Skip to content
Opens in a new window
Listen to this chapter • 3:44

[1] “ನರಪುತ್ರನೇ, ಹದವಾದ ಖಡ್ಗವನ್ನು ತೆಗೆದುಕೊಂಡು, ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ ನಿನ್ನ ತಲೆಯನ್ನೂ, ಗಡ್ಡವನ್ನೂ ಬೋಳಿಸಿಬಿಟ್ಟು, ತಕ್ಕಡಿಯನ್ನು ತಂದು ಅದರಿಂದ ತೂಗಿ ಆ ಕೂದಲನ್ನು ಭಾಗ ಮಾಡು.

[2] ಮುತ್ತಿಗೆಯ ದಿನಗಳು ಮುಗಿದ ಕೂಡಲೆ ಕೂದಲನ್ನು ಮೂರು ಭಾಗ ಮಾಡಿ, ಪಟ್ಟಣದ ಮಧ್ಯದೊಳಗೆ ಬೆಂಕಿಯಲ್ಲಿ ಸುಡು; ಇನ್ನೊಂದು ಭಾಗವನ್ನು ತೆಗೆದುಕೊಂಡು ಪಟ್ಟಣದ ಸುತ್ತಲು ಖಡ್ಗದಿಂದ ಕಡಿ; ಮತ್ತೊಂದು ಭಾಗವನ್ನು ಗಾಳಿಗೆ ತೂರಿಬಿಡು; ಈ ಪ್ರಕಾರ ನಾನು ನನ್ನ ಜನರ ಹಿಂದೆ ಕತ್ತಿಯನ್ನು ಬೀಸುವೆನು.

[3] ಆಗ ಕಡೆಯ ಭಾಗದಲ್ಲಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನಲ್ಲಿ ಕಟ್ಟು.

[4] ಆಮೇಲೆ ಇವುಗಳಲ್ಲಿ ಕೆಲವನ್ನು ಆರಿಸಿ ಬೆಂಕಿಯೊಳಗೆ ಹಾಕಿ ಸುಡು; ಅವುಗಳಿಂದ ಬೆಂಕಿಯು ಹೊರಟು ಇಸ್ರಾಯೇಲ್ ವಂಶವನ್ನೆಲ್ಲಾ ವ್ಯಾಪಿಸುವುದು.”

[5] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇದು ಯೆರೂಸಲೇಮ್; ಪಟ್ಟಣವನ್ನು ನಾನು ಜನಾಂಗಗಳ ಮಧ್ಯದಲ್ಲಿ ಸ್ಥಾಪಿಸಿದ್ದೇನೆ, ಅದರ ಸುತ್ತಲು ನಾನಾ ದೇಶಗಳಿವೆ.

[6] ಅದು ನನ್ನ ನಿಯಮನಿಷ್ಠೆಗಳಿಗೆ ಒಳಪಡದೆ ಜನಾಂಗಗಳಿಗಿಂತಲೂ, ಸುತ್ತಲಿನ ದೇಶಗಳವರಿಗಿಂತಲೂ ಹೆಚ್ಚು ಅಧರ್ಮವನ್ನು ನಡೆಸಿದೆ; ಅದರ ನಿವಾಸಿಗಳು ನನ್ನ ನಿಯಮಗಳನ್ನು ಅನುಸರಿಸದೆ ನನ್ನ ವಿಧಿಗಳನ್ನು ನಿರಾಕರಿಸಿದ್ದಾರೆ.”

[7] ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನನ್ನ ನಿಯಮಗಳನ್ನು ಅನುಸರಿಸದೆ, ನನ್ನ ವಿಧಿಗಳನ್ನು ಕೈಕೊಳ್ಳದೆ, ನಿಮ್ಮ ಸುತ್ತಲಿನ ಜನಾಂಗಗಳ ಧರ್ಮವಿಧಿಗಳನ್ನು ಆಚರಿಸಿ, ಆ ಜನಾಂಗಗಳಿಗಿಂತ ಹೆಚ್ಚು ದಂಗೆಕೋರರಾಗಿ ವರ್ತಿಸಿದ್ದೀರಿ.

[8] ಆದುದರಿಂದ ಯೆರೂಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು ಇದು ಕರ್ತನಾದ ಯೆಹೋವನ ನುಡಿ.

[9] ನೀನು ಬಹಳ ಅಸಹ್ಯಕಾರ್ಯಗಳನ್ನು ನಡಿಸಿದ್ದರಿಂದ ನಾನು ಈವರೆಗೂ ಇನ್ನು ಮುಂದೆಯೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು.

[10] ಹೀಗಿರಲು, ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.”

[11] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ, ಅಸಹ್ಯ ವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ನಿನ್ನನ್ನು ಕುಂದಿಸುವೆನು, ನಾನು ನಿನಗೆ ಕರುಣೆ ತೋರಿಸೆನು, ಕಟಾಕ್ಷಿಸೆನು.

[12] ನಿನ್ನಲ್ಲಿನ ಮೂರನೆಯ ಒಂದು ಭಾಗದವರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲಿ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲೂ ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.

[13] “ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಸುರಿದು ಶಾಂತನಾಗುವೆನು; ರೋಷದಿಂದ ಮಾತನಾಡಿದವನು ಯೆಹೋವನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.

[14] ಹಾದುಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳುಮಾಡಿ, ಸುತ್ತಲಿನ ಜನಾಂಗಗಳ ನಿಂದೆಗೆ ಗುರಿ ಮಾಡುವೆನು.

[15] “ನಾನು ಕೋಪದಿಂದಲೂ, ರೋಷದಿಂದಲೂ, ಕಠಿಣವಾದ ಖಂಡನೆಯಿಂದಲೂ, ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ, ಪರಿಹಾಸ್ಯಗಳಿಗೂ, ಬುದ್ಧಿವಾದಗಳಿಗೂ ಆಸ್ಪದವಾಗುವವು; ಇದು ಯೆಹೋವನಾದ ನನ್ನ ನುಡಿ.

[16] ಆಗ ನಾನು ನಿನ್ನನ್ನು ಹಾಳುಮಾಡಲಿಕ್ಕೆ ಕ್ಷಾಮವೆಂಬ ನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು; ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.

[17] ನಾನು ಕಳುಹಿಸುವ ಕ್ಷಾಮದಿಂದಲೂ, ದುಷ್ಟಮೃಗಗಳಿಂದಲೂ ನಿನಗೆ ಪುತ್ರಶೋಕವು ಉಂಟಾಗುವುದು; ವ್ಯಾಧಿಯೂ, ರಕ್ತ ಪ್ರವಾಹವೂ ನಿನ್ನಲ್ಲಿ ವ್ಯಾಪಿಸುವವು; ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು” ಇದು ಯೆಹೋವನಾದ ನನ್ನ ನುಡಿ.

ಯೆಹೆಜ್ಕೇಲನು — Chapters