[1] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವಾರದೊಳಗೆ ಕೆಲಸ ಮಾಡುವ ಆರು ದಿನಗಳಲ್ಲಿ ಒಳಗಿನ ಅಂಗಳದ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ಮುಚ್ಚಿರಬೇಕು. ಅದನ್ನು ಸಬ್ಬತ್ ದಿನದಲ್ಲಿಯೂ, ಅಮಾವಾಸ್ಯೆಯಲ್ಲಿಯೂ ತೆರೆದಿರಬೇಕು.
[2] ರಾಜನು ಹೊರಗಿನ ಕೈಸಾಲೆಯ ಮಾರ್ಗವಾಗಿ ಆ ಹೆಬ್ಬಾಗಿಲನ್ನು ಪ್ರವೇಶಿಸಿ, ಬಾಗಿಲಿನ ಕಂಬದ ಪಕ್ಕದಲ್ಲಿ ನಿಂತುಕೊಂಡು, ತಾನು ಒಪ್ಪಿಸಿದ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞ ಪಶುಗಳನ್ನೂ ಯಾಜಕರು ಅರ್ಪಿಸುತ್ತಿರುವಾಗ ಬಾಗಿಲಿನ ಹೊಸ್ತಿಲಿನಲ್ಲಿ ಅಡ್ಡಬೀಳಲಿ, ಆ ಮೇಲೆ ಹೊರಟು ಹೋಗಲಿ. ಅ ದಿನ ಸಂಜೆಯ ತನಕ ಬಾಗಿಲನ್ನು ಮುಚ್ಚಬಾರದು.
[3] ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ ದೇಶದ ಜನರು ಆ ಹೆಬ್ಬಾಗಿಲಿನ ದ್ವಾರದ ಮುಂದೆ ಯೆಹೋವನ ಸಮ್ಮುಖವಾಗಿ ಅಡ್ಡಬೀಳಲಿ.
[4] ಸಬ್ಬತ್ ದಿನದಲ್ಲಿ ಅರಸನು ಯೆಹೋವನಿಗೆ ಪೂರ್ಣಾಂಗವಾದ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಅರ್ಪಿಸತಕ್ಕದ್ದು.
[5] ಟಗರಿನೊಡನೆ ಮೂವತ್ತು ಸೇರು ಗೋದಿಹಿಟ್ಟನ್ನೂ, ಕುರಿಗಳೊಡನೆ ಕೈಯಲಾದಷ್ಟು ಗೋದಿಹಿಟ್ಟನ್ನೂ, ಮೂವತ್ತು ಸೇರು ಗೋದಿಹಿಟ್ಟಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಕೊಡಲಿ.
[6] ಅಮಾವಾಸ್ಯೆಯಲ್ಲಿ ಅವನು ಪೂರ್ಣಾಂಗವಾದ ಒಂದು ಹೋರಿಯನ್ನೂ, ಆರು ಕುರಿಗಳನ್ನೂ, ಒಂದು ಟಗರನ್ನೂ ಒಪ್ಪಿಸತಕ್ಕದ್ದು. ಅವು ಪೂರ್ಣಾಂಗವಾಗಿಯೇ ಇರಬೇಕು.
[7] ಮತ್ತು ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಕೈಲಾದ್ದಷ್ಟು ಸೇರು ಗೋದಿಹಿಟ್ಟನ್ನೂ, ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
[8] “ಅರಸನು ಪ್ರವೇಶ ಮಾಡುವಾಗ ಹೆಬ್ಬಾಗಿಲಿನ ಕೈಸಾಲೆಯ ಮಾರ್ಗವಾಗಿ ಒಳಗೆ ಬಂದು, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.
[9] ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿನಿಂದ ಆರಾಧಿಸುವುದಕ್ಕೆ ಪ್ರವೇಶಿಸಿದವನು ದಕ್ಷಿಣ ಬಾಗಿಲಿಂದ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನಿಂದ ಪ್ರವೇಶಿಸಿದವನು ಉತ್ತರ ಬಾಗಿಲಿನಿಂದ ಹೊರಗೆ ಹೋಗಬೇಕು. ತಾನು ಪ್ರವೇಶಿಸಿದ ಬಾಗಿಲಿನಿಂದ ಹಿಂದಿರುಗದೆ ಅದಕ್ಕೆ ಎದುರಾಗಿರುವ ಬಾಗಿಲಿಂದ ಹೊರಗೆ ಹೋಗಬೇಕು.
