[1] ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಲು, ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದನು.
[2] ನಾನು ಆ ಎಲುಬುಗಳ ಮಧ್ಯೆ ಕಣಿವೆಯನ್ನು ದಾಟಿ ಬರುವಂತೆ ಮಾಡಿದನು. ಇಗೋ! ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.
[3] ಆತನು ನನಗೆ “ನರಪುತ್ರನೆ, ಈ ಎಲುಬುಗಳಿಗೆ ಜೀವವು ಬರಬಹುದೋ?” ಎಂದು ಕೇಳಲು ನಾನು, “ಕರ್ತನಾದ ಯೆಹೋವನೇ, ನೀನೇ ಬಲ್ಲೆ” ಎಂದು ಉತ್ತರಕೊಟ್ಟೆನು.
[4] ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು, “ನೀನು ಈ ಎಲುಬುಗಳ ಮೇಲೆ ಪ್ರವಾದಿಸಿ, ಹೀಗೆ ನುಡಿ, ‘ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ’.
[5] ಕರ್ತನಾದ ಯೆಹೋವನು ನಿಮಗೆ ಹೀಗೆ ಹೇಳುತ್ತಾನೆ, ‘ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ.
[6] ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ತಂದು, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿರಿ.’”
[7] ನನಗೆ ಅಪ್ಪಣೆಯಾದಂತೆ ನಾನು ಆ ಪ್ರವಾದನೆಯನ್ನು ನುಡಿಯುತ್ತಿರಲು, ಅಲ್ಲಿ ಟಕಟಕ ಶಬ್ದವಾಯಿತು, ಇಗೋ, ಅದು ಕದಲುತ್ತಿತ್ತು. ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಜೋಡಣೆಯಾದವು.
[8] ನಾನು ನೋಡುತ್ತಿರುವಾಗ ಏನಾಶ್ಚರ್ಯ ಆಹಾ, ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲ್ಹೊದಿಕೆಯಾಯಿತು, ಶ್ವಾಸ ಮಾತ್ರ ಇರಲಿಲ್ಲ.
[9] ಆಗ ಆತನು ನನಗೆ, “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ, ‘ಓ ಶ್ವಾಸವೇ,’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಚತುರ್ದಿಕ್ಕುಗಳಿಂದ ಬೀಸಿ, ಈ ಹತಶರೀರಗಳು ಬದುಕುವಂತೆ ಅವುಗಳ ಮೇಲೆ ಊದು.’”
[10] ನನಗೆ ಕೊಟ್ಟ ಅಪ್ಪಣೆಯಂತೆ ನಾನು ನುಡಿದು, ಶ್ವಾಸ ಊದಿದೆ. ಇಗೋ, ಉಸಿರು ಅವುಗಳಲ್ಲಿ ಬಂದಿತು, ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ಮಹಾ ಸೈನ್ಯವಾದವು.
[11] ಆಮೇಲೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳು ಇಸ್ರಾಯೇಲಿನ ಮನೆತನಗಳೇ; ಇಗೋ, ಆ ಮನೆತನದವರು, ‘ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆಯು ಹಾಳಾಯಿತು; ನಾವು ಸಂಪೂರ್ಣವಾಗಿ ನಾಶವಾದೆವು’” ಅಂದುಕೊಳ್ಳುತ್ತಿದ್ದಾರೆ.
[12] ಆದಕಾರಣ ನೀನು ಈ ಪ್ರವಾದನೆಯನ್ನು ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜನರೇ, ನೋಡಿರಿ, ನಾನು ನಿಮ್ಮ ಸಮಾಧಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ತರುವೆನು.
[13] ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ ನಾನೇ ಯೆಹೋವನು ಎಂದು ನಿಮಗೆ ದೃಢವಾಗುವುದು.
[14] ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು; ಆಗ ಯೆಹೋವನಾದ ನಾನೇ ಇದನ್ನು ನುಡಿದು, ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ” ಇದು ಯೆಹೋವನ ಸಂಕಲ್ಪ.
[15] ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
[16] “ನರಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು, ಅದರಲ್ಲಿ ಯೆಹೂದದ್ದು ಮತ್ತು ಯೆಹೂದಕ್ಕೆ ಸೇರಿದ ಇಸ್ರಾಯೇಲರದು ಎಂದು ಬರೆದು, ಇನ್ನೊಂದು ಕೋಲನ್ನು ತೆಗೆದುಕೊಂಡು ಅದರಲ್ಲಿ ಯೋಸೇಫಿನದು, ಎಫ್ರಾಯೀಮಿನದು, ಯೋಸೇಫಿಗೆ ಸೇರಿದ ಎಲ್ಲಾ ಇಸ್ರಾಯೇಲರದು ಎಂದು ಬರೆ.
