Skip to content
Opens in a new window
Listen to this chapter • 3:57

[1] ಇಗೋ, ನಾನು ನೋಡಲಾಗಿ ಕೆರೂಬಿಗಳ ತಲೆಗಳ ಮೇಲಣ ಗಗನಮಂಡಲದ ಮೇಲ್ಗಡೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನದ ಆಕಾರವು ನನಗೆ ಕಾಣಿಸಿತು.

[2] ಆತನು ನಾರಿನ ಬಟ್ಟೆಯನ್ನು ಹೊದ್ದುಕೊಂಡ ಆ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ, ಕೆರೂಬಿಗಳ ಕೆಳಗೆ ಪ್ರವೇಶಿಸಿ, ಕೆರೂಬಿಗಳ ಮಧ್ಯದೊಳಗಿಂದ ಬೊಗಸೆಯಲ್ಲಿ ಕೆಂಡಗಳನ್ನು ತುಂಬಿ, ತಂದು ಅದನ್ನು ಪಟ್ಟಣದ ಮೇಲೆ ಎರಚು” ಎಂದು ಅಪ್ಪಣೆಕೊಡಲು ಅವನು ನನ್ನ ಕಣ್ಣೆದುರಿಗೇ ಹೋಗಿ ಅಲ್ಲಿ ಪ್ರವೇಶಿಸಿದನು.

[3] ಅವನು ಒಳಗೆ ಸೇರಿದಾಗ ಕೆರೂಬಿಗಳು ದೇವಾಲಯದ ದಕ್ಷಿಣಭಾಗದಲ್ಲಿ ನಿಂತಿದ್ದವು, ಮೇಘವು ಒಳಗಣ ಪ್ರಾಕಾರವನ್ನು ತುಂಬಿತ್ತು.

[4] ಇದಲ್ಲದೆ ಯೆಹೋವನ ತೇಜಸ್ಸು ಕೆರೂಬಿಗಳನ್ನು ಬಿಟ್ಟು ಮೇಲಕ್ಕೇರಿ ದೇವಾಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತು; ದೇವಾಲಯದಲ್ಲಿಯೂ ಮೇಘವು ತುಂಬಿತ್ತು; ಯೆಹೋವನ ತೇಜಸ್ಸಿನ ಅದ್ಭುತಕಾಂತಿಯು ಅಂಗಳದಲ್ಲೆಲ್ಲಾ ವ್ಯಾಪಿಸಿತ್ತು.

[5] ಆಗ ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತನಾದ ದೇವರು ಮಾತನಾಡುವ ಧ್ವನಿಯಷ್ಟು ಗಂಭೀರವಾಗಿ ಹೊರಗಣ ಅಂಗಳದವರೆಗೂ ಕೇಳಿಸಿತು.

[6] ಆತನು ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ಮಧ್ಯದೊಳಗಿಂದ ಬೆಂಕಿಯನ್ನು ತೆಗೆದುಕೋ” ಎಂದು ಅಪ್ಪಣೆ ಕೊಡಲು ಅವನು ಒಳಕ್ಕೆ ಹೋಗಿ ಒಂದು ಚಕ್ರದ ಪಕ್ಕದಲ್ಲಿ ನಿಂತುಕೊಂಡನು.

[7] ಆಗ ಒಬ್ಬ ಕೆರೂಬಿಯು ಇತರ ಕೆರೂಬಿಗಳ ನಡುವೆ ಕೈ ಚಾಚಿ ಅವುಗಳ ಮಧ್ಯದಲ್ಲಿದ್ದ ಬೆಂಕಿಯನ್ನು ತೆಗೆದು ನಾರಿನ ಬಟ್ಟೆಯನ್ನು ಹೊದ್ದುಕೊಂಡವನ ಬೊಗಸೆಯಲ್ಲಿ ಹಾಕಿತು; ಅವನು ಅದನ್ನು ತೆಗೆದುಕೊಂಡು ಆಚೆಗೆ ಹೊರಟನು.

[8] ಕೆರೂಬಿಗಳ ಒಂದೊಂದು ರೆಕ್ಕೆಯ ಕೆಳಗೂ ಮನುಷ್ಯಹಸ್ತದಂಥ ಒಂದೊಂದು ಹಸ್ತವು ಕಾಣಿಸಿತು.

