[1] ಯೆಹೋವನು ಮತ್ತೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
[2] “ತಂದೆಗಳು ಹುಳಿ ದ್ರಾಕ್ಷಿಯನ್ನು ತಿಂದರು ಆದರೆ, ಮಕ್ಕಳ ಹಲ್ಲುಗಳು ಚಳಿತುಹೋಗಿವೆ ಎಂಬ ಗಾದೆಯನ್ನು ನೀವು ಇಸ್ರಾಯೇಲ್ ದೇಶದ ವಿಷಯವಾಗಿ ಹೇಳುವುದೇಕೆ?”
[3] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಎತ್ತಬೇಕಾಗುವುದಿಲ್ಲ.
[4] ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನ ಅಧೀನದಲ್ಲಿವೆ; ಪಾಪಮಾಡುವ ಪ್ರಾಣಿಯೇ ಸಾಯುವನು.
[5] “ಒಬ್ಬನು ಸದ್ಧರ್ಮಿಯಾಗಿ ನೀತಿ ನ್ಯಾಯಗಳನ್ನು ನಡೆಸಿ,
[6] ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ,
[7] ಮುಟ್ಟಿನ ಹೆಂಗಸನ್ನು ಸೇರದೆ, ಯಾರನ್ನೂ ಹಿಂಸಿಸದೆ, ಸಾಲಮಾಡಿದವನ ಒತ್ತೆಯನ್ನು ಬಿಗಿಹಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನಕೊಟ್ಟು, ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ,
[8] ಸಾಲಕ್ಕೆ ಬಡ್ಡಿತೆಗೆಯದೆ, ಲಾಭಕ್ಕೆ ಹಣಕೊಡದೆ, ಅನ್ಯಾಯಕ್ಕೆ ಕೈಹಾಕದೆ, ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ,
[9] ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು, ಸತ್ಯಪರನಾಗಿಯೇ ನಡೆದರೆ ಇಂಥವನು ಸದ್ಧರ್ಮಿಯಾಗಿರುವುದರಿಂದ ಖಂಡಿತವಾಗಿ ಜೀವಿಸುವನು” ಇದು ಕರ್ತನಾದ ಯೆಹೋವನ ನುಡಿ.
[10] “ಇಂಥವನನ್ನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ,
[11] ಒಳ್ಳೆಕಾರ್ಯಗಳಲ್ಲಿ ಯಾವುದನ್ನೂ ನಡೆಸದೆ ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದು ನೆರೆಯವನ ಹೆಂಡತಿಯನ್ನು ಕೆಡಿಸಿ,
[12] ದೀನದರಿದ್ರರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,
[13] ಅಸಹ್ಯಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿತೆಗೆದು, ಲಾಭಕ್ಕೆ ಹಣಕೊಟ್ಟು, ಬಲಾತ್ಕಾರಿಯೂ ಮತ್ತು ರಕ್ತಸುರಿಸುವವನೂ ಆಗಿದ್ದರೆ ಜೀವಿಸುವನೇ? ಖಂಡಿತ ಜೀವಿಸುವುದಿಲ್ಲ; ಈ ದುರಾಚಾರಗಳನ್ನೆಲ್ಲಾ ನಡೆಸಿದನಲ್ಲವೇ? ಅವನು ಸಾಯುವುದು ಖಂಡಿತ; ತನ್ನ ಮರಣ ದಂಡನೆಗೆ ತಾನೇ ಕಾರಣ.
[14] “ಇಗೋ, ಇವನು ಪಡೆದ ಮಗನು, ತನ್ನ ತಂದೆಯು ಮಾಡಿದ ಪಾಪಗಳನ್ನೆಲ್ಲಾ ಕಂಡು ಭಯಪಟ್ಟು ಇಂಥಾ ಕಾರ್ಯಗಳನ್ನು ನಡೆಸದೆ,
[15] “ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ,
[16] ಯಾರನ್ನೂ ಹಿಂಸಿಸದೆ, ಒತ್ತೆಯನ್ನು ಕೇಳದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನಕೊಟ್ಟು, ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ,
[17] ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನು ಕೇಳದೆ, ಲಾಭಕ್ಕೆ ಹಣಕೊಡದೆ, ನನ್ನ ವಿಧಿಗಳನ್ನು ಆಚರಿಸಿ, ನನ್ನ ನಿಯಮಗಳನ್ನು ಅನುಸರಿಸಿದರೆ ತನ್ನ ತಂದೆಯ ಅಧರ್ಮದ ನಿಮಿತ್ತ ಸಾಯುವುದಿಲ್ಲ, ಖಂಡಿತವಾಗಿ ಜೀವಿಸುವನು.