[10] ಜನರು ಪ್ರವೇಶಿಸುವಾಗ ಅರಸನು ಅವರ ಮಧ್ಯದಲ್ಲಿ ಒಳಗೆ ಪ್ರವೇಶಿಸಲಿ. ಅವರು ಹೊರಗೆ ಹೋಗುವಾಗ ಅವರೂ ಹೊರಗೆ ಹೋಗಲಿ.
[11] ಅರಸನು ಉತ್ಸವಗಳಲ್ಲಿಯೂ, ಹಬ್ಬಗಳಲ್ಲಿಯೂ ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಕೈಲಾದ್ದಷ್ಟು ಸೇರು ಗೋದಿಹಿಟ್ಟನ್ನೂ, ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ, ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
[12] ಅರಸನು ಸ್ವಂತ ಇಚ್ಛೆಯಿಂದ ಕಾಣಿಕೆಯನ್ನಾಗಲಿ, ಸರ್ವಾಂಗಹೋಮವನ್ನಾಗಲಿ, ಸಮಾಧಾನ ಯಜ್ಞಗಳನ್ನಾಗಲಿ ಯೆಹೋವನಿಗೆ ಸಮರ್ಪಿಸುವಾಗ ಅವನಿಗಾಗಿ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ತೆರೆಯಬೇಕು. ಅವನು ಸಬ್ಬತ್ ದಿನದಲ್ಲಿ ಸಮರ್ಪಿಸುವಂತೆ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞಪಶುಗಳನ್ನೂ ಸಮರ್ಪಿಸಿ ಹೊರಡಲಿ. ಹೊರಟ ಮೇಲೆ ಬಾಗಿಲನ್ನು ಮುಚ್ಚಬೇಕು.
[13] “ನೀನು ಪೂರ್ಣಾಂಗವಾದ ವರ್ಷದ ಕುರಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಪ್ರತಿ ದಿನ ಅರ್ಪಿಸಬೇಕು. ಪ್ರತಿ ದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
[14] ಅದರೊಂದಿಗೆ ಪ್ರತಿ ದಿನ ಬೆಳಗ್ಗೆ ಧಾನ್ಯ ನೈವೇದ್ಯವಾಗಿ ಐದು ಸೇರು ಗೋದಿಹಿಟ್ಟನ್ನೂ, ಅದನ್ನು ಕಲಸುವುದಕ್ಕೆ ಎರಡು ಸೇರು ಎಣ್ಣೆಯನ್ನೂ ನೀನು ಸಮರ್ಪಿಸಬೇಕು. ಇವುಗಳನ್ನು ಪ್ರತಿನಿತ್ಯವೂ ಯೆಹೋವನಿಗೆ ಧಾನ್ಯನೈವೇದ್ಯವಾಗಿ ಅರ್ಪಿಸತಕ್ಕದ್ದು. ಇದು ಶಾಶ್ವತ ನಿಯಮವಾಗಿದೆ.
[15] ಯಾಜಕರು ಕುರಿಯನ್ನೂ, ಧಾನ್ಯನೈವೇದ್ಯವನ್ನೂ, ಎಣ್ಣೆಯನ್ನೂ ನಿತ್ಯ ಸರ್ವಾಂಗಹೋಮವಾಗಿ ಪ್ರತಿ ದಿನ ಬೆಳಗ್ಗೆ ಸಮರ್ಪಿಸಬೇಕು.”
[16] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಅರಸನು ತನ್ನ ಮಕ್ಕಳಲ್ಲಿ ಒಬ್ಬನಿಗೆ ದಾನ ಕೊಟ್ಟರೆ, ಅದು ತಂದೆಯ ಸ್ವಾಸ್ತ್ಯವಾದ ಕಾರಣ, ಮಕ್ಕಳಿಗೆ ಹಕ್ಕು ಬರುವುದು, ಅದು ಬಾಧ್ಯವಾಗಿ ಸಿಕ್ಕಿದ ಸ್ವಾಸ್ತ್ಯವೇ.
