Skip to content
Opens in a new window
Listen to this chapter • 2:36

[1] ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[2] “ನರಪುತ್ರನೇ, ನೀನು ಸೇಯೀರ್ ಬೆಟ್ಟದ ಸೀಮೆಯ ವಿರುದ್ಧವಾಗಿ ಅದಕ್ಕೆ ಈ ಪ್ರವಾದನೆಯನ್ನು ನುಡಿ,

[3] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಸೇಯೀರ್ ಬೆಟ್ಟವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ; ನಾನು ನಿನ್ನ ಸೀಮೆಯ ಮೇಲೆ ಕೈಯೆತ್ತಿ ಅದನ್ನು ಹಾಳು ಮಾಡುವೆನು.

[4] ನಾನು ನಿನ್ನ ಪಟ್ಟಣಗಳನ್ನು ನಾಶಪಡಿಸಲು ನೀನು ಹಾಳಾಗುವಿ; ಆಗ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿ.

[5] “‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು, ಅವರ ಅಪರಾಧದ ಕಡೆಯ ಕಾಲದಲ್ಲಿ ಆಪತ್ತು ಸಂಭವಿಸಿದಾಗ, ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದೆ.

[6] ಆದುದರಿಂದ ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು, ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟುವುದು; ನೀನು ರಕ್ತ ಸುರಿಸುವುದಕ್ಕೆ ಹೇಸದೆ ಹೋದಕಾರಣ ರಕ್ತಪ್ರವಾಹವೇ ನಿನ್ನ ಬೆನ್ನಹತ್ತುವುದು’” ಇದು ಕರ್ತನಾದ ಯೆಹೋವನ ನುಡಿ.

[7] “ಸೇಯೀರ್ ಬೆಟ್ಟವೇ, ನಾನು ನಿನ್ನ ಸೀಮೆಯನ್ನು ಹಾಳುಮಾಡಿ, ಅದರೊಳಗೆ ಹೋಗುವವರನ್ನೂ, ಬರುವವರನ್ನೂ ಕಡಿದುಹಾಕುವೆನು.

[8] ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿಸುವೆನು; ಖಡ್ಗದಿಂದ ಹತರಾದವರು ನಿನ್ನ ಗುಡ್ಡಗಳಲ್ಲಿ, ಕಣಿವೆಗಳಲ್ಲಿ, ಹಳ್ಳಗಳಲ್ಲಿ ಬಿದ್ದುಹೋಗುವರು.

[9] ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು; ನಿನ್ನ ಪಟ್ಟಣಗಳು ನಿರ್ಜನವಾಗುವವು; ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ.”

[10] ನೀನು, “ಈ ಎರಡು ಜನಾಂಗಗಳೂ ಈ ಎರಡು ದೇಶಗಳೂ ನನ್ನ ವಶವಾಗುವವು” ಎಂದೂ ಹೇಳಿದ್ದರಿಂದ, ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ ಎಂದು ಅಂದುಕೊಂಡು, ಅಲ್ಲಿ ನನ್ನ ಸಾನ್ನಿಧ್ಯವನ್ನು ಅಲಕ್ಷ್ಯಮಾಡಿದ್ದರಿಂದ,

[11] “ನನ್ನ ಜೀವದಾಣೆ, ನೀನು ನನ್ನ ಜನರನ್ನು ದ್ವೇಷಿಸಿ, ಅವರ ಮೇಲಿಟ್ಟ ಕೋಪಕ್ಕೂ, ಹೊಟ್ಟೆಕಿಚ್ಚಿಗೂ ನಾನು ನಿನ್ನ ವಿರುದ್ಧವಾಗಿ ನ್ಯಾಯ ತೀರಿಸಿದ ಮೇಲೆ, ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.

[12] ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ. ನೀನು ಇಸ್ರಾಯೇಲಿನ ಪರ್ವತಗಳನ್ನು ನೋಡಿ, ಆಹಾ, ಹಾಳಾದವು! ನಮಗೆ ತುತ್ತಾಗಿವೆ ಎಂದು ಮಾಡಿದ ದೂಷಣೆಗಳು ಯೆಹೋವನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು.

[13] ನಿನ್ನವರು ಬಾಯಿ ತೆರೆದು, ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ.”

[14] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳುಮಾಡಿ, ಲೋಕವನ್ನೆಲ್ಲಾ ಸಂತೋಷಪಡಿಸುವೆನು.

[15] ಇಸ್ರಾಯೇಲರ ಸ್ವತ್ತಿನ ನಾಶಕ್ಕೆ ನೀನು ಹೇಗೆ ಸಂತೋಷಪಟ್ಟೆಯೋ ಹಾಗೆಯೇ, ನಿನ್ನ ನಾಶಕ್ಕೆ ಲೋಕವೆಲ್ಲಾ ಸಂತೋಷಪಡುವಂತೆ ಮಾಡುವೆನು; ಸೇಯೀರ್ ಬೆಟ್ಟವೇ, ನೀನು ಹಾಳಾಗುವಿ; ಹೌದು, ಎದೋಮ್ ಸೀಮೆಯೆಲ್ಲಾ ಸಂಪೂರ್ಣವಾಗಿ ಹಾಳಾಗುವುದು, ಆಗ ನಾನೇ ಯೆಹೋವನು ಎಂದು ನಿಮಗೆ ತಿಳಿಯುವುದು.”

ಯೆಹೆಜ್ಕೇಲನು — Chapters