Skip to content
Opens in a new window
Listen to this chapter • 4:38

[1] ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.

[2] ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ.

[3] ಇವರು, ‘ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ’ ಎಂದು ಹೇಳುತ್ತಾರೆ.

[4] ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಅಹಿತವನ್ನು ನುಡಿ, ತಪ್ಪದೆ ನುಡಿ” ಎಂದು ಆಜ್ಞಾಪಿಸಿದನು.

[5] ಆಗ ಯೆಹೋವನ ಆತ್ಮವು ನನ್ನಲ್ಲಿ ಆವೇಶ ಉಂಟುಮಾಡಿ, ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು. ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನೀವು ಹೀಗೆ ಮಾತನಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ.

[6] ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.

[7] “ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕುವೆನು.

[8] ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು’” ಇದು ಕರ್ತನಾದ ಯೆಹೋವನ ನುಡಿ.

[9] “ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.

[10] ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು, ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.

[11] ಈ ಪಟ್ಟಣವು ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿನ ಮಾಂಸವಾಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು.

[12] “‘ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಕೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”

[13] ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗನಾದ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ, “ಅಯ್ಯೋ, ಕರ್ತನಾದ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವಿಯೋ?” ಎಂದು ಮೊರೆಯಿಟ್ಟೆನು.

[14] ಆಗ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,

[15] “ನರಪುತ್ರನೇ, ನಿನ್ನ ಸಹೋದರರು, ನಿನ್ನ ಅಣ್ಣತಮ್ಮಂದಿರು, ನಿನ್ನ ನೆಂಟರು ಅಂತು ಯೆರೂಸಲೇಮಿನವರು ಮತ್ತು ಇಸ್ರಾಯೇಲ್ ವಂಶದವರಲ್ಲಿ ಉಳಿದಿರುವವರು, ‘ಯೆಹೋವನ ಬಳಿಯಿಂದ ದೂರವಾಗಿ ತೊಲಗಿರಿ, ಈ ದೇಶವು ನಮಗೇ ಸ್ವತ್ತಾಗಿ ಸಿಕ್ಕಿದೆ’ ಎಂದು ಹೀನೈಸಿದರೋ ಅವರೆಲ್ಲರು ಉಳಿದಿದ್ದಾರಲ್ಲಾ.

[16] “ಆದಕಾರಣ ನೀನು ಹೀಗೆ ಸಾರು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರನ್ನು ದೂರವಾಗಿ ತೊಲಗಿಸಿ, ಜನಾಂಗಗಳಲ್ಲಿ ಮತ್ತು ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಸ್ವಲ್ಪ ಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.’

[17] “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.’

[18] ಅವರು ಅಲ್ಲಿಗೆ ಸೇರಿ ಎಲ್ಲಾ ಅಸಹ್ಯ ವಸ್ತುಗಳನ್ನೂ, ಸಮಸ್ತ ಅಸಹ್ಯ ವಿಗ್ರಹಗಳನ್ನೂ ಅಲ್ಲಿಂದ ತೆಗೆದುಹಾಕುವರು.

[19] “ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು.

[20] ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.

[21] ಆದರೆ ಯಾರ ಮನಸ್ಸು ತಮ್ಮ ಅಸಹ್ಯ ವಸ್ತುಗಳನ್ನೂ, ಅಸಹ್ಯ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಇದು ಕರ್ತನಾದ ಯೆಹೋವನ ನುಡಿ.

[22] ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು, ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.

[23] ಆಗ ಯೆಹೋವನ ತೇಜಸ್ಸು ಪಟ್ಟಣದ ಮಧ್ಯದೊಳಗಿಂದ ಏರಿ ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು.

[24] ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.

[25] ಯೆಹೋವನು ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆನು.

ಯೆಹೆಜ್ಕೇಲನು — Chapters