[1] ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
[2] “ನರಪುತ್ರನೇ, ನೀನು ಈ ಪ್ರವಾದನೆಯನ್ನು ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅರಚಿಕೊಳ್ಳಿರಿ! ಅಯ್ಯೋ ದುರ್ದಿನವೇ!
[3] ದಿನವು ಹತ್ತಿರವಾಯಿತು! ಹೌದು, ಯೆಹೋವನ ದಿನವು, ಕಾರ್ಮುಗಿಲಿನ ದಿನವು ಸಮೀಪಿಸಿತು; ಅದು ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವುದು.
[4] ಖಡ್ಗವು ಐಗುಪ್ತದ ಮೇಲೆ ಬೀಳುವುದು; ಅಲ್ಲಿನ ಪ್ರಜೆಗಳು ಹತರಾಗಲು ಕೂಷಿನಲ್ಲಿಯೂ ಸಂಕಟವಾಗುವುದು; ಐಗುಪ್ತದ ಜನಸಮೂಹವು ಒಯ್ಯಲ್ಪಡುವುದು, ಅದರ ಅಸ್ತಿವಾರವು ಮುರಿದು ಹಾಳಾಗುವುದು.
[5] “‘ಕೂಷ್ಯರು, ಪೂಟ್ಯರು, ಲೂದ್ಯರು, ಬಗೆಬಗೆಯ ಸಕಲ ವಿದೇಶೀಯರು, ಕೂಬ್ಯರು, ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಐಗುಪ್ತ್ಯರೊಂದಿಗೆ ಖಡ್ಗದಿಂದ ಹತರಾಗುವರು.’”
[6] ಯೆಹೋವನು ಇಂತೆನ್ನುತ್ತಾನೆ, “ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು” ಇದು ಕರ್ತನಾದ ಯೆಹೋವನ ನುಡಿ.
[7] ಹಾಳಾಗಿರುವ ದೇಶಗಳೊಳಗೆ ಆ ದೇಶವೂ ಹಾಳಾಗಿರುವುದು, ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳೂ ಪಾಳು ಬಿದ್ದಿರುವವು.
[8] “‘ನಾನು ಐಗುಪ್ತಕ್ಕೆ ಬೆಂಕಿ ಹಚ್ಚಿ ಅದರ ಸಹಾಯಕರನ್ನೆಲ್ಲಾ ನಾಶಮಾಡಿದ ಮೇಲೆ ನಾನೇ ಯೆಹೋವನು’ ಎಂದು ಅವರಿಗೆ ಗೊತ್ತಾಗುವುದು.
[9] ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ, ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು; ಐಗುಪ್ತದ ನಾಶದ ದಿನದಲ್ಲಿ ಆದ ಹಾಗೆ ಕೂಷ್ಯರಿಗೂ ಸಂಕಟವು ಉಂಟಾಗುವುದು; ಇಗೋ, ಆ ದಿನ ಬಂತು!’”
[10] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಐಗುಪ್ತದ ಅಸಂಖ್ಯಾತ ಪ್ರಜೆಯನ್ನು ಕೊನೆಗಾಣಿಸುವೆನು.
[11] ಆ ದೇಶವನ್ನು ನಾಶಪಡಿಸಲಿಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು; ಅವರು ಐಗುಪ್ತದ ಮೇಲೆ ಕತ್ತಿ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.
[12] ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ಹೌದು, ದೇಶವನ್ನೂ, ಅದರಲ್ಲಿನ ಸಮಸ್ತವನ್ನೂ ಅನ್ಯರ ಕೈಯಿಂದ ಹಾಳುಮಾಡಿಸುವೆನು. ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”
[13] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನೋಫಿನ ವಿಗ್ರಹಗಳನ್ನೆಲ್ಲ ಒಡೆದು ಕೊನೆಗಾಣಿಸುವೆನು; ಐಗುಪ್ತ ದೇಶದಲ್ಲಿ ಇನ್ನು ಯಾವ ಅರಸನೂ ಇರಲಾರನು; ನಾನು ಆ ದೇಶಕ್ಕೆ ಭಯವನ್ನು ಉಂಟುಮಾಡುವೆನು.