[18] ಇವನ ತಂದೆಯೋ, ಸ್ವಕುಲದವರನ್ನು ಬಹಳವಾಗಿ ಅರೆದು, ಸುಲಿದು, ಸ್ವಜನರ ನಡುವೆ ಕೆಟ್ಟದನ್ನು ನಡೆಸಿದ ಕಾರಣ, ಇಗೋ, ತನ್ನ ಅಧರ್ಮದಿಂದಲೇ ಸಾಯುವನು.
[19] “ಆದರೆ ನೀವು, ‘ತಂದೆಯ ದೋಷಫಲವನ್ನು ಮಗನು ಅನುಭವಿಸುವುದು ಖಂಡಿತ’ ಎಂದು ಆಕ್ಷೇಪಿಸುವಿರೋ? ಮಗನು ನೀತಿನ್ಯಾಯಗಳನ್ನು ನಡೆಸಿ, ನನ್ನ ವಿಧಿಗಳನ್ನೆಲ್ಲಾ ಕೈಕೊಂಡು ಆಚರಿಸಿದರೆ ಖಂಡಿತವಾಗಿ ಜೀವಿಸುವನು.
[20] ಪಾಪ ಮಾಡುವವನೇ ಸಾಯುವನು; ಮಗನು ತಂದೆಯ ದೋಷಫಲವನ್ನು ಅನುಭವಿಸನು; ಶಿಷ್ಟನ ಶಿಷ್ಟತನದ ಫಲವು ಶಿಷ್ಟನದೇ, ದುಷ್ಟನ ದುಷ್ಟತನದ ಫಲವು ದುಷ್ಟನದೇ.
[21] “ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಕೊಂಡು, ನೀತಿನ್ಯಾಯಗಳನ್ನು ನಡೆಸಿದರೆ ಸಾಯುವುದಿಲ್ಲ, ಖಂಡಿತವಾಗಿ ಜೀವಿಸುವನು.
[22] ಅವನು ಮಾಡಿದ ಯಾವ ಅಪರಾಧವು ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ, ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು.”
[23] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ.
[24] ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ ಅವನು ಜೀವಿಸುವನೋ? ಅವನು ಮಾಡಿದ ಯಾವ ಸುಕೃತ್ಯವು ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ, ಅವನು ಮಾಡುತ್ತಿರುವ ಪಾಪ ಅಪರಾಧಗಳಿಂದಲೇ ಸಾಯುವನು.
[25] “ಆದರೆ ನೀವು, ‘ಕರ್ತನ ಕ್ರಮವು ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೋ? ನಿಮ್ಮ ಕ್ರಮವೇ ಸರಿಯಲ್ಲ.
[26] ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ಅದರಲ್ಲಿ ಸತ್ತರೆ ತಾನು ಮಾಡಿದ ಅಧರ್ಮದಿಂದಲೇ ಸಾಯಬೇಕಾಯಿತು.
[27] ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನೀತಿನ್ಯಾಯಗಳನ್ನು ನಡೆಸಿದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
[28] ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯುವುದಿಲ್ಲ, ಖಂಡಿತವಾಗಿ ಜೀವಿಸುವನು.
[29] ಆದರೆ ಇಸ್ರಾಯೇಲ್ ವಂಶದವರು ಕರ್ತನ ಕ್ರಮವು ಸಮವಲ್ಲ ಎಂದು ಹೇಳುತ್ತಿದ್ದಾರೆ; ಇಸ್ರಾಯೇಲ್ ವಂಶದವರೇ, ನನ್ನ ಕ್ರಮವು ಸರಿಯಿಲ್ಲವೋ? ನಿಮ್ಮ ಕ್ರಮವೇ ಸರಿಯಿಲ್ಲವಷ್ಟೆ.”
[30] ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ತಿರುಗಿಕೊಂಡು ನಿಮ್ಮ ಅಪರಾಧಗಳನ್ನೆಲ್ಲಾ ಬಿಟ್ಟುಬಿಡಿರಿ.
[31] “ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿಬಿಟ್ಟು ನಿಮ್ಮ ಹೃದಯವನ್ನೂ ಮತ್ತು ಸ್ವಭಾವವನ್ನೂ ನೂತನಪಡಿಸಿಕೊಳ್ಳಿರಿ; ಇಸ್ರಾಯೇಲ್ ವಂಶದವರೇ, ನೀವು ಸಾಯಬೇಕೇ?
[32] ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪದಿಂದ ತಿರುಗಿಕೊಂಡು ಜೀವಿಸಿರಿ” ಇದು ಕರ್ತನಾದ ಯೆಹೋವನ ನುಡಿ.