[17] ಆದರೆ ಅರಸನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನ ಮಾಡಿದರೆ, ಬಿಡುಗಡೆಯ ವರ್ಷದವರೆಗೆ ಅದು ಅವನ ಅಧೀನವಾಗಿರುವುದು; ಆ ಮೇಲೆ ಅದು ಪುನಃ ಅರಸನ ವಶವಾಗುವುದು; ಆದರೆ ಅರಸನು ತನ್ನ ಮಕ್ಕಳಿಗೆ ಕೊಟ್ಟ ಸ್ವತ್ತು ಅವರಿಗೇ ಸೇರುವುದು.
[18] ಇದಲ್ಲದೆ ಅರಸನು ಪ್ರಜೆಗಳ ಪಿತ್ರಾರ್ಜಿತ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು. ಸ್ವಂತ ಭೂಮಿಯನ್ನೇ ವಿಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ. ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗುವನು.
[19] “ಬಳಿಕ ಆ ಪುರುಷನು ನನ್ನನ್ನು ಹೆಬ್ಬಾಗಿಲ ಪಕ್ಕದಲ್ಲಿನ ಪ್ರವೇಶದ ಮಾರ್ಗವಾಗಿ ಉತ್ತರಕ್ಕೆ ಅಭಿಮುಖವಾಗಿಯೂ, ಯಾಜಕರಿಗೆ ನೇಮಕವಾಗಿಯೂ ಇರುವ ಪರಿಶುದ್ಧವಾದ ಕೋಣೆಗಳಿಗೆ ಬರಮಾಡಿದನು. ಇಗೋ, ಅವುಗಳ ಹಿಂದೆ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.”
[20] ಆಗ ಅವನು ನನಗೆ, “ಯಾಜಕರು ಅಪರಾಧ ಬಲಿಯನ್ನೂ, ಪ್ರಾಯಶ್ಚಿತ್ತಯಜ್ಞ ಬಲಿಯನ್ನೂ, ಬೇಯಿಸಿದ ಧಾನ್ಯನೈವೇದ್ಯವನ್ನು ಸುಡುವುದಕ್ಕೆ ಏರ್ಪಡಿಸಿರುವ ಪರಿಶುದ್ಧ ಸ್ಥಳವು ಇದೆ” ಎಂದು ಹೇಳಿದನು.
[21] ತರುವಾಯ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಬರಮಾಡಿ, ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರೆದುಕೊಂಡು ಹೋದನು. ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು.
[22] ಹೌದು, ಅಂಗಳದ ನಾಲ್ಕು ಮೂಲೆಗಳಲ್ಲಿಯೂ ನಲ್ವತ್ತು ಮೊಳ ಉದ್ದದ, ಮೂವತ್ತು ಮೊಳ ಅಗಲದ ಪ್ರತ್ಯೇಕವಾದ ಅಂಗಳಗಳು ಇದ್ದವು; ಮೂಲೆಗಳಲ್ಲಿನ ಆ ನಾಲ್ಕು ಅಂಗಳಗಳು ಒಂದೇ ಅಳತೆಯಾಗಿದ್ದವು.
[23] ಅವುಗಳೊಳಗೆ ಸುತ್ತಲು, ಅಂದರೆ ಆ ನಾಲ್ಕು ಅಂಗಳಗಳ ಸುತ್ತು ಮುತ್ತಲು ಕಲ್ಲಿನ ಸಾಲುಗಳು ಚಾಚಿಕೊಂಡಿತು. ಆ ಸಾಲುಗಳ ಕೆಳಗೆ ಒಲೆಗಳು ಸುತ್ತಲೂ ಇದ್ದವು.
[24] ಆಗ ಅವನು ನನಗೆ, “ಇವು ದೇವಾಲಯದ ಸೇವಕರು. ಯಜ್ಞಪಶುಗಳನ್ನು ತಂದ ಜನರಿಗೋಸ್ಕರ ಅವುಗಳ ಮಾಂಸವನ್ನು ಬೇಯಿಸಿದ ಪಾಕಶಾಲೆಗಳು” ಎಂದು ಹೇಳಿದನು.