Skip to content
Opens in a new window
Listen to this chapter • 6:06

[1] ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[2] “ನರಪುತ್ರನೇ, ನೀನು ಯೆರೂಸಲೇಮಿನ ಅಭಿಮುಖನಾಗಿ ಅಲ್ಲಿನ ಪವಿತ್ರ ಸ್ಥಾನಗಳ ಕಡೆಗೆ ಮಾತನಾಡುತ್ತಾ ಇಸ್ರಾಯೇಲ್ ದೇಶ ಕುರಿತು ಪ್ರವಾದಿಸಿ,

[3] ಇಸ್ರಾಯೇಲ್ ದೇಶಕ್ಕೆ ಹೀಗೆ ಸಾರಿ ಹೇಳು, ‘ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು, ನಿನ್ನಲ್ಲಿನ ಶಿಷ್ಟರನ್ನೂ, ದುಷ್ಟರನ್ನೂ ಸಂಹರಿಸಿ ಬಿಡುವೆನು.

[4] ನಾನು ನಿನ್ನಲ್ಲಿನ ಶಿಷ್ಟರನ್ನೂ, ದುಷ್ಟರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗವು ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರದವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು.

[5] ಆಗ ಯೆಹೋವನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ’ ಎಂಬುದು ಎಲ್ಲಾ ನರಮನುಷ್ಯರಿಗೂ ಗೊತ್ತಾಗುವುದು; ಅದು ಪುನಃ ಒರೆಗೆ ಸೇರದು.”

[6] “ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು.

[7] ‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ, ‘ಕೆಟ್ಟ ವಾರ್ತೆಯ ನಿಮಿತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವುದು; ಎಲ್ಲರ ಕೈ ಜೋಲು ಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವುದು; ಇಗೋ, ಬಂದಿತು, ಬಂದಾಯಿತು’ ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.”

[8] ಆ ಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[9] “ನರಪುತ್ರನೇ, ಕರ್ತನು ಇಂತೆನ್ನುತ್ತಾನೆ ಎಂಬುದಾಗಿ ನುಡಿದು ಹೀಗೆ ಸಾರು, ‘ಆಹಾ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ!

[10] ಸಂಹರಿಸುವಂತೆ ಸಾಣೆ ಹಿಡಿದಿದೆ, ಮಿಂಚುವಂತೆ ಮಸೆದಿದೆ; ನಮ್ಮ ಕುಮಾರನ ರಾಜದಂಡವು ಉಳಿದ ಎಲ್ಲಾ ದಂಡಗಳನ್ನು ತಿರಸ್ಕರಿಸುತ್ತದಲ್ಲಾ ಎಂಬುದಾಗಿ ನಾವು ಸಂಭ್ರಮಪಡಬಹುದೇ?

[11] ಖಡ್ಗವು ಕೈಗೆ ಸಿಗುವಂತೆ ಮಸೆದು ಸಿದ್ಧವಾಗಿದೆ, ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ಮಸೆದಿದೆ.

[12] ನರಪುತ್ರನೇ, ಕೂಗಿಕೋ, ಗೋಳಾಡು! ಖಡ್ಗವು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಬಿದ್ದಿದೆ; ಆ ಪ್ರಭುಗಳು ನನ್ನ ಜನರೊಂದಿಗೆ ಖಡ್ಗಕ್ಕೆ ತುತ್ತಾಗಿದ್ದಾರೆ; ತೊಡೆಯನ್ನು ಬಡಿದುಕೋ.’”

[13] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಶೋಧನೆಯು ಸಂಭವಿಸಿತು; ತಿರಸ್ಕರಿಸುತ್ತಿದ್ದ ರಾಜದಂಡವೇ ನಾಶವಾದರೆ ಗತಿಯೇನು?

