Skip to content
Opens in a new window
Listen to this chapter • 4:29

[1] ಹತ್ತನೆಯ ವರ್ಷದ, ಹತ್ತನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[2] “ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ಕಡೆಗೆ ಮುಖಮಾಡಿ ಅವನ ವಿಷಯದಲ್ಲಿಯೂ, ಐಗುಪ್ತ್ಯರೆಲ್ಲರ ವಿಷಯದಲ್ಲಿಯೂ ಹೀಗೆ ಪ್ರವಾದಿಸು.

[3] “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದ ಅರಸನಾದ ಫರೋಹನೇ, ನಿನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು, ‘ಈ ನದಿ ನನ್ನದೇ, ನನಗಾಗಿಯೇ ಅದನ್ನು ಮಾಡಿಕೊಂಡಿದ್ದೇನೆ’ ಎಂದು ಹೇಳಿಕೊಳ್ಳುವ ದೊಡ್ಡ ಮೊಸಳೆಯೇ, ಇಗೋ, ನಾನು ನಿನ್ನ ವಿರುದ್ಧವಾಗಿದ್ದೇನೆ.

[4] “ನಾನು ನಿನ್ನ ದವಡೆಗಳಿಗೆ ಗಾಳ ಹಾಕಿ, ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ, ಆ ಮೀನುಗಳ ಸಹಿತ ನಿನ್ನನ್ನು ನೈಲ್ ನದಿಯ ಮಧ್ಯದೊಳಗಿಂದ ಹೊರಗೆ ಎಳೆದು ಹಾಕುವೆನು.

[5] ನಿನ್ನನ್ನೂ, ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಅರಣ್ಯದ ಪಾಲು ಮಾಡುವೆನು; ನೀನು ಬಯಲುಗಳ ಮೇಲೆ ಬಿದ್ದಿರುವಿ; ನಿನ್ನನ್ನು ಯಾರೂ ಹೂಣಿಡುವುದೂ ಇಲ್ಲ, ಸೇರಿಸುವುದೂ ಇಲ್ಲ; ನಾನು ನಿನ್ನನ್ನು ಭೂಜಂತುಗಳಿಗೂ, ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.

[6] ಆಗ ಐಗುಪ್ತದ ಸಕಲ ನಿವಾಸಿಗಳು ನಾನೇ ಯೆಹೋವನು ಎಂದು ತಿಳಿಯವರು. ಅವರು ಇಸ್ರಾಯೇಲ್ ವಂಶದವರಿಗೆ ದಂಟಿನ ಊರುಗೋಲಾಗಿದ್ದರು.

[7] ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು, ನೀನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ಅವರು ನಿನ್ನ ಮೇಲೆ ಆತುಕೊಳ್ಳುವಾಗ, ನೀನು ಅವರನ್ನು ಒಡೆದು, ಅವರ ಕಾಲುಗಳಿಗೆ ಮತ್ತು ನಡುವಿಗೆ ನಡುಕವನ್ನು ಉಂಟುಮಾಡಿದೆ.

[8] “ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ಬರಮಾಡಿ, ಜನರನ್ನೂ, ಪಶುಗಳನ್ನೂ ನಿನ್ನೊಳಗಿಂದ ನಿರ್ಮೂಲ ಮಾಡುವೆನು.

[9] ಈ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಅಂದುಕೊಂಡ ಕಾರಣ ಐಗುಪ್ತ ದೇಶವು ಹಾಳಾಗುವುದು. ಆಗ ನಾನೇ ಯೆಹೋವನು’ ಎಂದು ಅವರಿಗೆ ಗೊತ್ತಾಗುವುದು.

[10] ‘ಇಗೋ, ನಾನು ನಿನಗೂ, ನಿನ್ನ ನದಿಗೂ ವಿರುದ್ಧವಾಗಿ ಐಗುಪ್ತ ದೇಶವನ್ನು ಮಿಗ್ದೋಲಿನಿಂದ ಸೆವೇನಿಯ ತನಕ, ಹೌದು, ಕೂಷಿನ ಮೇರೆಯವರೆಗೂ ತೀರಾ ಹಾಳು ಮಾಡುವೆನು.

[11] “‘ಯಾವ ಮನುಷ್ಯನ ಪಾದವೂ ಅದರಲ್ಲಿ ಹಾದುಹೋಗುವುದಿಲ್ಲ; ಯಾವ ಪಶುವಿನ ಪಾದವೂ ಅದರಲ್ಲಿ ದಾಟಿಹೋಗುವುದಿಲ್ಲ; ನಲ್ವತ್ತು ವರ್ಷ ನಿರ್ಜನವಾಗಿರುವುದು.