[9] ಇಗೋ, ನಾನು ನೋಡಲಾಗಿ ಆ ಕೆರೂಬಿಗಳ ಪಕ್ಕಗಳಲ್ಲಿ, ಒಂದೊಂದು ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರದಂತೆ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ಬಣ್ಣವು ಪೀತರತ್ನದ ಹಾಗೆ ಹೊಳೆಯುತ್ತಿತ್ತು.

[10] ಅವುಗಳ ರೂಪವು ಹೇಗಿತ್ತೆಂದರೆ ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು, ಆ ನಾಲ್ಕು ಒಂದೇ ಮಾದರಿಯಾಗಿದ್ದವು.

[11] ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು, ಓರೆಯಾಗಿ ಹೊರಳುತ್ತಿರಲಿಲ್ಲ; ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ.

[12] ಕೆರೂಬಿಗಳ ಬೆನ್ನು, ಕೈ, ರೆಕ್ಕೆ, ಅಂತು ಸರ್ವಾಂಗಗಳಲ್ಲಿಯೂ ಮತ್ತು ಚಕ್ರಗಳಲ್ಲಿಯೂ ಕಣ್ಣುಗಳು ಸುತ್ತಲೂ ತುಂಬಿದ್ದವು; ನಾಲ್ಕು ಕೆರೂಬಿಗಳಲ್ಲಿ ಒಂದೊಂದಕ್ಕೂ ಒಂದೊಂದು ಚಕ್ರವಿತ್ತು.

[13] ನಾನು ಕೇಳಿದಂತೆ ಆ ಚಕ್ರಗಳ ಹೆಸರು ಗರಗರಗಾಲಿ ಎಂಬುದೇ.

[14] ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು, ಎರಡನೆಯದು ಮನುಷ್ಯನದು, ಮೂರನೆಯದು ಸಿಂಹದ್ದು, ನಾಲ್ಕನೆಯದು ಗರುಡಪಕ್ಷಿಯದು.

[15] ಆ ಕೆರೂಬಿಗಳು ಮೇಲಕ್ಕೆ ಏರಿದವು; ನಾನು ಕೆಬಾರ್ ನದಿಯ ಹತ್ತಿರ ನೋಡಿದ ಜೀವಿಗಳು ಇವೇ.

[16] ಕೆರೂಬಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಹೋಗುತ್ತಿದ್ದವು; ಕೆರೂಬಿಗಳು ನೆಲದಿಂದ ಮೇಲಕ್ಕೆ ಏರಬೇಕೆಂದು ರೆಕ್ಕೆಗಳನ್ನು ಹರಡಿಕೊಂಡಾಗ ಚಕ್ರಗಳೂ ಓರೆಯಾಗದೆ ಅವುಗಳ ಸಂಗಡಲೇ ಏರಿದವು.

[17] ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತುಹೋದಾಗ ಇವೂ ನಿಂತುಹೋದವು, ಅವು ಏರಿದಾಗ ಇವೂ ಅವುಗಳ ಜೊತೆಯಲ್ಲೇ ಏರಿದವು.

[18] ಬಳಿಕ ಯೆಹೋವನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಗಳ ಮೇಲೆ ನಿಂತಿತು.

[19] ಆಗ ನನ್ನ ಕಣ್ಣೆದುರಿಗೆ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡು ಚಕ್ರಸಮೇತವಾಗಿ ನೆಲದಿಂದ ಏರಿ ಹೊರಟು ಯೆಹೋವನ ಆಲಯದ ಪೂರ್ವ ಬಾಗಿಲಿನ ಮುಂದೆ ನಿಂತವು, ಅವುಗಳ ಮೇಲ್ಗಡೆ ಇಸ್ರಾಯೇಲಿನ ದೇವರ ತೇಜಸ್ಸು ನೆಲಸಿತ್ತು.

[20] ಇಸ್ರಾಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ; ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು.

[21] ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ, ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು; ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯ ಹಸ್ತದಂಥ ಹಸ್ತಗಳು ಇದ್ದವು.

[22] ಅವುಗಳ ಮುಖಗಳು ಕೆಬಾರ್ ನದಿಯ ಹತ್ತಿರ ನಾನು ಕಂಡ ಮುಖಗಳಂತೆ ನನಗೆ ಕಂಡುಬಂದವು, ಅವು ಆ ಮುಖಗಳೇ; ಪ್ರತಿಯೊಂದು ಜೀವಿಯು ನೇರವಾಗಿಯೇ ಹೋಗುತ್ತಿದ್ದವು.

ಯೆಹೆಜ್ಕೇಲನು — Chapters