[14] ನರಪುತ್ರನೇ, ನೀನು ದೈವೋಕ್ತಿಯನ್ನು ಸಾರಿ ಚಪ್ಪಾಳೆ ಹೊಡಿ; ಖಡ್ಗವು ಎರಡರಷ್ಟು, ಮೂರರಷ್ಟು ಸಂಹರಿಸಲಿ! ಪ್ರಜೆಯನ್ನು ಹತಿಸುವ ಖಡ್ಗ! ಸುತ್ತಲು ಬೀಸಿ, ಅಧಿಪತಿಯನ್ನು ಹತಿಸುವ ಖಡ್ಗ!

[15] ಅವರ ಹೃದಯವು ನೀರಾಗಿ ಬಹಳ ಜನರು ಎಡವಿ ಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ಮಿಂಚಿನಂತೆ ಮಿಂಚುತ್ತದೆ, ವಧೆಗಾಗಿ ಹಂತವಾಗಿ ಸಿದ್ಧವಾಗಿದೆ!

[16] ಖಡ್ಗವೇ, ಏಕಾಗ್ರವಾಗಿ ಬಲಕ್ಕೆ ಹೋಗು, ಸಿದ್ಧವಾಗಿ ಎಡಕ್ಕೆ ಸಾಗು, ನಿನ್ನ ಖಡ್ಗದ ಮೊನೆಯಿದ್ದ ಕಡೆಗೇ ಹೊರಡು.

[17] ನಾನು ಚಪ್ಪಾಳೆ ಹೊಡೆದು ನನ್ನ ರೋಷವನ್ನು ತೀರಿಸಿಕೊಳ್ಳುವೆನು. ಕರ್ತನಾದ ನಾನೇ ಇದನ್ನು ನುಡಿದಿದ್ದೇನೆ.”

[18] ಯೆಹೋವನು ನನಗೆ ಮತ್ತೊಂದು ವಾಕ್ಯವನ್ನು ದಯಪಾಲಿಸಿದನು,

[19] “ನರಪುತ್ರನೇ, ಬಾಬೆಲಿನ ಅರಸನ ಖಡ್ಗವು ಬರುವುದಕ್ಕೆ ಎರಡು ದಾರಿಗಳ ನಕ್ಷೆಯನ್ನು ಬರೆ; ಅವೆರಡು ಒಂದೇ ದೇಶದಿಂದ ಹೊರಟ ಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.

[20] ಅಮ್ಮೋನ್ಯರ ರಬ್ಬಾ ಎಂಬ ಪಟ್ಟಣಕ್ಕೂ, ಯೆಹೂದದೊಳಗೆ ಕೋಟೆ ಕೊತ್ತಲಗಳಿಂದ ಕೂಡಿದ ಯೆರೂಸಲೇಮಿಗೂ ಖಡ್ಗವು ಬರುವುದಕ್ಕೆ ದಾರಿಗಳನ್ನು ಮಾಡು.

[21] “ಮಾರ್ಗವು ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನ ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆಕೇಳಿ, ಕಾಳಿಜವನ್ನು ಪರೀಕ್ಷಿಸಿದ್ದಾನೆ.

[22] ಯೆರೂಸಲೇಮಿನ ಗುರುತಿನ ಬಾಣವು ಅವನ ಬಲಗೈಗೆ ಸಿಕ್ಕಿದೆ; ಅಲ್ಲಿ ಅವನು ಚಿತ್ತವನ್ನು ಭೇದಿಸುವ ಆಯುಧಗಳನ್ನು ನಿಲ್ಲಿಸಿ, ಬಾಯಿದೆರೆದು ಸಂಹಾರ ಧ್ವನಿಗೈದು ಕೂಗಿ! ಬಾಗಿಲುಗಳ ಎದುರಾಗಿ ಚಿತ್ತ ಭೇದಕ ಯಂತ್ರಗಳನ್ನು ನಿಲ್ಲಿಸಿ, ಒಡ್ಡು ಕಟ್ಟಬೇಕೆಂದು ಅದರಿಂದ ಸೂಚನೆಯಾಯಿತು.

[23] ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸವಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವನು ಅವರ ಅಧರ್ಮವನ್ನು ಬಯಲಿಗೆ ತರಲು ಅವನ ಕೈಗೆ ಸಿಕ್ಕಿಬೀಳುವರು.”