[12] ಹಾಳು ಬಿದ್ದಿರುವ ದೇಶಗಳ ಮಧ್ಯದಲ್ಲಿ ಐಗುಪ್ತ ದೇಶವನ್ನೂ ಹಾಳುಮಾಡುವೆನು; ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳನ್ನೂ ಪಾಳುಬೀಳಿಸುವೆನು; ನಲ್ವತ್ತು ವರ್ಷ ಹಾಗೆಯೇ ಇರುವುದು; ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ, ದೇಶದೇಶಗಳಲ್ಲಿ ಚದುರಿಸುವೆನು.’”

[13] “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಲ್ವತ್ತು ವರ್ಷಗಳ ಮೇಲೆ ನಾನು ಐಗುಪ್ತ್ಯರನ್ನು ಅವರು ಚದುರಿ ಹೋಗಿದ್ದ ಜನಾಂಗಗಳೊಳಗಿಂದ ಅವರನ್ನು ಒಟ್ಟುಗೂಡಿಸುವೆನು.

[14] ಐಗುಪ್ತದ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮ ಭೂಮಿಯಾದ ಪತ್ರೋಸ್ ದೇಶಕ್ಕೆ ಪುನಃ ಬರಮಾಡುವೆನು; ಅಲ್ಲೇ ಅವರು ಕನಿಷ್ಠ ರಾಜ್ಯದವರಾಗಿರುವರು.

[15] ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠವೆನಿಸಿಕೊಳ್ಳುವುದು; ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆಯೆತ್ತದು; ಅದು ಜನಾಂಗಗಳ ಮೇಲೆ ಇನ್ನು ದೊರೆತನ ಮಾಡಲಾರದಂತೆ ನಾನು ಅದನ್ನು ಕ್ಷೀಣ ಸ್ಥಿತಿಗೆ ತರುವೆನು.

[16] ಐಗುಪ್ತವು ಇನ್ನು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಅದರ ಕಡೆಗೆ ಕಣ್ಣೆತ್ತುವ ದೇವದ್ರೋಹದ ನೆನಪು ಇಸ್ರಾಯೇಲರಲ್ಲಿ ಐಗುಪ್ತದಿಂದ ಇನ್ನು ಹುಟ್ಟುವುದಿಲ್ಲ. ನಾನೇ ಯೆಹೋವನು’” ಎಂದು ಅವರಿಗೆ ತಿಳಿಯುವುದು.

[17] ಇಪ್ಪತ್ತೇಳನೆಯ ವರ್ಷದ, ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[18] “ನರಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ, ತನ್ನ ಸೈನಿಕರಿಂದ ಅತಿ ಕ್ರೂರವಾಗಿ ಸೇವೆಯನ್ನು ಮಾಡಿಸಿದ್ದಾನೆ; ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲು ಸುಲಿದು ಹೋಗಿದೆ. ಆದರೂ ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ, ಅವನ ಸೈನಿಕರಿಗಾಗಲಿ ತೂರಿನಿಂದ ಪ್ರತಿಫಲವೇನೂ ಸಿಕ್ಕಲಿಲ್ಲ.”

[19] ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತ ದೇಶವನ್ನು ಕೊಡುತ್ತೇನೆ; ಅವನು ಅದರ ಜನಸಮೂಹವನ್ನೂ, ಅದರ ಕೊಳ್ಳೆಯನ್ನೂ, ಅದರ ಸುಲಿಗೆಯನ್ನೂ ಸೂರೆಮಾಡುವನು; ಇದೇ ಅವನ ಸೈನ್ಯಕ್ಕೆ ಸಿಕ್ಕುವ ಪ್ರತಿಫಲವಾಗುವುದು.

[20] ಅವನು ಸೈನ್ಯ ಸಮೇತನಾಗಿ ನನಗೋಸ್ಕರ ಸೇವೆ ಮಾಡಿದ್ದರಿಂದ ಅವನು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ನಾನು ಐಗುಪ್ತ ದೇಶವನ್ನು ಅವನಿಗೆ ಕೊಟ್ಟಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.

[21] “ಆ ದಿನದಲ್ಲಿ ನಾನು ಇಸ್ರಾಯೇಲ್ ವಂಶಕ್ಕೆ ಕೊಂಬನ್ನು ಮೊಳೆಯಿಸಿ, ಆ ವಂಶದವರ ಮಧ್ಯದಲ್ಲಿ ನಿನ್ನ ಬಾಯಿಯನ್ನು ತೆರೆಯುವಂತೆ ಮಾಡುವೆನು; ನಾನೇ ಯೆಹೋವನು ಎಂದು ಅವರಿಗೆ ನಿಶ್ಚಯವಾಗುವುದು.”

ಯೆಹೆಜ್ಕೇಲನು — Chapters