿದ್ದರಿಂದ, ನೀವು ಅವನಿಗೆ ಮರಣದಂಡನೆಯನ್ನು ವಿಧಿಸಿ, ಅವನ ಶವವನ್ನು ಮರಕ್ಕೆ ತೂಗುಹಾಕಿದ್ದಾದರೆ,
[23] ಅವನ ಶವ ರಾತ್ರಿಯಲ್ಲಿ ಮರದ ಮೇಲಿರಬಾರದು. ಅವನನ್ನು ಅದೇ ದಿವಸದಲ್ಲಿ ಹೂಣಬೇಕು. ಏಕೆಂದರೆ ಮರಕ್ಕೆ ತೂಗಹಾಕಲಾದವನು ದೇವರ ಶಾಪವನ್ನು ಹೊಂದಿದವನು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.