[17] ಆ ಮೇಲೆ ಅವು ನಿನ್ನ ಕೈಯಲ್ಲಿ ಒಂದಾಗುವಂತೆ ಅವೆರಡನ್ನೂ ಒಂದಕ್ಕೊಂದು ಉದ್ದವಾಗಿ ಸೇರಿಸಿ ಹಿಡಿ.
[18] “ನಿನ್ನ ಜನರು, ‘ಇದೇನು? ನಮಗೆ ತಿಳಿಸುವುದಿಲ್ಲವೋ’ ಎಂದು ನಿನ್ನನ್ನು ಕೇಳುವಾಗ ನೀನು ಅವರಿಗೆ,
[19] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಎಫ್ರಾಯೀಮು ಹಿಡಿದಿರುವ ದಂಡವನ್ನು ಅಂದರೆ ಯೋಸೇಫಿನ ಮತ್ತು ಯೋಸೇಫಿಗೆ ಸೇರಿದ ಇಸ್ರಾಯೇಲ್ ಕುಲಗಳ ಕೋಲನ್ನು ನಾನು ತೆಗೆದು, ಯೆಹೂದದ ಕೋಲಿಗೆ ಉದ್ದವಾಗಿ ಸೇರಿಸಿ, ಅವೆರಡನ್ನು ನನ್ನ ಕೈಯಲ್ಲಿ ಒಂದೇ ಕೋಲನ್ನಾಗಿ ಹಿಡಿಯುವೆನು ಎಂದು ಹೇಳು.
[20] ಹೇಳುವಾಗ ನೀನು ಹೆಸರು ಬರೆದಿರುವ ಕೋಲುಗಳು ಅವರ ಕಣ್ಣೆದುರಿಗೆ ನಿನ್ನ ಕೈಯಲ್ಲಿರಲಿ.’”
[21] ಇದನ್ನೂ ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ಇಸ್ರಾಯೇಲರು ವಶವಾಗಿರುವ ಜನಾಂಗಗಳೊಳಗಿಂದ ನಾನು ಅವರನ್ನು ಉದ್ಧರಿಸಿ, ಎಲ್ಲಾ ಕಡೆಯಿಂದಲೂ ಒಟ್ಟಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.
[22] ಅಲ್ಲಿ ಇಸ್ರಾಯೇಲಿನ ಪರ್ವತಗಳ ಮೇಲೆ ಒಂದೇ ಜನಾಂಗವನ್ನಾಗಿ ಮಾಡುವೆನು. ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು. ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿಯೂ, ಭಿನ್ನರಾಜ್ಯದವರಾಗಿಯೂ ಇರುವುದಿಲ್ಲ.
[23] ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ ತಮ್ಮನ್ನು ಇನ್ನು ಮುಂದೆ ಅಶುದ್ಧ ಮಾಡಿಕೊಳ್ಳುವುದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು. ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
[24] “ನನ್ನ ಸೇವಕನಾದ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೇ ಪಾಲಕನಿರುವನು ಮತ್ತು ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.
[25] ನನ್ನ ಸೇವಕನಾದ ಯಾಕೋಬನಿಗೆ ನಾನು ದಯಪಾಲಿಸಿದ ದೇಶದಲ್ಲಿ ಅವರು ವಾಸಿಸುವರು; ಹೌದು, ನಿಮ್ಮ ಪೂರ್ವಿಕರು ವಾಸಿಸಿದ ದೇಶದಲ್ಲಿ ಅವರೂ ಮತ್ತು ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು. ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಅರಸನಾಗಿರುವನು.
[26] ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.
[27] ಹೌದು, ನನ್ನ ವಾಸಸ್ಥಾನವು ಅವರ ಮಧ್ಯದಲ್ಲಿರುವುದು; ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.
[28] ನನ್ನ ಪವಿತ್ರಾಲಯವು ಅವರ ಮಧ್ಯೆ ಶಾಶ್ವತವಾಗಿರುವಾಗ ಯೆಹೋವನಾದ ನಾನೇ ಇಸ್ರಾಯೇಲರನ್ನು ಪರಿಶುದ್ಧಗೊಳಿಸಿದೆನೆಂದು ಅನ್ಯಜನಾಂಗದವರು ತಿಳಿದುಕೊಳ್ಳುವರು.”