[24] ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಅಪರಾಧಗಳು ಬಯಲಿಗೆ ಬಂದು, ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ತಲೆದೋರಿ, ನೀವು ನಿಮ್ಮ ಅಧರ್ಮವನ್ನು ನನ್ನ ಜ್ಞಾಪಕಕ್ಕೆ ತಂದು, ಪಾಪಿಗಳಾಗಿ ನನ್ನ ನೆನಪಿಗೆ ತಂದಿರುವಿರಿ. ಆದುದರಿಂದ ಶತ್ರುವಿನ ಕೈಗೆ ಸಿಕ್ಕಿ ಬೀಳುವಿರಿ.

[25] ಇಸ್ರಾಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ! ನಿನಗೆ ಸಮಯವು ಹತ್ತಿರವಾಗಿದೆ; ಇದೇ ನಿನ್ನ ಅಪರಾಧದ ಕಡೆಗಾಲ.”

[26] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ತೆಗೆದುಹಾಕು! ಅದು ಹಾಗೆಯೇ ಇರುವುದಿಲ್ಲ; ತಗ್ಗಿಸಲ್ಪಟ್ಟವನನ್ನು ಹೆಚ್ಚಿಸಿ, ಹೆಚ್ಚಿಸಲ್ಪಟ್ಟವನನ್ನು ತಗ್ಗಿಸುವೆನು.

[27] ಧ್ವಂಸ, ನಾನು ಧ್ವಂಸ ಮಾಡುವೆನು; ರಾಜ್ಯಕ್ಕೆ ಬಾಧ್ಯನು ಬರುವುದರೊಳಗೆ ಒಂದೂ ಇದ್ದಂತೆ ಇರದು; ಅವನಿಗೆ ರಾಜ್ಯವನ್ನು ವಹಿಸುವೆನು.”

[28] ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ, “ಅಮ್ಮೋನ್ಯರ ವಿಷಯದಲ್ಲಿಯೂ ಮತ್ತು ಅವರು ಮಾಡುವ ದೂಷಣೆಯ ವಿಷಯದಲ್ಲಿಯೂ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ, ಮಿಂಚುವಂತೆ ಚೆನ್ನಾಗಿ ಮಸೆದಿದೆ.

[29] ಅಮ್ಮೋನೇ, ಪ್ರವಾದಿಗಳೆಂದು ಹೇಳಿಕೊಳ್ಳುತ್ತಿರುವ ನಿನ್ನವರು ದರ್ಶನವನ್ನು ನೋಡಿದೆವು ಎಂದು ಸುಳ್ಳು ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ. ಸಮಯವು ಹತ್ತಿರವಾಗಿ, ಅಪರಾಧದ ಕಡೆಗಾಲವು ಸಂಭವಿಸಿ, ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು! ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಒರಗಿ ಬೀಳುವೆ.

[30] “‘ಕತ್ತಿಯನ್ನು ಒರೆಗೆ ಸೇರಿಸು. ನಿನ್ನ ಸೃಷ್ಟಿಯಾದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ ನಿನಗೆ ನ್ಯಾಯ ತೀರಿಸುವೆನು.

[31] ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ, ರೋಷಾಗ್ನಿಯನ್ನು ಊದಿ, ನಿನ್ನನ್ನು ಮೃಗಪ್ರಾಯರೂ, ಹಾಳುಮಾಡುವುದರಲ್ಲಿ ಗಟ್ಟಿಗರೂ ಆದವರ ಕೈಗೆ ಸಿಕ್ಕಿಸುವೆನು.

[32] ನೀನು ಅಗ್ನಿಗೆ ಆಹುತಿಯಾಗುವಿ; ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವುದು; ನೀನು ಇನ್ನು ಜ್ಞಾಪಕಕ್ಕೆ ಬರುವುದಿಲ್ಲ’ ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”

ಯೆಹೆಜ್ಕೇಲನು — Chapters