[14] ನಾನು ಪತ್ರೋಸನ್ನು ಹಾಳುಮಾಡಿ, ಚೋವನಿಗೆ ಬೆಂಕಿಯಿಡುವೆನು. ನೋಪುರವನ್ನು ದಂಡಿಸಿ,
[15] “ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನೋಪುರದ ನಿವಾಸಿಗಳನ್ನೆಲ್ಲಾ ಕತ್ತರಿಸಿ ಬಿಡುವೆನು.
[16] ನಾನು ಐಗುಪ್ತಕ್ಕೆ ಕಿಚ್ಚನ್ನು ಹತ್ತಿಸಲು ಸೀನು ಪ್ರಾಣ ಸಂಕಟಪಡುವುದು; ನೋಪುರವು ಭಂಗಕ್ಕೆ ಈಡಾಗುವುದು; ನೋಫಿನ ಮೇಲೆ ವೈರಿಗಳು ಮಧ್ಯಾಹ್ನದಲ್ಲೇ ಬೀಳುವರು.
[17] “ಓನಿನ ಮತ್ತು ಪೀಬೆಸೆತಿನ ಯುವಕರು ಖಡ್ಗದಿಂದ ಹತರಾಗುವರು; ಅಲ್ಲಿನ ನಿವಾಸಿಗಳು ಸೆರೆಯಾಗಿ ಹೋಗುವರು.
[18] ಐಗುಪ್ತವು ಹೊರಿಸಿದ ನೊಗಗಳನ್ನು ನಾನು ತಹಪನೇಸಿನಲ್ಲಿ ಮುರಿಯುವಾಗ, ಅಲ್ಲಿ ಹೊತ್ತು ಮೂಡದು. ಅದರ ಶಕ್ತಿಯ ಅಹಂಕಾರವು ಅಡಗಿ ಹೋಗುವುದು, ಕಾರ್ಮುಗಿಲು ಅದನ್ನು ಆವರಿಸುವುದು, ಅದರ ಯುವತಿಯರು ಸೆರೆಗೆ ಒಯ್ಯಲ್ಪಡುವರು.
[19] ಹೀಗೆ ನಾನು ಐಗುಪ್ತ್ಯರಿಗೆ ದಂಡನೆಗಳನ್ನು ವಿಧಿಸಿ ತೀರಿಸುವಾಗ ನಾನೇ ಯೆಹೋವನು” ಎಂದು ಅವರಿಗೆ ಗೊತ್ತಾಗುವುದು.
[20] ಹನ್ನೊಂದನೆಯ ವರ್ಷದ, ಮೊದಲನೆಯ ತಿಂಗಳಿನ ಏಳನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
[21] “ನರಪುತ್ರನೇ, ನಾನು ಐಗುಪ್ತದ ಅರಸನಾದ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ, ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ, ಅದನ್ನು ಬಿಗಿಸಲಿಲ್ಲ.”
[22] ಆದುದರಿಂದ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಐಗುಪ್ತದ ಅರಸನಾದ ಫರೋಹನಿಗೆ ವಿರುದ್ಧವಾಗಿ ಅವನ ಕೈಗಳನ್ನು, ಅಂದರೆ ಸರಿಯಾಗಿರುವುದನ್ನೂ, ಮುರಿದದ್ದನ್ನೂ ತೀರಾ ಮುರಿದು ಬಿಟ್ಟು, ಖಡ್ಗವು ಅವನ ಕೈಯೊಳಗಿಂದ ಬೀಳುವಂತೆ ಮಾಡುವೆನು.
[23] “ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವೆನು.
[24] ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸಿ ನನ್ನ ಖಡ್ಗವನ್ನು ಅವನ ಕೈಗೆ ಕೊಟ್ಟು ಫರೋಹನ ಕೈಗಳನ್ನು ಮುರಿಸಲು, ಗಾಯದಿಂದ ಪ್ರಾಣ ಸಂಕಟಪಡುವವನಂತೆ ಫರೋಹನು ಆ ಅರಸನ ಮುಂದೆ ನರಳಾಡುವನು.
[25] ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸುವೆನು; ಫರೋಹನ ಕೈಗಳಾದರೋ ಜೋಲುಬೀಳುವವು; ನಾನು ನನ್ನ ಖಡ್ಗವನ್ನು ಬಾಬೆಲಿನ ಅರಸನಿಗೆ ಕೊಡಲು ಅವನು ಅದನ್ನು ಐಗುಪ್ತ ದೇಶದ ಮೇಲೆ ಎತ್ತುವನು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು.
[26] “ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿದು ಬರುವುದು.”